ಸುದ್ದಿಮೂಲ ವಾರ್ತೆ
ಕುಷ್ಟಗಿ,ಜೂ.19: 2019 ರಿಂದ 2020ರ ಜುಲೈ ವರೆಗೆ ಕುಷ್ಟಗಿ ತಾಲೂಕು ದಂಡಾಧಿಕಾರಿಯೊಬ್ಬರು ಯಾರದ್ದೋ ಜಮೀನು ಮತ್ಯಾರದೋ ಹೆಸರಿಗೆ ಕಾನೂನು ಬಾಹೀರವಾಗಿ ಪರಭಾರೆ ಮಾಡಿ ಅಮಾಯಕ ರೈತರಿಗೆ ಅನ್ಯಾಯ ಎಸಗಿರುವುದು ಬೆಳಕಿಗೆ ಬಂದಿದ್ದು, ಲೋಪ ಎಸಗಿದ ಅಧಿಕಾರಿ ವಿರುದ್ಧ ಲೋಕಾಯುಕ್ತರಿಗೆ ದೂರು ನೀಡಲಾಗುತ್ತದೆ ಎಂದು ರೈತ ಸಂಘದ ಪ್ರಮುಖ ನಜೀರಸಾಬ ಮೂಲಿಮನಿ ಅವರು ತಿಳಿಸಿದರು.
ಪಟ್ಟಣದ ಹಳೇ ಪ್ರವಾಸಿ ಮಂದಿರದಲ್ಲಿ ಕರೆದಿದ್ದ ಸುದ್ದಿಗೋಷ್ಠಿಯಲ್ಲಿ ಮಾತನಾಡಿ, ಕುಷ್ಟಗಿ ತಾಲೂಕಿನ ಬಂಡರಗಲ್ ಸೀಮಾ ಸಂ:ನಂ:34/1/3ರಲ್ಲಿ 02-25ಗಂಟೆ ಜಮೀನು ನ್ಯಾಯಾಲಯದ ತಡೆಯಾಜ್ಞೆ ಆದೇಶವಿದ್ದರೂ ಉಲ್ಲಂಘಿಸಿ ಅಮಾಯಕ ರೈತರ ಜಮೀನನ್ನು ಪರಭಾರೆ ಮಾಡಿದ್ದಾರೆ. ಅದನ್ನು ವಿರೋಧಿಸಿ 2017ರಲ್ಲಿ ಜಮೀನಿಗೆ ಸಂಬಂಧಿಸಿದ ಭೀಮನಗೌಡ ಪಾಟೀಲ್ ಕುಟುಂಬ ತಹಸೀಲ್ ಕಾರ್ಯಾಲಯದ ಮುಂದೆ ರೈತ ಸಂಘದ ನೇತೃತ್ವದಲ್ಲಿ ಧರಣಿ ನಡೆಸಿದ್ದರು. ಸ್ಥಳಕ್ಕೆ ಭೇಟಿ ನೀಡಿದ್ದ ಎ.ಡಿ.ಸಿ. ಅವರು ದಾಖಲೆಗಳನ್ನು ಪರಿಶೀಲಿಸಿ ಅಧಿಕಾರಿಗಳು ತಪ್ಪು ಎಸಗಿರುವುದು ಮನಗಂಡು ಸ್ಥಳದಲ್ಲಿಯೇ ಉಪವಿಭಾಗಧಿಕಾರಿ ಅವರಿಗೆ ನ್ಯಾಯಾಲಯದಲ್ಲಿರುವುದರಿಂದ ಯಥಾಸ್ಥಿತಿ ಕಾಪಾಡುವಂತೆ ಆದೇಶಿಸಿದ್ದರು. ಜೊತೆಗೆ 2017 ಆಗಸ್ಟ್ 23ರ ರಂದು ಯಥಾಸ್ಥಿತಿ ಆದೇಶ ಮಾಡಿ ಪಹಣಿ ಕಾಲಂ ನಂ:11ರಲ್ಲಿ ನಮೂದಿಸಿದ್ದರು. ಆದರೆ, 2020ರಲ್ಲಿ ಆಗಿನ ದಂಡಾಧಿಕಾರಿಗಳು, ತಮ್ಮ ಹಿರಿಯ ಅಧಿಕಾರಿಗಳ ಆದೇಶ ಮರೆಮಾಚಿ ಭೂ ಪರಿವರ್ತಿಸಿ, ಕಾರ್ಖಾನೆ ಎಂದು ಆದೇಶ ಮಾಡಿ ರೈತನಿಗೆ ಅನ್ಯಾಯವೆಸಗಿದ್ದಾರೆ.
ಅದೇರೀತಿ ತಾಲೂಕಿನ ಯಲಬುರ್ತಿ ಗ್ರಾಮ ಸರ್ವೆ ನಂ: 1/2ರ 5 ಗುಂಟೆ ಜಮೀನು ಮೂಲ ಮಾಲೀಕರಾದ ಹೊನ್ನೂರಸಾಬ ತಂದೆ ರಾಜೇಸಾಬ ಹಾಲಿ ವಸ್ತಿ ಕೋಳಿಹಾಳ ಇವರಿಗೆ ಸೇರಿದ ಜಮೀನು 2020ರಲ್ಲಿ ತಾಲೂಕಾ ದಂಡಾಧಿಕಾರಿಯಾಗಿದ್ದ ಎಂ.ಸಿದ್ದೇಶ ಎಂಬುವವರು ವಾರಸುದಾರರಲ್ಲದವರ ಹೆಸರಿಗೆ ಜಮೀನು ಪರಭಾರೆ ಮಾಡಿದ್ದಾರೆ. ಪಹಣಿಯಲ್ಲಿ ಹೊನ್ನೂರಸಾಬ ತಂದೆ ದಾದೇಸಾಬ ಎಂದು ಇದ್ದು, ಪೋತಿ ವಿರಾಸತ್ ಮಾಡಿಕೊಂಡವರು ಹೊನ್ನೂರಸಾಬ ತಂದೆ ರಾಜೇಸಾಬ ಎಂದು ಮರಣ ಪತ್ರ ನೀಡಿದ್ದು, ಗ್ರಾಮ ಲೆಕ್ಕಾಧಿಕಾರಿ ಹಾಗೂ ಕಂದಾಯ ನಿರೀಕ್ಷಕರು, ತಮ್ಮ ವರದಿಯಲ್ಲಿ ಮರಣ ಪತ್ರಕ್ಕೂ ಮತ್ತು ಪಹಣಿಯಲ್ಲಿರುವ ಹೆಸರಿಗೆ ಹೊಂದಾಣಿಕೆ ಕಂಡು ಬರದ ಕಾರಣ ತಮ್ಮ ವರದಿಯಲ್ಲಿ ತಿರಸ್ಕಾರ ಮಾಡಿದ್ದರೂ ಈ ವರದಿಯನ್ನು ಲೆಕ್ಕಿಸದೇ ಪೋತಿ ವಿರಾಸತ್ ಮಾಡಿ ಮೂಲ ರೈತನಿಗೆ ತಾಲೂಕು ದಂಡಾಧಿಕಾರಿಯಾಗಿದ್ದ ಸಿದ್ದೇಶ ಅವರು ಅನ್ಯಾಯವೆಸಗಿದ್ದಾರೆ. ಯಾರದ್ದೋ ಜಮೀನು ಮತ್ಯಾರೋ ಹೆಸರಿಗೆ ಪರಾಭಾರೆ ಮಾಡಿದ್ದು ದಾಖಲೆಗಳಿಂದ ಸ್ಪಷ್ಟವಾಗಿ ತಿಳಿದುಬರುತ್ತದೆ.
ತಾಲೂಕಾ ದಂಡಾಧಿಕಾರಿಯಾಗಿ ಎಂ.ಸಿದ್ದೇಶ ಅವರು ಕಾರ್ಯನಿರ್ವಹಿಸಿರುವ 2019ರಿಂದ 2020ರ ಜುಲೈ ವರೆಗಿನ ಅವಧಿಯಲ್ಲಿ ರೈತರಿಗೆ ಅನ್ಯಾಯ ಮಾಡಿರುವಂತಹ ಇನ್ನೂ ಅನೇಕ ಪ್ರಕರಣಗಳು ಜರುಗಿರುವ ಅನುಮಾನವಿದೆ. ಈ ಬಗ್ಗೆ ಈಗಾಗಲೇ ಜಿಲ್ಲಾಧಿಕಾರಿ ಹಾಗೂ ಸಹಾಯಕ ಆಯುಕ್ತರಿಗೆ ಹಾಗೂ ಈಗಿನ ದಂಡಾಧಿಕಾರಿಗಳಿಗೆ ಅರ್ಜಿ ಸಲ್ಲಿಸಿದ್ದರೂ ಸಹ ಈವರೆಗೂ ಯಾವುದೇ ರೀತಿಯ ಕ್ರಮವಾಗಿಲ್ಲ. ಹಾಗಾಗಿ ಪರಭಾರೆಯಾದ ಪ್ರಕರಣಗಳನ್ನು ಜುಲೈ ತಿಂಗಳಲ್ಲಿ ಲೋಕಾಯುಕ್ತರ ತನಿಖೆಗೆ ನೀಡಲಾಗುತ್ತದೆ. ಕುಷ್ಟಗಿ ತಾಲೂಕಿನ ಇನ್ನುಳಿದ ರೈತರಿಗೆ ಇದೇರೀತಿಯ ಅನ್ಯಾಯವಾಗಿದ್ದರೆ ತಮ್ಮ ಗಮನಕ್ಕೆ ದಾಖಲೆ ಸಮೇತ ತಮಗೆ ಮಾಹಿತಿ ನೀಡಿದರೆ ಅಂಥವರಿಗೂ ನ್ಯಾಯ ಕೊಡಿಸಲು ರೈತ ಸಂಘ ಪ್ರಯತ್ನಿಸುತ್ತದೆ ಎಂದು ನಜೀರಸಾಬ ಮೂಲಿಮನಿ ತಿಳಿಸಿದರು.
ಈ ವೇಳೆ ರೈತ ಸಂಘದ ಸದಸ್ಯರಾದ ದೊಡ್ಡಬಸಪ್ಪ ಸಜ್ಜಲಗುಡ್ಡ, ಮಹೆಬೂಬಸಾಬ ಕೋಳಿಹಾಳ, ಸೋಮನಗೌಡ ಬಂಡರಗಲ್, ಹೊನ್ನೂರಸಾಬ ಯಲಬುರ್ತಿ ಇತರರು ಉಪಸ್ಥಿತರಿದ್ದರು.