ಸುದ್ದಿಮೂಲ ವಾರ್ತೆ
ಕೊಪ್ಪಳ, ಮೇ 19: ಮೇ 21 ಮತ್ತು 22ರಂದು ಜೋರ್ಡಾನ್ ದೇಶದಲ್ಲಿ ಜರುಗಲಿರುವ 14ನೇ ಅಂತಾರಾಷ್ಟ್ರೀಯ ಶೈಕ್ಷಣಿಕ ಸಮ್ಮೇಳನದಲ್ಲಿ ಕೊಪ್ಪಳ ವಿಶ್ವವಿದ್ಯಾಲಯದ ಕುಲಪತಿಗಳಾದ ಪ್ರೊ. ಬಿ ಕೆ ರವಿ ಅವರು ಪಾಲ್ಗೊಳ್ಳಲಿದ್ದಾರೆ.
ಅಮೆರಿಕದ ಬ್ರಿಡ್ಜ್ ವಾಟರ್ ಸ್ಟೇಟ್ ವಿಶ್ವವಿದ್ಯಾಲಯದ ಹಾಗೂ ಜೋರ್ಡಾನಿನ ಟಫಿಲಾ ಟೆಕ್ನಿಕಲ್ ವಿಶ್ವವಿದ್ಯಾಲಯವು ಜಂಟಿಯಾಗಿ ಆಯೋಜಿಸಿರುವ ‘ನೇವಿಗೇಟಿಂಗ್ ಫ್ಯೂಚರ್ ಸ್ಟ್ರಾಟಜಿಸ್ ಫಾರ್ ಅಡ್ವಾನ್ಸಿಂಗ್ ಎಜುಕೇಶನ್ ಆ್ಯಂಡ್ ಇಂಟರ್ ಡಿಸಿಪ್ಲಿನರಿ ರ್ಸ್ಪೆಕ್ಟಿವ್’ ಎಂಬ ವಿಷಯಾಧಾರಿತ ಅಂತಾರಾಷ್ಟ್ರೀಯ ಸಮ್ಮೇಳನಕ್ಕೆ ಅವರನ್ನು ಆಹ್ವಾನಿಸಿ ಶೈಕ್ಷಣಿಕ ಸಮ್ಮೇಳನ ಉದ್ಘಾಟನೆಗೆ ಆಮಂತ್ರಿಸಲಾಗಿದೆ.
ಸಮ್ಮೇಳನದ ಉದ್ಘಾಟನಾ ಭಾಷಣದ ಜೊತೆಗೆ ‘ಐಸಿಟಿ ಬಳಕೆಯಿಂದ ಶಿಕ್ಷಣದ ಅಂತಾರಾಷ್ಟ್ರೀಕರಣ ಮತ್ತು ಉನ್ನತ ಶಿಕ್ಷಣದ ಸಾಂಸ್ಕೃತಿಕ ಸಾಮರ್ಥ್ಯ’ ವಿಷಯದ ಕುರಿತಾಗಿ ಸಂಶೋಧನಾ ಪತ್ರಿಕೆಯನ್ನು ಕುಲಪತಿಗಳು ಮಂಡಿಸಲಿದ್ದಾರೆ.
50ಕ್ಕೂ ಹೆಚ್ಚು ದೇಶಗಳ ಆಯ್ದ ಶಿಕ್ಷಣ ತಜ್ಞರು, ವಿಷಯ ಪರಿಣಿತರು ಪ್ರತಿಷ್ಠಿತ ಸಮ್ಮೇಳನದಲ್ಲಿ ಭಾಗವಹಿಸಲಿದ್ದಾರೆ. ಕೊಪ್ಪಳ ವಿಶ್ವವಿದ್ಯಾಲಯದ ಹೆಸರನ್ನು ಅಂತಾರಾಷ್ಟ್ರೀಯ ಮಟ್ಟದಲ್ಲಿ ಪ್ರೊ. ಬಿ ಕೆ ರವಿ ಅವರು ಪ್ರಚುರಪಡಿಸುತ್ತಿರುವುದು ಹೆಮ್ಮೆಯ ವಿಷಯ ಎಂದು ವಿಶ್ವವಿದ್ಯಾಲಯದ ಸಿಬ್ಬಂದಿ ಹಾಗೂ ಅವರ ಹಿತೈಷಿಗಳು ಹರ್ಷ ವ್ಯಕ್ತಪಡಿಸಿದ್ದಾರೆ. ಅವರ ವಿದೇಶ ಪ್ರಯಾಣಕ್ಕೆ ಎಲ್ಲರೂ ಶುಭ ಹಾರೈಸಿದ್ದಾರೆ.