ಸುದ್ದಿಮೂಲ ವಾರ್ತೆ
ದೇವನಹಳ್ಳಿ,ಜು.20: ಕಳೆದ 5 ವರ್ಷದಿಂದ ಡಾ. ಬಿ.ಆರ್.ಅಂಬೇಡ್ಕರ್ ಪುತ್ಥಳಿ ನಿರ್ಮಾಣ ಕಾಮಗಾರಿ ಪ್ರಗತಿ ಕಾಣದಿರುವುದಕ್ಕೆ ಅಧಿಕಾರಿಗಳು ವಿಳಂಬ ಧೋರಣೆ ಕಾರಣ ಎಂದು ಪ್ರಜಾ ವಿಮೋಚನಾ ಚಳವಳಿ ರಾಜ್ಯಾಧ್ಯಕ್ಷ ಮುನಿಆಂಜನಪ್ಪ ಆಕ್ರೋಶ ವ್ಯಕ್ತಪಡಿಸಿದರು.
ದೇವನಹಳ್ಳಿ ತಾಲೂಕಿನ ಜಿಲ್ಲಾಡಳಿತ ಭವನದ ಮುಂಭಾಗದಲ್ಲಿ ಪ್ರಜಾ ವಿಮೋಚನಾ ಚಳವಳಿ ವತಿಯಿಂದ ಬೃಹತ್ ಪ್ರತಿಭಟನೆ ಹಮ್ಮಿಕೊಳ್ಳಲಾಗಿತ್ತು.
ಬಳಿಕ ಮಾತನಾಡಿದ ಅವರು, ಕಳೆದ 5 ವರ್ಷದಿಂದ ಜಿಲ್ಲಾಡಳಿತ ಭವನದ ಮುಂಭಾಗದಲ್ಲಿ ಡಾ.ಬಿ.ಆರ್.ಅಂಬೇಡ್ಕರ್ ಅವರ ಪುತ್ಥಳಿ ನಿರ್ಮಾಣ ಮಾಡಲು ಆದೇಶವಿದ್ದರೂ ಸಹ ಇಂದಿಗೂ ಸಹ ಕಾರ್ಯಗತವಾಗಿಲ್ಲ. ಇದು ಸಂವಿಧಾನ ಶಿಲ್ಪಿ ಡಾ.ಬಿ.ಆರ್.ಅಂಬೇಡ್ಕರ್ ಅವರಿಗೆ ಅಗೌರವ ತರುವಂತಹುದು. ಈಗಾಗಲೇ ಸಾಕಷ್ಟು ಬಾರಿ ಮನವಿ ಕೊಟ್ಟರೂ ಸಹ ಕಾಮಗಾರಿ ಪ್ರಗತಿ ಕಂಡಿಲ್ಲ. ಪಕ್ಕದಲ್ಲಿಯೇ ನಾಡಪ್ರಭು ಕೆಂಪೇಗೌಡರ ಪ್ರತಿಮೆ ಲೋಕಾರ್ಪಣೆಗೆ ಸಿದ್ಧಗೊಂಡಿದೆ. ಆದರೆ, ಸಂವಿಧಾನದಡಿಯಲ್ಲಿ ಕೆಲಸ ಮಾಡುವ ಅಧಿಕಾರಿಗಳು ಅಂಬೇಡ್ಕರ್ ಅವರ ಪ್ರತಿಮೆಯ ಕಾಮಗಾರಿಯನ್ನು ಪ್ರಾರಂಭಿಸಲು ವಿಳಂಬ ಧೋರಣೆ ಹಾಗೂ ನಿರ್ಲಕ್ಷತೆ ಎದ್ದುಕಾಣುತ್ತಿದೆ ಎಂದು ಆರೋಪಿಸಿದರು.
ಅಪರ ಜಿಲ್ಲಾಧಿಕಾರಿ ಅಮರೇಶ್ ಮನವಿಯನ್ನು ಸ್ವೀಕರಿಸಿ ಮಾತನಾಡಿ, ಜಿಲ್ಲಾಧಿಕಾರಿಗಳ ಗಮನಕ್ಕೆ ತಂದು ಮುಂದಿನ 2-3 ದಿನದಲ್ಲಿ ಸಭೆಯನ್ನು ಕರೆಯಲಾಗುತ್ತದೆ. ಕಾಮಗಾರಿ ಪ್ರಾರಂಭಿಸಲು ಸೂಕ್ತ ತೀರ್ಮಾನವನ್ನು ಕೈಗೊಳ್ಳಲಾಗುತ್ತದೆ. ಕಾಮಗಾರಿ ಗುಣಮಟ್ಟದ ಬಗ್ಗೆ ಚರ್ಚಿಸಲಾಗುತ್ತದೆ ಎಂದು ಪ್ರತಿಭಟನಾಕಾರರ ಮನವೊಲಿಸಿದರು.
ಈ ವೇಳೆ ಜಿಲ್ಲಾ ಸಮಾಜ ಕಲ್ಯಾಣ ಇಲಾಖೆ ಉಪನಿರ್ದೇಶಕಿ ಪ್ರೇಮ, ಪ್ರಜಾ ವಿಮೋಚನಾ ಚಳವಳಿ ಬೆಂಗಳೂರು ನಗರ ಜಿಲ್ಲಾಧ್ಯಕ್ಷ ಅಯೂಬ್ ಖಾನ್, ದೇವನಹಳ್ಳಿ ತಾಲೂಕು ಅಧ್ಯಕ್ಷ ಸೋಲೂರು ನಾಗರಾಜ್, ಟೌನ್ ಮಹಿಳಾ ಘಟಕ ಅಧ್ಯಕ್ಷೆ ಅರುಣಾ, ಟೌನ್ ಅಧ್ಯಕ್ಷ ವಿಶ್ವನಾಥ್, ದೊಡ್ಡಬಳ್ಳಾಪುರ ತಾಲೂಕು ಅಧ್ಯಕ್ಷ ಪುನೀತ್, ನೆಲಮಂಗಲ ತಾಲೂಕು ಅಧ್ಯಕ್ಷ ವಾಸುದೇವ ಮೂರ್ತಿ, ಯಲಹಂಕ ತಾಲೂಕು ಅಧ್ಯಕ್ಷ ಕಾಂತರಾಜ್, ಪ್ರತಿಭಟನಾಕಾರರು, ಮುಖಂಡರು, ವಿಶ್ವನಾಥಪುರ ಪೊಲೀಸ್ ಸಬ್ಇನ್ಸ್ಪೆಕ್ಟರ್ ನಂದೀಶ್, ಸಿಬ್ಬಂದಿ ಇದ್ದರು.