ಬಿ.ವೆಂಕಟ್ಸಿಂಗ್
ಬೆಂಗಳೂರು, ಏ.6: ತೀವ್ರ ಕುತೂಹಲ ಕೆರಳಿಸಿದ್ದ ರಾಜ್ಯ ವಿಧಾನಸಭೆ ಚುನಾವಣೆಗೆ ಕಾಂಗ್ರೆಸ್ ಪಕ್ಷದಿಂದ ಎರಡನೇ ಪಟ್ಟಿ ಬಿಡುಗಡೆಯಾಗಿದ್ದು, ಹಲವು ಆಕಾಂಕ್ಷಿಗಳಿಗೆ ನಿದ್ದೆಗೆಡಿಸಿದೆ.
ನಿರೀಕ್ಷೆಯಂತೆ ಬಸವಕಲ್ಯಾಣ ಕ್ಷೇತ್ರದಿಂದ ಮಾಜಿ ಮುಖ್ಯಮಂತ್ರಿ ಧರ್ಮಸಿಂಗ್ ಅವರ ಎರಡನೇ ಪುತ್ರ ವಿಜಯ್ಸಿಂಗ್ ಅವರಿಗೆ, ಕಲಘಟಗಿಯಿಂದ ಸಿದ್ದರಾಮ್ಯ ಆಪ್ತ ಸಂತೋಷ್ ಲಾಡ್, ಇತ್ತೀಚೆಗೆಷ್ಟೇ ಕಾಂಗ್ರೆಸ್ ಸೇರಿದ ಎನ್.ವೈ. ಗೋಪಾಲಕೃಷ್ಣ ಅವರಿಗೆ ಮೊಳಕಾಲ್ಮೂರಿನಿಂದ, ಬಾಬುರಾವ್ ಚಿಂಚನಸೂರ್ ಅವರಿಗೆ ಗುರಮಿಠಕಲ್ನಿಂದ, ಮಲ್ಲಿಕಾರ್ಜುನ ಖರ್ಗೆ ಆಪ್ತ ಚನ್ನಾರಡ್ಡಿ ತುನ್ನೂರು ಅವರಿಗೆ ಯಾದಗಿರಿ ಕ್ಷೇತ್ರದಿಂದ ಟಿಕೆಟ್ ಘೋಷಿಸಲಾಗಿದೆ.
ಆದರೆ, ಆಫ್ಜಲಪುರ ಕ್ಷೇತ್ರದಿಂದ ತನ್ನ ಬದಲಿಗೆ ತಮ್ಮ ಪುತ್ರನಿಗೆ ಟಿಕೆಟ್ ನೀಡುವಂತೆ ಹಾಲಿ ಶಾಸಕ ಎಂ.ವೈ. ಪಾಟೀಲ್ ಮಾಡಿದ ಮನವಿಯನ್ನು ಪುರಸ್ಕರಿಸ ಹೈಕಮಾಂಡ್ ಪುನಃ ಎಂ.ವೈ. ಪಾಟೀಲ್ ಅವರಿಗೆ ಟಿಕೆಟ್ ನೀಡಿದೆ.
ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ವಿರುದ್ಧ ವಿನಯ್ ಕುಲಕರ್ಣಿ ಅವರನ್ನು ಕಣಕ್ಕಿಳಿಸುವ ನಿರೀಕ್ಷೆ ಹುಸಿಯಾಗಿದ್ದು, ವಿನಯ್ ಕುಲಕರ್ಣಿ ಅವರಿಗೆ ಈ ಹಿಂದೆ ಪ್ರತಿನಿಧಿಸುತ್ತಿದ್ದ ಧಾರವಾಡ ಕ್ಷೇತ್ರದಿಂದಲೇ ಟಿಕೆಟ್ ಘೋಷಣೆ ಮಾಡಲಾಗಿದೆ. ಮಾಜಿ ಸಚಿವ ಪಿ.ಜಿ.ಆರ್. ಸಿಂಧ್ಯ ಅವರನ್ನು ಪದ್ಮನಾಭನಗರದಿಂದ ಕಣಕ್ಕಿಳಿಸಲು ತೀರ್ಮಾನಿಸಲಾಗಿದೆ ಎನ್ನಲಾಗಿತ್ತು. ಆದರೆ, ಆ ಕ್ಷೇತ್ರಕ್ಕೆ ವಿ. ರಘುನಾಥ್ ನಾಯ್ಡು ಅವರನ್ನು ಅಭ್ಯರ್ಥಿ ಎಂದು ಘೋಷಿಸಲಾಗಿದೆ.
ಸಿದ್ದರಾಮಯ್ಯ ಪ್ರಸ್ತುವಾಗಿ ಪ್ರತಿನಿಧಿಸುತ್ತಿದ್ದ ಬಾದಾಮಿ ಕ್ಷೇತ್ರದಿಂದ ಬಿ.ಬಿ. ಚಿಮ್ಮನಕಟ್ಟಿ ಅವರಿಗೆ ಟಿಕೆಟ್ ನೀಡಲಾಗಿದ್ದು, ಚಿತ್ರದುರ್ಗದಿಂದ ರಘು ಆಚಾರ್ ಅವರಿಗೆ ಟಿಕೆಟ್ ನೀಡಲಾಗುತ್ತದೆ ಎಂಬ ಲೆಕ್ಕಾಚಾರಗಳಿದ್ದವು. ಆದರೆ, ಚಿತ್ರನಟ ದೊಡ್ಡಣ್ಣ ಅವರ ಅಳಿಯ ಕೆ.ಸಿ. ವೀರೇಂದ್ರ (ಪಪ್ಪಿ) ಅವರಿಗೆ ಟಿಕೆಟ್ ನೀಡಲಾಗಿದೆ.
ಕಡೂರಿನಿಂದ ವೈಎಸ್ವಿ ದತ್ತಾ ಅವರಿಗೆ ಟಿಕೆಟ್ ಕೈತಪ್ಪಿದ್ದು, ಕೆ.ಎಸ್. ಆನಂದ್ ಅವರಿಗೆ ಟಿಕೆಟ್ ನೀಡಲಾಗಿದೆ. ನಿರೀಕ್ಷೆಯಂತೆ ಗಂಗಾವತಿಯಿಂದ ಇಕ್ಬಾಲ್ ಅನ್ಸಾರಿ ಅವರಿಗೆ ಟಿಕೆಟ್ ನೀಡಲಾಗಿದೆ. ಜೆಡಿಎಸ್ ತೊರೆದು ಕಾಂಗ್ರೆಸ್ ಸೇರಿದ್ದ ಗುಬ್ಬಿ ಮಾಜಿ ಶಾಸಕ ಎಸ್.ಆರ್. ಶ್ರೀನಿವಾಸ್ಗೆ ಅದೇ ಕ್ಷೇತ್ರದಿಂದ ಕಾಂಗ್ರೆಸ್ ಟಿಕೆಟ್ ದಕ್ಕಿದೆ.
ಗುಲ್ಬರ್ಗಾ ದಕ್ಷಿಣ ಕ್ಷೇತ್ರದಿಂದ ಅಲ್ಲಮಪ್ರಭು ಪಾಟೀಲ್ ಅವರಿಗೆ ಟಿಕೆಟ್ ನೀಡಿದ್ದು, ಇನ್ನೂ ಬಾಗಲಕೋಟೆ ಕ್ಷೇತ್ರದಿಂದ ಮಾಜಿ ಸಚಿವ ಎಚ್.ವೈ. ಮೇಟಿ ಅವರಿಗೆ ಟಿಕೆಟ್ ನೀಡಲಾಗಿದೆ. ಗೋಕಾಕ ವಿಧಾನಸಭಾ ಕ್ಷೇತ್ರದಿಂದ ಅಶೋಕ್ ಪೂಜಾರಿಗೆ ಟಿಕೆಟ್ ನೀಡುವ ನಿರೀಕ್ಷೆ ಇತ್ತು. ಆದರೆ, ಪಂಚಮಸಾಲಿ ಸಮುದಾಯದ ಮಹಾಂತೇಷ್ ಕಡಾಡಿ ಅವರಿಗೆ ಟಿಕೆಟ್ ನೀಡುವ ಮೂಲಕ ರಮೇಶ್ ಜಾರಕಿಹೊಳಿ ಅವರಿಗೆ ಸೆಡ್ಡು ಹೊಡೆಯಲು ರಣತಂತ್ರ ರೂಪಿಸಿದೆ.
ರಾಯಚೂರು ಜಿಲ್ಲೆಯ ಬಾಕಿ ಇರುವ ಐದು ವಿಧಾನಸಭಾ ಕ್ಷೇತ್ರಗಳ ಪೈಕಿ ಮಾನ್ವಿ ಮತ್ತು ಸಿಂಧನೂರು ಕ್ಷೇತ್ರದ ಅಭ್ಯರ್ಥಿಗಳ ಹೆಸರು ಪ್ರಕಟಿಸುವ ನಿರೀಕ್ಷೆ ಇತ್ತು. ಆದರೆ, ಎರಡನೇ ಪಟ್ಟಿಯಲ್ಲಿ ರಾಯಚೂರು ಜಿಲ್ಲೆಯ ಯಾವ ಕ್ಷೇತ್ರದಲ್ಲೂ ಅಭ್ಯರ್ಥಿಗಳ ಹೆಸರು ಘೋಷಣೆ ಮಾಡದೆ ಕುತೂಹಲ ಹೆಚ್ಚಿಸಿದ್ದಾರೆ.
ಮೇಲುಕೋಟೆಯಿಂದ ಮಾಜಿ ಶಾಸಕ ಕೆ.ಎಸ್. ಪುಟ್ಟಣ್ಣಯ್ಯ ಅವರ ಪುತ್ರ ದರ್ಶನ್ ಪುಟ್ಟಣ್ಣಯ್ಯ ಅವರಿಗೆ ಕ್ಷೇತ್ರ ಬಿಟ್ಟುಕೊಟ್ಟಿದ್ದು, ಅಲ್ಲಿ ಕಾಂಗ್ರೆಸ್ನಿಂದ ಅಭ್ಯರ್ಥಿ ಘೋಷಣೆ ಮಾಡದೆ ಸರ್ವೋದಯ ಪಕ್ಷಕ್ಕೆ ಬೆಂಬಲಿಸಲು ತೀರ್ಮಾನಿಸಲಾಗಿದೆ.
ಈ ಎಲ್ಲಾ ಬೆಳವಣಿಗೆಗಳ ಮಧ್ಯೆ ಮೂರನೇ ಪಟ್ಟಿ ಅಂತಿಮಗೊಳಿಸಲು ಗುರುವಾರ ಮಧ್ಯಾಹ್ನ ಪುನಃ ಸಭೆ ಸೇರಿ ಒಂದಕ್ಕಿಂತ ಹೆಚ್ಚು ಆಕಾಂಕ್ಷಿಗಳು ಇರುವ ಕ್ಷೇತ್ರಗಳ ಬಗ್ಗೆ ಪುನಃ ಚರ್ಚೆ ನಡೆಸಿ ಪಟ್ಟಿ ಅಂತಿಮಗೊಳಿಸಲಾಗಿದೆ ಎಂದು ಹೇಳಲಾಗುತ್ತಿದೆ. ಆದರೆ, ಅದನ್ನು ಬಿಜೆಪಿ ಮೊದಲ ಪಟ್ಟಿ ಬಿಡುಗಡೆ ನಂತರ ಪ್ರಕಟಿಸುವ ನಿರೀಕ್ಷೆ ಇದೆ ಎಂದು ತಿಳಿದು ಬಂದಿದೆ.
ಅಚ್ಚರಿಯ ಬೆಳವಣಿಗೆಯೊಂದರಲ್ಲಿ ಒಳಮೀಸಲಾತಿ ಹೋರಾಟ ಸಮಿತಿಯ ಮುಖಂಡ, ರಾಯಚೂರಿನ ಅಂಬಣ್ಣ ಅರೋಲಿ ಅವರಿಗೆ ಶಿರಹಟ್ಟಿಯಿಂದ ಟಿಕೆಟ್ ಘೋಷಿಸುವ ಸಾಧ್ಯತೆ ಇದ್ದು, ಮೂರನೇ ಪಟ್ಟಿಯಲ್ಲಿ ಪ್ರಕಟಿಸಲಾಗುತ್ತದೆ ಎಂದು ಹೇಳಲಾಗುತ್ತಿದೆ.
ಲಿಂಗಸೂಗೂರು ವಿಧಾನಸಭಾ ಕ್ಷೇತ್ರದಿಂದ ಡಿ.ಎಸ್. ಹೂಲಗೇರಿ ಅವರಿಗೆ ಟಿಕೆಟ್ ನೀಡಲಾಗುತ್ತದೆ ಎಂದು ಹೇಳಲಾಗುತ್ತಿದೆಯಾದರೂ, ಔರಾದ್ ಕ್ಷೇತ್ರದ ಟಿಕೆಟ್ ಹಂಚಿಕೆಯ ಮೇಲೆ ಇದು ನಿರ್ಧಾರವಾಗುತ್ತದೆ ಎಂದು ಗೊತ್ತಾಗಿದೆ.
ಈಗ ಬಿಡುಗಡೆಯಾದ 42 ಅಭ್ಯರ್ಥಿಗಳ ಹೊರತುಪಡಿಸಿ ಉಳಿದ ಅಭ್ಯರ್ಥಿಗಳ ಪಟ್ಟಿ ಅಂತಿಮಗೊಂಡರೂ, ರಾಹುಲ್ಗಾಂಧಿ ಕರ್ನಾಟಕ ಭೇಟಿ ನಂತರ ಅಥವಾ ನಾಮಪತ್ರ ಸಲ್ಲಿಸುವ ಪ್ರಕ್ರಿಯೆ ಆರಂಭವಾಗುವ ಏಪ್ರಿಲ್ 13ರ ಒಳಗಾಗಿ ಪ್ರಕಟಿಸುವ ಸಾಧ್ಯತೆ ಇದೆ ಎಂದು ತಿಳಿದುಬಂದಿದೆ.
ಕಾಂಗ್ರೆಸ್ ಎರಡನೇ ಪಟ್ಟಿ ವಿವರ:
ನಿಪ್ಪಾಣಿ- ಕಾಕಾ ಸಾಹೇಬ್ ಪಾಟೀಲ್
ಗೋಕಾಕ್ -ಮಹಾಂತೇಶ್ ಕಾಡಡಿ
ಕಿತ್ತೂರು- ಬಾಬಾ ಸಾಹೇಬ್ ಪಾಟೀಲ್
ಸೌದತ್ತಿ ಯಲ್ಲಮ್ಮ- ವಿಶ್ವಾಸ್ ವಸಂತ್ ವೈದ್ಯ
ಮುಧೋಳ (ಎಸ್ಸಿ)- ಆರ್.ಬಿ. ತಿಮ್ಮಾಪುರ
ಬೀಳಗಿ- ಜೆ.ಟಿ ಪಾಟೀಲ್
ಬಾದಾಮಿ -ಭೀಮಸೇನ್ ಬಿ. ಚಿಮ್ಮನಕಟ್ಟಿ
ಬಾಗಲಕೋಟೆ- ಎಚ್.ವೈ. ಮೇಟಿ
ಬಿಜಾಪುರ ನಗರ- ಅಬ್ದುಲ್ ಹಮೀದ್ ಖಾಜಾಸಾಹೇಬ್ ಮುಷ್ರಿಫ್
ನಾಗಠಾಣ (ಎಸ್ಸಿ)- ವಿಠ್ಠಲ್ ಕಟಕದೊಂಡ
ಅಫ್ಜಲ್ಪುರ- ಎಂ.ವೈ. ಪಾಟೀಲ್
ಯಾದಿಗಿರಿ- ಚನ್ನಾರೆಡ್ಡಿ ಪಾಟೀಲ್ ತುನ್ನೂರು
ಗುರುಮಿಠಕಲ್- ಬಾಬುರಾವ್ ಚಿಂಚನಸೂರು
ಗುಲ್ಬರ್ಗಾ ದಕ್ಷಿಣ- ಅಲ್ಲಮಪ್ರಭು ಪಾಟೀಲ್
ಬಸವಕಲ್ಯಾಣ- ವಿಜಯ್ ಧರ್ಮಸಿಂಗ್
ಗಂಗಾವತಿ- ಇಕ್ಬಾಲ್ ಅನ್ಸಾರಿ
ನರಗುಂದ- ಬಿ.ಆರ್. ಯಾವಗಲ್
ಧಾರವಾಡ- ವಿನಯ್ ಕುಲರ್ಣಿ
ಕಲಘಟಗಿ- ಸಂತೋಷ್ ಲಾಡ್
ಸಿರಸಿ- ಭೀಮಣ್ಣ ನಾಯಕ್
ಯಲ್ಲಾಪುರ- ವಿ.ಎಸ್. ಪಾಟೀಲ್
ಕೂಡ್ಲಿಗಿ- ಡಾ.ಶ್ರೀನಿವಾಸ್ ಎನ್.ಟಿ.
ಮೊಳಕಾಲ್ಮೂರು- ಎನ್.ವೈ. ಗೋಪಾಲಕೃಷ್ಣ
ಚಿತ್ರದುರ್ಗ- ಕೆ.ಸಿ. ವಿರೇಂದ್ರ (ಪಪ್ಪಿ)
ಹೊಳಲ್ಕೆರೆ- ಎಚ್. ಆಂಜನೇಯ
ಚನ್ನಗಿರಿ- ಬಸವರಾಜ್. ವಿ
ತೀರ್ಥಹಳ್ಳಿ- ಕಿಮ್ಮನೆ ರತ್ನಾಕರ
ಉಡುಪಿ- ಪ್ರಸಾದ್ ರಾಜ್ ಕಾಂಚನ
ಕಡೂರು- ಆನಂದ್ ಕೆ.ಎಸ್
ತುಮಕೂರು ನಗರ- ಇಕ್ಬಾಲ್ ಅಹಮದ್
ಗುಬ್ಬಿ- ಎಸ್.ಆರ್. ಶ್ರೀನಿವಾಸ್
ಯಲಹಂಕ- ಕೇಶವ ರಾಜಣ್ಣ
ಯಶವಂತಪುರ- ಬಾಲರಾಜ್ ಗೌಡ
ಮಹಾಲಕ್ಷ್ಮೀ ಲೇಔಟ್- ಕೇಶವ ಮೂರ್ತಿ
ಪದ್ಮನಾಭನಗರ- ವಿ. ರಘುನಾಥ್ ನಾಯ್ಡು
ಮೇಲುಕೋಟೆ- ದರ್ಶನ್ ಪುಟ್ಟಣ್ಣಯ್ಯಗೆ ಬೆಂಬಲ
ಮಂಡ್ಯ- ಪಿ.ರವಿಕುಮಾರ್
ಕೆ.ಆರ್. ಪೇಟೆ- ಬಿ.ಎಲ್. ದೇವರಾಜ್
ಬೇಲೂರು- ಬಿ. ಶಿವರಾಮ್
ಮಡಿಕೇರಿ- ಡಾ. ಮಂಥನ್ ಗೌಡ
ಚಾಮುಂಡೇಶ್ವರಿ- ಸಿದ್ದೇಗೌಡ
ಕೊಳ್ಳೆಗಾಲ- ಎ.ಆರ್. ಕೃಷ್ಣಮೂರ್ತಿ