ತಿಪಟೂರು: ಮಣಿಪುರದಲ್ಲಿ ಕಳೆದ ಮೂರು ತಿಂಗಳಿನಿಂದ ನಡೆಯುತ್ತಿರುವ ದೌರ್ಜನ್ಯ ದಬ್ಬಾಳಿಕೆಗಳು ನಿಲ್ಲಬೇಕು, ಮಣಿಪುರದಲ್ಲಿ ಶಾಂತಿ ಸ್ಥಾಪನೆಯಾಗಬೇಕು ಎಂದು ಒತ್ತಾಯಿಸಿ ಇಂದು ಪ್ರಗತಿಪರ ಸಂಘಟನೆಗಳು ತಿಪಟೂರು ನಗರದ ಅಂಬೇಡ್ಕರ್ ಸರ್ಕಲ್ ಬಳಿ ಪ್ರತಿಭಟನೆ ನಡೆಸಿದರು.
ಪ್ರತಿಭಟನಾಕಾರರನ್ನು ಉದ್ದೇಶಿ ಮಾತನಾಡಿದ ಆರ್ ಕೆ ಎಸ್ ಸಂಘಟನೆಯ ಸ್ವಾಮಿಯವರು ಮಣಿಪುರದ ಘಟನೆಗೆ ಪ್ರಧಾನಿಗಳ ಮೌನ ಖಂಡನರ್ಹ ಎಂದ ಅವರು ಮಣಿಪುರದಲ್ಲಿ ಮಹಿಳೆಯರ ಮೇಲೆ ನಡೆಯುತ್ತಿರುವ ದೌರ್ಜನ್ಯ ಹಾಗೂ ಅತ್ಯಾಚಾರದಂತ ಅಮಾನವೀಯ ಘಟನೆಗಳು ನಾಗರಿಕ ಸಮಾಜ ತಲೆತಗ್ಗಿಸುವಂಥದ್ದು ಎಂದು ಕಿಡಿ ಕಾರಿದರು.
ಸಿ ಐ ಟಿ ಯು ನ ಜಿಲ್ಲಾ ಪ್ರಧಾನ ಕಾರ್ಯದರ್ಶಿ ಎನ್ ಕೆ ಸುಬ್ರಹ್ಮಣ್ಯ ಮಾತನಾಡಿ ನಮ್ಮ ದೇಶದ ಅವಿಭಾಜ್ಯ ಭಾಗವಾದ ಮಣಿಪುರ ಹೊತ್ತಿ ಉರಿಯುತ್ತಿದೆ. ಅಲ್ಲಿನ ಸರ್ಕಾರ ಅದನ್ನು ನಿಭಾಯಿಸುವಲ್ಲಿ ವಿಫಲವಾಗಿದ್ದು ಮುಖ್ಯಮಂತ್ರಿಗಳು ಕೂಡಲೇ ರಾಜೀನಾಮೆ ನೀಡಬೇಕು ಈ ಘಟನೆಯ ಆರೋಪಿಗಳಿಗೆ ಕಠಿಣ ಶಿಕ್ಷೆ ಆಗಬೇಕು ಎಂದು ಆಗ್ರಹಿಸಿದರು.
ತಿಪಟೂರಿನ ರಂಗ ನಿರ್ದೇಶಕ ಸತೀಶ್ ಮಾತನಾಡಿ ಮಣಿಪುರದಲ್ಲಿ ಮೂರು ತಿಂಗಳಿಂದ ಶಾಂತಿಭಂಗ ನಡೆಯುತ್ತಿದ್ದು ಅಲ್ಲಿನ ಘಟನೆಗಳು ಹೊರ ಜಗತ್ತಿಗೆ ಗೊತ್ತಾಗದಂತೆ ಇಂಟರ್ನೆಟ್ ಸೇವೆಯನ್ನು ಸ್ಥಗಿತ ಮಾಡಿದ್ದು ಜಗತ್ತಿಗೆ ತಡವಾಗಿ ಗೊತ್ತಾಗಿದೆ, ದೇಶದ ಎಲ್ಲಾ ಕಡೆ ಅತ್ಯಾಚಾರ ದೌರ್ಜನ್ಯ ವಿರೋಧಿಸಿ ಮುಷ್ಕರಗಳು ನಡೆಯುತ್ತಿದ್ದು ಇಂದು ತಿಪಟೂರಿನಲ್ಲೂ ಹಮ್ಮಿಕೊಳ್ಳಲಾಗಿದೆ ಎಂದರು.
ಅಂಗನವಾಡಿ ನೌಕರರ ಸಂಘಟನೆಯ ಜಿಲ್ಲಾ ಖಜಾಂಚಿ ಪುಷ್ಪ ಮಾತನಾಡಿ ಸಾವಿರಾರು ಪುರುಷರು ಮಹಿಳೆಯ ಜೊತೆ ಅಷ್ಟು ಅಸಭ್ಯವಾಗಿ ವರ್ತಿಸುತ್ತಿದ್ದರೂ ಘಟನೆಯ ಸಮಯದಲ್ಲಿ ನಿಂತು ನೋಡಿದ ಆ ಜನರಿಗೆ ದಿಕ್ಕಾರ, ಮಹಿಳೆಯರ ರಕ್ಷಣೆಗೆ ಸರ್ಕಾರಗಳು ಮುಂದಾಗ ಬೇಕು ಎಂದರು.
ಕರ್ನಾಟಕ ರಾಜ್ಯ ರೈತ ಸಂಘದ ತಾಲ್ಲೂಕು ಅಧ್ಯಕ್ಷ ಜಯಚಂದ್ರ ಶರ್ಮ ಮಾತನಾಡಿ ಮಣಿಪುರದ ನೊಂದ ದೌರ್ಜನ್ಯಕ್ಕೊಳಗಾದ ಜನತೆಯ ಜೊತೆ ರೈತ ಸಂಘ ಕೂಡ ಇದೆ, ನಿಮಗೆ ನಮ್ಮ ನೈತಿಕ ಬೆಂಬಲವಿದೆ ಎಂದರು. ಈ ಪ್ರತಿಭಟನೆಯಲ್ಲಿ ಅಂಗನವಾಡಿ ನೌಕರರ ಸಂಘಟನೆಯ ಅನುಸೂಯ, ಮಮತಾ, ಕರ್ನಾಟಕ ರಾಜ್ಯ ರೈತ ಸಂಘದ ಯೋಗೀಶ್ವರಸ್ವಾಮಿ, ತಾಲೂಕ್ ಕಾರ್ಯದರ್ಶಿ ಹರ್ಷ, ಹಸಿರು ಸೇನೆಯ ತಿಮ್ಲಾಪುರ ದೇವರಾಜ್, ಮನೋಹರ್ ಪಟೇಲ್, ಬೆಲೆ ಕಾವಲು ಸಮಿತಿಯ ಶ್ರೀಕಾಂತ್ ಕೆಳಹಟ್ಟಿ, ಅರಸೀಕೆರೆ ರೈತ ಸಂಘಟನೆಯ ದೇವರಾಜ್, ಆರ್ ಕೆ ಎಸ್ ಸಂಘಟನೆಯ ಲೋಕೇಶ್ ಭೈರನಾಯಕನಹಳ್ಳಿ, ರಂಗಧಾಮಯ್ಯ, ಸರ್ಕಾರಿ ನೌಕರರ ಸಂಘದ ಮಂಜಪ್ಪ, ಕರ್ನಾಟಕ ಪ್ರಾಂತ್ಯ ರೈತ ಸಂಘದ ಆರ್ ಎಸ್ ಚನ್ನಬಸವಣ್ಣ, ರಾಜಮ್ಮ, ಬೌದ್ದ ಮಹಾಸಭಾದ ಮೋಹನ್ ಕುಮಾರ್ ಸಿಂಗಿ, ಚನ್ನಪ್ಪ ಎ ಐ ಕೆ ಕೆ ಎಂ ಎಸ್ ನ ಪಾರ್ವತಮ್ಮ , ಸಾವಿತ್ರಮ್ಮ ಮತ್ತಿತರರು ಭಾಗವಹಿಸಿದ್ದರು. ಕಾರ್ಯಕ್ರಮವನ್ನು ಸೌಹಾರ್ದ ಸಂಘಟನೆಯ ಅಲ್ಲಾಬಕಾಶ್ ನಿರೂಪಿಸಿದರು.
ಈ ಕಾರ್ಯಕ್ರಮದಲ್ಲಿ ವಿವಿಧ ಸಂಘಟನೆಯ ನೂರಕ್ಕೂ ಹೆಚ್ಚು ಜನ ಭಾಗವಹಿಸಿದ್ದು ಮಣಿಪುರದ ಜನತೆಗೆ ನೈತಿಕ ಬೆಂಬಲ ನೀಡಿ ಘೋಷಣೆ ಕೂಗುವ ಮೂಲಕ ಅಂಬೇಡ್ಕರ್ ವೃತ್ತದಲ್ಲಿ ಮಾನವ ಸರಪಳಿ ನಿರ್ಮಿಸಿ ಪ್ರತಿಭಟನೆ ನಡೆಸಿದರು.