ಸುದ್ದಿಮೂಲ ವಾರ್ತೆ
ಬಾಗೇಪಲ್ಲಿ ಅ. 20 : ತಾಲೂಕಿನ ಮಿಟ್ಟೇಮರಿ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಮಲ್ಲಿಗುರ್ಕಿ ಗ್ರಾಮದಲ್ಲಿ ಅವೈಜ್ಞಾನಿಕ ಚರಂಡಿ ಕಾಮಗಾರಿಯಿಂದ ಚರಂಡಿಯಲ್ಲಿ ಹರಿಯಬೇಕಿದ್ದ ಕೊಳಚೆ ನೀರು. ರಸ್ತೆ ಮೇಲೆ ಮನೆಗಳ ಮುಂದೆ ಹರಿಯುತ್ತಿದ್ದು, ಪರಿಣಾಮ ಸಾರ್ವಜನಿಕರು ಕೊಳಚೆ ನೀರಿನಲ್ಲೇ ಓಡಾಡುವಂತಾಗಿದೆ.
ಮಲ್ಲಿಗುರ್ಕಿ-ಮಿಟ್ಟೇಮರಿ ಮುಖ್ಯ ರಸ್ತೆ ಈ ಕೊಳಚೆ ನೀರಿನಿಂದ ಕೂಡಿದ್ದು, ಸರಿಯಾದ ಚರಂಡಿ ನಿರ್ಮಾಣ ಮಾಡದ ಕಾರಣ ರಸ್ತೆ ಮೇಲೆ ನೀರು ಹರಿಯುತ್ತಿದೆ. ಇದರಿಂದ ರಸ್ತೆಯಲ್ಲಿ ಓಡಾಡುವಾಗ ಶಾಲಾ ಕಾಲೇಜು ವಿದ್ಯಾರ್ಥಿಗಳು, ವೃದ್ಧರು ಹಾಗೂ ದನಕರುಗಳು ಜಾರಿ ಬೀಳುವಂತಹ ಪರಿಸ್ಥಿತಿ.
ಈ ಗ್ರಾಮದಲ್ಲಿ ಸುಮಾರು 90 ಕ್ಕೂ ಹೆಚ್ಚು ಮನೆಗಳಿದ್ದು ಸುಮಾರು 350 ಜನಸಂಖ್ಯೆ ಹೊಂದಿದ ಗ್ರಾಮ ಇದಾಗಿದೆ. ಕೊಳಚೆ ನೀರಿನಿಂದ ಸೊಳ್ಳೆಗಳ ಹಾವಳಿ ಹೆಚ್ಚಾಗಿದ್ದು, ಜನ ಸಾಂಕ್ರಾಮಿಕ ರೋಗಗಳ ಭೀತಿಯಿಂದ ಜೀವನ ನಡೆಸುವಂತಾಗಿದೆ.
ಈ ಕುರಿತು ಮಿಟ್ಟೇಮರಿ ಗ್ರಾಮ ಪಂಚಾಯಿತಿ ಅಭಿವೃದ್ಧಿ ಅಧಿಕಾರಿಗಳಿಗೆ ಹಲವು ಬಾರಿ ಅವರ ಗಮನಕ್ಕೆ ತಂದರು ಯಾವುದೇ ಪ್ರಯೋಜನವಾಗಿಲ್ಲ. ಹೀಗಾಗಿ ಸಂಬಂಧ ಪಟ್ಟ ಹಿರಿಯ ಅಧಿಕಾರಿಗಳು ಕೂಡಲೇ ಸಮಸ್ಯೆ ಬಗೆಹರಿಸುವಂತೆ ಗ್ರಾಮಸ್ಥರು ಆಗ್ರಹಿಸಿದ್ದಾರೆ.