ಸುದ್ದಿಮೂಲ ವಾರ್ತೆ
ಬೆಂಗಳೂರು,ಅ.25:ಹಿಜಾಬ್ ಧರಿಸಿ ಪರೀಕ್ಷೆ ಬರೆಯಲು ಅನುಮತಿ ನೀಡಿರುವ ಸರ್ಕಾರದ ವಿರುದ್ಧ ನಗರದ ಸ್ವತಂತ್ರ ಉದ್ಯಾನವನದಲ್ಲಿ ಬುಧವಾರ ಪ್ರತಿಭಟನೆ ನಡೆಯಿತು.
ಹಿಂದೂ ಸಂಘಟನೆಗಳ ಒಕ್ಕೂಟ ಬುಧುವಾರ ಸ್ವತಂತ್ರ ಉದ್ಯಾನವನದಲ್ಲಿ ಹಿಜಾಬ್ ಧರಿಸಿ ಪರೀಕ್ಷೆ ಬರೆಯಲು ಅನುಮತಿ ನೀಡಿರುವ ಕರ್ನಾಟಕ ಪರೀಕ್ಷಾ ಪ್ರಾಧಿಕಾರ ನಿರ್ಣಯವನ್ನು ವಿರೋಧಿಸಿ ಸಂಘಟನೆಯ ಕಾರ್ಯಕರ್ತರು ಪ್ರತಿಭಟಿಸಿದರು.
ಕರ್ನಾಟಕದಲ್ಲಿ ಹಿಜಾಬ್ ಧರಿಸಿ ಶಾಲಾ ಕಾಲೇಜುಗಳ ಪ್ರವೇಶದ ವಿಚಾರದಲ್ಲಿ ಈ ಹಿಂದೆ ಸಾಕಷ್ಟು ಗಲಾಟೆ ಗದ್ದಲಗಳಾಗಿದೆ. ಅದರ ಹೊರತಾಗಿಯೂ ಅ. 28 ಮತ್ತು 29 ರಂದು ವಿವಿಧ ನಿಗಮ ಮಂಡಳಿಗಳ ಭರ್ತಿಗೆ ನಡೆಯುವ ಪರೀಕ್ಷೆಗಳಿಗೆ ಹಿಜಾಬ್ ಧರಿಸಿ ಹಾಜರಾಗಬಹುದು ಎಂದು ಕರ್ನಾಟಕ ಪರೀಕ್ಷಾ ಪ್ರಾಧಿಕಾರ ಆದೇಶ ಹೊರಡಿಸಿರುವುದು ಅಕ್ಷಮ್ಯ. ಉಚ್ಚ ನ್ಯಾಯಾಲಯಕ್ಕೂ ಸರ್ಕಾರ ಅಗೌರವ ತೋರಿಸುತ್ತಿದೆ ಎಂದು ಪ್ರತಿಭಟನಕಾರರು ಆರೋಪಿಸಿದ್ದಾರೆ.
ಭಾರೀ ಸಂಘರ್ಷಕ್ಕೆ ಕಾರಣವಾಗಿದ್ದ ಹಿಜಾಬ್ ವಿಚಾರದಲ್ಲಿ ಉಚ್ಚ ನ್ಯಾಯಾಲಯವು ಗಂಭೀರವಾಗಿ ಪರಿಗಣಿಸಿ ಶಾಲಾ ಕಾಲೇಜುಗಳಲ್ಲಿ ಅಲ್ಲಿಯ ಸಮವಸ್ತ್ರ ಬಳಕೆ ಮಾಡುವಂತೆ ಆದೇಶಿಸಿ ಹಿಜಾಬ್ ಗೆ ನಿರ್ಬಂಧ ಹೇರಿತ್ತು. ಇದರ ಹೊರತಾಗಿಯೂ ಹಿಜಾಬ್ ಗೆ ಅವಕಾಶ ಕಲ್ಪಿಸುತ್ತಿರುವುದು ಉಚ್ಚ ನ್ಯಾಯಾಲಯದ ತೀರ್ಪಿಗೂ ಅಗೌರವ ಅಪಮಾನ ತೋರಿದಂತೆ ಆಗುತ್ತದೆ. ಅಲ್ಲದೇ ಇಂತಹ ನಿರ್ಣಯಗಳ ಮೂಲಕ ಸರಕಾರ ಅಲ್ಪಸಂಖ್ಯಾತರ ಓಲೈಕೆ ಮಾಡುತ್ತಿದೆಯಾ ಎಂಬ ಅನುಮಾನಕ್ಕೂ ದಾರಿಮಾಡಿ ಕೊಟ್ಟಂತೆ ಅನುಮಾನ ಮೂಡಿಸುತ್ತಿದೆ ಎಂದು ಪ್ರತಿಭಟನಕಾರರು ಕಿಡಿಕಾರಿದ್ದಾರೆ.
ಹೀಗಾಗಿ ತಕ್ಷಣ ಪ್ರಾಧಿಕಾರವು ಈ ಆದೇಶವನ್ನು ಹಿಂಪಡೆಯಬೇಕು ಎಂದು ಒತ್ತಾಯಿಸಿದ್ದಾರೆ.