ಸುದ್ದಿಮೂಲ ವಾರ್ತೆ
ಬೆಂಗಳೂರು, ನ.19: ರಾಜ್ಯದಲ್ಲಿ ಕಾಂಗ್ರೆಸ್ ಸರ್ಕಾರ ಜಾರಿ ಮಾಡಿದ ಗ್ಯಾರಂಟಿ ಯೋಜನೆಗಳನ್ನು ಪ್ರಧಾನಿ ಮೋದಿ ಕದ್ದು, ಅದೇ ಮಾದರಿ ಮುಂದಿಟ್ಟುಕೊಂರು ಪಂಚರಾಜ್ಯಗಳ ಚುನಾವಣೆ ಎದುರಿಸುತ್ತಿದ್ದಾರೆ ಎಂದು ಡಿಸಿಎಂ ಡಿ.ಕೆ.ಶಿವಕುಮಾರ್ ಲೇವಡಿ ಮಾಡಿದ್ದಾರೆ.
ಕೆಪಿಸಿಸಿ ಕಚೇರಿಯ ಭಾರತ್ ಜೋಡೋ ಸಭಾಂಗಣದಲ್ಲಿ ನಡೆದ ಮಾಜಿ ಪ್ರಧಾನಿ ಇಂದಿರಾಗಾಂಧಿ ಅವರ ಜನ್ಮದಿನಾಚರಣೆ ಮತ್ತು ಬೆಂಗಳೂರು ನೂತನ ಜಿಲ್ಲಾಧ್ಯಕ್ಷರ ಪದಗ್ರಹಣ ಸಮಾರಂಭದಲ್ಲಿ ಮಾತನಾಡಿದ ಅವರು, ಲೋಕಸಭೆ ಚುನಾವಣೆಯಲ್ಲಿ ಬಿಜೆಪಿ- ದಳಕ್ಕೆ ಮತ ಹಾಕಿದರೆ ಅವರು ಗ್ಯಾರಂಟಿ ಯೋಜನೆಗಳನ್ನು ವಾಪಸ್ ತೆಗದುಕೊಳ್ಳುವಂತಹ ಕಾನೂನು ತರುತ್ತಾರೆ. ಈ ವಿಚಾರಗಳನ್ನು ಕಾಂಗ್ರೆಸ್ ಕಾರ್ಯಕರ್ತರು ಮತ್ತು ನಾಯಕರು ಜನರಿಗೆ ಮನವರಿಕೆ ಮಾಡಿಕೊಡಬೇಕು ಎಂದರು.
ಬಿಜೆಪಿ ಮತ್ತು ದಳದವರು ಗ್ಯಾರಂಟಿ ಯೋಜನೆಗಳನ್ನು ವಿರೋಧಿಸಿದವರು. ಅವರ ಈ ಜನವಿರೋಧಿ ಬುದ್ದಿಯನ್ನು ಮತದಾರರಿಗೆ ತಿಳಿಸುವ ಕೆಲಸ ಮಾಡಬೇಕು. ಯಾವುದೇ ಕಾರಣಕ್ಕೂ ಗ್ಯಾರಂಟಿ ಯೋಜನೆಗಳನ್ನು ನಿಲ್ಲುಸುವುದಾಗಲಿ, ಕಡಿಮೆ ಮಾಡುವುದಾಗಲಿ ಯಾವುದನ್ನೂ ಸಹ ಕಾಂಗ್ರೆಸ್ ಸರ್ಕಾರ ಮಾಡುವುದಿಲ್ಲ. ಬಿಜೆಪಿಯವರು ಅಧ್ಯಕ್ಷರನ್ನಾಗಿ, ವಿರೋಧ ಪಕ್ಷದ ನಾಯಕರನ್ನಾಗಿ ಯಾರನ್ನಾದರೂ ಮಾಡಿಕೊಳ್ಳಲಿ. ಎಷ್ಟು ಜನರನ್ನು ಬೇಕಾದರೂ ಒಗ್ಗೂಡಿಸಲಿ. ಅದಕ್ಕೆ ತಲೆ ಕೆಡಿಸಿಕೊಳ್ಳಬೇಡಿ. ನಮಗೂ ಅದಕ್ಕೂ ಸಂಬಂಧವಿಲ್ಲ ಎಂದು ಹೇಳಿದರು.
ಬ್ಲಾಕ್, ಜಿಲ್ಲಾ ತಾಲ್ಲೂಕು ಮಟ್ಟದ ಅಧ್ಯಕ್ಷರು, ಕಾರ್ಯಕರ್ತರು ಮತ್ತು ನಾಯಕರು ಬೂತ್ ಮಟ್ಟದಿಂದ ಗ್ಯಾರಂಟಿ ಯೋಜನೆಗಳ ಸಾಧಕ- ಭಾದಕಗಳನ್ನು ಕಡ್ಡಾಯವಾಗಿ ತಿಳಿದುಕೊಂಡು, ಜನರಿಗೆ ಆಗುತ್ತಿರುವ ಅನಾನುಕೂಲ ಮತ್ತು ಅನುಕೂಲ ಎರಡನ್ನೂ ಸರ್ಕಾರದ ಗಮನಕ್ಕೆ ತರಬೇಕು. ಸರ್ಕಾರದ ಗ್ಯಾರಂಟಿ ಯೋಜನೆಗಳು ಜನರಿಗೆ ತಲುಪಿದೆಯೇ ಇಲ್ಲವೇ ಎಂದು ಖುದ್ದಾಗಿ ತಿಳಿಯಲು ಮಂತ್ರಿಗಳಿಗೆ ಸೂಚನೆ ನೀಡಲಾಗಿದೆ ಎಂದರು.
ನ. 28 ರಂದು ಕಾಂಗ್ರೆಸ್ ಸಂಸ್ಥಾಪನಾ ದಿನ. ಈ ದಿನದಂದೇ ಪಕ್ಷದಿಂದ ಗ್ಯಾರಂಟಿ ಯೋಜನೆಗಳು ಜನರಿಗೆ ತಲುಪಿದೆಯೇ ಎಂದು ಸಮೀಕ್ಷೆ ಮಾಡಲು ಸಮಿತಿ ರಚನೆ ಮಾಡಲಾಗುವುದು. ಮುಂದಿನ ನಾಲ್ಕು ವರ್ಷಗಳಲ್ಲಿ ಯಾರು ಇರುತ್ತಾರೆ ಎನ್ನುವುದೇ ಗೊತ್ತಿಲ್ಲ. ಕಾಂಗ್ರೆಸ್ ಸರ್ಕಾರದ ಗ್ಯಾರಂಟಿ ಯೋಜನೆಗಳಿಂದ ಪ್ರತಿ ಕುಟುಂಬವೂ ತಿಂಗಳಿಗೆ 5 ಸಾವಿರಕ್ಕೂ ಹೆಚ್ಚು ಹಣವನ್ನು ಉಳಿತಾಯ ಮಾಡುತ್ತಿದೆ. ಇಂತಹ ಚಿನ್ನದ ಅವಕಾಶವನ್ನು ಕಳೆದುಕೊಳ್ಳಬೇಡಿ ಎಂದು ಜನರಿಗೆ ಕಾರ್ಯಕರ್ತರು ಮನವರಿಕೆ ಮಾಡಬೇಕು ಎಂದರು.
ಈ ದೇಶಕ್ಕೆ ಗ್ಯಾರಂಟಿ ಯೋಜನೆಗಳನ್ನು ಮೊದಲು ಕೊಟ್ಟವರು ಇಂದಿರಾ ಗಾಂಧಿ ಮತ್ತು ಕಾಂಗ್ರೆಸ್ ಪಕ್ಷ. ಬ್ಯಾಂಕ್ಗಳ ರಾಷ್ಟ್ರೀಕರಣವಾದ ಮೇಲೆ ಜನರ ಮನೆ ಬಾಗಿಲಿಗೆ ಬಂದು ಸಾಲ ಕೊಡುವ ವ್ಯವಸ್ಥೆ ಬಂದಿದ್ದೇ ಇಂದಿರಾ ಗಾಂಧಿ ಅವರ ಕ್ರಾಂತಿಕಾರಕ ನಿರ್ಧಾರದಿಂದ. ಅಂಗನವಾಡಿಯಲ್ಲಿ ಬಿಸಿಯೂಟ ಸೇರಿದಂತೆ ಸಾವಿರಾರು ಜನಪರ ಯೋಜನೆಗಳು ಜಾರಿಗೆ ಬಂದಿದ್ದೇ ಇಂದಿರಾಗಾಂಧಿ ಅವರ ಕಾಲದಲ್ಲಿ ಎಂದರು.
ಭಾರತ್ ಜೋಡೋ ಯಾತ್ರೆಯ ವೇಳೆ ಮೊಣಕಾಲ್ಮೂರಿನ ಬಳಿ ಅಜ್ಜಿಯೊಂದು ಸೌತೆಕಾಯಿಯನ್ನು ರಾಹುಲ್ ಗಾಂಧಿ ಅವರಿಗೆ ನೀಡಿ ʼನಿಮ್ಮ ಅಜ್ಜಿ ಕೊಟ್ಟ ಭೂಮಿಯಲ್ಲಿ ಬೆಳೆದ ಸೌತೆಕಾಯಿʼ ಎಂದು ಕಣ್ಣೀರು ಹಾಕಿದ್ದರು. ಇಂದಿರಾಗಾಂಧಿ ಅವರ ಬಗ್ಗೆ ಸೋನಿಯಾ ಗಾಂಧಿ ಅವರು ಬರೆದಿರುವ ಪುಸ್ತಕವನ್ನು ಶೀಘ್ರದಲ್ಲೇ ಕನ್ನಡದಲ್ಲಿ ಪ್ರಕಟಿಸಲಾಗುವುದು. ಈ ಪುಸ್ತಕದಲ್ಲಿ ಇಂದಿರಾಗಾಂಧಿ ಅವರು ಕಾಂಗ್ರೆಸ್ ಪಕ್ಷದ ಬಗ್ಗೆ ಹೇಳಿದ ಮಾತುಗಳನ್ನು ಉಲ್ಲೇಖಿಸಲಾಗಿದೆ ಎಂದು ಡಿ.ಕೆ. ಶಿವಕುಮಾರ್ ಹೇಳಿದರು.