ಸುದ್ದಿಮೂಲ ವಾರ್ತೆ
ಮೈಸೂರು, ಸೆ.2:ಸರ್ಕಾರ ತಮಿಳುನಾಡಿಗೆ ನೀರು ಹರಿಸುವ ಮೂಲಕ ರೈತರ ಬದುಕಿನ ಮೇಲೆ ಚಪ್ಪಡಿ ಎಳೆದಿದೆ ಎಂದು ಆಕ್ರೋಶ ವ್ಯಕ್ತಪಡಿಸಿ ಶ್ರೀರಂಗಪಟ್ಟಣದಲ್ಲಿ ರೈತರು ತಲೆ ಮೇಲೆ ಚಪ್ಪಡಿ ಕಲ್ಲು ಹೊತ್ತು ಪ್ರತಿಭಟನೆ ನಡೆಸಿದರು.
ಭೂಮಿ ತಾಯಿ ಹೋರಾಟ ಸಮಿತಿ ವತಿಯಿಂದ ರೈತ ಮುಖಂಡ ಕೆ.ಎಸ್.ನಂಜುಂಡೇಗೌಡ ಹಾಗೂ ಸಮಿತಿ ಅಧ್ಯಕ್ಷ ಬಲ್ಲೇನಹಳ್ಳಿ ಕೃಷ್ಣೇಗೌಡ ನೇತೃತ್ವದಲ್ಲಿ ನೂರಾರು ರೈತರು ಚಪ್ಪಡಿ ಕಲ್ಲು ಹೊತ್ತು ತಮಿಳುನಾಡಿಗೆ ಹರಿಸುತ್ತಿರುವ ನೀರನ್ನು ತಕ್ಷಣವೇ ನಿಲ್ಲಿಸುವಂತೆ ಆಗ್ರಹಿಸಿದರು.
ಕಾನೂನು ಭಂಗ ಚಳವಳಿ
ಪಟ್ಟಣದ ಕುವೆಂಪು ವೃತ್ತದಿಂದ ಮುಖ್ಯರಸ್ತೆ ಮಾರ್ಗವಾಗಿ ಪ್ರತಿಭಟನಾ ಮೆರವಣಿಗೆ ನಡೆಸಿದ ರೈತ ಮುಖಂಡರು ಬಳಿಕ ತಾಲ್ಲೂಕು ಕಚೇರಿ ಎದುರು ರಾಜ್ಯ ಸರ್ಕಾರ ಹಾಗೂ ನಿರ್ವಹಣಾ ಸಮಿತಿ ವಿರುದ್ದ ಘೋಷಣೆ ಕೂಗಿ ಆಕ್ರೋಶ ವ್ಯಕ್ತಪಡಿಸಿದರು. ರೈತರು ಇದುವರೆವಿಗೂ ಶಾಂತಿಯುತವಾಗಿ ಪ್ರತಿಭಟನೆ ನಡೆಸುತ್ತಿದ್ದು, ಸರ್ಕಾರ ಈಗಲಾದರೂ ಎಚ್ಚೆತ್ತುಕೊಂಡು ನೀರು ನಿಲ್ಲಿಸದೆ ಹೋದರೆ, ಕಾನೂನು ಭಂಗ ಚಳವಳಿಗೆ ಇಳಿಯಬೇಕಾಗುತ್ತದೆ ಎಂದು ಸರ್ಕಾರಕ್ಕೆ ಎಚ್ಚರಿಕೆ ನೀಡಿದರು
ರಾಜ್ಯದ ಸಂಸದರು ಜಾಣ ಮೌನ : ಮುಖ್ಯಮಂತ್ರಿ ಚಂದ್ರು ಖಂಡನೆ
ಕನ್ನಡಿಗರಿಗೆ ಕಾವೇರಿ ನದಿ ನೀರು ವಿಚಾರದಲ್ಲಿ ಜಲಾಶಯಗಳು ಬರಿದಾಗುತ್ತಿದ್ದರೂ ರಾಜ್ಯದ 28 ಸಂಸದರು ಜಾಣ ಮೌನ ತಳೆದಿದ್ದಾರೆ ಎಂದು ಅಮ್ ಆದ್ಮಿ ಪಕ್ಷದ ರಾಜ್ಯಾಧ್ಯಕ್ಷ ಮುಖ್ಯಮಂತ್ರಿ ಚಂದ್ರು ಖಂಡಿಸಿಸಿದ್ದಾರೆ.
ಮಂಡ್ಯ ನಗರದ ಸರ್ ಎಂ.ವಿ ಪ್ರತಿಮೆ ಬಳಿ ಜಿಲ್ಲಾ ರೈತರ ಹಿತರಕ್ಷಣಾ ಸಮಿತಿ ನಡೆಸುತ್ತಿರುವ ಧರಣಿಯಲ್ಲಿ ಭಾಗವಹಿಸಿ ಮಾತನಾಡಿದ ಅವರು, ಸಂಸದರು ಕೇಂದ್ರದ ಬಳಿ ದನಿ ಎತ್ತದೆ ಸುಮ್ಮನಿದ್ದಾರೆ, ಬಿಜೆಪಿ ಸಂಸದರು ಪ್ರಧಾನಿ ನರೇಂದ್ರ ಮೋದಿ, ಕೇಂದ್ರ ಗೃಹ ಸಚಿವ ಅಮಿತ್ ಶಾ ಎದುರು ಗುಲಾಮರಾಗಿದ್ದಾರೆ ಎಂದು ಕಿಡಿಕಾರಿದರು.
ಮೇಕೆದಾಟು ಪಾದಯಾತ್ರೆ ಮಾಡಿದ ಕಾಂಗ್ರೆಸ್ ಸಂಸದ ಸದ್ದು ಮಾಡುತ್ತಿಲ್ಲ, ಜೆಡಿಎಸ್ ಸಂಸದನ ಸದಸ್ಯತ್ವ ಅನರ್ಹಗೊಂಡಿದೆ. ಮಂಡ್ಯದಲ್ಲಿ ಗೆದ್ದಿರುವ ಪಕ್ಷೇತರ ಸಂಸದೆ ಸುಮಲತಾ ಅಂಬರೀಶ್ ಅಧಿಕಾರಕ್ಕಾಗಿ ಎಲ್ಲಾ ಪಕ್ಷಗಳ ಜೊತೆ ಸಂಬಂಧ ಸುಧಾರಿಸಿಕೊಳ್ಳಲು ಮುಂದಾಗಿ ಊಸರವಳ್ಳಿ ನಾಟಕ ವಾಡುತ್ತಿದ್ದಾರೆ ಎಂದು ಆಕ್ರೋಶ ವ್ಯಕ್ತಪಡಿಸಿದರು.
ಕಾವೇರಿ ವಿಚಾರವಾಗಿ ಅಂಬರೀಶ್ ಸಚಿವ ಸ್ಥಾನಕ್ಕೆ ರಾಜೀನಾಮೆ ನೀಡಿದ್ದರು, ಆದರೆ ಇವರಿಗೆ ಏನಾಗಿದೆ, ಬೀದಿಗಿಳಿದು ಹೋರಾಡಿ ಕೇಂದ್ರ ಸರ್ಕಾರದ ವಿರುದ್ಧ ದನಿ ಎತ್ತಬೇಕಾದವರು ಅಧಿಕಾರ ದಾಹಾಕ್ಕಾಗಿ ಸುಮ್ಮನಿದ್ದಾರೆ ಏಕೆ ? ಎಂದು ಪ್ರಶ್ನಿಸಿದರು.
ಸಿದ್ದರಾಮಯ್ಯ ಮುಖ್ಯಮಂತ್ರಿಯಾದ ನಂತರ ಅವರ ವರಸೆ ಬದಲಾಗಿದೆ. ಕಾವೇರಿ ವಿಚಾರದಲ್ಲಿ ಸಂಕಷ್ಟ ಸ್ಥಿತಿಗೆ ಬಂದಿರುವುದಕ್ಕೆ ರಾಜ್ಯ ಸರ್ಕಾರ ನೇರ ಹೊಣೆ ಎಂದು ಎಚ್ಚರಿಕೆ ನೀಡಿದರು. ಪಕ್ಷದ ಮುಖಂಡರಾದ ಬೂದನೂರು ಬೊಮ್ಮಯ್ಯ, ರಂಗಯ್ಯ, ಶಿವಕುಮಾರ್ ಇತರರಿದ್ದರು.
ಮಂಡ್ಯದಲ್ಲಿ ಜೆಡಿಎಸ್ ಬೃಹತ್ ಪ್ರತಿಭಟನೆ
ಹಲವು ದಿನಗಳಿಂದ ಮೌನಕ್ಕೆ ಜಾರಿದ್ದ ಜೆಡಿಎಸ್ ಪಕ್ಷ, ಶನಿವಾರ ನೀರಿನ ಹೋರಾಟದ ಅಖಾಡಕ್ಕೆ ಇಳಿದಿದೆ. ಮಾಜಿ ಸಚಿವರಾದ ಜಿ.ಟಿ.ದೇವೇಗೌಡ, ಸಿ.ಎಸ್. ಪುಟ್ಟರಾಜು, ಹಾಲಿ ಮತ್ತು ಮಾಜಿ ಶಾಸಕರು ಸೇರಿದಂತೆ ಅಪಾರ ಸಂಖ್ಯೆಯ ಜೆಡಿಎಸ್ ಕಾರ್ಯಕರ್ತರು ಶನಿವಾರ ಮಂಡ್ಯದಲ್ಲಿ ಕಾವೇರಿ ಕೊಳ್ಳದ ಜಲಾಶಯಗಳಿಂದ ನಿರಂತರ ನೀರು ಹರಿಸುತ್ತಿರುವ ರಾಜ್ಯ ಸರ್ಕಾರದ ವಿರುದ್ಧ ಬೃಹತ್ ಪ್ರತಿಭಟನಾ ಮೆರವಣಿಗೆ ನಡೆಸಿದರು.
ನಗರದ ಸಿಲ್ವರ್ ಜ್ಯೂಬಿಲಿ ಪಾರ್ಕಿನಿಂದ ಕಾವೇರಿ ಉಳಿಸಿ ರೈತರನ್ನು ರಕ್ಷಿಸಿ, ಕಾವೇರಿ ಉಳಿಸಿ ಕುಡಿಯುವ ನೀರು ಸಂರಕ್ಷಿಸಿ ಘೋಷವಾಕ್ಯದೊಂದಿಗೆ ಮೆರವಣಿಗೆ ಹೊರಟು ಜಿಲ್ಲಾಧಿಕಾರಿ ಕಚೇರಿಗೆ ತೆರಳಿ ಜಿಲ್ಲಾಧಿಕಾರಿ ಮೂಲಕ ರಾಜ್ಯಪಾಲರಿಗೆ ಮನವಿ ಸಲ್ಲಿಸಿದರು.
ಮಾಜಿ ಸಚಿವ ಜಿ.ಟಿ.ದೇವೇಗೌಡರು ಮಾತನಾಡಿ, ಕರ್ನಾಟಕ ಕಾವೇರಿ ಜಲಾನಯನ ಭಾಗದಲ್ಲಿ ಶೇ. 51 ಕ್ಕೂ ಹೆಚ್ಚಿನ ಭಾಗ ಮಳೆಯ ಕೊರತೆಯಾಗಿದೆ ಇದರಿಂದ ಮಂಡ್ಯ, ಮೈಸೂರು, ಚಾಮರಾಜನಗರ ಹಾಗೂ ಹಾಸನದ ರೈತರು ಅತ್ಯಂತ ಸಂಕಷ್ಟಕ್ಕೆ ಸಿಲುಕಿದ್ದಾರೆ. ಆದರೆ ತಮಿಳುನಾಡು ಈಗಾಗಲೇ ಎರಡು ಬೆಳೆಗಳನ್ನು ಬೆಳೆದಿದೆ. ಕುರುವೈ ಬೆಳೆಯನ್ನು ಬೆಳೆಯಲು ಹೊರಟಿದೆ, ರಾಜ್ಯದಲ್ಲಿ ಮಳೆಗಾಲ ಹೆಚ್ಚು-ಕಡಿಮೆ ಮುಗಿದಿದ್ದು, ತಮಿಳುನಾಡಿಗೆ ಮಳೆ ಬರುವ ಸಾಧ್ಯತೆ ಇದೆ. ಆದರೂ ಸಹ ಸಂಕಷ್ಟಕಾಲದಲ್ಲಿ ರಾಜ್ಯ ಕಾಂಗ್ರೆಸ್ ಸರ್ಕಾರ ತಮಿಳುನಾಡಿಗೆ ಹೆಚ್ಚಿನ ಪ್ರಮಾಣದ ನೀರು ಹರಿಸುತ್ತಿದೆ ಎಂದು ಖಂಡಿಸಿದರು.
ಮಾಜಿ ಸಚಿವ ಸಿ.ಎಸ್. ಪುಟ್ಟೇಗೌಡರು ಮಾತನಾಡಿ, ಕರ್ನಾಟಕದ ಕಾಂಗ್ರೆಸ್ ಸರ್ಕಾರ ಕಾವೇರಿ ಜಲಾನಯನ ಪ್ರದೇಶದ ವಾಸ್ತವ ಪರಿಸ್ಥಿತಿಯನ್ನು ಕಾವೇರಿ ಪ್ರಾಧಿಕಾರ ಮತ್ತು ನಿಯಂತ್ರಣ ಮಂಡಳಿ ಮತ್ತು ಸುಪ್ರೀಂ ಕೋರ್ಟ್ಗೆ ಮನವರಿಕೆ ಮಾಡಿಕೊಳ್ಳುವಲ್ಲಿ ವಿಫಲವಾಗಿದೆ. ಇದರಿಂದ ರಾಜ್ಯದ ರೈತರು ಸಂಕಷ್ಟ ಎದುರುಸುತ್ತಿದ್ದಾರೆ ಎಂದು ಟೀಕಿಸಿದರು.
ಮಾಜಿ ಶಾಸಕರಾದ ಡಾ. ಕೆ. ಅನ್ನದಾನಿ. ಸುರೇಶ ಗೌಡ, ಕೆ.ಟಿ.ಶ್ರೀಕಂಠೇಗೌಡ, ರವೀಂದ್ರ ಶ್ರೀಕಂಠಯ್ಯ, ಪಕ್ಷದ ಜಿಲ್ಲಾಧ್ಯಕ್ಷ ಡಿ ರಮೇಶ್ ಮತ್ತಿತರರು ಭಾಗವಹಿಸಿದ್ದರು.
99 ಅಡಿಗೆ ಕುಸಿತ ಕೆಆರ್ಎಸ್ : ಅನ್ನದಾತರಲ್ಲಿ ಹೆಚ್ಚಿದ ಆತಂಕ ಮಳೆ ಅಭಾವದ ದುಸ್ಥಿತಿಯಲ್ಲೇ ತಮಿಳುನಾಡಿಗೆ ನೀರು ಹರಿಸುತ್ತಿರುವ ಪರಿಣಾಮ ಕೆ ಆರ್ ಎಸ್ ಜಲಾಶಯದ ಮಟ್ಟ ದಿನೇ ದಿನೇ ಕುಸಿಯುತ್ತಿದೆ. ಇದೀಗ ನೀರಿನ ಮಟ್ಟ 99.86 ಅಡಿಗಳಿಗೆ ಇಳಿದಿದೆ. ಇದು ರೈತರಲ್ಲಿ ಈಗಾಗಲೇ ಇರುವ ಆತಂಕವನ್ನು ಮತ್ತಷ್ಟು ಹೆಚ್ಚಿಸಿದೆ.
ಶನಿವಾರ ಸಂಜೆ ನೀರಿನ ಮಟ್ಟ 99.86 ಅಡಿ ಇದೆ. 2 ದಿನಗಳ ಹಿಂದೆ 100.96 ಅಡಿಗೆ ಕುಸಿದಿತ್ತು. ಈಗ ಮತ್ತೆ ಕಡಿಮೆಯಾಗಿದೆ. ಜಲಾಶಯದ ಗರಿಷ್ಠ ಮಟ್ಟ 124.80 ಅಡಿ.ಒಳಹರಿವು 2870 ಕ್ಯೂಸೆಕ್, ಹೊರಹರಿವು 7053 ಕ್ಯೂಸೆಕ್, ಸಂಗ್ರಹ ಸಾಮಾರ್ಥ್ಯ 49.452ಟಿಎಂಸಿ. ಈಗ 22.700 ಟಿಎಂಸಿ ಇದೆ.