ಸುದ್ದಿಮೂಲ ವಾರ್ತೆ
ಬೆಂಗಳೂರು, ಮೇ 23: ವ್ಯಾಪಾರೋದ್ಯಮದಲ್ಲಿ ತಂತ್ರಜ್ಞಾನ ಬಳಕೆಯನ್ನು ಹೆಚ್ಚೆಚ್ಚು ಮಾಡುವ ಮೂಲಕ ಅನಗತ್ಯ ವೆಚ್ಚಗಳಿಗೆ ಕಡಿವಾಣ ಹಾಕಿ ಲಾಭ ಹೆಚ್ಚಳ ಮಾಡುವತ್ತ ಗಮನವಹಿಸಬೇಕು ಎಂದು ಕೇಂದ್ರ ವಾಣಿಜ್ಯ ಇಲಾಖೆ ಕಾರ್ಯದರ್ಶಿ ಸುನೀಲ್ ಭರ್ತ್ವಾಲ್ ಸಲಹೆ ನೀಡಿದರು.
ಬೆಂಗಳೂರಿನಲ್ಲಿ ಮೂರು ದಿನಗಳ ಜಿ 20 ವರ್ಕಿಂಗ್ ಗ್ರೂಪ್ ಸಭೆಯ ಹಿನ್ನೆಲೆಯಲ್ಲಿ ಆಯೋಜಿಸಲಾದ ತಂತ್ರಜ್ಞಾನ ಮತ್ತು ವ್ಯಾಪಾರ ಕುರಿತ ವಿಚಾರ ಸಂಕಿರಣವನ್ನು ಉದ್ದೇಶಿಸಿ ಅವರು ಮಾತನಾಡಿದರು.
ದೇಶದ 1.4 ಬಿಲಿಯಲ್ ವಹಿವಾಟು ವಾಣಿಜ್ಯೋದ್ಯಮದ ಮೇಲೆ ನಡೆಯುತ್ತದೆ. ಕೊಟ್ಯಂತರ ಜನ ಇದರ ಭಾಗವಾಗಿದ್ದಾರೆ. ಇದು ಬೆಳೆಯಬೇಕಾದರೆ ತಂತ್ರಜ್ಞಾನ ಇಲ್ಲದೆ ಸಾಧ್ಯವಿಲ್ಲ ಎಂದರು.
ಗಡಿಯಾಚೆಗಿನ ರಫ್ತು ಮತ್ತು ಆಮದು ವಹಿವಾಟು ಇನ್ನೂ ಕಾಗದದ ಮೇಲೆ ಮಾಡಲಾಗುತ್ತದೆ. ವ್ಯಾಪಾರೋದ್ಯಮದ ಮಧ್ಯಸ್ಥಗಾರರು ಮೂರು ಡಜನ್ ಪೇಪರ್ಗಳನ್ನು ಸಲ್ಲಿಸುವ ಅಗತ್ಯವಿದೆ. ವಿದೇಶಿ ವಹಿವಾಟು ನಡೆಸುವವರು ಸಂಪರ್ಕ ಸಾಧಿಸಲು, ವ್ಯವಹಾರವನ್ನು ಸುಲಭಗೊಳಿಸಲು, ಲಾಜಿಸ್ಟಿಕ್ಸ್ ವೆಚ್ಚಗಳನ್ನು ಕಡಿಮೆ ಮಾಡಲು ಪರಿಣಾಮಕಾರಿ ಜಾಗತಿಕ ಮೌಲ್ಯ ಸರಪಳಿಯನ್ನು ಅಭಿವೃದ್ಧಿಪಡಿಸಲು ತಂತ್ರಜ್ಞಾನವನ್ನು ಬಳಸಿಕೊಳ್ಳುವ ಅಗತ್ಯ ಇದೆ ಎಂದು ಅವರು ಒತ್ತಿ ಹೇಳಿದರು.
ಭಾರತೀಯ ವಿದೇಶಿ ವ್ಯಾಪಾರ ನೀತಿಯು ಇ-ಕಾಮರ್ಸ್ಗೆ ಒತ್ತು ನೀಡುತ್ತದೆ. ಡಿಜಿಟಲೀಕರಣದ ಆರ್ಥಿಕತೆ ಉತ್ತೇಜಿಸುವಲ್ಲಿ, ಸರ್ಕಾರಿ ಯೋಜನೆಗಳ ನೇರ ಲಾಭ ವರ್ಗಾವಣೆಯನ್ನು ಪರಿಚಯಿಸುವಲ್ಲಿ ಮತ್ತು ಬ್ಯಾಂಕ್ ಖಾತೆಗಳು ಮತ್ತು ಮೊಬೈಲ್ ಫೋನ್ಗಳಿಗೆ ಆಧಾರ್ ಲಿಂಕ್ ಮಾಡುವಲ್ಲಿ ದೇಶವು ಮುಂಚೂಣಿಯಲ್ಲಿದೆ ಎಂದು ಹೇಳಿದರು. ಜನಸಾಮಾನ್ಯರೂ ಸಹ ತಮ್ಮ ಮನೆಯಲ್ಲಿ ಉತ್ಪನ್ನಗಳನ್ನು ತಯಾರಿಸಿ ಅದನ್ನು ಜಾಗತಿಕವಾಗಿ ಮಾರಾಟ ಮಾಡುವಂತಹ ಅವಕಾಶವನ್ನು ತಂತ್ರಜ್ಞಾನ ಒದಗಿಸಿದೆ ಎಂದು ಮೆಚ್ಚುಗೆ ವ್ಯಕ್ತಪಡಿಸಿದರು.
ತಂತ್ರಜ್ಞಾನ ಬಳಕೆ ಎಷ್ಟು ಉಪಯೋಗವೋ ಅಷ್ಟೇ ಅದರಿಂದ ಸಮಸ್ಯೆಗಳೂ ಇರುತ್ತವೆ. ಕೆಲವರು ಅದನ್ನು ಮೋಸದ ಜಾಲಕ್ಕೆ ಬಳಸಿಕೊಂಡು ವ್ಯಾಪಾರೋದ್ಯಮಿಗಳಿಗೆ ನಷ್ಟ ಉಂಟು ಮಾಡುವ ಅಪಾಯವೂ ಇದೆ. ಇದನ್ನು ಕುಶಲತೆಯಿಂದ ಬಳಸಿಕೊಂಡು ಉಪಯೋಗ ಪಡೆಯುವತ್ತ ಮೋಸದ ವಿಧಾನಗಳಿಗೆ ದುರುಪಯೋಗಪಡಿಸಿಕೊಳ್ಳಬಹುದು. ಸೆಮಿನಾರ್ನಲ್ಲಿ ಪ್ರತಿಫಲಿಸುವ ಆಲೋಚನೆಗಳು ಸಂವಹನದಲ್ಲಿ ತನ್ನ ಮಾರ್ಗವನ್ನು ಕಂಡುಕೊಳ್ಳುತ್ತವೆ ಮತ್ತು G20 ದಸ್ತಾವೇಜನ್ನು ಭಾಗವಾಗುತ್ತವೆ ಎಂದು ಅವರು ಆಶಿಸಿದರು.
ಕೇಂದ್ರ ವಾಣಿಜ್ಯ ಮತ್ತು ಕೈಗಾರಿಕೆಗಳ ರಾಜ್ಯ ಸಚಿವ ಸೋಮ್ ಪ್ರಕಾಶ್ ಮಾತನಾಡಿ, ಜಾಗತಿಕ ವ್ಯಾಪಾರದಲ್ಲಿನ ಅಡೆತಡೆಗಳು ಮತ್ತು ಸವಾಲುಗಳನ್ನು ನಿವಾರಿಸಲು ಉದ್ಯಮ ಪ್ರತಿನಿಧಿಗಳು, ಶೈಕ್ಷಣಿಕ, ಸಂಶೋಧನೆ ಮತ್ತು ಅಭಿವೃದ್ಧಿ ಸಂಸ್ಥೆಗಳು ಮತ್ತು ಸರ್ಕಾರಿ ಅಧಿಕಾರಿಗಳು ಒಟ್ಟಾಗಿ ಕೆಲಸ ಮಾಡುತ್ತಾರೆ ಎಂದು ಹೇಳಿದರು.
ವ್ಯಾಪಾರ ಮತ್ತು ಹೂಡಿಕೆ ವರ್ಕಿಂಗ್ ಗ್ರೂಪ್ನ (ಟಿಐಡಬ್ಲ್ಯೂಜಿ) ಎರಡನೇ ಸಭೆಯು ಉತ್ತಮ ಭವಿಷ್ಯಕ್ಕಾಗಿ ಮತ್ತು ಹಂಚಿಕೆಯ ಸಮೃದ್ಧಿಗಾಗಿ ಅಂತರರಾಷ್ಟ್ರೀಯ ವ್ಯಾಪಾರದಲ್ಲಿನ ಅಡೆತಡೆಗಳನ್ನು ಮುರಿಯಲು ಕೆಲಸ ಮಾಡುತ್ತದೆ ಎಂದು ಭರವಸೆ ವ್ಯಕ್ತಪಡಿಸಿದರು.