ಸುದ್ದಿಮೂಲ ವಾರ್ತೆ
ಹೊಸಕೋಟೆ,ಅ.4 : ದೇಶದ ಸಮಗ್ರ ಅಭಿವೃದ್ಧಿಗೆ ಪ್ರಾಥಮಿಕ ಹಂತದಲ್ಲಿ ಮಕ್ಕಳಿಗೆ ಗುಣಮಟ್ಟದ ಶಿಕ್ಷಣ ಅತ್ಯಗತ್ಯಎಂದು ಶಾಸಕ ಶರತ್ ಬಚ್ಚೇಗೌಡ ತಿಳಿಸಿದರು.
ಹೊಸಕೋಟೆ ತಾಲೂಕಿನ ನಂದಗುಡಿ ಹೋಬಳಿಯ ತಾವರೆಕೆರೆ ಗ್ರಾ.ಪಂ ವ್ಯಾಪ್ತಿಯ ಯಳಚಹಳ್ಳಿ, ಸಿಬಿ ಕಾಲೊನಿಯಲ್ಲಿ ವೋಲ್ವೋ ಸಂಸ್ಥೆ ಸಹಯೋಗದಲ್ಲಿ ನವೀಕರಣ ಮಾಡಲಾದ ಅಂಗನವಾಡಿ
ಕೇಂದ್ರವನ್ನು ಉದ್ಘಾಟಿಸಿ ಮಾತನಾಡಿದ ಅವರು, ವೋಲ್ವೋ ಸಂಸ್ಥೆ ಸಾಮಾಜಿಕ ಹೊಣೆಗಾರಿಕೆ ಯೋಜನೆಯಡಿ 2 ದಶಕಗಳಿಂದ ತಾವರೆಕೆರೆ ಗ್ರಾ.ಪಂ ವ್ಯಾಪ್ತಿಯಲ್ಲಿ ಶೈಕ್ಷಣಿಕ, ಆರೋಗ್ಯ ಪ್ರಗತಿಗೆ ತನ್ನದೇ ಆದ ಕೊಡುಗೆಯನ್ನು ನೀಡುತ್ತಿದೆ. ಕೊರೊನಾ ಸಂದರ್ಭದಲ್ಲಿ ಬಸ್ಸಿನ ಮೂಲಕ ಹಳ್ಳಿ ಹಳ್ಳಿಗೆ ಹೋಗಿ ಕೊರೊನಾ ನಿಯಂತ್ರಣಕ್ಕೆ ವ್ಯಾಕ್ಸಿನ್ ನೀಡಿ ಅನೇಕರಿಗೆ ದಿನಸಿ ಕಿಟ್ಗಳನ್ನ ಕೊಟ್ಟು ಸಹಕರಿಸಿದ್ದಾರೆ. ಈ ಭಾರಿ ಸುಮಾರು 10 ಲಕ್ಷ ವೆಚ್ಚದಲ್ಲಿ 3 ಅಂಗನವಾಡಿ ಹಾಗೂ ಬೈಲನರಾಸಪುರ ವ್ಯಾಪ್ತಿಯಲ್ಲಿ 15 ಲಕ್ಷ ವೆಚ್ಚದಲ್ಲಿ 2 ಅಂಗನವಾಡಿ ಕೇಂದ್ರಗಳನ್ನು ನವೀಕರಿಸಲಾಗಿದೆ. ಖಾಸಗಿ ಶಾಲೆಯಷ್ಟೇ ಗುಣಮಟ್ಟದಾಗಿ ಅಭಿವೃದ್ಧಿ ಮಾಡಿ ಅಗತ್ಯವಾದ ಎಲ್ಲಾ ಸಲಕರಣೆಗಳನ್ನು ಒದಗಿಸಲಾಗಿದೆ. ಮುಂದಿನ ದಿನಗಳಲ್ಲಿ ತಾವರೆಕೆರೆ ಗ್ರಾಮದ ಶಾಲೆಗಳನ್ನು ಮಾದರಿ ಮಾಡಲು ಸಂಪೂರ್ಣ ಸಿಎಸ್ಆರ್ ಅನುದಾನವನ್ನು ಒದಗಿಸಿಕೊಡಬೇಕು. ತಾಲೂಕಿನ ಅನುಗೊಂಡನಹಳ್ಳಿ ಹೋಬಳಿ ದೇವನಗೊಂಡಿ ಹಾಗೂ ನಂದಗುಡಿ ಗ್ರಾಮದ ಕರ್ನಾಟಕ ಪಬ್ಲಿಕ್ ಶಾಲೆಯನ್ನು ಮಾದರಿ ಶಾಲೆಗಳನ್ನಾಗಿ ಮಾಡಲು ಆಯ್ಕೆ ಮಾಡಿಕೊಂಡಿದ್ದು, ಪ್ರಸಕ್ತ ಸಾಲಿನಲ್ಲಿ ಅಗತ್ಯವಾದ ಎಲ್ಲಾ ಮೂಲಭೂತ ಸೌಕರ್ಯಗಳನ್ನು ಕಲ್ಪಿಸುವ ಕಾರ್ಯ ಮಾಡಲಾಗುವುದು ಎಂದು ಶಾಸಕ ಶರತ್ ಬಚ್ಚೇಗೌಡ ತಿಳಿಸಿದರು.
ವೋಲ್ವೋ ಕಂಪನಿ ವ್ಯವಸ್ಥಾಪಕ ನಿರ್ದೇಶಕ ಕಮಲ್ ಬಾಲಿ ಮಾತನಾಡಿ ಶಿಕ್ಷಣ, ಆರೋಗ್ಯ ದೃಷ್ಟಿಯಿಂದ ವೋಲ್ವೋ ಕಂಪನಿ ಸಿಎಸ್ ಆರ್ ಅನುದಾನವನ್ನು ಸಮರ್ಪಕವಾಗಿ ಸದ್ಬಳಕೆ ಮಾಡುವ ಕಾರ್ಯ ನಿರಂತರವಾಗಿ ಮಾಡಲಾಗುತ್ತಿದೆ. ಯಲಚಹಳ್ಳಿ ಹಾಗೂ ಮಂಚಪಪ್ನಹಳ್ಳಿ ಗ್ರಾಮವನ್ನು ದತ್ತು ಪಡೆದುಕೊಂಡು.
ಮಕ್ಕಳ ಆರೋಗ್ಯ ದೃಷ್ಟಿಯಿಂದ ಶುಚಿತ್ವವಾದ ಶೌಚಲಯ ಕಟ್ಟಿಸಿ ಅಗತ್ಯ ಮೂಲಭೂತ ಸೌಕರ್ಯ ಕಲ್ಪಿಸುವ ಮೂಲಕ ಮಾದರಿ ಗ್ರಾಮ ನಿರ್ಮಾಣ ಮಾಡಲಾಗಿದೆ. ಈಗಾಗಲೇ ಕಂಪ್ಯೂಟರ್ಗಳನ್ನ ಸರ್ಕಾರಿ ಪ್ರೌಢಶಾಲೆಗೆ ನೀಡಿದೆ ಶಿಕ್ಷಕರ ಕೊರತೆ ಕಂಡು ಬಂದರೆ ನಮ್ಮ ಕಂಪನಿಯಿಂದ ಖಾಸಗಿ ಶಿಕ್ಷಕರನ್ನು ಕಳುಹಿಸಿಕೊಡುತ್ತೇವೆ. ಉನ್ನತ ಶಿಕ್ಷಣ ಗ್ರಾಮೀಣ ಮಕ್ಕಳಿಗೆ ದೊರೆಯುವಂತಾಗಬೇಕು ಎಂದರು.
ವೋಲ್ವೋ ಸಿಎಸ್ ಆರ್ ನಿರ್ದೇಶಕ ಜಿ.ವಿ.ರಾವ್, ಎಚ್.ಆರ್.ಗಂಗಾಧರ್,ಜ್ಯೋತಿ, ತಾಪಂ ಮಾಜಿ ಅಧ್ಯಕ್ಷ ಟಿ.ಎಸ್.ರಾಜಶೇಖರ್, ಗ್ರಾಪಂ ಅಧ್ಯಕ್ಷ ರಮೇಶ್, ಮಾಜಿ ಎಪಿಎಂಸಿ ಅಧ್ಯಕ್ಷ ದೇವರಾಜ್, ಉಪಾಧ್ಯಕ್ಷೆ ಅಸ್ಮಾತಾಜ್ಜಿಯಾವುಲ್ಲಾ,ಮಾಜಿ ಅಧ್ಯಕ್ಷರುಗಳಾದ ದಯಾನಂದ್ ಬಾಬು,ಆರ್.ರವಿಕುಮಾರ್, ಬಸವ ಪ್ರಕಾಶ್, ಮಾಜಿ ಉಪಾಧ್ಯಕ್ಷ ಎಸ್.ಸುಧಾಕರ್,ಪಿಡಿಓ ಮುನಿಗಂಗಯ್ಯ ಮಹಿಳಾ ಮತ್ತು ಮಕ್ಕಳ ಕಲ್ಯಾಣ ಉಪನಿರ್ದೇಶಕ ನಟರಾಜು, ತಾಲೂಕು ಅಧಿಕಾರಿ ವಿದ್ಯಾ, ಗ್ರಾ.ಪಂ ಸದಸ್ಯರಾದ ಮಂಜುಳಾ ನಾಗೇಶ್, ಪ್ರಿಯಾಂಕ ಡಿ.ರಮೇಶ್ ಇದ್ದರು.