ಸುದ್ದಿಮೂಲ ವಾರ್ತೆ
ಚಿಂತಾಮಣಿ,ಅ.27: ಬಡ ಮತ್ತು ಪ್ರತಿಭಾವಂತ ವಿದ್ಯಾರ್ಥಿಗಳಿಗೆ ವಿದ್ಯಾರ್ಥಿವೇತವನ್ನು ನೀಡದೆ, ಶಿಕ್ಷಣದಿಂದ ವಂಚಿತರಾಗುವಂತೆ ಮಾಡುತ್ತಿರುವ ರಾಜ್ಯ ಸರ್ಕಾರದ ನಡೆಯನ್ನು ಖಂಡಿಸಿ ಚಿಂತಾಮಣಿಯಲ್ಲಿ ಎಬಿವಿಪಿ ಕಾರ್ಯಕರ್ತರು ರಾಜ್ಯ ಸರ್ಕಾರದ ವಿರುದ್ದ ಪ್ರತಿಭಟನೆ ನಡೆಸಿದರು.
ಶಿಕ್ಷಣ ವ್ಯವಸ್ಥೆ ಹಾಗೂ ಗುಣಮಟ್ಟದ ವಿಶ್ವವಿದ್ಯಾಲಯಗಳಿಂದ ಹೆಸರುವಾಸಿಯಾಗಿ ರಾಜ್ಯಕ್ಕೆ ಹೊರ ರಾಜ್ಯಗಳಿಂದ ವಿದ್ಯಾರ್ಥಿಗಳು ಶಿಕ್ಷಣವನ್ನು ಅರಸಿ ಕರ್ನಾಟಕ್ಕೆ ಬರುತ್ತಿರುವುದು ನಮ್ಮ ರಾಜ್ಯದ ಹೆಮ್ಮೆ. ಆದರೆ ಉನ್ನತ ಶಿಕ್ಷಣದ ಆಸೆಯನ್ನು ಇಟ್ಟುಕೊಂಡ ರಾಜ್ಯದ ಅದೇಷ್ಟೋ ಬಡ ಮತ್ತು ಪ್ರತಿಭಾವಂತ ವಿದ್ಯಾರ್ಥಿಗಳು ಸರ್ಕಾರ ನಮ್ಮ ನೆರವಿಗೆ ಧಾವಿಸುತ್ತದೆ, ನಮಗೆ ಆರ್ಥಿಕ ಬೆಂಬಲವನ್ನು ವಿದ್ಯಾರ್ಥಿ ವೇತನದ ರೂಪದಲ್ಲಿ ನೀಡುತ್ತದೆ ಎಂದು ಕಾಲೇಜುಗಳಿಗೆ ದಾಖಲಾಗುತ್ತಾರೆ.
ಆದರೆ ರಾಜ್ಯ ಸರ್ಕಾರ ಶಿಕ್ಷಣಕ್ಕೆ ನೀಡ ಬೇಕಾದ ಪ್ರಾಮುಖ್ಯತೆಯನ್ನು ನೀಡದೆ ಇರುವುದು, ವಿದ್ಯಾರ್ಥಿವೇತನದಲ್ಲೂ ರಾಜ್ಯದ ವಿದ್ಯಾರ್ಥಿಗಳ ಶೋಚನೀಯ ಸ್ಥಿತಿಗೆ ಕಾರಣವಾಗಿದ್ದು, ರಾಜ್ಯ ಸರಕಾರ ವಿದ್ಯಾರ್ಥಿ ವೇತನವನ್ನು ತಡೆಹಿಡಿಯುತ್ತಿದೆ.
ಇದನ್ನು ಖಂಡಿಸಿ ಕೂಡಲೇ ಬಡ ಮತ್ತು ಪ್ರತಿಭಾವಂತರ ವಿದ್ಯಾರ್ಥಿಗಳಿಗೆ ವಿದ್ಯಾರ್ಥಿವೇತನವನ್ನು ನೀಡುವಂತೆ ಒತ್ತಾಯಿಸಿ ಚಿಂತಾಮಣಿಯಲ್ಲಿ ಆಖಿಲ ಭಾರತೀಯ ವಿದ್ಯಾರ್ಥಿ ಪರಿಷತ್ ನೇತೃತ್ವದಲ್ಲಿ ನೂರಾರು ವಿದ್ಯಾರ್ಥಿಗಳು ನಗರ ಪ್ರಮುಖ ಬೀದಿಗಳಲ್ಲಿ ಪ್ರತಿಭಟನೆ ಮಾಡಿ ರಾಜ್ಯ ಸರಕಾರದ ವಿರುದ್ದ ದಿಕ್ಕಾರಗಳನ್ನು ಕೂಗಿ ತದನಂತರ ತಾಲೂಕು ಕಛೇರಿಗೆ ಮುತ್ತಿಗೆ ಹಾಕಿ ತಹಶಿಲ್ದಾರರ ಅನುಪಸ್ಥಿತಿಯಲ್ಲಿ ಶಿರೆಸ್ಥೆದಾರರ ಮೂಲಕ ಮುಖ್ಯಮಂತ್ರಿಗಳಿಗೆ ತಮ್ಮ ಬೇಡಿಕೆಗಳ ಮನವಿ ಪತ್ರವನ್ನು ಸಲ್ಲಿಸಿದರು.
ಈ ಪ್ರತಿಭಟನೆಯಲ್ಲಿ ಎಬಿವಿಪಿ ಕರ್ನಾಟಕ ರಾಜ್ಯ ಕಾರ್ಯಕಾರಣಿ ಸದಸ್ಯೆ ಆರ್ಚನಾ, ಎಬಿವಿಪಿ ಕಾರ್ಯಕರ್ತರಾದ ಪವಿತ್ರ, ಅನುಷ,ಮಹೇಶ್, ನೀತಿನ್, ಸ್ವಾತಿ, ಕಿರಣ್ ಸೇರಿದಂತೆ, ವಿದ್ಯಾರ್ಥಿಗಳು ಮತಿತ್ತರರು ಪಾಲ್ಗೊಂಡಿದ್ದರು.