ಸುದ್ದಿಮೂಲ ವಾರ್ತೆ
ಚಿಕ್ಕಬಳ್ಳಾಪುರ, ಜು 12: ಕರ್ನಾಟಕ ರಾಜ್ಯ ರೇಷ್ಮೆ ಮಾರಾಟ ಮಂಡಳಿಯಿಂದ ರೇಷ್ಮೆ ನೂಲು ಖರೀದಿ ಹಾಗೂ ಒತ್ತೆ ಸಾಲವನ್ನು ಶಿಡ್ಲಘಟ್ಟದಲ್ಲಿ ಬುಧವಾರದಿಂದ ಆರಂಭಿಸಿದೆ.
ಸತತ ಐದಾರು ತಿಂಗಳಿಂದಲೂ ರೇಷ್ಮೆ ಗೂಡು, ಕಚ್ಚಾ ರೇಷ್ಮೆ ನೂಲಿನ ಬೆಲೆ ಕುಸಿತವಾಗುತ್ತಿರುವ ಹಿನ್ನಲೆಯಲ್ಲಿ ಸರ್ಕಾರದ ಆದೇಶದಂತೆ ರೀಲರುಗಳಿಂದ ಕಚ್ಚಾ ರೇಷ್ಮೆ ನೂಲಿನ ಖರೀದಿ ಮಾಡುವ ಪ್ರಕ್ರಿಯೆ ಬುಧವಾರದಿಂದ ಅಧಿಕೃತವಾಗಿ ಆರಂಭವಾಗಿದೆ.
ಕಚ್ಚಾ ರೇಷ್ಮೆ ನೂಲಿನ ಗುಣಮಟ್ಟದ ಡೀನಿಯರ್ ಗ್ರೇಡ್ನ ಆಧಾರದಲ್ಲಿ ಬೆಲೆಯನ್ನು ನಿಗದಿಪಡಿಸಿ ಖರೀದಿಸಲಾಗುತ್ತದೆ. ಕೆಎಸ್ಎಂಬಿಯಿಂದ 30 ಲಕ್ಷ ರೂ.ಹಣ ಬಿಡುಗಡೆಯಾಗಿದ್ದು ಅಗತ್ಯಕ್ಕೆ ಅನುಸಾರವಾಗಿ ಹಂತ ಹಂತವಾಗಿ ಇನ್ನಷ್ಟು ಹಣ ಬಿಡುಗಡೆಯಾಗುತ್ತದೆ.
ಕಚ್ಚಾ ರೇಷ್ಮೆಯನ್ನು ಮಾರಾಟ ಮಾಡಲಿಚ್ಚಿಸುವ ರೀಲರುಗಳಿಂದ ರೇಷ್ಮೆಯ ಸ್ಯಾಂಪಲ್ ಪಡೆದುಕೊಂಡು 24 ಗಂಟೆಯೊಳಗೆ ರೇಷ್ಮೆ ನೂಲಿನ ಗುಣಮಟ್ಟದ ಡೀನಿಯರ್ ಗಳನ್ನು ಪ್ರಯೋಗಾಲಯದಲ್ಲಿ ಖಚಿತಪಡಿಸಿಕೊಂಡು ಮರುದಿನ ಖರೀದಿಸಲಾಗುತ್ತದೆ. ಸರ್ಕಾರವೇ ರಾಜ್ಯದ ಹಲವು ಮಾರುಕಟ್ಟೆ, ಪ್ರದೇಶಗಳನ್ನು ಎ,ಬಿ,ಸಿ ಎಂದು ವಿಂಗಡಣೆ ಮಾಡಿ ಪ್ರದೇಶಕ್ಕೆ ಅನುಸಾರವಾಗಿ ಡೀನಿಯರ್ ಗ್ರೇಡ್ನ ಗುಣಮಟ್ಟದ ಆಧಾರದಲ್ಲಿ ಕಚ್ಚಾ ರೇಷ್ಮೆ ನೂಲಿಗೆ ಬೆಲೆ ನಿಗದಿಪಡಿಸಲಾಗಿದೆ.
ಕಚ್ಚಾ ರೇಷ್ಮೆ ನೂಲಿನ ಖರೀದಿ ಪ್ರಕ್ರಿಯೆಗಾಗಿ ಅಧಿಕಾರಿಯನ್ನಾಗಿ ವೆಂಕಟೇಶ್ ಅವರನ್ನು ಕೆಎಸ್ಎಂಬಿಯು ನೇಮಿಸಿದೆ. ಪ್ರತಿ ದಿನ ಕಚೇರಿ ಕೆಲಸದ ಅವಧಿಯಲ್ಲಿ ಕಚ್ಚಾ ರೇಷ್ಮೆ ನೂಲಿನ ಗುಣಮಟ್ಟದ ಪರೀಕ್ಷೆ, ಖರೀದಿ ಪ್ರಕ್ರಿಯೆ ನಡೆಯಲಿದೆ.