ಸುದ್ದಿಮೂಲ ವಾರ್ತೆ
ಕುಷ್ಟಗಿ,ಮೇ 25: ಕಳೆದ 6 ದಶಕಗಳಿಂದ ಭೂ ಸಾಗುವಳಿ ಮಾಡಿಕೊಂಡು ಜೀವನ ಸಾಗಿಸುತ್ತಿರುವ ಬಡ ರೈತ ಕುಟುಂಬಗಳನ್ನು ಅರಣ್ಯ ಇಲಾಖೆ ಅಧಿಕಾರಿಗಳು ಒಕ್ಕಲೆಬ್ಬಿಸುತ್ತಿರುವುದು ನ್ಯಾಯಸಮ್ಮತವಲ್ಲ ಎಂದು ಕರ್ನಾಟಕ ರೈತ ಸಂಘದ ರಾಜ್ಯಾಧ್ಯಕ್ಷ ಡಿ.ಎಚ್. ಪೂಜಾರ ಅವರು ಆಕ್ರೋಶ ವ್ಯಕ್ತಪಡಿಸಿದರು.
ಪಟ್ಟಣದಲ್ಲಿ ಗುರುವಾರ ಕರೆದಿದ್ದ ಸುದ್ದಿಗೋಷ್ಠಿಯಲ್ಲಿ ಅವರು ಮಾತನಾಡಿ, ಕುಷ್ಟಗಿ ತಾಲೂಕಿನ ಮೆಣೆದಾಳ ಸೀಮಾ ವ್ಯಾಪ್ತಿಯ ಸರ್ವೆ ನಂ.74 ಮತ್ತು 76ರಲ್ಲಿ ಗ್ರಾಮದ ಹುಸೇನಪ್ಪ ತಂ.ಶಾಮಣ್ಣ ವಾಲ್ಮೀಕಿ, ಮಹದೇವಪ್ಪ ತಂ. ಹನುಮಪ್ಪ ಕುರುಬರ, ಶಾಂತಮ್ಮ ಗಂಡ ಹುಸೇನಪ್ಪ ಕುರುಬರ ಎಂಬ ರೈತ ಕುಟುಂಬಗಳು ಜಮೀನಿನಲ್ಲಿ ಕೃಷಿ ಚಟುವಟಿಕೆಗಳು ಮಾಡಿಕೊಂಡು ಜೀವನ ಸಾಗಿಸುತ್ತಿದ್ದಾರೆ.
1954 ರಿಂದ 1980ರ ವರೆಗಿನ ಪಹಣಿಯಲ್ಲಿ ಸರಕಾರಿ ಕಾರೇಜ ಖಾತಾ ಪಡಾ ಎಂದಿರುವ ಸ.ನಂ.74, 76 ಭೂಮಿಯನ್ನು ತಲಾ ನಾಲ್ಕು ಎಕರೆಯಂತೆ ಸುಮಾರು 6 ದಶಕದಿಂದಲೂ ಸಾಗುವಳಿ ಮಾಡುತ್ತಿದ್ದಾರೆ. ಸಂಬಂಧಿಸಿದ ಅಧಿಕಾರಿಗಳು ಸರಕಾರಕ್ಕೆ ಸರಿಯಾದ ವರದಿ ನೀಡಿಲ್ಲ. ಈ ಹಿನ್ನೆಲೆ, 2013ರಲ್ಲಿ ಸೆಕ್ಷನ್ 4ರ ಅಧಿಸೂಚನೆ ಮೇರೆಗೆ ಪಹಣಿಯಲ್ಲಿ ಸರ್ಕಾರಿ ಅರಣ್ಯ ಎಂದು ಸೇರ್ಪಡೆಯಾಗಿದೆ. ಮಾರ್ಚ್ 7 ರಂದು ಇಲ್ಲಿನ ಅರಣ್ಯ ಅಧಿಕಾರಿಗಳು ಸಾಗುವಳಿ ಭೂಮಿಯಲ್ಲಿ ನಿರ್ಮಾಣ ಮಾಡಿದ್ದ ಕಾಲುವೆ ಒಡೆದು ಹಾಕಿದ್ದಾರೆ. ಈ ಕುರಿತು ತಹಸೀಲ್ದಾರ್ ರ ಗಮನಕ್ಕೆ ತಂದಾಗ ಸಾಗುವಳಿಗೆ ತೊಂದರೆ ಕೊಡದಂತೆ ಅರಣ್ಯ ಇಲಾಖೆ ಅಧಿಕಕಾರಿಗಳಿಗೆ ಸೂಚನೆ ನೀಡಿದ್ದಾರೆ. ಆದಾಗ್ಯೂ ಕೂಡ ಅರಣ್ಯ ಇಲಾಖೆ ಅಧಿಕಾರಿಗಳು ರೈತ ಕುಟುಂಬಗಳಿಗೆ ಜಮೀನಿನಲ್ಲಿ ಸಾಗುವಳಿಗೆ ಬಿಡುತ್ತಿಲ್ಲ. 3 ಎಕರೆಗಿಂತ ಕಡಿಮೆ ಸಾಗುವಳಿ ಮಾಡುವ ಜನರನ್ನು ವಕ್ಕಲೆಬ್ಬಿಸಬಾರದು ಎಂದು 2014 ರಲ್ಲಿ ಹೈಕೋರ್ಟ್ ಸ್ಪಷ್ಟಪಡಿಸಿದೆ. ಆದರೂ ಅರಣ್ಯ ಇಲಾಖೆ ಅಧಿಕಾರಿಗಳು ಸಣ್ಣ ರೈತರನ್ನು ಗುರಿಯಾಗಿಸಿಕೊಂಡು ದೌರ್ಜನ್ಯ ಮಾಡಲು ಮುಂದಾಗುತ್ತಿದ್ದಾರೆ ಎಂದು ಆರೋಪಿಸಿದರು.
2018ರಿಂದ ಹಾಕಿದ ಅರ್ಜಿಗಳನ್ನು ತಾಲೂಕಾಡಳಿತ ವಿಲೇವಾರಿ ಮಾಡುತ್ತಿಲ್ಲ. ತಹಸೀಲ್ದಾರ್ ಅವರು ಈ ಕುರಿತು ಅಧಿಕಾರಿಗಳ ಸಭೆ ನಡೆಸಲು ಹಿಂದೇಟು ಹಾಕುತಿದ್ದಾರೆ. ಜಿಲ್ಲಾಧಿಕಾರಿಗಳು ಕೂಡಲೇ ಮುಂದಾಳತ್ವ ವಹಿಸಿ ಕಂದಾಯ ಹಾಗೂ ಅರಣ್ಯ ಇಲಾಖೆ ಅಧಿಕಾರಿಗಳ ಸಭೆ ಕರೆದು ಭೂ ಸಮಸ್ಯೆ ಇತ್ಯರ್ಥ ಪಡಿಸಬೇಕು. ಸಾಗುವಳಿ ಮಾಡುವ ಕುಟುಂಬಗಳಿಗೆ ಅನುಕೂಲ ಕಲ್ಪಿಸಬೇಕು. ಇಲ್ಲದಿದ್ದರೆ, ಜೂನ್ 1ರಂದು ಜಿಲ್ಲಾಧಿಕಾರಿಗಳ ಕಚೇರಿ ಮುಂದೆ ಅನಿರ್ಧಿಷ್ಟ ಧರಣಿ ಸತ್ಯಾಗ್ರಹ ಮಾಡುವುದಾಗಿ ಡೆ.ಎಚ್. ಪೂಜಾರ್ ಅವರು ಎಚ್ಚರಿಕೆ ನೀಡಿದರು.
ಈ ವೇಳೆ ದಲಿತ ಮುಖಂಡ ಆನಂದ ಭಂಡಾರಿ, ಕರ್ನಾಟಕ ರೈತ ಸಂಘದ ಜಿಲ್ಲಾಧ್ಯಕ್ಷ ಮಲ್ಲೇಶಗೌಡ, ಜಿಲ್ಲಾ ಕಾರ್ಯದರ್ಶಿ ಬಸವರಾಜ ನರೇಗಲ್, ನಾಗಪ್ಪ, ಹುಸೇನಪ್ಪ, ಶಾಂತಮ್ಮ ಗಂಡ ಶಾಮಣ್ಣ, ಹೊಳಿಯಮ್ಮ. ನಿರುಪಾದೆಪ್ಪ ಬನ್ನಟ್ಟಿ ಉಪಸ್ಥಿತರಿದ್ದರು.