ಕಲಬುರಗಿ,ಜೂ.11: ಸಾಮಾಜಿಕ ಜಾಲತಾಣದಲ್ಲಿ ಅವಹೇಳನಕಾರಿ, ರಾಷ್ಟ್ರ ನಾಯಕರ ಬಗ್ಗೆ ಇಲ್ಲ ಸಲ್ಲದ ಪೋಸ್ಟ್ ಮಾಡುವುದಕ್ಕೆ ಕಡಿವಾಣ ಹಾಕಲಾಗುವುದು ಎಂದು ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್ ರಾಜ್, ಮಾಹಿತಿ ಮತ್ತು ಜೈವಿಕ ತಂತ್ರಜ್ಞಾನ ಹಾಗೂ ಜಿಲ್ಲಾ ಉಸ್ತುವಾರಿ ಸಚಿವ ಪ್ರಿಯಾಂಕ ಖರ್ಗೆ ಹೇಳಿದರು.
ಕಲಬುರಗಿ ಕೇಂದ್ರ ಬಸ್ ನಿಲ್ದಾಣದಲ್ಲಿ ರಾಜ್ಯ ಸರ್ಕಾರದ ಪ್ರಮುಖ 5 ಉಚಿತ ಗ್ಯಾರಂಟಿ ಯೋಜನೆಯಲ್ಲಿ ಒಂದಾದ “ಶಕ್ತಿ” ಯೋಜನೆಗೆ ಚಾಲನೆ ನೀಡಿದ ನಂತರ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಇತ್ತೀಚೆಗೆ ಸೋಷಿಯಲ್ ಮೀಡಿಯಾದಲ್ಲಿ ಸಮಾಜದ ಸ್ವಾಸ್ಥ್ಯಕಗಕರ ಧಕ್ಕೆ ತರುವಂತಹ ಪೋಸ್ಟ್ ಮಾಡುತ್ತಿರುವುದು ಗಮನಕ್ಕೆ ಬಂದಿದ್ದು, ಸಮಾಜದ ಅಶಾಂತಿಗೆ ಕಾರಣಾಗುವುದನ್ನು ಕಂಡು ನಮ್ಮ ಸರ್ಕಾರ ಸುಮ್ಮನೆ ಕೂಡುವುದಿಲ್ಲ ಎಂದರು.
ಸುಪ್ರೀಂ ಕೋರ್ಟ್ ತೀರ್ಪಿನ ಪ್ರಕಾರವೇ ಸಮಾಜಿಕ ಜಾಲತಾಣಗಳಲ್ಲಿ ಪ್ರಸಾರವಾಗುವ ಪೋಸ್ಟ್ ಗೆ ಕಡಿವಾಣ ಹಾಕಲಾಗುವುದು. ಇದು ತಮ್ಮ ಇಲಾಖೆಯ ವ್ಯಾಪ್ತಿಗೆ ಬರಲಿದೆ ಎಂದು ಸಚಿವರು ಸ್ಪಷ್ಟಪಡಿಸಿದರು.
ವಿದ್ಯುತ್ ದರ ಹೆಚ್ಚಿಸಿದ್ದು ನಾವಲ್ಲ:
ಜೂನ್ ಮಾಹೆಯ ವಿದ್ಯುತ್ ಬಿಲ್ಲಿನಲ್ಲಿ ಡಬಲ್ ಬಿಲ್ ಬಂದಿದೆ ಎಂದು ಸುದ್ದಿಗಾರರು ಸಚಿವರ ಗಮನ ಸೆಳೆದಾಗ, ವಿದ್ಯುತ್ ದರ ಹೆಚ್ಚಿಸಿದ್ದು, ನಮ್ಮ ಸರ್ಕಾರ ಅಲ್ಲ. ಹಿಂದಿನ ಸರ್ಕಾರದ ಅವಧಿಯಲ್ಲೇ ಕೆ.ಇ.ಆರ್.ಸಿ. ವಿದ್ಯುತ್ ದರ ಪರಿಷ್ಕರಿಸಿದ್ದು, ಚುನಾವಣೆ ಹಿನ್ನೆಲೆಯಲ್ಲಿ ಅದು ಜಾರಿಗೆ ಬಂದಿರಲಿಲ್ಲ. ಇದೀಗ ಜಾರಿಗೆ ಬಂದಿದೆ ಅಷ್ಟೆ. ಇದರ ಹೊರತಾಗಿ ತಾಂತ್ರಿಕ ಕಾರಣದಿಂದ ಹೆಚ್ಚಿನ ಬಿಲ್ಲು ಬಂದಲ್ಲಿ ಅಧಿಕಾರಿಗಳು ಅದನ್ನು ನೋಡಿಕೊಳ್ಳಲಿದ್ದಾರೆ ಎಂದರು. ಶಾಸಕ ಅಲ್ಲಮಪ್ರಭು ಪಾಟೀಲ ಜೊತೆಗಿದ್ದರು.