ಸುದ್ದಿಮೂಲ ವಾರ್ತೆ
ಬೆಂಗಳೂರು,ಅ.30 : ರಾಜ್ಯ ರಾಜಧಾನಿ ಬೆಂಗಳೂರಿನಲ್ಲಿ ಮತ್ತೊಂದು ಅಗ್ನಿ ಅವಘಡ ಸಂಭವಿಸಿದೆ. ಅತ್ತಿಬೆಲೆ ಪಟಾಕಿ ಗೋದಾಮಿನಲ್ಲಿ ಸಂಭವಿಸಿದ್ದ ಬೆಂಕಿ ದುರಂತ ಮಾಸುವ ಮುನ್ನವೇ
ಹೊಸಕೆರೆಹಳ್ಳಿಯ ವೀರಭದ್ರನಗರದ ಪಾರ್ಕಿಂಗ್ ಲಾಟ್ನಲ್ಲಿ ನಿಲ್ಲಿಸಿದ್ದ 30 ಬಸ್ಗಳು ಬೆಂಕಿಗೆ ಆಹುತಿಯಾಗಿವೆ.
ನೋಡ ನೋಡುತ್ತಲೇ ಒಂದರ ನಂತರ ಮತ್ತೊಂದು ಬಸ್ಗೆ ಬೆಂಕಿ ಹೊತ್ತಿಕೊಂಡಿದ್ದು, ವೀರಭದ್ರನಗರದ ಸುತ್ತಮುತ್ತ ದಟ್ಟ ಹೊಗೆ ಆವರಿಸಿದೆ. ಇನ್ನು ಘಟನಾ ಸ್ಥಳಕ್ಕೆ ಅಗ್ನಿಶಾಮಕ ವಾಹನಗಳು ದೌಡಾಯಿಸಿದ್ದು, ಸಿಬ್ಬಂದಿ ಬೆಂಕಿ ನಂದಿಸುವ ಕಾರ್ಯದಲ್ಲಿ ತೊಡಗಿದ್ದಾರೆ. ಡಿಸಿಪಿ ರಾಹುಲ್ ಕುಮಾರ್ ಶಹಾಪುರವಾಡ್ ಭೇಟಿ, ಪರಿಶೀಲನೆ ನಡೆಸಿದ್ದಾರೆ.
ಶ್ರೀನಿವಾಸ್ ಎಂಬುವವರಿಗೆ ಕೋಚ್ ವರ್ಕ್ಸ್ ಸೇರಿದ್ದು, 15 ವರ್ಷದಿಂದ ಕೋಚ್ ವರ್ಕ್ ಕೆಲಸಗಳು ನಡೆಯುತ್ತಿವೆ. ಇಂದು 11.30ರ ಸುಮಾರಿಗೆ ಬಸ್ ವೊಂದರ ಎಮರ್ಜನ್ಸಿ ಎಕ್ಸಿಟ್ ಬಳಿ ಕೆಲಸ ನಡೆಯುತಿತ್ತು. ಈ ವೇಳೆ ಬೆಂಕಿ ಕಾಣಿಸಿಕೊಂಡಿದೆ. ಅಗ್ನಿಶಾಮಕ ಸಿಬ್ಬಂದಿಗಳಿಗೆ ಕೂಡಲೇ ಮಾಹಿತಿ ನೀಡಲಾಗಿತ್ತು. ಆದರೆ, ಸಿಬ್ಬಂದಿಗಳು ಬರುವಷ್ಟರಲ್ಲಿ ಎರಡು ವಾಹನಗಳಿಗೆ ಬೆಂಕಿ ತಗುಲಿತ್ತು. ಮೊದಲಿಗೆ ಒಂದೇ ವಾಹನ ಬಂದ ಹಿನ್ನಲೆಯಲ್ಲಿ ಬೆಂಕಿ ಕಂಟ್ರೊಲ್ಗೆ ಸಿಕ್ಕಿಲ್ಲ. ಇನ್ನು ಎಸಿ ಬಸ್ ಗಳಲ್ಲಿ ಸೀಟ್, ಸ್ಕೀನ್ ಗಳು ಇರುವುದರಿಂದ ಬೆಂಕಿ ಹೆಚ್ಚಾಗಿದೆ.
ಅಗ್ನಿ ಅವಘಡದಲ್ಲಿ ಈ ವರೆಗೆ 30 ಬಸ್ಗಳು ಸುಟ್ಟು ಸಂಪೂರ್ಣ ಭಸ್ಮವಾಗಿದ್ದು, 5 ಬಸ್ ಗಳನ್ನು ಹೊರಗೆ ತೆಗೆಯಲಾಗಿದೆ. ಇನ್ನು ಗ್ಯಾರೇಜ್ ನಲ್ಲಿ 42 ಜನ ಕೆಲಸ ಮಾಡುತಿದ್ದರು. ಅದೃಷ್ಟವಶಾತ್ ಯಾರಿಗೂ ಏನು ಆಗಿಲ್ಲ.
ಎಸ್ವಿ ಕೋಚ್ ವರ್ಕ್ಸ್ನಲ್ಲಿನ ಖಾಸಗಿ ಬಸ್ ಅಗ್ನಿ ಅವಘಡಕ್ಕೆ ಸಂಬಂಧಿಸಿದಂತೆ ಬೆಂಕಿ ಹೊತ್ತಿ ಉರಿಯುವಾಗ ಸ್ಥಳದಲ್ಲಿ 12 ಗ್ಯಾಸ್ ಸಿಲಿಂಡರ್ಗಳು ಇದ್ದವು. ಅದೃಷ್ಟವಶಾತ್ ಸಿಲಿಂಡರ್ಗೆ ಬೆಂಕಿ ತಾಗದಿದ್ದರಿಂದ ಭಾರಿ ಅನಾಹುತ ತಪ್ಪಿದೆ. ಅಲ್ಲದೆ 30 ಬಸ್ಗಳಲ್ಲಿದ್ದ ಬ್ಯಾಟರಿಗಳನ್ನು ತೆಗೆದಿದ್ದರಿಂದ ಅನಾಹುತ ತಪ್ಪಿದೆ. ಒಂದು ವೇಳೆ ಗ್ಯಾಸ್ ಸಿಲಿಂಡರ್ಗೆ ಬೆಂಕಿ ತಗುಲಿದ್ದರೇ ಭಾರಿ ಅನಾಹುತವೇ ಸಂಭವಿಸುತ್ತಿತ್ತು.
ಇದೀಗ ಅಗ್ನಿಶಾಮಕ ಸಿಬ್ಬಂದಿಗಳು ಬೆಂಕಿ ನಂದಿಸುವಲ್ಲಿ ಯಶಸ್ವಿಯಾಗಿದ್ದಾರೆ. ಸ್ಥಳಕ್ಕೆ ದಕ್ಷಿಣ ವಿಭಾಗದ ಡಿಸಿಪಿ ರಾಹುಲ್ ಕುಮಾರ್ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ. ಗಿರಿನಗರ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಘಟನೆ ಸಂಭವಿಸಿದೆ.
ಬೆಂಕಿ ಅವಘಡದಲ್ಲಿ 18 ಬಸ್ಗಳು ಸಂಪೂರ್ಣ ಸುಟ್ಟು ಕರಕಲಾಗಿವೆ. ಘಟನೆ ನಡೆದ ಸ್ಥಳದಲ್ಲಿ ಯಾವುದೇ ಹೊಸ ಬಸ್ಗಳು ಇರಲಿಲ್ಲ. ಹಳೇ ಬಸ್ಗಳ ಡ್ಯಾಮೇಜ್ ಸರಿ ಮಾಡಲಾಗುತ್ತಿದ್ದ ಸ್ಥಳದಲ್ಲಿ ದುರಂತ ಸಂಭವಿಸಿದೆ. 80 ಜನ ನಮ್ಮ ಸಿಬ್ಬಂದಿಗಳು ಕೆಲಸ ಮಾಡಿದ್ದಾರೆ. 10 ಬಸ್ಗಳನ್ನು ಸುರಕ್ಷಿತವಾಗಿ ಶಿಫ್ಟ್ ಮಾಡಲಾಗಿದೆ. ಸುರಕ್ಷತಾ ದೃಷ್ಟಿಯಿಂದ ಯಾವುದೇ ಸುರಕ್ಷಿತ ಕ್ರಮಗಳು ಇರಲಿಲ್ಲ. ಘಟನೆಗೆ ನಿಖರವಾದ ಕಾರಣ ಕಂಡು ಬಂದಿಲ್ಲ ಎಂದು ಅಗ್ನಿಶಾಮಕ ಇಲಾಖೆಯ ಡೆಪ್ಯೂಟಿ ಡೈರೆಕ್ಟರ್ ಗುರುಲಿಂಗಯ್ಯ ಹೇಳಿದರು.
ನಮ್ಮ ಬಸ್ ಅಪಘಾತವಾಗಿ ಶೇಪ್ ಡ್ಯಾಮೇಜ್ ಆಗಿತ್ತು. ರಿಪೇರಿ ಮಾಡಲು ಕೊಟ್ಟು, ಆರು ತಿಂಗಳಾಗಿತ್ತು. ಇನ್ನೂ ತಯಾರಾಗಿರಲಿಲ್ಲ. ಇನ್ನು ನಾಲ್ಕು ದಿನದಲ್ಲಿ ತಯಾರಾಗುತ್ತೆ ಅಂದಿದ್ದರು. ಇದೀಗ ಬೆಂಕಿ ಅನಾಹುತದಿಂದ 65 ಲಕ್ಷ ರೂ. ನಷ್ಟವಾಯಿತು ಎಂದು ನಿದಾ ಟ್ರಾವೆಲ್ಸ್ ಮಾಲೀಕ ಮಹಮದ್ ಜಬೀ ಉಲ್ಲಾ ಹೇಳಿದರು.
ಗಿರಿನಗರದ ವೀರಭದ್ರನಗರದಲ್ಲಿ ಅಗ್ನಿ ಅನಾಹುತದಿಂದ ಬಸ್ ಗಳು ಸುಟ್ಟುಹೋದ ಸ್ಥಳಕ್ಕೆ ಡಿಸಿಎಂ ಡಿ ಕೆ ಶಿವಕುಮಾರ್, ಸಾರಿಗೆ ಸಚಿವ ರಾಮಲಿಂಗಾರೆಡ್ಡಿ ಅವರು ಸೋಮವಾರ ಭೇಟಿ ನೀಡಿ ಪರಿಶೀಲನೆ ನಡೆಸಿದರು.
ಬಸ್ ಅಗ್ನಿ ದುರಂತದ ಬಗ್ಗೆ ಮಾತನಾಡಿದ ಡಿ.ಕೆ.ಶಿವಕುಮಾರ್, “ವೆಲ್ಡಿಂಗ್ ಮಾಡುವ ವೇಳೆ ಕಿಡಿ ಹಾರಿ ಒಂದು ಬಸ್ಗೆ ಬೆಂಕಿ ಬಿದ್ದು, ಅದು ಹರಡಿಕೊಂಡಿದೆ. ಇಷ್ಟು ದೊಡ್ಡ ಅನಾಹುತ ನಡೆದರೂ ಯಾವುದೇ ಪ್ರಾಣಹಾನಿ ಸಂಭವಿಸಿಲ್ಲದಿರುವುದು ಒಳ್ಳೆಯ ಸುದ್ದಿ. ಅಗ್ನಿಶಾಮಕ ದಳದವರು ಅತ್ಯಂತ ಶೀಘ್ರವಾಗಿ ಬೆಂಕಿ ನಂದಿಸಿದ್ದಾರೆ. ಪೊಲೀಸ್ ಮತ್ತು ಅಗ್ನಿಶಾಮಕದಳದ ಉನ್ನತ ಅಧಿಕಾರಿಗಳಿಗೆ ಈ ವಿಚಾರವಾಗಿ ಪ್ರತ್ಯೇಕ ವರದಿ ನೀಡುವಂತೆ ಸೂಚನೆ ನೀಡಿದ್ದೇನೆ” ಎಂದು ತಿಳಿಸಿದರು.
“ದುರಂತ ನಡೆದ ಸ್ಥಳ ಖಾಸಗಿಯವರಿಗೆ ಸೇರಿದ್ದು, ಇವರು ಸಹ ಸಣ್ಣ ಪ್ರಮಾಣದ ಅಗ್ನಿ ನಿಯಂತ್ರಣ ವ್ಯವಸ್ಥೆ ಇಟ್ಟುಕೊಂಡಿದ್ದಾರೆ. ಆದರೂ ಇಂತಹ ಘಟನೆಗಳು ಮರುಕಳಿಸದಂತೆ ಎಚ್ಚರ ವಹಿಸಲು ಸೂಚನೆ ನೀಡಿದ್ದೇನೆ. ಇಂತಹ ಸೂಕ್ಷ್ಮ ಕೆಲಸಗಳು ನಡೆಯುವ ಜಾಗಗಳಲ್ಲಿ ಕಟ್ಟೆಚ್ಚರ ಅಗತ್ಯ ಎಂದು ಕಟ್ಟುನಿಟ್ಟಾಗಿ ಸೂಚಿಸಿದ್ದೇನೆ” ಎಂದರು.
ಹೊರಗೆ ಹೋಗಲು ಒಂದೇ ಕಡೆ ಜಾಗ ಇದ್ದ ಕಾರಣ ಮತ್ತು ಮುಂಜಾಗ್ರತಾ ಕ್ರಮಗಳು ಇಲ್ಲದ ಕಾರಣ ಅನಾಹುತ ಸಂಭವಿಸಿತೆ ಎಂದು ಕೇಳಿದಾಗ “ತಾಂತ್ರಿಕ ಅಂಶ, ದೋಷಗಳನ್ನು ನಾನು ಈಗಲೇ ಹೇಳಲು ಆಗುವುದಿಲ್ಲ, ವರದಿ ಬರಲಿ ಆನಂತರ ಹೇಳುತ್ತೇನೆ” ಎಂದು ತಿಳಿಸಿದರು.
ಸರ್ಕಾರ ಬಂದ ನಂತರ ಈಗಾಗಲೇ ಮೂರು ದೊಡ್ಡ ಬೆಂಕಿ ಅವಘಡಗಳು ನಡೆದಿವೆ, ಸರ್ಕಾರ ಕ್ರಮ ಮುಂಜಾಗ್ರತಾ ಕ್ರಮಗಳನ್ನು ತೆಗೆದುಕೊಳ್ಳುತ್ತಿಲ್ಲವೇ ಎಂದು ಕೇಳಿದಾಗ “ಪಟಾಕಿ ದುರಂತ ನಡೆದ ನಂತರ ಕಠಿಣ ಕ್ರಮ ತೆಗೆದುಕೊಂಡಿದ್ದೇವೆ. ಇಂತಹ ಸೂಕ್ಷ್ಮ ವಲಯಗಳಲ್ಲಿ ಸುರಕ್ಷತಾ ಕ್ರಮಗಳನ್ನು ಪರಿಶೀಲಿಸಬೇಕು ಎಂದು ಅಧಿಕಾರಿಗಳಿಗೆ ಹೇಳಿದ್ದೇನೆ” ಎಂದು ಹೇಳಿದರು.
ಮಾಲೀಕನ ಮೇಲೆ ಎಫ್ಐಆರ್ ದಾಖಲಾಗುತ್ತದೆಯೇ ಎಂದು ಕೇಳಿದಾಗ “ಎಷ್ಟು ಹಾನಿಯಾಗಿದೆ ಎಂದು ಇನ್ನೂ ಗೊತ್ತಿಲ್ಲ, ಮೊದಲು ವರದಿ ಬರಲಿ, ಆನಂತರ ಕ್ರಮ ತೆಗೆದುಕೊಳ್ಳೋಣ” ಎಂದರು.