ಸುದ್ದಿಮೂಲ ವಾರ್ತೆ
ಆನೇಕಲ್, ಜು 14 : ಪಿಟಿಸಿಎಲ್ ಕಾಯ್ದೆ ಕಾಲಮಿತಿಯನ್ನ ಕೈ ಬಿಡುವಂತೆ ಒತ್ತಾಯಿಸಿ ಪ್ರಜಾ ವಿಮೋಚನಾ ಚಳುವಳಿ ಸಮಿತಿ ವತಿಯಿಂದ ಆನೇಕಲ್ ಪಟ್ಟಣದ ತಾಲೂಕು ಕಚೇರಿ ಎದುರು ಪ್ರತಿಭಟನೆ ನಡೆಸಲಾಯಿತು.
ಪ್ರಜಾ ವಿಮೋಚನಾ ಚಳುವಳಿ ಎಂ ಕೃಷ್ಣಪ್ಪ ನೇತೃತ್ವದಲ್ಲಿ ಹಮ್ಮಿಕೊಂಡಿದ್ದ ಪ್ರತಿಭಟನೆಯಲ್ಲಿ ಹಲವರು ಭಾಗಿಯಾಗಿದ್ದರು. ಬಳಿಕ ಆನೇಕಲ್ ತಹಶಿಲ್ದಾರ್ ರಾಜೀವ್ ಅವರಿಗೆ ಸಂಘಟನೆ ವತಿಯಿಂದ ಮನವಿ ಪತ್ರವನ್ನು ಸಲ್ಲಿಸಿದರು.
ಸಮಿತಿಯ ರಾಜ್ಯಾಧ್ಯಕ್ಷ ಕೃಷ್ಣಪ್ಪ ಮಾತನಾಡಿ, ಕೇಂದ್ರ ಮತ್ತು ರಾಜ್ಯ ಸರ್ಕಾರಗಳು ಪಿ ಟಿ ಸಿ ಎಲ್ ಪ್ರಕರಣಗಳಲ್ಲಿ ತಾರತಮ್ಯ ಮಾಡುತ್ತಿದೆ. ಅದಲ್ಲದೇ ಸುಪ್ರೀಂ ಕೋರ್ಟ್ 2017ರಲ್ಲಿ ಪರಿಶಿಷ್ಟ ಜಾತಿ ಮತ್ತು ಪಂಗಡಕ್ಕೆ ಕಾಲಮಿತಿ ಅನ್ವಯ ಬಗ್ಗೆ ಆದೇಶವನ್ನು ಮಾಡಿದ್ದು ಇದರಿಂದ 30,ಸಾವಿರ ದಲಿತ ಕುಟುಂಬಗಳಿಗೆ ಅನ್ಯಾಯ ಆಗಿದೆ. ಹೀಗಾಗಿ, ಪಿಟಿಸಿಎಲ್ ಕಾಯ್ದೆ 1978- 79ರ ಕಾಯ್ದೆ 11 ನಿಬಂಧನೆ ಪ್ರಕಾರ ಪಿಟಿಸಿಎಲ್ ಕಾಯ್ದೆ ಕಾಲಮಿತಿ ಅನ್ವಯವಾಗುವುದಿಲ್ಲ.
ಈ ಸಂಬಂಧ 154 ದಿನಗಳಿಂದ ಫ್ರೀಡಂ ಪಾರ್ಕ್ ನಲ್ಲಿ ಸಂವಿಧಾನ ಸಂರಕ್ಷಣಾ ಒಕ್ಕೂಟ ಪ್ರತಿಭಟನೆಯನ್ನು ನಡೆಸಿದೆ. ಹಿಂದಿನ ಸರ್ಕಾರ ಪಿ ಟಿ ಎಸ್ ಎಲ್ ಕಾಯ್ದೆ ಜಾರಿ ಮಾಡೋದಾಗಿ ಭರವಸೆಯನ್ನು ಕೊಟ್ಟಿದ್ದರು. ಆದರೆ, ಇದುವರೆಗೂ ಸರ್ಕಾರ ಈ ಬಗ್ಗೆ ಕ್ರಮ ಕೈಗೊಂಡಿಲ್ಲ. ಪರಿಶಿಷ್ಟ ಜಾತಿಗೆ ಮತ್ತು ಪಂಗಡಕ್ಕೆ ನ್ಯಾಯ ದೊರಕಿಸಬೇಕೆಂದು ಕೃಷ್ಣಪ್ಪ ಸರ್ಕಾರಕ್ಕೆ ಮನವಿ ಮಾಡಿಕೊಂಡರು.