ಸುದ್ದಿಮೂಲ ವಾರ್ತೆ
ಚಿಂತಾಮಣಿ,ನ.21: ಇಂದಿನ ಮಕ್ಕಳ ಆರೋಗ್ಯ ಮತ್ತು ಭವಿಷ್ಯ ರೂಪಿಸುವ ಮಹತ್ತರ ಜವಾಬ್ದಾರಿಯನ್ನು ಹೊತ್ತಿರುವ ಅಂಗನವಾಡಿ ಸಹಾಯಕರು ಮತ್ತು ಕಾರ್ಯಕರ್ತರು ತಾಲ್ಲೂಕಿನ ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆಯ ಅಧಿಕಾರಿಗಳು ಪರ ಮತ್ತು ವಿರುದ್ಧದ ಹೋರಾಟಗಳಲ್ಲಿ ನಿರತರಾಗಿ ಬಣ ರಾಜಕೀಯದಲ್ಲಿ ಮುಳುಗಿದ್ದಾರೆ.
ತಾಲ್ಲೂಕಿನ ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆಯಲ್ಲಿ ಹಲವು ಅಕ್ರಮಗಳು ನಡೆಯುತ್ತಿದ್ದು. ಅದರಲ್ಲಿ ಮುಖ್ಯವಾಗಿ ಅಂಗನವಾಡಿ ಕಾರ್ಯಕರ್ತೆಯರ ನೇಮಕ ಮತ್ತು ವರ್ಗಾವಣೆಗೆ ಸಂಬಂಧಿಸಿದಂತೆ ಹಲವು ದಿನಗಳಿಂದ ಇಲಾಖೆಯ ಅಡಿಯಲ್ಲಿ ಕೆಲಸ ಮಾಡುತ್ತಿರುವ ಅಂಗನವಾಡಿ ಕಾರ್ಯಕರ್ತೆಯರು ಮತ್ತು ಸಹಾಯಕರ ನಡುವೆ ಮುಸುಕಿನ ಗುದ್ದಾಟ ನಡೆಯುತ್ತಿದೆ .ಇದೀಗ ಬಹಿರಂಗಗೊಂಡಿದ್ದು ಇದರ ವಿರುದ್ಧ ಅಂಗನವಾಡಿ ನೌಕರರ ಸಂಘದ ಜಿಲ್ಲಾ ಸಂಘಟನೆಯ ನೇತೃತ್ವದಲ್ಲಿ ಎಚ್ಚರಿಕೆ ನೀಡುತ್ತಿದ್ದಂತೆ. ಸುಮ್ಮನಿರದೆ ಅಧಿಕಾರಿಗಳು ಅವರ ವಿರುದ್ಧ ಮತ್ತೊಂದು ಗುಂಪನ್ನು ಸಿದ್ದ ಮಾಡಿ ಅವರಿಗಿಂತ ಮುಂಚೆಯೇ ಹೋರಾಟ ಮಾಡಲು ಪ್ರೇರೇಪಿಸಿ.ಅದರಂತೆ ಪ್ರತಿಭಟನೆ ಮಾಡಿದ್ದಾರೆ. ಅಂಗನವಾಡಿ ನೌಕರರ ಸಂಘದಿಂದ ನಿಗದಿಯಾಗಿದ್ದ ಹೋರಾಟ ಹೊಸ ಸಂಘಟನೆಯ ಕಾರಣದಿಂದ ಮುಂದೂಡಿದ್ದಾರೆ.
ಕಾರ್ಯಕರ್ತೆಯರ ಆರೋಪ : ತಾಲೂಕಿನ ಅಂಗನವಾಡಿ ಕಾರ್ಯಕರ್ತೆಯರ ಪದೋನ್ನತ್ತಿಯಲ್ಲಿ ಅಕ್ರಮ ನಡೆದಿದೆ ಎಂದು ಆರೋಪಿಸುತ್ತಿದ್ದಂತೆ ಅದಕ್ಕೆ ವಿರುದ್ಧವಾಗಿ ಅಂಗನವಾಡಿ ಕಾರ್ಯಕರ್ತೆಯರ ಮಹಾಮಂಡಳಿಯ ಪದಾಧಿಕಾರಿಗಳು ಇದರಲ್ಲಿ ಅಧಿಕಾರಿಗಳ ತಪ್ಪೇನು ಇಲ್ಲ. ಅಧಿಕಾರಿಗಳು ಏನು ತಿಳಿಯದ ಮುಗ್ಧರು ಅವರಿಗೆ ದಾರಿ ತಪ್ಪಿಸಿ ನಕಲಿ ದಾಖಲೆಗಳನ್ನು ನೀಡಿ ಕಾರ್ಯನಿರ್ವಹಿಸುತ್ತಿರುವ ಅಂಗನವಾಡಿ ಕಾರ್ಯಕರ್ತೆಯರ ವಿರುದ್ಧ ಸೂಕ್ತ ಕ್ರಮ ಜರುಗಿಸುವಂತೆ ಒತ್ತಾಯಿಸಿ ಪ್ರತಿಭಟನೆಯನ್ನು ಮಾಡಿದ್ದಾರೆ.
ಸಂಘದ ಆರೋಪ: ಸಿಡಿಪಿಓ ಅವರು ಅಂಗನವಾಡಿ ಕಾರ್ಯಕರ್ತೆಯರ ಹುದ್ದೆಗಳಿಗೆ ಪದೋನ್ನತ್ತಿ ನೀಡುವಾಗ ಇಲಾಖೆಯ ನಿಯಮಗಳನ್ನು ಗಾಳಿಗೆ ತೂರಿ ಅಕ್ರಮವಾಗಿ ಪದೋನ್ನತ್ತಿ ನೀಡಿದ್ದಾರೆ.ಅವರ ಪದೋನ್ನತ್ತಿ ಸಂಪೂರ್ಣವಾಗಿ ನಿಯಮ ಬಾಹಿರವಾಗಿದ್ದು ಅದರಂತೆ ತಮಗೆ ಬೇಕಾಗಿರುವ 7 ಮಂದಿಗೆ ಅರ್ಹರನ್ನು ಪಕ್ಕಕ್ಕಿಟ್ಟು ಪದೋನ್ನತ್ತಿ ನೀಡಿದ್ದಾರೆ ಎಂಬುದಾಗಿತ್ತು.
ಸಿ ಐ ಟಿ ಯು ಕಾರ್ಯಕರ್ತರಿಂದ ವತಿಯಿಂದ ಪ್ರತಿಭಟನೆ
ನೌಕರರ ಸಂಘದ ಅಂಗನವಾಡಿ ಕಾರ್ಯಕರ್ತೆಯರು ನಗರದ ಪ್ರವಾಸಿ ಮಂದಿರದಿಂದ ಮೆರವಣಿಗೆ ಮುಖಾಂತರ ಬಂದು ನಗರದ ಸಿಡಿಪಿಓ ಕಚೇರಿ ಮುಂಭಾಗ ಪ್ರತಿಭಟನೆ ನಡೆಸಿದರು. ಪ್ರತಿಭಟನೆಯಲ್ಲಿ ಲಕ್ಷ್ಮಿದೇವಮ್ಮ,ಲಕ್ಷ್ಮಿ ನರಸಮ್ಮ, ಸೇರಿದಂತೆ ಹೆಚ್ಚಿನ ಸಂಖ್ಯೆಯಲ್ಲಿ ಅಂಗನವಾಡಿ ಕಾರ್ಯಕರ್ತೆಯರು ಭಾಗವಹಿಸಿದ್ದರು.