ಸುದ್ದಿಮೂಲ ವಾರ್ತೆ
ಕೆ.ಆರ್.ಪುರ, ಜು 26 : ಮಹದೇವಪುರ ಕ್ಷೇತ್ರದ ಸೂಲಿಕುಂಟೆ ಸಮೀಪವಿರುವ ಕೊಳಚೆ ನಿರ್ಮೂಲನ ಮಂಡಳಿಯು ನಿರ್ಮಾಣ ಮಾಡಿರುವ ವಸತಿ ಸಮುಚ್ಚಯದಲ್ಲಿ ಸ್ಥಳೀಯರಿಗೆ ಅವಕಾಶ ಕಲ್ಪಿಸದಿರುವ ರಾಜ್ಯ ಸರಕಾರದ ನಡೆಯನ್ನು ಖಂಡಿಸಿ ಬಿಜೆಪಿ ಕಾರ್ಯಕರ್ತರು ಪ್ರತಿಭಟನೆ ನಡೆಸಿದರು.
ಪ್ರತಿಭಟನೆಯನ್ನು ಉದ್ದೇಶಿಸಿ ಮಾತನಾಡಿದ ಶಾಸಕಿ ಮಂಜುಳಾ ಅರವಿಂದ ಲಿಂಬಾವಳಿ, ಮಹದೇವಪುರ ಕ್ಷೇತ್ರದ ಕೊಡತಿ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಸೂಲಿಕುಂಟೆ ಗ್ರಾಮದಲ್ಲಿ 50:50 ಅನುಪಾತದಲ್ಲಿ ರಾಜೀವ್ ಗಾಂಧಿ ವಸತಿ ಯೋಜನೆಯ ಅನುದಾನದಲ್ಲಿ ಕೊಳಚೆ ನಿರ್ಮೂಲನ ಮಂಡಳಿಯು 900 ಮನೆಗಳನ್ನು ನಿರ್ಮಾಣ ಮಾಡಲು ಭೂಮಿ ಪಡೆದಿದೆ. ಮನೆಗಳ ನಿರ್ಮಾಣದ ನಂತರ ಕ್ಷೇತ್ರದ ಫಲಾನುಭವಿಗಳಿಗೆ ನೀಡಬೇಕಿದ್ದ 450 ಮನೆಗಳನ್ನು ಸಹ ಅನ್ಯ ಕ್ಷೇತ್ರದವರಿಗೆ ನೀಡುವ ಮೂಲಕ ರಾಜ್ಯ ಸರಕಾರ ಮಹದೇವಪುರದ ಜನತೆಗೆ ಮೋಸ ಮಾಡುತ್ತಿದೆ ಎಂದು ಹೇಳಿದರು.
ಸ್ಥಳೀಯ ವಸತಿ ನಿರ್ಗತಿಕರಿಗೆ ಮನೆಗಳನ್ನು ನೀಡದೆ ಹೋದರೆ ಮುಂದಿನ ದಿನಗಳಲ್ಲಿ ರಾಜ್ಯ ಸರಕಾರದ ವಿರುದ್ಧ ಉಗ್ರ ಹೊರಟ ಮಾಡುವುದಾಗಿ ತಿಳಿಸಿದರು.
ಇದೇ ವೇಳೆ ಸ್ಥಳೀಯ ಶಾಸಕರಿಗೆ ಹಾಗೂ ಗ್ರಾಮ ಪಂಚಾಯತಿ ಗಮನಕ್ಕೆ ತರದೆ ಮನೆಗಳ ಹಕ್ಕು ಪತ್ರ ವಿತರಣೆ ಮಾಡಲು ಮುಂದಾಗಿರುವ ಅಧಿಕಾರಿಗಳನ್ನು ತರಾಟೆಗೆ ತೆಗೆದುಕೊಂಡರು.
ಈ ವೇಳೆ ಕ್ಷೇತ್ರದ ನಗರ ಮಂಡಲ ಅಧ್ಯಕ್ಷ ಮನೋಹರ ರೆಡ್ಡಿ, ಟಾಸ್ಕ್ ಫೋರ್ಸ್ನ ಸಾಮಾಜಿಕ ಮತ್ತು ಸಬಲೀಕರಣ ಅಧ್ಯಕ್ಷ ವೆಂಕಟಸ್ವಾಮಿ ರೆಡ್ಡಿ, ಪಾಲಿಕೆ ಮಾಜಿ ಸದಸ್ಯೆ ಪುಷ್ಪ ಮಂಜುನಾಥ್, ಗ್ರಾ.ಪಂ ಸದಸ್ಯರಾದ ಬಾಬುರೆಡ್ಡಿ, ನಾರಾಯಣಸ್ವಮಿ ಮುಖಂಡರಾದ ಬಿ.ಎಸ್ ಶ್ರೀದರ್, ಕಬ್ಬಡಿಪಿಳ್ಳಪ್ಪ ಇದ್ದರು.