ಸುದ್ದಿಮೂಲ ವಾರ್ತೆ
ಬೆಂಗಳೂರು, ಅ.11: ತಮ್ಮ ಕ್ಷೇತ್ರಕ್ಕೆ ಅನುದಾನ ಕಡಿತ ಮಾಡಿರುವುದನ್ನು ವಿರೋಧಿಸಿ ಮತ್ತು ಕೂಡಲೇ ಅನುದಾನ ಬಿಡುಗಡೆಗೆ ಆಗ್ರಹಿಸಿ ಡಿಸಿಎಂ ಡಿಕೆ ಶಿವಕುಮಾರ್ ಅವರನ್ನು ಭೇಟಿ ಮಾಡಲು ಮತ್ತು ಮನವಿ ಸಲ್ಲಿಸಲು ರಾಜರಾಜೇಶ್ವರಿನಗರ ಶಾಸಕ ಮುನಿರತ್ನ ಹೈಡ್ರಾಮ ಸೃಷ್ಟಿಸಿದರು.
ರಾಜ್ಯ ಕಾಂಗ್ರೆಸ್ ಸರ್ಕಾರದಲ್ಲಿ ನನಗೆ ಕ್ಷೇತ್ರದ ಕೆಲಸ ಮಾಡಲು ಕಷ್ಟವಾಗುತ್ತಿದ್ದು, ನನ್ನ ಕ್ಷೇತ್ರಕ್ಕೆ ಬರಬೇಕಾದ ಅನುದಾನವನ್ನು ಕಡಿತ ಮಾಡಿ ಬೇರೆ ಕ್ಷೇತ್ರಗಳಿಗೆ ನೀಡುತ್ತಿದ್ದಾರೆ ಎಂದು ಆರೋಪಿಸಿ ಶಾಸಕ ಹಾಗೂ ಮಾಜಿ ಸಚಿವ ಮುನಿರತ್ನ ವಿಧಾನಸೌಧ ಮುಂದೆ ಗಾಂಧಿ ಪ್ರತಿಮೆ ಎದುರು ಧರಣಿ ನಡೆಸಿದರು.
ವಿಧಾನಸೌಧಕ್ಕೆ ಬೆಳಗ್ಗೆಯೇ ತಮ್ಮ ಬೆಂಬಲಿಗರ ಪಡೆಯೊಂದಿಗೆ ಆಗಮಿಸಿದ ಶಾಸಕ ಮುನಿರತ್ನ ಅವರು, ಘೋಷಣೆಯ ಭಿತ್ತಪತ್ರಗಳೊಂದಿಗೆ ಕೆಲ ಕಾಲ ಧರಣಿ ನಡೆಸಿ ಗಮನ ಸೆಳೆದರು. ಬಳಿಕ ಪೊಲೀಸರು ಬಂದು ಪ್ರತಿಭಟನಾಕಾರರನ್ನು ವಶಕ್ಕೆ ಪಡೆದು ಬಸ್ಗಳಲ್ಲಿ ಕರೆದೊಯ್ದರು.
ವಿಶೇಷವೆಂದರೆ ಪ್ರತಿಭಟನಾ ಸ್ಥಳಕ್ಕೆ ಮಾಜಿ ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ ಅವರೂ ಸಹ ಆಗಮಿಸಿ ಬೆಂಬಲ ಸೂಚಿಸಿದರು. ವೈಷ್ಯಮ್ಯದ ರಾಜಕೀಯ ಮಾಡದೆ ರಾಜರಾಜೇಶ್ವರಿ ಕ್ಷೇತ್ರಕ್ಕೆ ಸೂಕ್ತ ಅನುದಾನ ಬಿಡುಗಡೆ ಮಾಡಬೇಕು ಎಂದು ಆಗ್ರಹಿಸಿದರು.
ನಂತರ ಶಾಸಕ ಮುನಿರತ್ನ ಅವರು ಅಲ್ಲಿಂದ ಬೆಂಗಳೂರು ಅರಮನೆ ಮೈದಾನದಲ್ಲಿ ನಡೆಯುತ್ತಿದ್ದ ಕಂಬಳದ ಕರೆ ಪೂಜೆ ಕಾರ್ಯಕ್ರಮ ಬಳಿ ಬಂದು ಡಿಸಿಎಂ ಡಿ ಕೆ ಶಿವಕುಮಾರ್ ಅವರಿಗೆ ಕಾಲಿಗೆ ನಮಸ್ಕರಿಸಿ ತಮ್ಮ ಕ್ಷೇತ್ರಕ್ಕೆ ಅನುದಾನ ಬಿಡುಗಡೆ ಮಾಡುವಂತೆ ಗೋಗರೆದರು. ಯಾವುದೇ ಕಾರಣಕ್ಕೂ ಕ್ಷೇತ್ರದ ಅನುದಾನವನ್ನು ಬೇರೆ ಕಡೆ ವರ್ಗಾಯಿಸದಂತೆ ಮನವಿ ಮಾಡಿದರು.
ಅರಮನೆ ಮೈದಾನದಲ್ಲಿ ತನ್ನ ಭಾಷಣ ಮುಗಿಸಿ ವೇದಿಕೆಯಿಂದ ಕೆಳಗಿಳಿದು ಬಂದು ಮೈಸೂರಿಗೆ ತೆರಳಲು ಸಜ್ಜಾಗುತ್ತಿದ್ದ ಡಿ.ಕೆ. ಶಿವಕುಮಾರ್ ಬಳಿ ಬಂದ ಶಾಸಕ ಮುನಿರತ್ನ, ಡಿಕೆ ಶಿವಕುಮಾರ್ ಕಾಲಿಗೆ ಬಿದ್ದು ತನ್ನ ಆರ್ ಆರ್ ನಗರ ಕ್ಷೇತ್ರಕ್ಕೆ ಅನುದಾನ ನೀಡಿ ಎಂದು ಮನವಿ ಮಾಡಿದರು. ನಂತರ ಮುನಿರತ್ನ ಬೆನ್ನು ತಟ್ಟಿದ ಡಿಕೆ ಶಿವಕುಮಾರ್, ನಾನೀಗ ಮೈಸೂರಿಗೆ ಹೋಗುತ್ತಿದ್ದೇನೆ. ನಂತರ ನಿಮಗೆ ಸಮಯ ಕೊಡುತ್ತೇನೆ ಎಂದು ಹೇಳಿದರು.
ನಂತರ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಚುನಾವಣಾ ಫಲಿತಾಂಶ ಫಲಿತಾಂಶ ಬಂದ ದಿನದಿಂದ ರಾಜರಾಜೇಶ್ವರಿ ನಗರ ಕ್ಷೇತ್ರದಲ್ಲಿ ಶಾಸಕನಾಗಿ ಕೆಲಸ ಮಾಡಲು ಕಷ್ಟವಾಗುತ್ತಿದೆ. ಪೊಲೀಸ್ ದೌರ್ಜನ್ಯ, ಕಾಂಗ್ರೆಸ್ ಬೆಂಬಲಿಗರಿಂದ ಸಾರ್ವಜನಿಕರಿಗೆ ಕಿರುಕುಳ ಹೆಚ್ಚಾಗುತ್ತಿದೆ. ನಾನು ಒಂದು ವಾರ್ಡ್ ತನಿಖೆಗೆ ಪತ್ರ ಬರೆದರೆ ಇಡೀ ಕ್ಷೇತ್ರದ ಹಣ ತಡೆದಿದ್ದಾರೆ. ಪರಾಜಿತ ಅಭ್ಯರ್ಥಿ ಮತ್ತು ಅವರ ತಂದೆ ನೇರವಾಗಿ ಅಧಿಕಾರಿಗಳ ಸಭೆ ನಡೆಸುತ್ತಿದ್ದಾರೆ. ಅಧಿಕಾರಿಗಳಿಗೆ ದೂರವಾಣಿ ಕರೆ ಮಾಡಿ ಆಡಳಿತ ವ್ಯವಸ್ಥೆಯಲ್ಲಿ ಹಸ್ತಕ್ಷೇಪ ಮಾಡುತ್ತಿದ್ದಾರೆ. ಡಿ.ಕೆ. ಸುರೇಶ್ ಅವರು ಸಂಸದರಾಗಿರುವ ಕ್ಷೇತ್ರಕ್ಕೆ ಹಣ ಕೊಡಿಸುವುದು ಅವರ ಕರ್ತವ್ಯ. ಅನುದಾನ ಬೇರೆಡೆ ವರ್ಗಾವಣೆ ಮಾಡಿದರೂ ಒಂದೇ ಒಂದು ಮಾತು ಮಾತಾಡಿಲ್ಲ. ಎಲ್ಲಾ ಶಾಸಕರನ್ನು ನೋಡುವ ರೀತಿಯಲ್ಲೇ ನನ್ನನ್ನೂ ನೋಡಿ ಎಂದು ಮನವಿ ಮಾಡಿದರು.
ಡಿಸಿಎಂ ಮನೆಯಲ್ಲಿ ಭೇಟಿ:
ಡಿಸಿಎಂ ಡಿಕೆ ಶಿವಕುಮಾರ್ ಅವರು ತಮ್ಮ ಮನೆಯಲ್ಲಿ ಭೇಟಿ ಮಾಡುವಂತೆ ಸೂಚನೆ ನೀಡಿದರು. ಅದರಂತೆ ಮಧ್ಯಾಹ್ನ ಸದಾಶಿವನಗರದ ನಿವಾಸಕ್ಕೆ ಭೇಟಿ ನೀಡಿದ ಶಾಸಕ ಮುನಿರತ್ನ ಸುಮಾರು ಒಂದು ತಾಸು ಚರ್ಚೆ ನಡೆಸಿದರು.
ಭೇಟಿ ಬಳಿಕ ಮಾತನಾಡಿ ಡಿಸಿಎಂ ಡಿಕೆ ಶಿವಕುಮಾರ್ ಅವರು, ‘ಶಾಸಕ ಮುನಿರತ್ನ ಅವರು ನನ್ನ ಭೇಟಿಗೆ ಮೊದಲೇ ಅವಕಾಶ ಕೇಳಿದ್ದರೆ ಕೊಡುತ್ತಿದ್ದೆ. ಕಂಬಳ ಕರೆಪೂಜೆ (ಗುದ್ದಲಿಪೂಜೆ) ಕಾರ್ಯಕ್ರಮದ ಬಳಿ ಬಂದು ಸೀನ್ ಕ್ರಿಯೇಟ್ ಮಾಡುವ ಅವಶ್ಯಕತೆ ಇರಲಿಲ್ಲ. ಅವರನ್ನು ಕಾಲಿಗೆ ಬೀಳಿಸಿಕೊಳ್ಳಲು ನಾನೇನು ಮಠದ ಸ್ವಾಮೀಜಿಯೇ’ ಎಂದು ಪ್ರಶ್ನಿಸಿದರು.
ಶಾಸಕ ಮುನಿರತ್ನ ಅವರು ರಾಜರಾಜೇಶ್ವರಿ ಕ್ಷೇತ್ರಕ್ಕೆ ಅನುದಾನದ ವಿಚಾರವಾಗಿ ಚರ್ಚೆ ನಡೆಸಿದರು. ʼದ್ವೇಷದ ರಾಜಕಾರಣ’ ಎಂದು ಹೇಳಿದರು. ಅದಕ್ಕೆ ನಾನು, ‘ಬಿಜೆಪಿ ಸರ್ಕಾರ ಇದ್ದ ವೇಳೆ ಕಾಂಗ್ರೆಸ್ ಶಾಸಕರ ಅನುದಾನಕ್ಕೆ ಏಕೆ ಕತ್ತರಿ ಹಾಕಿದ್ದರು? ಹೋಗಿ ಯಡಿಯೂರಪ್ಪ ಹಾಗೂ ಬೊಮ್ಮಾಯಿ ಅವರನ್ನೇ ಕೇಳಿನೋಡಿ. ಕನಕಪುರಕ್ಕೆ ಬಂದಿದ್ದ ವೈದ್ಯಕೀಯ ಕಾಲೇಜನ್ನು ಹೇಗೆ ತೆಗೆದರು? ಅಂತಾ. ಅದನ್ನು ಯಾವ ರಾಜಕಾರಣ ಎಂದು ಕರೆಯುತ್ತಾರೆ’ ಎಂದು ಮುನಿರತ್ನ ಅವರಿಗೆ ಕೇಳಿದ್ದಾಗಿ ತಿಳಿಸಿದರು.
‘ಅದಕ್ಕೆ ಮುನಿರತ್ನ ಅವರು ನಾನು ಚಿಕ್ಕವನು, ಇದಕ್ಕೆಲ್ಲ ನನ್ನನ್ನ ಮುಂದೆ ಬಿಡಬೇಡಿ ಎಂದರು. ಇನ್ನೂ ಅನೇಕ ವಿಚಾರಗಳು ಚರ್ಚೆಯಾದವು. ಅದನ್ನೆಲ್ಲಾ ಮಾಧ್ಯಮಗಳಿಗೆ ಹೇಳಲು ಆಗುವುದಿಲ್ಲ, ನಿಮಗೆ ಅದೆಲ್ಲಾ ಅರ್ಥವಾಗಿರುತ್ತದೆ. ಕಾಲಿಗೆ ಬೀಳುವುದೆಲ್ಲ ಇಟ್ಟುಕೊಳ್ಳಬೇಡಿ, ಸುಮ್ಮನೆ ಹೊರಡಿ ಎಂದು ಅವರಿಗೆ ಹೇಳಿದೆ’ ಎಂದರು.
ಕಾಮಗಾರಿಗಳ ಪಟ್ಟಿ ತಂದುಕೊಡುವುದಾಗಿ ಮುನಿರತ್ನ ಅವರು ಹೇಳಿರುವ ಬಗ್ಗೆ ಕೇಳಿದಾಗ, “ಯಾವ ಕಾಮಗಾರಿ, ಯಾವುದು ಆದ್ಯತೆಯ ಮೇಲೆ ನಡೆಯಬೇಕು, ಯಾವ ಕೆಲಸ ಎಂದು ಪಟ್ಟಿ ತಂದುಕೊಡಿ ಎಂದು ಹೇಳಿ ಕಳಿಸಿದ್ದೇನೆ” ಎಂದು ಹೇಳಿದರು.