ಸುದ್ದಿಮೂಲ ವಾರ್ತೆ
ಶಿಡ್ಲಘಟ್ಟ, ಅ. 29 : ಸಾದಲಿ ಹೋಬಳಿಯಲ್ಲಿ ಶಿಡ್ಲಘಟ್ಟದ ಸುತ್ತಮುತ್ತಲಿನ ಗ್ರಾಮಗಳ ರೈತರು ಬೆಳೆದಿರುವ ಮುಸುಕಿನಜೋಳವನ್ನು ಮಾರುಕಟ್ಟೆ ದರಕ್ಕಿಂತಲೂ ಅಧಿಕವಾಗಿ ದರ ನೀಡಲು ಉದ್ಯಮಿ ಶಶಿಕುಮಾರ್ ಅವರು ಮುಂದಾಗಿದ್ದು ರೈತರು ಈ ಸೌಲಭ್ಯವನ್ನು ಸದುಪಯೋಗ ಮಾಡಿಕೊಳ್ಳಬೇಕೆಂದು ಕಾಂಗ್ರೆಸ್ ಮುಖಂಡ ರಾಜೀವ್ ಗೌಡ ಮನವಿ ಮಾಡಿದರು.
ತಾಲ್ಲೂಕಿನ ಸಾದಲಿ ಹೊರವಲಯ ಸಾದಲಮ್ಮ ದೇವಾಲಯದ ಬಳಿ ಪಶು ಆಹಾರ ಘಟಕಕ್ಕೆ ಸಂಬಂಧಿಸಿದ ಸಾದಲಿ ಸುತ್ತಮುತ್ತಲಿನ ಸ್ಥಳೀಯರೊಂದಿಗೆ ಭಾನುವಾರ ಸಮಾಲೋಚನ ಸಭೆ ನಡೆಯಿತು.
ಈ ಸಭೆಯಲ್ಲಿ ಮಾತನಾಡಿದ ಕಾಂಗ್ರೆಸ್ ಮುಖಂಡ ರಾಜೀವ್ ಗೌಡ ಸಾದಲಿ ಪಶು ಆಹಾರ ಘಟಕ ಸುತ್ತಲಿನ ಸ್ಥಳೀಯರನ್ನ ಉದ್ಯೋಗಕ್ಕೆ ತೆಗೆದುಕೊಳ್ಳುತ್ತಿಲ್ಲ ಎಂಬ ಮನವಿ ನನ್ನ ಬಳಿ ಬಂದಿತು ಕೂಡಲೇ ವ್ಯವಸ್ಥಾಪಕ ನಿರ್ದೇಶಕರ ಬಳಿ ಚರ್ಚಿಸಿ ಇವತ್ತು ಸಭೆ ನಡೆಸಲಾಗುತ್ತಿದೆ ಎಂದು ಹೇಳಿದರು.
ಪಶು ಆಹಾರ ಘಟಕ ವ್ಯವಸ್ಥಾಪಕ ನಿರ್ದೇಶಕ ಶಶಿಕುಮಾರ್ ಮಾತನಾಡಿ,ಪಶು ಆಹಾರ ಘಟಕದಲ್ಲಿ ಕೆಲಸ ಮಾಡಲು ಅನುಭವ ಬೇಕಾಗುತ್ತದೆ ಆದ್ದರಿಂದ ಕಡಿಮೆ ಸಂಖ್ಯೆಯಲ್ಲಿ ಸ್ಥಳೀಯರನ್ನು ತೆಗೆದುಕೊಂಡು ಅವರಿಗೆ ತರಬೇತಿ ಕೊಡುವ ಪ್ರಯತ್ನ ಮಾಡುತ್ತಿದ್ದೇನೆ ಹಾಗೂ ಉತ್ಪಾದನೆ ಸಹ ಕಡಿಮೆ ಇರುವುದರಿಂದ ಉತ್ಪಾದನೆ ಹೆಚ್ಚಾದಂತೆ ಉದ್ಯೋಗ ಅವಕಾಶ ಸಹ ಹೆಚ್ಚಾಗುತ್ತದೆ.ಭಾರತದಲ್ಲೆ ಅತಿ ದೊಡ್ಡ ಪಶು ಆಹಾರ ಘಟಕ ಇದಾಗಿದೆ ಪ್ರತಿದಿನ 800 ಟನ್ ಪಶು ಆಹಾರ ತಯಾರು ಮಾಡುವ ಸಾಮರ್ಥ್ಯ ಈ ಘಟಕ ಹೊಂದಿದೆ ಎಂದು ಹೇಳಿದರು.
ತಾಲ್ಲೂಕಿನಲ್ಲಿ ರೈತರ ಬೆಳೆಯುವ ಜೋಳವನ್ನು ನೇರವಾಗಿ ನಮ್ಮ ಬಳಿ ಕೊಡಬಹುದು ಮಾರ್ಕೆಟ್ ದರಕ್ಕಿಂತ 50ರೂ ಅಥವಾ 100 ರೂಗಳು ಹೆಚ್ಚು ಹಣವನ್ನು ಕೊಡುತ್ತೇವೆ ರೈತರು ತಾವು ಬೆಳೆದ ಬೆಳೆಯನ್ನು ನೇರವಾಗಿ ನಮ್ಮ ಘಟಕದ ಬಳಿ ತಂದು ಆಧಾರ್ ಕಾರ್ಡ್ ಮತ್ತು ಬ್ಯಾಂಕ್ ಪುಸ್ತಕ ನೀಡಿದರೆ ಮರುದಿನವೇ ಅವರ ಖಾತೆಗೆ ಹಣ ಜಮಾ ಮಾಡಲಾಗುವುದು ಇದರಿಂದ ರೈತರು ತಾವು ಬೆಳೆದ ಬೆಳೆಯನ್ನು ದೂರ ಹೋಗಿ ಮಾರಬೇಕಾದ ಅವಶ್ಯಕತೆ ಬರುವುದಿಲ್ಲ ಹಾಗು ದಲ್ಲಾಳಿಗಳ ಹಾವಳಿ ನಿಲ್ಲುತ್ತದೆ ಎಂದು ತಿಳಿಸಿದರು.
ಈ ಸಂದರ್ಭದಲ್ಲಿ ಗ್ರಾಮ ಪಂಚಾಯಿತಿ ಮಾಜಿ ಅಧ್ಯಕ್ಷ ಗೋವಿಂದರಾಜು,ಕಾಂಗ್ರೆಸ್ ಮುಖಂಡ ಡಿ.ಬಿ ನಾಗರಾಜ್, ಹನುಮಂತರೆಡ್ಡಿ, ಲಕ್ಮೀಪತಿ, ಮದ್ದರೆಡ್ಡಿ, ಗಂಗಾಧರ, ಕಾಂತರಾಜು,ಶ್ರೀನಿವಾಸರೆಡ್ಡಿ, ಶಿವಪ್ಪ,ರಾಮಕೃಷ್ಣಪ್ಪ,ಕೆ.ವಿ ಕೃಷ್ಣಪ್ಪ,ಓಬಳಪ್ಪ,ಹಾಜರಿದ್ದರು.