ಸುದ್ದಿಮೂಲವಾರ್ತೆ
ಕೊಪ್ಪಳ ಜು 24: ಕೈಗಾರಿಕಾ ಪ್ರದೇಶವಾಗಿರುವ ಹಿರೇಬಗನಾಳ ಭಾಗದಲ್ಲಿ ರಸ್ತೆಯಲ್ಲಿ ಗುಂಡಿಗಳು ಬಿದ್ದ ಸಂಚಾರಕ್ಕೆ ಅಡ್ಡಿಯಾಗಿತ್ತು. ಈ ಹಿನ್ನೆಲೆಯಲ್ಲಿ ಇಂದು ಗ್ರಾಮಸ್ಥರು ಪ್ರತಿಭಟನೆ ಮಾಡಿದರು. ಪ್ರತಿಭಟನೆಗೆ ಬೆದರಿದ ಲೋಕೋಪಯೋಗ ಇಲಾಖೆಯ ಅಧಿಕಾರಿಗಳು ಇಂದಿನಿಂದಲೇ ಕಾಮಗಾರಿ ಆರಂಭಿಸಿದ್ದಾರೆ. ಇದರಿಂದ ತಾತ್ಕಾಲಿಕ ಪ್ರತಿಭಟನೆ ಹಿಂಪಡೆದಿದ್ದಾರೆ.
ಕೈಗಾರಿಕಾ ಪ್ರದೇಶವಾಗಿರುವ ಹಿರೇಬಗನಾಳ ಭಾಗದಲ್ಲಿ ಸರಿಸುಮಾರು 20 ಕ್ಕೂ ಅಧಿಕ ಬೃಹತ್ ಕಾರ್ಖಾನೆಗಳಿವೆ. ಅದಿರು ತುಂಬಿಕೊಂಡು ಬೃಹತ್ ವಾಹನಗಳ ಓಡಾಟದಿಂದಾಗಿ ರಸ್ತೆ ಸಂಪೂರ್ಣವಾಗಿ ಹಾಳಾಗಿದೆ. ಇಲ್ಲಿ ಆಳೆತ್ತರದ ಗುಂಡಿಗಳು ಬಿದ್ದಿವೆ. ಇಲ್ಲಿಯ ಕರ್ಕಿಹಳ್ಳಿ. ಚಿಕ್ಕಬಗನಾಳ. ಹಿರೇಬಗನಾಳ, ಹಾಲವರ್ತಿ ಸೇರಿ ಹಲವು ಗ್ರಾಮಸ್ಥರು ಪರದಾಡುತ್ತಿದ್ದಾರೆ.
ಈ ಮಧ್ಯೆ ಗಿಣಗೇರಿಯಿಂದ ಹಿರೇಬಗನಾಳ ಗ್ರಾಮದವರೆಗಿನ ರಸ್ತೆಯ ಕಾಮಗಾರಿ ಆರಂಭವಾಗಿತ್ತು. ಆದರೆ ಅರ್ಧಕ್ಕೆ ಬಿಟ್ಟಿದ್ದರು. ಇದರಿಂದ ಆಕ್ರೋಶಗೊಂಡ ಗ್ರಾಮಸ್ಥರು ಇಂದು ಹಿರೇಬಗನಾಳದ ಬಳಿ ಪ್ರತಿಭಟನೆ ನಡೆಸಿದರು.
ಹಿರೇಬಗನಾಳದಿಂದ ಕಾಸನಕಂಡಿ ಮಾರ್ಗವಾಗಿ ಹೊಸಹಳ್ಳಿ ರಾಷ್ಟ್ರೀಯ ಹೆದ್ದಾರಿಯವರೆಗೆ. ಗಿಣಗೇರಿಯಿಂದ ಚಿಕ್ಕ ಬಗನಾಳವರೆಗೆ. ಹಿರೇಬಗನಾಳದಿಂದ ಹಾರ್ಲವರ್ತಿವರೆಗೂ ರಸ್ತೆ ತೀರಾ ಹದೆಗಟ್ಟಿವೆ. ಇದರಿಂದಾಗಿ ಗ್ರಾಮಸ್ಥರು ತೀವ್ರ ಆಕ್ರೋಶಗೊಂಡಿದ್ದರು.
ಇಂದು ಹಿರೇಬಗನಾಳದಲ್ಲಿ ಗ್ರಾಮಸ್ಥರು ಹೋರಾಟ ಮಾಡುತ್ತಿದ್ದಂತೆ ಸ್ಥಳಕ್ಕೆ ಕೊಪ್ಪಳ ಪೊಲೀಸರು ಹಾಗು ಲೋಕೋಪಯೋಗಿ ಇಲಾಖೆಯ ಅಧಿಕಾರಿಗಳು ಆಗಮಿಸಿ ಪ್ರತಿಭಟನೆ ಕೈ ಬಿಡಲು ಮನವಿ ಮಾಡಿಕೊಂಡರು. ಆದರೂ ಗ್ರಾಮಸ್ಥರು ಪಟ್ಟು ಬಿಡಲಿಲ್ಲ. ಕೊನೆಗೆ ತಕ್ಷಣದಿಂದ ಗಿಣಗೇರಿ ಬಗನಾಳದವರೆಗಿನ ರಸ್ತೆ ಬಾಕಿ ಉಳಿದಿರುವ ಕಾಮಗಾರಿ ಆರಂಭಿಸಿದ್ದರಿಂದ ತಾತ್ಕಾಲಿಕವಾಗಿ ಹೋರಾಟ ಕೈ ಬಿಟ್ಟಿದ್ದಾರೆ. ಒಂದು ತಿಂಗಳೊಳಗಾಗಿ ಈ ರಸ್ತೆಗಳ ಅಭಿವೃದ್ಧಿ ಯಾಗದಿದ್ದರೆ ಮತ್ತೆ ಹೋರಾಟ ಮಾಡುವ ಎಚ್ಚರಿಕೆ ನೀಡಿದ್ದಾರೆ.