ಸುದ್ದಿಮೂಲ ವಾರ್ತೆ
ಬೆಂಗಳೂರು,ಅ.9; ಡಾಲ್ ಮೇಕಿಂಗ್ ಎಂಥೂಸಿಯಾಸಿಸ್ಟ್ ಗುಂಪಿನಿಂದ ಲೋಕಕಲ್ಯಾಣಕ್ಕಾಗಿ ಅವತರಿಸಿರುವ ವಿಶೇಷ, ವಿನೂತನ ಮತ್ತು ದೈವಿ ಸ್ಪರೂಪದ ದೇವಾನುದೇವತೆಗಳ ಬೊಂಬೆಗಳ ವಿಶಿಷ್ಟ ಪ್ರದರ್ಶನ ನಗರದ ಗರುಡಾ ಮಾಲ್ ನಲ್ಲಿ ಆಯೋಜಿಸಲಾಗಿದ್ದು, 79 ಕಲಾವಿದರ ಕೈ ಚಳಕದಿಂದ ನಿರ್ಮಾಣವಾಗಿರುವ ಸಹಸ್ರಾರು ಬೊಂಬೆಗಳು ಇಂಡಿಯಾ ಬುಕ್ ಆಫ್ ರೆಕಾರ್ಡ್ಸ್, ಏಷ್ಯಾ ಬುಕ್ ಆಫ್ ರೆಕಾರ್ಡ್ಸ್ ನಲ್ಲಿ ದಾಖಲಾಯಿತು.
ಅಪರೂಪದ ಬೊಂಬೆ ಪ್ರದರ್ಶನದ ಆಯೋಜಕರಾದ ರೂಪ ಸಂಜಯ್ ಅವರು ದಸರಾ ಹಬ್ಬದ ಅಂಗವಾಗಿ ಈ ಅಪರೂಪದ 1600 ಬೊಂಬೆಗಳ ಪ್ರದರ್ಶನ ಏರ್ಪಡಿಸಿದ್ದು, ಇಂದಿನಿಂದ ಅಕ್ಟೋಬರ್ 25 ರ ವರೆಗೆ 15ದಿನಗಳ ಬೃಹತ್ ಬೊಂಬೆ ಪ್ರದರ್ಶನ ಏರ್ಪಡಿಸಲಾಗಿದೆ.
ಇಂದು ನಡೆದ ಸಮಾರಂಭದಲ್ಲಿ ಇಂಡಿಯಾ ಬುಕ್ ಆಫ್ ರೆಕಾರ್ಡ್ಸ್, ಏಷ್ಯಾ ಬುಕ್ ಆಫ್ ರೆಕಾರ್ಡ್ಸ್ ನ ದಾಖಲೆಗಳನ್ನು ಅಧಿಕಾರಿಗಳು ರೂಪಾ ಸಂಜಯ್ ಅವರಿಗೆ ಹಸ್ತಾಂತರಿಸಿದರು. ಪ್ಯಾನ್ ಇಂಡಿಯಾದ 79 ಕಲಾವಿದರ ಈ ಪ್ರದರ್ಶನ ಬೊಂಬೆ ಪ್ರಿಯರನ್ನು ಕೈಬೀಸಿ ಕರೆಯುತ್ತಿದೆ. ಕರ್ನಾಟಕ, ತಮಿಳುನಾಡು, ತೆಲಂಗಾಣ, ಆಂಧ್ರಪ್ರದೇಶ, ಮಹಾರಾಷ್ಟ್ರ, ಮಧ್ಯಪ್ರದೇಶ ಮತ್ತಿತರೆ ರಾಜ್ಯಗಳಿಂದ ಬೊಂಬೆಗಳ ಆಕಾರ, ವಿಶೇಷತೆಯ ಮಾಹಿತಿ ಸಂಗ್ರಹಿಸಿ ಸಿದ್ಧಪಡಿಸಿ ಒಂದೇ ಸೂರಿನಡಿ ಸಹಸ್ರಾರು ಬೊಂಬೆಗಳನ್ನು ಪ್ರದರ್ಶಿಸಲಾಗುತ್ತಿದೆ.
ಈ ಕುರಿತು ಮಾಹಿತಿ ನೀಡಿದ ಚೆನ್ನೈನ ರೂಪ ಸಂಜಯ್ ಅವರು, ಮನುಕುಲವನ್ನು ಆಶೀರ್ವದಿಸಲು ಈ ಬೊಂಬೆಗಳ ಪ್ರದರ್ಶನ ಏರ್ಪಡಿಸಲಾಗಿದೆ. ಕಳೆದ ಐದು ತಿಂಗಳಿಂದ ದೇವರುಗಳ ಹೆಸರು ಮತ್ತು ಮೂರ್ತಿಗಳನ್ನು ಸಂಗ್ರಹಿಸಿ ಅದರ ಪ್ರಕಾರ ಎಲ್ಲಾ ಸದಸ್ಯರಿಂದ ವಿವಿಧ ದೇವರುಗಳ ಅವತಾರ ಮತ್ತು ರೂಪಗಳನ್ನೊಳಗೊಂಡ ಬೊಂಬೆಗಳನ್ನು ಮಾಡಿಸಲಾಗಿದೆ. ಶ್ಲೋಕಗಳಲ್ಲಿ ಬರುವ ದೇವರಗಳ ಅವತಾರದ ಮೂರ್ತಿಗಳು, ಅವುಗಳ ಭಂಗಿ, ಆಯುಧ, ವಾಹನಗಳು, ಗುರುಗಳು, ಋಷಿ ಮುನಿಗಳು, ಗ್ರಾಮ ದೇವತೆಗಳ ಕುರಿತು ಆಳವಾದ ಅಧ್ಯಯನ ಕೈಗೊಂಡು ಬಟ್ಟೆ, ಮಣ್ಣು, ಮರ ಇತ್ಯಾದಿ ಪರಿಸರ ಸ್ನೇಹಿ ವಸ್ತುಗಳನ್ನು ಬಳಸಿಕೊಂಡು ಬೊಂಬೆಗಳನ್ನು ತಯಾರು ಮಾಡಲಾಗಿದೆ ಎಂದರು.
ದೇಶದ ಇತಿಹಾಸ, ಸಂಸ್ಕೃತಿ, ಆಚಾರ, ವಿಚಾರಗಳ ಸಮಗ್ರ ಮಾಹಿತಿ ಈ ಪ್ರದರ್ಶನದಿಂದ ದೊರೆಯಲಿದ್ದು, ಪರಂಪರೆಯನ್ನು ಉಳಿಸಿ ಬೆಳೆಸಿ ಬೆಳಕು ಚೆಲ್ಲುವುದು ಈ ಪ್ರದರ್ಶನದ ಉದ್ದೇಶವಾಗಿದೆ. ಕಳೆದ ಐದು ವರ್ಷಗಳಿಂದ ಇಂತಹ ವಿನೂತನ ಪ್ರದರ್ಶನಗಳನ್ನು ಏರ್ಪಡಿಸುತ್ತಿದ್ದು, ತಮ್ಮ ಪ್ರದರ್ಶನ ಈಗಾಗಲೇ ದಾಖಲಾಗಿದೆ. ಜೊತೆಗೆ ಇಂತಹ ಅಪರೂಪದ ಬೊಂಬೆಗಳ ಮಾರಾಟ ಮತ್ತು ಮಾಹಿತಿ www.handikraftz.com ನಲ್ಲಿ ಲಭ್ಯವಿದೆ. ಜೊತೆಗೆ ಬೊಂಬೆಗಳ ಖರೀದಿಗೆ ಅವಕಾಶ ಕಲ್ಪಿಸಲಾಗಿದೆ ಎಂದು ರೂಪ ಸಂಜಯ್ ತಿಳಿಸಿದರು.