ಸುದ್ದಿಮೂಲ ವಾರ್ತೆ
ಕೆ.ಆರ್. ಪುರ, ನ.20: ಮಹದೇವಪುರ ವಲಯ ವ್ಯಾಪ್ತಿಯಲ್ಲಿ ಕುಡಿಯುವ ನೀರಿನ ಸೌಲಭ್ಯ ಮತ್ತು ವಿವಿಧ ಮೂಲಸೌಕರ್ಯ ಕಲ್ಪಿಸುವಂತೆ ಒತ್ತಾಯಿಸಿ ವಿವಿಧ ದಲಿತ ಪರ ಸಂಘಟನೆಗಳ ಕಾರ್ಯಕರ್ತರು ಹಾಗೂ ನೂರಾರು ನಾಗರೀಕರು ಬಿಬಿಎಂಪಿ ಮಹದೇವಪುರ ವಲಯ ಕಚೇರಿ ಮುಂದೆ ಪ್ರತಿಭಟನೆ ನಡೆಸಿದರು.
ಕಳೆದ ಆರು ತಿಂಗಳಿಂದ ಮಹದೇವಪುರ ಕ್ಷೇತ್ರದ ವೈಟ್ ಫೀಲ್ಡ್, ಕಾಡುಗುಡಿ, ಹೂಡಿ ಸೇರಿದಂತೆ ಬಹುತೇಕ ಪ್ರದೇಶದಲ್ಲಿ ಜನರಿಗೆ ಕುಡಿಯುವ ನೀರಿಗೆ ಹಾಹಾಕಾರ ಉಂಟಾಗಿದೆ. ಕುಡಿಯುವ ನೀರಿಲ್ಲದೆ ಜನಸಾಮಾನ್ಯರ ಬದುಕು ಸಾಗಿಸುವುದು ಕಷ್ಟಕರವಾಗಿದೆ. ಅಧಿಕಾರಿಗಳು ನೀರಿನ ಸೌಲಭ್ಯ ಕಲ್ಪಿಸದೆ ಕಾಲಹರಣ ಮಾಡುವ ಮೂಲಕ ಜನರ ಬದುಕಿನ ಜೊತೆ ಚೆಲ್ಲಾಟವಾಡುತ್ತಿದ್ದಾರೆ ಎಂದು ಕರ್ನಾಟಕ ರಿಪಬ್ಲಿಕನ್ ಸೇನೆಯ ಕಾರ್ಮಿಕ ಘಟಕದ ರಾಜ್ಯಾದ್ಯಕ್ಷ ಬೆಳತ್ತೂರು ವೆಂಕಟೇಶ ದೂರಿದರು.
ಮಹದೇವಪುರ ಭಾಗದಲ್ಲಿ ಹೆಚ್ಚಿನ ಪ್ರಮಾಣದಲ್ಲಿ ಐಟಿಬಿಟಿ ಇದ್ದು ಇಲ್ಲಿಂದ ಸಾವಿರಾರು ಕಂದಾಯ ತೆರಿಗೆ ಹಣ ಸಂದಾಯ ಆಗುತ್ತಿದೆ. ಕನಿಷ್ಠ ನೀರಿನ ಮತ್ತು ಮೂಲಸೌಕರ್ಯ ಅಭಿವೃದ್ಧಿ ಮಾಡದಿರುವುದು ಅಧಿಕಾರಗಳ ಬೇಜವಾಬ್ದಾರಿತನಕ್ಕೆ ಹಿಡಿದ ಕೈನ್ನಡಿಯಾಗಿದೆ. ನೀರಿನ ಸಮಸ್ಯೆ ಪರಿಹರಿಸುವಂತೆ ಬಿಬಿಎಂಪಿ ಅಧಿಕಾರಿಗಳಿಗೆ ಕೇಳಿದರೆ ಕೊಳವೆ ಬಾವಿಗಳಲ್ಲಿ ನೀರಿಲ್ಲ ಎಂದು ಹಾರಿಕೆಯ ಉತ್ತರ ನೀಡುತ್ತಿರುವುದು ನಾಚೀಕೆಗೇಡಿನ ಸಂಗತಿ ಎಂದು ಆಕ್ರೋಶ ವ್ಯಕ್ತಪಡಿಸಿದರು.
ಅನುಸೂಚಿತ ಜಾತಿಗಳ ಐಕ್ಯತಾ ಸಮಿತಿ ರಾಜ್ಯಾದ್ಯಕ್ಷರಾದ ಬಿ.ಕೃಷ್ಣಪ್ಪ ಮಾತನಾಡಿ, ಸರ್ಕಾರ ನೀಡಿರುವ ವಿಶೇಷ ಅನುದಾನ ಯಾರ ಜೇಬಿಗೆ ಹೋಗುತ್ತಿದೆ ಅಧಿಕಾರಿಗಳು ಸ್ಪಷ್ಟಪಡಿಸಬೇಕು. ಕುಡಿಯುವ ನೀರು, ವಿದ್ಯುತ್ ಚರಂಡಿ, ರಸ್ತೆ ವಿವಿಧ ಮೂಲಸೌಕರ್ಯ ಕಲ್ಪಿಸುವ ಕಡೆಗೆ ಗಮನ ನೀಡದೆ ಬಂಡವಾಳಶಾಹಿಗಳ ಜೊತೆ ಸೇರಿಕೊಂಡು ಭ್ರಷ್ಟಾಚಾರದಲ್ಲಿ ತೊಡಗಿದ್ದಾರೆ ಎಂದು ಆರೋಪಿಸಿದರು.
ಈ ಸಂಧರ್ಭದಲ್ಲಿ ಡಿ.ಎಸ್.ಎಸ್. ಜೈ ಭೀಮ್ ಘರ್ಜನೆ ರಾಜ್ಯ ಯುವ ಅದ್ಯಕ್ಷರಾದ ಕ್ರಿಸ್ತೂರಾಜ್, ಕೆ.ಜೆ.ಎಸ್. ರಾಜ್ಯಾದ್ಯಕ್ಷ ಸುಹೇಲ್, ಎಂ.ಎನ್.ರತ್ನಂ, ಸುಭ್ರಮಣಿ, ಚಿಕ್ಕನಾರಾಯಣ, ಕಾವೇರಪ್ಪ, ಶಿರಿಷಾ, ಸಂತೋಷ್ ಇದ್ದರು.