ಸುದ್ದಿಮೂಲ ವಾರ್ತೆ
ಬೆಂಗಳೂರು,ನ.27: ಮಿನ್ಹಾಜುಲ್ ಕುರ್ಆನ್ ಇಂಟರ್ನ್ಯಾಷನಲ್ ಇಂಡಿಯಾ ವತಿಯಿಂದ ಇದೇ ಮೊಟ್ಟಮೊದಲ ಬಾರಿಗೆ ಪ್ರವಾದಿ ಮುಹಮ್ಮದ್(ಸ)ರವರ ಕುರಿತು ಕನ್ನಡದಲ್ಲಿ ಪುಸ್ತಕ ಪ್ರಕಟ ಮಾಡಿರುವುದು ಶ್ಲಾಘನೀಯ ಎಂದು ಬೇಲಿಮಠದ ಶ್ರೀ ಶಿವರುದ್ರ ಸ್ವಾಮಿ ಹೇಳಿದರು.
ನಗರದ ಶೇಷಾದ್ರಿಪುರಂನಲ್ಲಿರುವ ಕೆಎಂಡಿಸಿ ಭವನದಲ್ಲಿ ಆಯೋಜಿಸಲಾಗಿದ್ದ ಕಾರ್ಯಕ್ರಮದಲ್ಲಿ ಶೈಖುಲ್ ಇಸ್ಲಾಮ್ ಡಾ.ಮುಹಮ್ಮದ್ ತಾಹಿರುಲ್ ಖಾದ್ರಿ ಅವರು ಆಂಗ್ಲ ಭಾಷೆಯಲ್ಲಿ ರಚಿಸಿರುವ ದಿ ರಿಯಲ್ ಸ್ಕೇಚ್ ಆಫ್ ದ ಪ್ರಾಫೆಟ್ ಮುಹಮ್ಮದ್(ಸ) ಪುಸ್ತಕದ ಕನ್ನಡ ಭಾಷಾಂತರ ಕೃತಿ ‘ಪ್ರವಾದಿ ಮುಹಮ್ಮದ್(ಸ)ರವರ ನೈಜ ಚಿತ್ರಣ’ ಪುಸ್ತಕವನ್ನು ಲೋಕಾರ್ಪಣೆಗೊಳಿಸಿ ಅವರು ಮಾತನಾಡಿದರು.
ಪ್ರವಾದಿಯವರು ಪ್ರತಿಯೊಂದು ವಿಚಾರದಲ್ಲಿಯೂ ಪರಿಪೂರ್ಣತೆಯನ್ನು ಸಾಧಿಸಿದವರು ಎಂಬುದರಲ್ಲಿ ಯಾವುದೆ ಉತ್ಪ್ರೆಕ್ಷೆಯಿಲ್ಲ. ಕುರ್ಆನ್ ಹಾಗೂ ಹದೀಸ್ ಬಗ್ಗೆ ನಾವು ಅದ್ಭುತವಾಗಿ ಮಾತನಾಡುತ್ತೇವೆ. ಆದರೆ, ನಮ್ಮ ಜೀವನದಲ್ಲಿ ಅದರಲ್ಲಿರುವ ಅಂಶಗಳು ಆಚರಣೆಯಲ್ಲಿವೆಯೆ? ಎಂಬುದನ್ನು ಗಮನಿಸಬೇಕು. ಅಲ್ಲದೆ, ಅರೆಬಿಕ್ ಭಾಷೆಯಲ್ಲಿರುವ ಕುರ್ಆನ್ ಹಾಗೂ ಹದೀಸ್ನಲ್ಲಿರುವ ವಿಚಾರಗಳು ಎಲ್ಲ ಭಾಷೆಗಳಲ್ಲಿ ಎಲ್ಲರ ಮನಸ್ಸುಗಳಿಗೆ ತಲುಪಿಸುವಂತಹ ಕೆಲಸ ಮಾಡಬೇಕು ಎಂದು ಅವರು ಹೇಳಿದರು.
ಇಸ್ಲಾಮ್ ಅಂದರೆ ಶಾಂತಿ. ಆದರೆ, ಇವತ್ತಿನ ಕಾಲಘಟ್ಟದಲ್ಲಿ ನಮ್ಮನ್ನು ದಾರಿ ತಪ್ಪಿಸಿ, ನಮ್ಮ ಧರ್ಮಪ್ರಜ್ಞೆಯನ್ನು ಬೇರೆ ರೀತಿ ಬಳಸಿಕೊಳ್ಳುತ್ತಿರುವ ಪ್ರಸಂಗಗಳು ನಡೆಯುತ್ತಿವೆ. ಅಹಿಂಸೆ, ಕ್ರೌರ್ಯ ಹೆಚ್ಚುತ್ತಿದೆ. ಪ್ರತಿಯೊಬ್ಬರೂ ಪ್ರವಾದಿಯ ಬೋಧನೆಯಂತೆ ಆತ್ಮನಿರೀಕ್ಷಣೆ ಮಾಡಿಕೊಂಡರೆ ಈ ಎಲ್ಲ ಸಮಸ್ಯೆಗಳಿಗೂ ಖಂಡಿತ ಪರಿಹಾರ ಇದೆ ಎಂದು ಶಿವರುದ್ರಸ್ವಾಮಿ ಹೇಳಿದರು.
ಮಿನ್ಹಾಜುಲ್ ಕುರ್ಆನ್ ಸಂಸ್ಥೆಯವರು ಈಗಾಗಲೆ ಪ್ರಪಂಚದ ಬೇರೆ ಬೇರೆ ಭಾಷೆಗಳಲ್ಲಿ ಪುಸ್ತಕಗಳನ್ನು ಪ್ರಕಟಿಸಿದ್ದಾರೆ. ಈಗ ಕನ್ನಡದಲ್ಲಿಯೂ ಪ್ರವಾದಿ ಮುಹಮ್ಮದ್(ಸ)ರವರ ನೈಜ ಚಿತ್ರಣ ಎಂಬ ಪುಸ್ತಕ ಪ್ರಕಟಿಸಿರುವುದು ಯೋಗ್ಯವಾದ ಕೆಲಸ. ಈ ಪುಸ್ತಕ ಎಲ್ಲರಿಗೂ ಸಿಗಲಿ, ಪ್ರವಾದಿಯ ವ್ಯಕ್ತಿತ್ವ, ಬೋಧನೆಯನ್ನು ಎಲ್ಲರೂ ತಿಳಿದುಕೊಳ್ಳುವಂತಾಗಲಿ ಎಂದು ಅವರು ಹಾರೈಸಿದರು.
ರಾಜ್ಯ ಅಲ್ಪಸಂಖ್ಯಾತರ ಆಯೋಗದ ಅಧ್ಯಕ್ಷ ಅಬ್ದುಲ್ ಅಝೀಂ ಮಾತನಾಡಿ, ದೇಶದಲ್ಲಿ ಧರ್ಮ ಧರ್ಮಗಳ ನಡುವೆ ಅಪನಂಬಿಕೆಗಳು ಹೆಚ್ಚುತ್ತಿವೆ. ಅವುಗಳನ್ನು ಹೋಗಲಾಡಿಸುವ ನಿಟ್ಟಿನಲ್ಲಿ ಮಿನ್ಹಾಜುಲ್ ಕುರ್ಆನ್ ಸಂಸ್ಥೆಯು ಕನ್ನಡ ಭಾಷೆಯಲ್ಲಿ ಪುಸ್ತಕ ಹೊರತಂದಿರುವುದು ಉತ್ತಮ ಕಾರ್ಯವಾಗಿದೆ ಎಂದರು.
ಧಾರ್ಮಿಕ ಪುಸ್ತಕಗಳನ್ನು ಅರ್ಥಪೂರ್ಣವಾಗಿ ಅಧ್ಯಯನ ಮಾಡಿದಾಗ, ಅದರಲ್ಲಿರುವ ವಿಚಾರಗಳು ನಮಗೆ ತಿಳಿಯುತ್ತವೆ. ಧರ್ಮ, ಜಾತಿ, ಭಾಷೆ, ಬಣ್ಣದ ಆಧಾರದಲ್ಲಿ ಜನರನ್ನು ವಿಂಗಡಿಸುತ್ತಿದ್ದೇವೆ. ಇದಕ್ಕೆ ಅಂತ್ಯ ಯಾವಾಗ? ಇಸ್ಲಾಮ್ ಧರ್ಮದಲ್ಲಿ ಎಲ್ಲ ಸಮಸ್ಯೆಗಳಿಗೂ ಉತ್ತರವಿದೆ. ಆದರೆ, ನಾವು ಅದನ್ನು ಸರಿಯಾದ ರೀತಿಯಲ್ಲಿ ಅರ್ಥ ಮಾಡಿಕೊಳ್ಳಬೇಖಿದೆ ಎಂದು ಅವರು ಹೇಳಿದರು.
ಆದುದರಿಂದ, ನಾನು ಕುರ್ಆನ್ ನ ಬಗ್ಗೆ ಅಧ್ಯಯನ ಮಾಡಿಸಿ ವೈಜ್ಞಾನಿಕವಾಗಿ ಇದರಿಂದ ಇರುವ ಪ್ರಯೋಜನದ ಬಗ್ಗೆ ಪುಸ್ತಕ ಬರೆಸುತ್ತಿದ್ದೇನೆ. ಅಲ್ಲದೆ, ಕುರ್ಆನ್ನಲ್ಲಿ ಪದೇ ಪದೇ ಪುನರಾವರ್ತನೆಯಾಗಿರುವ ಸುಮಾರು 2ಸಾವಿರ ಅರೆಬಿಕ್ ಪದಗಳ ಅರ್ಥವನ್ನು ಉರ್ದು, ಇಂಗ್ಲಿಷ್ ಹಾಗೂ ಕನ್ನಡದಲ್ಲಿ ಬರೆಸುತ್ತಿದ್ದೇನೆ ಎಂದು ಅಬ್ದುಲ್ ಅಝೀಂ ಹೇಳಿದರು.
ಕಾರ್ಯಕ್ರಮದಲ್ಲಿ ಮಿನ್ಹಾಜುಲ್ ಕುರ್ಆನ್ ಇಂಟರ್ ನ್ಯಾಷನಲ್ ಇಂಡಿಯಾ ಸಂಸ್ಥೆಯ ಪಬ್ಲಿಕೇಷನ್ ವಿಭಾಗದ ಅಧ್ಯಕ್ಷ ನಾದಿ ಅಲಿ, ರಾಜ್ಯ ಘಟಕದ ಅಧ್ಯಕ್ಷ ಸೈಯದ್ ಫರಾಝ್ ಮುಹಿಯುದ್ದೀನ್, ಕಾರ್ಯಾಧ್ಯಕ್ಷ ಫೈಝುಲ್ಲಾ ಬೇಗ್ ಜುನೇದಿ, ಪ್ರಧಾನ ಕಾರ್ಯದರ್ಶಿ ಅಯ್ಯೂಬ್ ಅನ್ಸಾರಿ, ಸದಸ್ಯರಾದ ಉಸ್ಮಾನ್ ಶರೀಫ್, ಮುನೀರ್ ಅಹ್ಮದ್ ಜಾಮಿ, ಇಸ್ಮಾಯಿಲ್ ಖಾನ್, ಪರ್ವೇಝ್ ಅಲಿಖಾನ್, ಮುಹಮ್ಮದ್ ಮುಸ್ತಫಾ, ಅನುವಾದಕಾರದ ಅಮಾನುಲ್ಲಾ ಖಾನ್, ಖೈಸರ್ ಜಹಾನ್ ಹಾಗೂ ಪರಿಶೀಲನಾಕಾರ ಮೌಲಾನ ಮುಸ್ತಫಾ ಕಮಾಲ್ ಸೇರಿದಂತೆ ಇನ್ನಿತರರು ಉಪಸ್ಥಿತರಿದ್ದರು.