ಸುದ್ದಿಮೂಲ ವಾರ್ತೆ
ಕೆ.ಆರ್.ಪುರ. ಅ.26:ರಾಮಮೂರ್ತಿನಗರ ವಾರ್ಡಿನ ಗ್ರೀನ್ ಗಾರ್ಡನ್ ಬಡಾವಣೆಯಿಂದ ಕಲ್ಕೆರೆ ಕೆರೆಗೆ ಸಂಪರ್ಕ ಕಲ್ಪಿಸುವ ರಾಜಾಕಾಲುವೆ ನೀರು ಸರಾಗವಾಗಿ ಹರಿಯದೇ ರಸ್ತೆಯ ಮೇಲೆ ಹರಿಯುತ್ತಿರುವುದರಿಂದ ನಿವಾಸಿಗಳು ರಸ್ತೆ ದಾಟಲು ಹರಸಾಹಸ ಪಡುವಂತಾಗಿದೆ.
ಕಲ್ಕೆರೆ ಖಾನೆ ಮುಖ್ಯ ರಸ್ತೆಯ ಮೂಲಕ ಹಾದು ಹೋಗಿರುವ ಸುಮಾರು ಒಂದು ಕಿಮೀ ಉದ್ದದ ರಾಜಾಕಾಲುವೆ ಪ್ರಭಾವಗಳಿಂದ ಒತ್ತುವರಿ ಆಗಿರುವ ಆರೋಪ ಕೇಳಿಬಂದಿದ್ದು 60 ಅಡಿ ಇದ್ದ ರಾಜಾಕಾಲುವೆ ಈಗ ಸಣ್ಣ ಮೋರಿಯಂತಾಗಿದ್ದೆ ರಸ್ತೆ ಮೇಲೆ ಕೊಳಚೆ ನೀರು ಬರಲು ಕಾರಣವಾಗಿದೆ.
ಜೋರು ಮಳೆ ಬಿದ್ದಾಗ ಮಳೆ ನೀರು ಸರಾಗವಾಗಿ ಹರಿಯದೆ ರಸ್ತೆ ಮತ್ತು ತಗ್ಗು ಪ್ರದೇಶದ ಮನೆಗಳಿಗೆ ಪ್ರವಾಹದಂತೆ ಕೊಳಚೆ ನೀರು ನುಗ್ಗುವುದರಿಂದ ಜನರು ಸಂಕಷ್ಟ ಎದುರಿಸುವಂತಾಗಿದೆ. ರಾಜಾಕಾಲುವೆಯಲ್ಲಿ ಗಿಡಗಂಟೆ ಬೆಳೆದಿವೆ. ಪ್ಲಾಸ್ಟಿಕ್ ಕವರ್ ಗಳು, ತಾರ್ಮೊಕೊಲು ಬಿದ್ದು ಹೂಳು ತುಂಬಿಕೊಂಡಿರುವ ಪರಿಣಾಮ ಸೊಳ್ಳೆಗಳ ಉತ್ಪತ್ತಿಯ ಕೇಂದ್ರಸ್ಥಾನವಾಗಿದೆ.
ಕೆಲವರಿಂದ ರಾಜಾಕಾಲುವೆ ಒತ್ತುವರಿ ಆಗಿರುವುದರಿಂದ ನೀರು ಸರಾಗವಾಗಿ ಹರಿಯದೇ ರಸ್ತೆ ಮೇಲೆ ಹರಿಯುತ್ತಿದೆ. ರಸ್ತೆ ದಾಟುವಾಗ ವಾಹನ ಸವಾರರು ಮುಗುಚಿಬಿದ್ದು ಗಾಯಗೊಂಡಿದ್ದಾರೆ. ಈ ದಾರಿಯಲ್ಲಿ ತೆರಳುವ ಜಾನುವಾರುಗಳಿಗೆ ತೊಂದರೆ ಏನಿಸಿದೆ. ಇಷ್ಟಾದರೂ ಒತ್ತುವರಿದಾರರ ವಿರುದ್ಧ ಕ್ರಮ ಕೈಗೊಳ್ಳದೆ ಅಧಿಕಾರಿಗಳು ಮೌನ ವಹಿಸಿದ್ದಾರೆ ಎಂದು ಸ್ಥಳೀಯ ಕಿರಣ್ ದೂರಿದರು.
ರಾಜಾಕಾಲುವೆ ಒತ್ತುವರಿಯಾಗಿ ಕೊಳಚೆ ನೀರು ರಸ್ತೆ ಮೇಲೆ ಹರಿಯುತ್ತಿದೆ. ದ್ವಿಚಕ್ರ ಹಾಗೂ ಲಘು ವಾಹನಗಳು ಓಡಾಡಲು ಆಗದಂತ ಪರಿಸ್ಥಿತಿ ನಿರ್ಮಾಣವಾಗಿದೆ. ಶಾಲೆ ಮಕ್ಕಳು, ವಯಸ್ಸದ ಹಿರಿಯರು ಗರ್ಭಿಣಿಯರು ರಸ್ತೆ ದಾಟಲು ಸಾಧ್ಯವಾಗದ ಸ್ಥಿತಿ ನಿರ್ಮಾಣವಾಗಿದೆ ಎಂದು ಸ್ಥಳೀಯ ನಿವಾಸಿ ಕಲ್ಕೆರೆ ರವಿಕುಮಾರ್ ದೂರಿದರು.
ಒತ್ತುವರಿಯಿಂದ ರಾಜಾಕಾಲುವೆ ಕಿರಿದಾಗಿದ್ದು ಇರುವಂತಹ ರಾಜಾಕಾಲುವೆಯನ್ನೆ ಅಭಿವೃದ್ಧಿಪಡಿಸಿಲ್ಲ. ಈ ಬಗ್ಗೆ ಬೃಹತ್ ನೀರುಗಾಲುವೆ ಅಧಿಕಾರಿಗಳಾದ ಮಾಲತಿ ಹಾಗೂ ಸತೀಶ್ ಅವರಿಗೆ ದೂರು ನೀಡಿದರೂ ಯಾವುದೇ ಪ್ರಯೋಜನವಾಗಿಲ್ಲ ಎಂದು ಅಧಿಕಾರಿಗಳ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದರು.