ಸುದ್ದಿಮೂಲ ವಾರ್ತೆ
ಬೆಂಗಳೂರು, ಏ.30: ಕರ್ನಾಟಕದ ಮುಂಬರುವ ವಿಧಾನಸಭಾ ಚುನಾವಣೆ ಭಾರತೀಯ ಜನತಾ ಪಕ್ಷಕ್ಕೆ ಮಾಡು ಇಲ್ಲವೇ ಮಡಿ ಎಂಬಂತಾಗಿದೆ. ದಕ್ಷಿಣ ಭಾರತದಲ್ಲಿಯೇ ಏಕೈಕ ಬಿಜೆಪಿ ಸರ್ಕಾರ ಉಳಿಸಿಕೊಳ್ಳುವುದು ಪ್ರತಿಷ್ಠಯ ವಿಷಯವಾಗಿದ್ದರಿಂದ ಪ್ರಧಾನಿ ಮೋದಿ, ಗೃಹಮಂತ್ರಿ ಅಮಿತ್ ಶಾ, ಪಕ್ಷದ ಅಧ್ಯಕ್ಷ ಜೆ.ಪಿ. ನಡ್ಡಾ ಹಾಗೂ ಉತ್ತರ ಪ್ರದೇಶದ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್ ಮೂಲಕ ಮತ ಸೆಳೆಯಲು ನಿರಂತರ ಸಭೆಗಳು, ರೋಡ್ ಶೋ ನಡೆಸುತ್ತಿದ್ದಾರೆ.
ಪ್ರಧಾನಿ ನರೇಂದ್ರ ಮೋದಿ ಇಂದಿನಿಂದ ಎರಡು ದಿನದ ರಾಜ್ಯ ಪ್ರವಾಸ ಕೈಗೊಂಡಿದ್ದು, ಇಂದು ಬಸವನಾಡು ಬೀದರ್ನಿಂದ ತಮ್ಮ ಚುನಾವಣಾ ಪ್ರಚಾರ ಆರಂಭಿಸಿ, ವಿಜಯಪುರ, ಬೆಳಗಾವಿಯಲ್ಲಿ ಪ್ರವಾಸ ಮುಗಿಸಿ ಬೆಂಗಳೂರಿನಲ್ಲಿ ರೋಡ್ ಶೋ ನಡೆಸುವ ಮೂಲಕ ಮತದಾರರ ಗಮನ ತಮ್ಮತ್ತ ಸೆಳೆಯಲು ಕಸರತ್ತು ನಡೆಸಿದ್ದಾರೆ.
ಜಗದೀಶ್ ಶೆಟ್ಟರ್ ಮತ್ತು ಲಕ್ಷ್ಮಣ ಸವದಿ ಅವರಿಗೆ ಟಿಕೆಟ್ ನಿರಾಕರಿಸಿದ ಬಳಿಕ ಬಿಜೆಪಿ ವಿರುದ್ಧ ಲಿಂಗಾಯತರು ಮುನಿಸಿಕೊಂಡಿದ್ದಾರೆ ಎಂಬ ಲೆಕ್ಕಾಚಾರದ ಹಿನ್ನೆಲೆಯಲ್ಲಿ ಬಣಜಿಗ ಮತ್ತು ಪಂಚಮಸಾಲಿಗಳೇ ಹೆಚ್ಚು ಜನಸಂಖ್ಯೆ ಹೊಂದಿರುವ ಬೀದರ್, ವಿಜಯಪುರ ಮತ್ತು ಬೆಳಗಾವಿಯಲ್ಲಿ ಇಂದು ಪ್ರವಾಸ ಕೈಗೊಂಡ ಪ್ರಧಾನಿ ನರೇಂದ್ರ ಮೋದಿ, ಕಾಂಗ್ರೆಸ್ ವಿರುದ್ಧ ವಾಗ್ದಾಳಿ ನಡೆಸಿದ್ದಾರೆ.
ಕಾಂಗ್ರೆಸ್ ಪಕ್ಷ ನನ್ನನ್ನು ಟೀಕೆ ಮಾಡಿದಷ್ಟು, ನನಗೆ ಶಕ್ತಿ ಬರುತ್ತದೆ. ಇಷ್ಟೇ ಸಮಯ ಅವರ ಕಾರ್ಯಕರ್ಯತರ ಓಲೈಕೆಗೆ ಕಾಂಗ್ರೆಸ್ ಪಕ್ಷ ಸಮಯ ಮೀಸಲಿಟ್ಟಿದ್ದರೆ ಕನಿಷ್ಠ ಪಕ್ಷ ಕಾಂಗ್ರೆಸ್ ಈ ಸ್ಥಿತಿಗೆ ತಲುಪುತ್ತಿರಲಿಲ್ಲ ಎಂದು ವ್ಯಂಗ್ಯ ಮಾಡುವ ಮೂಲಕ ಆ ಪಕ್ಷದ ಶಕ್ತಿ ಏನಿಲ್ಲ ಎಂಬುದನ್ನು ಬಹಿರಂಗವಾಗಿಯೇ ಹೇಳಿದ್ದಾರೆ.
ಭಾನುವಾರ ಸಹ ರಾಜ್ಯದಲ್ಲಿ ಪ್ರವಾಸ ಕೈಗೊಳ್ಳಲಲಿರುವ ಪ್ರಧಾನಿ ಪುನಃ ಮೇ 2ರಂದು ರಾಯಚೂರು ಜಿಲ್ಲೆಗೆ ಆಗಮಿಸಲಿದ್ದಾರೆ. ಸಿಂಧನೂರಿನಲ್ಲಿ ಬಹಿರಂಗ ಸಭೆ ನಡೆಸಿ, ರಾಯಚೂರು, ಕೊಪ್ಪಳ ಮತ್ತು ಬಳ್ಳಾರಿ ಜಿಲ್ಲೆಗಳ ಅಭ್ಯರ್ಥಿಗಳ ಪರವಾಗಿ ಪ್ರಚಾರ ಮಾಡುವ ಮೂಲಕ ಮೂರು ಜಿಲ್ಲೆಗಳಲ್ಲಿ ಬಿಜೆಪಿ ಅಭ್ಯರ್ಥಿಗಳ ಬಲ ಇಮ್ಮಡಿಗೊಳಿಸುವ ಲೆಕ್ಕಾಚಾರದಲ್ಲಿದ್ದಾರೆ.
ಈ ಮಧ್ಯೆ ಭಾನುವಾರದಿಂದ ಯೋಗಿ ಆದಿತ್ಯನಾಥ್ ಪುನಃ ರಾಜ್ಯ ಪ್ರವಾಸ ಕೈಗೊಂಡು ಮಧ್ಯಾಹ್ನ 12.30ಕ್ಕೆ ರಾಯಚೂರಿಗೆ ಆಗಮಿಸಲಿದ್ದಾರೆ. ಕಟ್ಟರ್ ಹಿಂದುತ್ವವಾದಿಯಾಗಿರುವ ಯೋಗಿ ತಮ್ಮ ಭಾಷಣದ ಮೂಲಕ ಹಿಂದೂಗಳ ಮತಗಳನ್ನು ಒಗ್ಗೂಡಿಸುವ ತಂತ್ರಗಾರಿಕೆ ಬಿಜೆಪಿ ಮಾಡಿದೆ.
ಈಗಾಗಲೇ ಕಲ್ಯಾಣ ಕರ್ನಾಟಕದಲ್ಲಿ ಅಮಿತ್ ಶಾ ಮತ್ತು ಜೆ.ಪಿ. ನಡ್ಡಾ ಕೆಲ ಪ್ರಚಾರ ಸಭೆಗಳನ್ನು ನಡೆಸಿ ಬಿಜೆಪಿ ಅಭ್ಯರ್ಥಿಗಳ ಪರ ಮತಯಾಚನೆ ಮಾಡಿದ್ದಾರೆ.
ಕರ್ನಾಟಕದಲ್ಲಿ ಕಳೆದ ಮೂರೂವರೆ ವರ್ಷಗಳ ಕಾಲ ಸರ್ಕಾರ ನಡೆಸಿದ ಭಾರತೀಯ ಜನತಾ ಪಕ್ಷಕ್ಕೆ ಆಡಳಿತ ವಿರೋಧಿ ಅಲೆ ಇರುವುದನ್ನು ಗಂಭೀರವಾಗಿ ಪರಿಗಣಿಸಿರುವ ಬಿಜೆಪಿ ಏನಕೇನ ಪ್ರಕರಣೇನ ದಕ್ಷಿಣ ಭಾರತದ ಹೆಬ್ಬಾಗಿಲೆಂದೇ ಪರಿಗಣಿಸಿರುವ ಕರ್ನಾಟಕದಲ್ಲಿ ಮತ್ತೆ ಅಧಿಕಾರ ಹಿಡಿಯುವ ಮೂಲಕ ಮುಂಬರುವ ಲೋಕಸಭಾ ಚುನಾವಣೆಯಲ್ಲಿ ವೇದಿಕೆಯನ್ನಾಗಿ ಮಾಡಿಕೊಳ್ಳುವ ಲೆಕ್ಕಾಚಾರ ಇದರಲ್ಲಿ ಅಡಗಿದೆ. ಹೀಗಾಗಿ ಕರ್ನಾಟಕದಲ್ಲಿ ಸ್ವತಃ ಪ್ರಧಾನಿ ಸೇರಿದಂತೆ ನಾಲ್ವರು ಮುಖಂಡರು ಚುನಾವಣಾ ಪ್ರಚಾರ ಕಣಕ್ಕಿಳಿದಿದ್ದು, ಗಮನಾರ್ಹ ಸಂಗತಿಯಾಗಿದೆ.
ಇಲ್ಲಿವರೆಗಿನ ಸಮೀಕ್ಷೆ ಪ್ರಕಾರ ಬಿಜೆಪಿಗೆ ಬಹುಮತ ದೊರೆಯುವುದಿಲ್ಲ ಎಂಬ ಲೆಕ್ಕಾಚಾರಗಳಿದ್ದು ಮತ್ತು ಕಳೆದ ಬಾರಿ ಯಡಿಯೂರಪ್ಪ ನೇತೃತ್ವದಲ್ಲಿ ಚುನಾವಣೆ ನಡೆದರು ಸ್ಪಷ್ಟ ಬಹುಮತ ದೊರೆತಿರಲಿಲ್ಲ. ಆದರೆ, ಈ ಬಾರಿ ಅವರ ವಯೋಮಾನದ ಕಾರಣ ಪ್ರಚಾರಕ್ಕೆ ಹೆಚ್ಚು ಒತ್ತುಕೊಡಲು ಆಗುತ್ತಿರಲ್ಲವಾದ್ದರಿಂದ ಅನಿವಾರ್ಯವಾಗಿ ಬಹುಮತ ಪಡೆಯಲು ಪ್ರಧಾನಿ ಮತ್ತು ಶಾ, ಯೋಗಿಯಂತಹ ಮುಖಂಡರ ಅನಿವಾರ್ಯತೆ ಬಿಜೆಪಿ ಎದುರಾಗಿದೆ.
ಇಲ್ಲಿವರೆಗೂ ನಾಲ್ಕು ಬಾರಿ ಬಿಜೆಪಿ ಅಧಿಕಾರ ನಡೆಸಿದರೂ ಸಮ್ಮಿಶ್ರ ಸರ್ಕಾರ ಅಥವಾ ಆಪರೇಷನ್ ಕಮಲದ ಮೂಲಕವೇ ಅಧಿಕಾರ ನಡೆಸಿದ ಸ್ಥಿತಿ ಇದ್ದ ಕಾರಣ ಈ ಬಾರಿ ಸ್ಪಷ್ಟ ಬಹುಮತ ಪಡೆಯಲೇಬೇಕು ಎಂಬ ಹಠಕ್ಕೆ ಬಿದ್ದಿರುವ ಕಾರಣ ಪ್ರಧಾನಿ ಮೇ 9ರೊಳಗಾಗಿ ಇನ್ನೂ 20 ಕಡೆ ತಮ್ಮ ಚುನಾವಣಾ ಪ್ರಚಾರ ಸಭೆಗಳು ನಡೆಸಲಿದ್ದಾರೆ.
ಕಾಂಗ್ರೆಸ್ನಲ್ಲಿ ಸಿದ್ದರಾಮಯ್ಯ, ಡಿ.ಕೆ. ಶಿವಕುಮಾರ್ ಸೇರಿದಂತೆ ಕರ್ನಾಟಕದವೇ ಆದ ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಅವರು ರಾಜ್ಯದಲ್ಲಿ ತಮ್ಮದೇ ಆದ ವರ್ಚಸ್ಸು ಹೊಂದಿ ಕಾಂಗ್ರೆಸ್ ಪರವಾಗಿ ಚುನಾವಣೆ ಮಾಡುವ ಮೂಲಕ ಅಧಿಕಾರಕ್ಕೆ ತರುವ ನಿಟ್ಟಿನಲ್ಲಿ ನಡೆಸಿದ ಪ್ರಯತ್ನದ ಫಲವಾಗಿ ಈಗಾಗಲೇ ನಡೆಸಲಾದ ಹಲವು ಮಾಧ್ಯಮ ಸಮೀಕ್ಷೆಗಳ ಪ್ರಕಾರ ಕಾಂಗ್ರೆಸ್ ಮುಂಚೂಣಿಯಲ್ಲಿದೆ.
ಬಿಜೆಪಿ ಸರ್ಕಾರದ ಮೂರೂವರೆ ವರ್ಷದ ದುರಾಡಳಿತ, ಭ್ರಷ್ಟಾಚಾರವೇ ಕಾಂಗ್ರೆಸ್ಗೆ ಪ್ರಮುಖ ಅಸ್ತ್ರವಾಗಿದೆ. ಅದನ್ನು ಹಿಮ್ಮೆಟ್ಟಿಸಿ ಬಿಜೆಪಿ ಪರ ಗಾಳಿಯನ್ನು ಸೃಷ್ಟಿಸುವಂತಹ ರಾಜ್ಯ ಬಿಜೆಪಿಯಲ್ಲಿ ಇಲ್ಲವಾದ್ದರಿಂದ ಅನಿವಾರ್ಯವಾಗಿ ಬಿಜೆಪಿ ಕೇಂದ್ರ ವರಿಷ್ಠರು ನೇರವಾಗಿ ಪ್ರಚಾರ ಕಣಕ್ಕೆ ಧುಮುಕುವಂತಹ ಸ್ಥಿತಿ ಬಂದೊದಗಿದೆ. ಈ ಎಲ್ಲಾ ಹಿನ್ನೆಲೆಯಲ್ಲಿ ಭಾರತೀಯ ಜನತಾ ಪಕ್ಷಕ್ಕೆ ಕರ್ನಾಟಕ ಪ್ರತಿಷ್ಠಿತ ಕಣವಾಗಿ ಮಾರ್ಪಟ್ಟಿದೆ.