ಸುದ್ದಿಮೂಲ ವಾರ್ತೆ
ಬೆಂಗಳೂರು, ಏ.8: ವಿಧಾನಸಭಾ ಚುನಾವಣೆಗೆ ಕಾಂಗ್ರೆಸ್ ಅಭ್ಯರ್ಥಿಗಳ ಎರಡನೇ ಪಟ್ಟಿ ಘೋಷಿಸುತ್ತಿದ್ದಂತೆ ಬಂಡಾಯ ತೀವ್ರವಾಗಿದ್ದು, ಚಿತ್ರದುರ್ಗ ಟಿಕೆಟ್ ವಂಚಿತ ರಘು ಆಚಾರ್ ಜೆಡಿಎಸ್ ಸೇರುವ ತೀರ್ಮಾನ ಮಾಡಿದ್ದಾರೆ.
ಕೋಟೆನಾಡು ಚಿತ್ರದುರ್ಗ ಕ್ಷೇತ್ರದಿಂದ ರಘು ಆಚಾರ್ ಕಾಂಗ್ರೆಸ್ ಟಿಕೆಟ್ ಆಕಾಂಕ್ಷಿ ಆಗಿದ್ದರು. ಒಂದು ವೇಳೆ ತಮಗೆ ಟಿಕೆಟ್ ಸಿಗದಿದ್ದರೂ ಸಹ ತಮ್ಮ ಪತ್ನಿಗೆ ಟಿಕೆಟ್ ಕೊಡಿಸುವ ನಿರೀಕ್ಷೆಯಲ್ಲಿ ಇದ್ದರು. ಆದರೆ, ಈ ಕ್ಷೇತ್ರದಿಂದ ಹಿರಿಯ ನಟ ದೊಡ್ಡಣ್ಣ ಅವರ ಅಳಿಯ ಕೆ.ಸಿ. ವೀರೇಂದ್ರ (ಪಪ್ಪಿ) ಅವರಿಗೆ ಕಾಂಗ್ರೆಸ್ ಟಿಕೆಟ್ ನೀಡಿದ್ದು, ಇದರಿಂದ ರಘು ಆಚಾರ್ ಬಂಡಾಯ ಎದ್ದಿದ್ದಾರೆ.
ಎಂಎಲ್ಸಿ ಆಗಿದ್ದ ನನಗೆ ಎರಡನೇ ಬಾರಿಗೆ ಎಂಎಲ್ಸಿ ಆಗುವುದು ಬೇಡ. ವಿಧಾನಸಭಾ ಚುನಾವಣೆಯಲ್ಲಿ ಸ್ಪರ್ಧಿಸು ಎಂದು ಮಾಜಿ ಸಿಎಂ ಸಿದ್ದರಾಮಯ್ಯ, ಕೆಪಿಸಿಸಿ ಅಧ್ಯಕ್ಷ ಡಿ.ಕೆ. ಶಿವಕುಮಾರ್ ಹೇಳಿದ್ದರು. ಆದರೆ, ಈಗ ಟಿಕೆಟ್ ನೀಡದೆ ನಂಬಿಸಿ ಕುತ್ತಿಗೆ ಕುಯ್ದಿದ್ದಾರೆ ಎಂದು ರಘು ಆಚಾರ್ ಆಕ್ರೋಶ ವ್ಯಕ್ತಪಡಿಸದ್ದಾರೆ.
ಕಾಂಗ್ರೆಸ್ ಟಿಕೆಟ್ ಸಿಗದ ಹಿನ್ನೆಲೆಯಲ್ಲಿ ಜೆಡಿಎಸ್ಗೆ ತೆರಳಲು ರಘು ಆಚಾರ್ ನಿರ್ಧರಿಸಿದ್ದು, ಏ.14ರಂದು ಜೆಡಿಎಸ್ ಸೇರುವ ಮೂಲಕ ತೆನೆ ಪಕ್ಷದಿಂದ ಅಭ್ಯರ್ಥಿ ಆಗುವುದಕ್ಕೆ ಸಿದ್ಧತೆ ಮಾಡಿಕೊಂಡಿದ್ದಾರೆ. ಈ ಸಂಬಂಧ ಜೆಡಿಎಸ್ ವಿಧಾನ ಪರಿಷತ್ ಸದಸ್ಯ ಟಿ.ಎ. ಶರವಣ ಅವರೊಂದಿಗೆ ರಘು ಆಚಾರ್ ಮಾತುಕತೆ ನಡೆಸಿದ್ದಾರೆ.
‘ನಾನು ಅಧಿಕಾರದ ಹಿಂದೆ ಹೋದವನಲ್ಲ. ಸ್ವಾಭಿಮಾನಕ್ಕೆ ಚ್ಯುತಿಯುಂಟು ಮಾಡಿದವರಿಗೆ ತಕ್ಕ ಉತ್ತರ ನೀಡಲಿದ್ದೇನೆ. ಪೂರ್ವ ಷರತ್ತು ವಿಧಿಸದೇ ಜೆಡಿಎಸ್ ಸೇರ್ಪಡೆಯಾಗುತ್ತಿದ್ದೇನೆ. ಟಿಕೆಟ್ ವಿಚಾರ ಇನ್ನೂ ತೀರ್ಮಾನವಾಗಿಲ್ಲ. ಪಕ್ಷ ಸೇರ್ಪಡೆಯಾದ ಬಳಿಕ ಇದು ನಿರ್ಧಾರವಾಗಲಿದೆ’ ಎಂದು ಜಿ.ರಘು ಆಚಾರ್ ಶುಕ್ರವಾರ ಪ್ರತಿಕ್ರಿಯೆ ನೀಡಿದ್ದಾರೆ.
ಟಿ.ಎ.ಶರವಣ ಮಾತನಾಡಿ, ‘ವಿಶ್ವಕರ್ಮ ಸಮುದಾಯಕ್ಕೆ ಸೇರಿದ ರಘು ಆಚಾರ್ ಅವರನ್ನು ಕಾಂಗ್ರೆಸ್ ನಿರ್ಲಕ್ಷ್ಯ ಮಾಡಿದೆ. ಈ ಸಮುದಾಯಕ್ಕೆ ರಾಜಕೀಯ ಪ್ರಾತಿನಿಧ್ಯ ಸಿಗುತ್ತಿಲ್ಲ. ಅವರಿಗೆ ಆಗಿರುವ ಅನ್ಯಾಯ ಗಮನಕ್ಕೆ ಬಂದಿದೆ. ಅವರನ್ನು ಪಕ್ಷಕ್ಕೆ ಆಹ್ವಾನಿಸಲು ಮನೆಗೆ ಬಂದಿದ್ದೆ. ಬೇಷರತ್ ಆಗಿ ಜೆಡಿಎಸ್ ಸೇರಲು ಒಪ್ಪಿದ್ದಾರೆ. ಬೆಂಗಳೂರಿನ ಜೆ.ಪಿ.ಭವನದಲ್ಲಿ ಪಕ್ಷ ಸೇರ್ಪಡೆಗೆ ಆಗಲಿದ್ದಾರೆ’ ಎಂದು ಮಾಹಿತಿ ನೀಡಿದರು.