ಸುದ್ದಿಮೂಲ ವಾರ್ತೆ
ಕೆ.ಆರ್.ಪುರ ಅ.18: ಸಾಮಾಜಿಕ ಜಾಲತಾಣಗಳಲ್ಲಿ ದಲಿತರ ಭಾವನೆಗಳಿಗೆ ಧಕ್ಕೆಯುಂಟು ಮಾಡುವ ಪದ ಬಳಕೆ ಮಾಡಿರುವ ನಟ ಉಪೇಂದ್ರ ಅವರನ್ನು ಬಂಧಿಸುವಂತೆ ಒತ್ತಾಯಿಸಿ ಕರ್ನಾಟಕ ದಲಿತ ರಕ್ಷಣಾ ವೇದಿಕೆ ಕಾರ್ಯಕರ್ತರು ವೈಟ್ ಫೀಲ್ಡ್ ಸಮೀಪದ ಹೋ ಪಾರಂ ವೃತ್ತದಲ್ಲಿ ರಸ್ತೆ ತಡೆದು ಪ್ರತಿಭಟನೆ ನಡೆಸಿದರು.
ಪ್ರತಿಭಟನೆ ನೇತೃತ್ವವಹಿಸಿ ಮಾತನಾಡಿದ, ರಾಜ್ಯಾಧ್ಯಕ್ಷ ಸೋರುಣೆಸೆ ವೆಂಕಟೇಶ್, ಚಿತ್ರ ನಟರಿಗೆ ಜಾತಿ, ಮತ ಧರ್ಮ ಯಾವುದಕ್ಕೆ ಅಂಟಿಕೊಂಡಿರುವುದಿಲ್ಲ ಎಂಬ ಮಾತಿದೆ, ಸಮಾಜಕ್ಕೆ ಮಾದರಿಯಾಗಬೇಕಾದ ಒಬ್ಬ ಹೆಸರಾಂತ ನಟ ಉಪೇಂದ್ರ ಅವರು ಸಾಮಾಜಿಕ ಜಾಲತಾಣದಲ್ಲಿ ದಲಿತರನ್ನು ಹೊಲೆಯ ಎಂಬ ಪದ ಬಳಕೆ ಮಾಡಿರುವುದು ಖಂಡಾನೀಯ, ಸಾರ್ವಜನಿಕರ ಜೀವನದಲ್ಲಿ ಇರುವ ನಟ ದಲಿತ ಭಾವನೆಗಳಿಗೆ ಘಾಸಿ ಉಂಟು ಮಾಡುವ ಪದ ಬಳಕೆ ಮಾಡಿರುವುದು ಅವರ ಮನುವಾದಿ ಸಂಸ್ಕೃತಿ ಎಂಬುದನ್ನು ಎತ್ತಿ ತೋರಿಸುತ್ತದೆ. ಊರೆಂದರೆ ಹೊಲಗೇರಿ ಇರುತ್ತದೆ ಪದ ಬಳಿಸಿದ್ದಾರೆ. ಉಪೇಂದ್ರ ಅವರ ದೃಷ್ಟಿಯಲ್ಲಿ ದಲಿತರು ಕೊಳಕು ಮನಸ್ಥಿಯವರಾ? ಕೆಟ್ಟವರಾ ಎಂದು ಆಕ್ರೋಶ ವ್ಯಕ್ತಪಡಿಸಿದರು.
ದೊಡ್ಡ ಸಮುದಾಯ ದಲಿತ ಸಮಾಜವನ್ನು ಕೆರಳಿಸುವ ಕೆಲಸ ಮಾಡಿದ್ದಾರೆ, ಉಪೇಂದ್ರ ಬಂಧನ ಆಗುವವರೆಗೂ ರಾಜ್ಯಾದ್ಯಂತ ಪ್ರತಿಯೊಂದು ಜಿಲ್ಲಾ ಪೊಲೀಸ್ ಠಾಣೆಗಳ ಮುಂದೆ ಪ್ರತಿಭಟನೆ ನಡೆಸುತ್ತೇವೆ. ಈ ವಿಚಾರದಲ್ಲಿ ಜೈಲಿಗೆ ಹೋದರು ನಮ್ಮ ಹೋರಾಟ ಕೈಬಿಡುವುದಿಲ್ಲ,ಮುಂದೆ ಅವರು ನಟಿಸಿ ಪ್ರದರ್ಶನವಾಗುವ ಚಲನ ಚಿತ್ರಗಳಿಗೆ ಮಸಿ ಬಳಿಯುವ ಕೆಲಸ ಮಾಡಿಯೇ ತೀರುತ್ತೇವೆ. ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ಪಂಗಡ ದೌರ್ಜನ್ಯ ಕಾಯ್ದೆ ಅಡಿಯಲ್ಲಿ ದೂರು ದಾಖಲಾಗಿದೆ. ದಲಿತ ವಿರೋಧಿ ಹೇಳಿಕೆ ನೀಡಿರುವ ಉಪೇಂದ್ರ ಅವರನ್ನು ಬಂಧಿಸಿ ಸೂಕ್ತ ಕಾನೂನು ಕ್ರಮ ಜರುಗಿಸಬೇಕು ಎಂದು ಆಗ್ರಹಿಸಿದರು.
ಈ ಸಂದರ್ಭದಲ್ಲಿ ಕರ್ನಾಟಕ ದಲಿತ ರಕ್ಷಣಾ ವೇದಿಕೆ ರಾಜ್ಯ ಯುವ ಅದ್ಯಕ್ಷ ವಿಜಯಕುಮಾರ್, ಮಹಿಳಾ ಘಟಕ ರಾಜ್ಯಾಧ್ಯಕ್ಷೆ ಸತ್ಯವತಿ, ಬೀಮ್ ಪ್ರಜಾ ಸಂಘದ ರಾಜ್ಯಾಧ್ಯಕ್ಷ ವೈಟ್ ಫೀಲ್ಡ್ ಮುರುಗೇಶ್ ಪದಾಧಿಕಾರಿಗಳಾದ ಭಾಗ್ಯ, ಜಯ ಕುಮಾರ್, ಬಿ.ಟಿ.ರಘು, ಸುರೇಶ್ ಸೇರಿದಂತೆ ಇತರರು ಪಾಲ್ಗೊಂಡರು.