ಸುದ್ದಿಮೂಲ ವಾರ್ತೆ
ಹೊಸಕೋಟೆ,ಅ.11:ತಮಿಳುನಾಡಿಗೆ ಕಾವೇರಿ ನೀರು ಹರಿಸುವುದನ್ನು ಖಂಡಿಸಿ ಕನ್ನಡಪರ ಹೋರಾಟಗಾರ ವಾಟಾಳ್ ನಾಗರಾಜ್ ನೇತೃತ್ವದಲ್ಲಿ ಹೊಸಕೋಟೆ ಟೋಲ್ ಬಳಿಹೆದ್ದಾರಿ ಬಂದ್ ಮಾಡಿ ಪ್ರತಿಭಟನೆ ನಡೆಸಲಾಯಿತು.
ಕನ್ನಡ ಚಳುವಳಿ ವಾಟಾಳ್ ಪಕ್ಷ ಸೇರಿದಂತೆ ಹಲವಾರು ಕನ್ನಡ ಪರ ಹಾಗೂ ದಲಿತ ಪರಸಂಘಟನೆಗಳು ಬೆಂಬಲ ಸೂಚಿಸಿ ಟೋಲ್ ಬಳಿ ಪ್ರತಿಭಟನೆ ನಡೆಸಿದರು.
ಪ್ರತಿಭಟನೆ ವೇಳೆ ಕನ್ನಡ ಚಳುವಳಿ ವಾಟಾಳ್ ಪಕ್ಷದ ಅಧ್ಯಕ್ಷ ವಾಟಾಳ್ ನಾಗರಾಜ್ ಮಾತನಾಡಿ ತಮಿಳುನಾಡಿಗೆ ಕಾವೇರಿ ನೀರನ್ನು ಹರಿಸಿ ಕರ್ನಾಟಕಕ್ಕೆ ಅನ್ಯಾಯ ಆಗುತ್ತಿರುವ ಬಗ್ಗೆ ಸುಪ್ರಿಂಕೋರ್ಟ್ ಗೆ ಮನವರಿಕೆ ಮಾಡಿಕೊಡುವ ಕೆಲಸ ರಾಜ್ಯ ಸರ್ಕಾರದಿಂದ ಆಗಿಲ್ಲ. ಪರಿಣಾಮವಾಗಿ ಪ್ರತಿ ದಿನ ಕಾವೇರಿ ನೀರು ತಮಿಳುನಾಡಿಗೆ ಹರಿಸುವಂತಾಗಿದೆ. ಇದರಿಂದ ಮಂಡ್ಯ, ಮೈಸೂರು ಭಾಗದ ರೈತರ ಹೊಟ್ಟೆ ಮೇಲೆ ಹೊಡೆದಂತಾಗಿದೆ. ಸರ್ಕಾರ ಕೂಡಲೇ ಎಚ್ಚೆತ್ತುಕೊಂಡು ರಾಜ್ಯದ ಕಾವೇರಿ ನೀರಿನ ವಾಸ್ತವ ಪರಿಸ್ಥಿತಿ ಬಗ್ಗೆ ಸುಪ್ರಿಂಗೆ ಅರ್ಥೈಸಬೇಕಾಗಿದೆ ಎಂದರು.
ಕನ್ನಡ ಸೇನೆ ಸಂಘಟನೆ ರಾಜ್ಯಾಧ್ಯಕ್ಷ ಕೆ.ಆರ್.ಕುಮಾರ್ ಮಾತನಾಡಿ ಕಾವೇರಿ ನೀರಿಗಾಗಿ ರೈತರು, ಸಂಘಟನೆಗಳು ಹಲವಾರು ದಿನಗಳಿಂದ ವಿಭಿನ್ನವಾಗಿ ಪ್ರತಿಭಟನೆ ಮಾಡುತ್ತಿದ್ದರೂ ಸಹ ಸರ್ಕಾರ ಪ್ರತಿಭಟನೆಗೆ ಸೊಪ್ಪು ಹಾಕುತಿಲ್ಲ. ಬದಲಾಗಿ ಹೋರಾಟಗಳನ್ನು ಹತ್ತಿಕ್ಕುವ ಕೆಲಸ ಮಾಡುತ್ತಿದೆ.
ಇದೇ ಸಿದ್ದರಾಮಯ್ಯ ಹಾಗೂ ಡಿಕೆಶಿ ಅವರು ವಿಪಕ್ಷ ಸ್ಥಾನದಲ್ಲಿದ್ದ ಸಂದರ್ಭದಲ್ಲಿ ಮೇಕೆದಾಟು ವಿಚಾರವಾಗಿಪಾದಯಾತ್ರೆ ಮಾಡಿದ್ದರು.
ಆದರೆ ಈಗ ಕಾವೇರಿ ನೀರನ್ನು ನಿಲ್ಲಿಸಲು ಆಗದಿರುವುದು ತಲೆತಗ್ಗಿಸುವ ವಿಚಾರ. ಆದ್ದರಿಂದ ಕಾವೇರಿ ನೀರು ನಮ್ಮ ಹಕ್ಕು ಮೊದಲು ನಮಗೆದಕ್ಕಬೇಕು ಎಂದರು.
ತಮಿಳುನಾಡಿಗೆ ಕಾವೇರಿ ನೀರು ಬಿಡುವಂತೆ ತಮಿಳುನಾಡಿನಲ್ಲಿ ಅ.11 ರಂದು ಹೋರಾಟಹಮ್ಮಿಕೊಂಡಿದೆ.
ನಾವು ಕೂಡ ಕನ್ನಡ ಪರ ಸಂಘಟನೆಗಳ ವತಿಯಿಂದ ನೀರು ನೀರು ಬಿಡದಂತೆ ಒತ್ತಾಯಿಸಿ ರಾಜಭವನ ಮುತ್ತಿಗೆಯನ್ನು ಹಮ್ಮಿಕೊಂಡಿದ್ದೇವೆ ಎಂದು ವಾಟಾಳ್ ನಾಗರಾಜ್ ತಿಳಿಸಿದರು.