ಸುದ್ದಿಮೂಲ ವಾರ್ತೆ
ಮೈಸೂರು, ಸೆ.29:ತಮಿಳುನಾಡಿಗೆ ನಿರಂತರವಾಗಿ ಕಾವೇರಿ ನೀರು ಬಿಡುಗಡೆ ಮಾಡುತ್ತಿರುವುದನ್ನು ಖಂಡಿಸಿ ಶುಕ್ರವಾರ ಕರೆ ನೀಡಿದ್ದ ಕರ್ನಾಟಕ ಬಂದ್ಗೆ ಸಾಂಸ್ಕೃತಿಕ ರಾಜಧಾನಿ ಮೈಸೂರು , ಗಡಿನಾಡ ಜಿಲ್ಲೆ ಚಾಮರಾಜನಗರ ಮಾತ್ರವಲ್ಲದೆ, ಅರೆ ಮಲೆನಾಡು ಜಿಲ್ಲೆಯಾದ ಹಾಸನ ಜಿಲ್ಲೆಯಲ್ಲಿ ಅಖಂಡ ಬೆಂಬಲ ವ್ಯಕ್ತವಾಯಿತು. ಎಲ್ಲಿಯೂ ಯಾವುದೇ ಅಹಿತಕರ ಘಟನೆಗಳು ನಡೆಯದೆ ಸಂಜೆಯವರೆಗೆ ಶಾಂತಿಯುತವಾಗಿ ಬಂದ್ ಆಚರಿಸುವ ಮೂಲಕ ಜನರು ಭಾವನಾತ್ಮಕ ಬೆಂಬಲ ನೀಡಿದರು.
ದಿನವೆಲ್ಲಾ ಜನ-ವಾಹನ ದಟ್ಟಣೆಯಿಂದ ಕೂಡಿದ್ದ ರಸ್ತೆಗಳು ಬಿಕೋ ಎನ್ನುತ್ತಿದ್ದವು. ಈ ಬಂದ್ನಲ್ಲಿ ಯಾರು ಬಲವಂತವಾಗಿ ಅಂಗಡಿ, ಮುಗ್ಗಟ್ಟುಗಳನ್ನು ಮುಚ್ಚಿಸಲಿಲ್ಲ. ಬದಲಿಗೆ ತಾವಾಗಿಯೇ ಸ್ವಯಂಪ್ರೇರಣೆಯಿಂದ ವ್ಯಾಪಾರವನ್ನು ಸಂಪೂರ್ಣವಾಗಿ ಸ್ಥಗಿತ ಮಾಡಿದ್ದರು. ರಸ್ತೆತಡೆ ಮತ್ತಿತರ ರೀತಿಯಲ್ಲಿ ಪ್ರತಿಭಟನೆ ನಡೆದವು.
ಬಂದ್ ಗೆ ಮೈಸೂರಿನಲ್ಲಿ ಉತ್ತಮ ಪ್ರತಿಕ್ರಿಯೆ ವ್ಯಕ್ತವಾಯಿತು. ನಗರ ಹಾಗೂ ಜಿಲ್ಲೆಯಾದ್ಯಂತ ಎಲ್ಲಾ ಅಂಗಡಿ- ಮುಂಗಟ್ಟುಗಳನ್ನು ಬಂದ್ ಮಾಡಲಾಗಿತ್ತು. ವ್ಯಾಪಾರಸ್ಥರು ಸ್ವಯಂ ಪ್ರೇರಿತವಾಗಿ ಕಾವೇರಿ ಹೋರಾಟಕ್ಕೆ ತಮ್ಮ ಬೆಂಬಲವನ್ನು ಸೂಚಿಸಿ ಅಂಗಡಿ ಮುಂಗಟ್ಟುಗಳನ್ನು ತೆರೆಯಲಿಲ್ಲ.
ಮೈಸೂರು ನಗರದ ಪ್ರಮುಖ ದೇವರಾಜ ಮಾರುಕಟ್ಟೆ, ಚಿಕ್ಕ ಮಾರುಕಟ್ಟೆ, ಎನ್.ಆರ್ ಮೊಹಲ್ಲದಲ್ಲಿರುವ ಮಾರುಕಟ್ಟೆ ಸೇರಿದಂತೆ ಬಹುತೇಕ ಎಲ್ಲಾ ಮಾರುಕಟ್ಟೆಗಳು ನಿಶ್ಯದ್ಧವಾಗಿದ್ದವು.
ಹಲವಾರು ಪೆಟ್ರೋಲ್ ಬಂಕ್ ಮಾಲೀಕರು, ಎಲ್ಲಾ ಖಾಸಗಿ ಶಾಲಾ-ಕಾಲೇಜುಗಳು, ಮಾಲ್ ಗಳು, ಚಿತ್ರಮಂದಿರಗಳು ಬಂದ್ ಗೆ ಬೆಂಬಲ ಸೂಚಿಸಿದ್ದವು. ನಗರ ಬಸ್ ನಿಲ್ದಾಣದಲ್ಲಿ ಪ್ರಯಾಣಿಕರು ಇಲ್ಲದಿರುವುದರಿಂದ ಬಸ್ ಸಂಚಾರ ಸ್ಥಗಿತಗೊಂಡಿತ್ತು. ಅದೇ ರೀತಿ ಜಿಲ್ಲೆ, ಹೊರ ಜಿಲ್ಲೆ ಹಾಗೂ ಹೊರ ರಾಜ್ಯಗಳಿಗೆ ತೆರಳುವ ಬಸ್ ನಿಲ್ದಾಣವಾಗಿರುವ ಗ್ರಾಮಾಂತರ ಬಸ್ ನಿಲ್ದಾಣದಲ್ಲಿ ಪ್ರಯಾಣಿಕರ ಸಂಖ್ಯೆ ಅತಿ ವಿರಳವಾಗಿತ್ತು.
ನಂಜನಗೂಡು, ಟೀ ನರಸೀಪುರ, ಕೆ.ಆರ್.ನಗರ, ಹುಣಸೂರು, ಪಿರಿಯಾಪಟ್ಟಣ ತಾಲೂಕುಗಳಲ್ಲಿ ಉತ್ತಮ ಪ್ರತಿಕ್ರಿಯೆ ವ್ಯಕ್ತವಾಗಿದ್ದು, ನಂಜನಗೂಡು ಬಂದ್ ಸಂಪೂರ್ಣ ಯಶಸ್ವಿಯಾಗಿದೆ.
ಗಡಿ ಜಿಲ್ಲೆ ಚಾಮರಾಜನಗರದಲ್ಲಿ ತಮಿಳುನಾಡಿನಂಚಿನಲ್ಲಿ ಇರುವ ಗಡಿನಾಡು ಚಾಮರಾಜನಗರ ಜಿಲ್ಲೆಯಲ್ಲಿ ಬಂದ್ ಯಶಸ್ವಿಯಾಯಿತು. ಜಿಲ್ಲೆಯ ಐದು ತಾಲೂಕುಗಳಲ್ಲಿ ಬೆಳಗ್ಗೆಯಿಂದಲೇ ಕನ್ನಡ ಪರ ಹೋರಾಟಗಾರರು, ರೈತರು, ವಿವಿಧ ರಾಜಕೀಯ ಪಕ್ಷಗಳ ಮುಖಂಡರು ರಸ್ತೆಗಿಳಿದು, ಹೆದ್ದಾರಿ ತಡೆಯೊಡ್ಡಿ ಕಾವೇರಿ ನದಿ ನೀರು ನಿಯಂತ್ರಣ ಪ್ರಾಧಿಕಾರ, ತಮಿಳುನಾಡು ಸರ್ಕಾರದ ವಿರುದ್ದ ಘೋಷಣೆ ಕೂಗಿ ಪ್ರತಿಭಟನೆ ನಡೆಸಿದರು. ಇಲ್ಲಿನ ರಾಜ್ಯ ರಸ್ತೆ ಸಾರಿಗೆ ಸಂಸ್ಥೆ ಬಸ್ ನಿಲ್ದಾಣ ಮುಂಭಾಗ ಜಮಾಯಿಸಿದ ಹೋರಾಟಗಾರರು ಧರಣಿ ನಡೆಸಿದರೆ, ಕಾವೇರಿ ಕ್ರಿಯಾ ಸಮಿತಿಯ ಪದಾಧಿಕಾರಿಗಳು ಪಾದಯಾತ್ರೆ ಮೂಲಕ ಕಿವಿಯಲ್ಲಿ ಗುಲಾಬಿ ಹೂವಿಟ್ಟುಕೊಂಡು ಬಂದ್ ಗೆ ಸಹಕರಿಸುವಂತೆ ಸಾರ್ವಜನಿಕರಲ್ಲಿ ಹಾಗೂ ವರ್ತಕರಲ್ಲಿ ಮನವಿ ಮಾಡಿದರು.
ಶ್ರೀ ಭುವನೇಶ್ವರಿ ವೃತ್ತದ ಮೂಲಕ ತಮಿಳುನಾಡಿಗೆ ಸಾಗುವ ರಾಷ್ಟ್ರೀಯ ಹೆದ್ದಾರಿಯಲ್ಲಿ ಹೋರಾಟಗಾರರು ಅರೆ ಬೆತ್ತಲೆಯಾಗಿ ಉರುಳು ಸೇವೆ ಮಾಡಿದರು. ರಸ್ತೆಗಿಳಿಯದೆ ಬಸ್ ಗಳು ನಿಲ್ದಾಣದಲ್ಲೇ ಇದ್ದವು. ಪೊಲೀಸ್ ಪಹರೆ ಹೆಚ್ಚಾಗಿತ್ತು. ಅಖಂಡ ಕರ್ನಾಟಕ ಬಂದ್ ವಿಷಯ ಮೊದಲೇ ತಿಳಿದಿದ್ದರಿಂದ ದೂರದೂರಿಗೆ ಹೋಗುವ ಪ್ರಯಾಣಿಕರು ಬಸ್ ನಿಲ್ದಾಣದತ್ತ ಬಂದಿರಲಿಲ್ಲ.
ಕರ್ನಾಟಕ ತಮಿಳುನಾಡು ಗಡಿ ಭಾಗವಾಗಿರುವ ಕಾರ್ಯಪಾಳ್ಯಂ ಬಳಿ ತಮಿಳುನಾಡು ಪೊಲೀಸರನ್ನು ನಿಯೋಜಿಸಲಾಗಿತ್ತು. ಗಡಿಯಿಂದ ಕರ್ನಾಟಕದೊಳಗೆ ಯಾವುದೇ ವಾಹನವನ್ನು ಬಿಡದೇ ತಮಿಳುನಾಡು ಪೊಲೀಸರು ಕಾವಲು ಕಾಯುತ್ತಿದ್ದರು. ಅಂಗಡಿ ಮುಂಗಟ್ಟುಗಳನ್ನು ಮುಚ್ಚಲಾಗಿತ್ತು.
ಕಾವೇರಿ ಕ್ರಿಯಾಸಮಿತಿಯ ಮುಖಂಡರಾದ ಶಾ.ಮುರಳಿ, ಚಾ.ರಂ. ಶ್ರೀನಿವಾಸಗೌಡ, ಪುರುಷೋತ್ತಮ್, ಜಿ.ಬಂಗಾರು, ಎಸ್ ಡಿ ಪಿ ಐ ನ ಅಬ್ರಾರ್ ಅಹಮದ್, ಜೆಡಿಎಸ್ ನ ಆಲೂರು ಮಲ್ಲು, ರಾಜು, ಕನ್ನಡ ಹೋರಾಟಗಾರರಾದ ನಿಜಧ್ವನಿ ಗೋವಿಂದರಾಜು ಪ್ರಶಾಂತ್ ಕುಮಾರ್, ಬಿ.ಎಸ್.ಪಿಯ ನಾಗಯ್ಯ, ಪರ್ವತರಾಜು, ಬೇಡಮೂಡ್ಲು ಬಸವಣ್ಣ, ರೈತ ಮುಖಂಡರಾದ ಹಳ್ಳಿಕೆರೆಹುಂಡಿ ಭಾಗ್ಯರಾಜು, ಹೆಬ್ಬಸೂರು ಬಸವಣ್ಣ, ಹರ್ಷ ಹೀಗೆ ಅನೇಕರು ಪ್ರತಿಭಟನೆಯಲ್ಲಿ ಭಾಗವಹಿಸಿದ್ದರು.
ಹಾಸನದಲ್ಲೂ ಬಂದ್ ಯಶಸ್ವಿಯಾಯಿತು. ಪ್ರಮುಖ ಮಾರುಕಟ್ಟೆಯಾದ ಕಟ್ಟಿನಕೆರೆ ಮಾರುಕಟ್ಟೆ, ಗಾಂಧಿವೃತ್ತ ಸೇರಿದಂತೆ ಎಲ್ಲಾ ಕಡೆ ಅಂಗಡಿ ಮುಂಗಟ್ಟುಗಳು ಮುಚ್ಚಿದ್ದವು, ಶಾಲೆ, ಕಾಲೇಜು, ಚಿತ್ರಮಂದಿರಗಳನ್ನು ಬಂದ್ ಮಾಡಲಾಗಿತ್ತು. ಆನೇಕ ಕನ್ನಡಪರ ಸಂಘಟನೆಗಳು ತಮಿಳುನಾಡಿಗೆ ನೀರು ಹರಿಸುವುದನ್ನು ಖಂಡಿಸಿ ಪ್ರತಿಭಟನೆ ನಡೆಸಿದವು, ಜೆಡಿಎಸ್, ಬಿಜೆಪಿ ಬಂದ್ ಬೆಂಬಲ ಘೋಷಣೆ ಮಾಡಿದ್ದವು. ಇಲ್ಲೂ ಯಾವುಧೆ ಅಹಿತಕರ ಘಟನೆಗಳು ನಡೆಯದೇ ಶಾಂತಿಯುತವಾಗಿ ಬಂದ್ ಆಚರಿಸಲಾಯಿತು.
ಕಬಿನಿ ಜಲಾಶಯಕ್ಕೆ ಮುತ್ತಿಗೆ : ರೈತರ ಬಂಧನ
ಕರ್ನಾಟಕ ಜಲ ಸಂರಕ್ಷಣಾ ಸಮಿತಿಯ ಮೈಸೂರು ಜಿಲ್ಲಾ ವತಿಯಿಂದ ಬೈಕ್ ರ್ಯಾಲಿ ಮೂಲಕ ಕಬಿನಿ ಜಲಾಶಯಕ್ಕೆ ಮುತ್ತಿಗೆ ಹಾಕಲು ಯತ್ನಿಸಿದರು. ಈ ಸಂದರ್ಭದಲ್ಲಿ ರೈತರನ್ನು ಪೊಲೀಸರು ಬಂಧಿಸಿದರು.
ಮೈಸೂರಿನ ಗನ್ ಹೌಸ್ ಬಳಿ ಸುಮಾರು ನೂರಕ್ಕೂ ಹೆಚ್ಚು ಬೈಕ್ ಗಳಲ್ಲಿ ರೈತರು ಮುಖ್ಯಮಂತ್ರಿಗಳ ವಿರುದ್ಧ ಘೋಷಣೆಗಳನ್ನು ಕೂಗುತ್ತಾ ತಕ್ಕಡಿಯನ್ನು ಹಿಡಿದುಕೊಂಡು ಕಬಿನಿ ಜಲಾಶಯಕ್ಕೆ ಆಗಮಿಸಿದರು. 2002ರಲ್ಲಿ ಕಬಿನಿ ನೀರಿಗಾಗಿ ಹೋರಾಟ ಮಾಡುವ ವೇಳೆ ಹುತಾತ್ಮರಾದ ದಿವಂಗತ ರೈತ ಗುರುಸ್ವಾಮಿ ರವರ ಪುತ್ತಳಿಗೆ ಮಾಲಾರ್ಪಣೆ ಮಾಡಿ ನಂತರ ಪೊಲೀಸರ ಸರ್ಪಗಾವಲನ್ನು ಭೇದಿಸಿ ನುಗ್ಗಲು ಯತ್ನಿಸಿದಾಗ ಸುಮಾರು ನೂರಕ್ಕೂ ಹೆಚ್ಚು ಜನ ರೈತರನ್ನು ಬಂಧಿಸಿ ಸಂಜೆ ವೇಳೆಗೆ ಬಿಡುಗಡೆಗೊಳಿಸಿದರು.
ಜಿಲ್ಲಾಧ್ಯಕ್ಷ ಪಿ ಸೋಮಶೇಖರ್,ಜಿಲ್ಲಾ ಉಪಾಧ್ಯಕ್ಷ ಪಟೇಲ್ ಶಿವಮೂರ್ತಿ, ಕೆರೆಹುಂಡಿ ರಾಜಣ್ಣ, ತಾಲೂಕು ಅಧ್ಯಕ್ಷರುಗಳಾದ ಬಿದರಹಳ್ಳಿ ಮಾದಪ್ಪ, ಹಂಪಾಪುರ ರಾಜೇಶ್, ಕುರುಬೂರು ಸಿದ್ದೇಶ್, ಕೆಂಡಗಣ್ಣ ಸ್ವಾಮಿ, ಆಮ್ ಆದ್ಮಿ ಪಕ್ಷದ ಜಿಲ್ಲಾಧ್ಯಕ್ಷ ರಂಗಯ್ಯ, ಹನುಮಯ್ಯ, ಕಬ್ಬು ಬೆಳೆಗಾರರ ಸಂಘದ ಮುಖಂಡರು ಸೇರಿದಂತೆ ನೂರಕ್ಕೂ ಹೆಚ್ಚು ರೈತರು ಭಾಗವಹಿಸಿದ್ದರು.