ಸುದ್ದಿಮೂಲ ವಾರ್ತೆ ರಾಯಚೂರು, ಫೆ. 15:
ಮಕ್ಕಳಿಗೆ ಶಿಕ್ಷಣ ನೀಡಿ ಅವರಿಗೆ ಉತ್ತಮ ಪ್ರಜೆಗಳನ್ನಾಗಿ ಮಾಡಿದಾಗ ಮಾತ್ರ ಬಂಜಾರ ಸಮಾಜ ಅಭಿವೃದ್ಧಿ ಹೊಂದಲು ಸಾಧ್ಯವಾಗುತ್ತದೆ ಹಾಗೂ ಸಂತ ಸೇವಾಲಾಲ್ ಅವರು ಸಮಾಜಕ್ಕೆ ನೀಡಿದ ತತ್ವಾದರ್ಶ ಅಳವಡಿಸಿಕೊಳ್ಳಬೇಕೆಂದು ರಾಯಚೂರು ಸಹಾಯಕ ಆಯುಕ್ತ ರಜನಿಕಾಂತ ಚೌಹಾಣ್ ಅವರು ಹೇಳಿದರು.
ಅವರು ಬುಧವಾರ ನಗರದ ಕನ್ನಡ ಭವನದಲ್ಲಿ ಜಿಲ್ಲಾಡಳಿತ, ಜಿಲ್ಲಾ ಪಂಚಾಯತ್, ನಗರಸಭೆ ಹಾಗೂ ಕನ್ನಡ ಮತ್ತು ಸಂಸ್ಕೃತಿ ಇಲಾಖೆಯ ವತಿಯಿಂದ ಹಮ್ಮಿಕೊಂಡಿದ್ದ ಸಂತ ಶ್ರೀ ಸೇವಾಲಾಲ್ ಜಯಂತಿ ಆಚರಣೆ ಕಾರ್ಯಕ್ರಮಕ್ಕೆ ಜ್ಯೋತಿ ಬೆಳಗಿಸುವುದರ ಮೂಲಕ ಉದ್ಘಾಟಿಸಿ ಮಾತನಾಡಿದರು.
ಹಿಂದೆ ಬಸವಣ್ಣನವರು ತಮ್ಮ ವಚನಗಳ ಮೂಲಕ ಸಮಾಜಕ್ಕೆ ಸನ್ಮಾರ್ಗ ನೀಡಿದ್ದರು ಅದೇ ರೀತಿ ಸಂತ ಸೇವಾಲಾಲರು ತಮ್ಮ ಮಾತುಗಳ ಮೂಲಕವೇ ಸಮಾಜಕ್ಕೆ ಒಳ್ಳೆಯ ಮಾರ್ಗ ನೀಡಿದವರಾಗಿದ್ದರು. ಅಂತಹ ಮಹಾನ್ ವ್ಯಕ್ತಿಗಳು ಹಾಕಿ ಕೊಟ್ಟ ಮಾರ್ಗದಲ್ಲಿ ಇಂದಿನ ಸಮಾಜ ನಡೆಯಬೇಕು ಎಂದು ತಿಳಿಸಿದರು.
ಹಿಂದಿನ ಕಾಲದಲ್ಲಿ ತಾಂಡಾದ ಜನರು ಗುಡ್ಡಗಾಡುಗಳಲ್ಲಿ ವಾಸಿಸುತ್ತಿದ್ದರು ಆದರೆ ಇದೀಗ ಸರ್ಕಾರ ತಾಂಡಾಗಳ ಅಭಿವೃದ್ಧಿಗಾಗಿ ಸಾಕಷ್ಟು ಯೋಜನೆಗಳನ್ನು ಜಾರಿಗೆ ತಂದಿದ್ದು, ಸಮಾಜದ ಜನರು ಸರ್ಕಾರದಿಂದ ನೀಡಲಾಗಿರುವ ಸೌಲಭ್ಯಗಳನ್ನು ಸದುಪಯೋಗಪಡಿಸಿಕೊಳ್ಳಬೇಕು ಹಾಗೂ ಆರ್ಥಿಕವಾಗಿ, ಸಾಮಾಜಿಕವಾಗಿ ಅಭಿವೃದ್ಧಿ ಹೊಂದಬೇಕು ಎಂದು ತಿಳಿಸಿದರು.
ಶಿಕ್ಷಣ ಎಂಬುವುದು ಪ್ರತಿಯೊಂದು ಮಗುವಿನ ಮೂಲಭೂತ ಹಕ್ಕು ಆದ್ದರಿಂದ ಯಾವುದೇ ಮಗು ಶಿಕ್ಷಣದಿಂದ ವಂಚಿತರಾಗದಂತೆ ನೋಡಿಕೊಳ್ಳುವುದು ಸಮಾಜದ ಪ್ರತಿಯೊಬ್ಬರ ಕರ್ತವ್ಯವಾಗಿದೆ. ಬಂಜಾರ ಸಮಾಜಕ್ಕೆ ಕಠಿಣ ಪರಿಶ್ರಮ ಎಂಬುವುದು ಅಸ್ತ್ರವಿದ್ದಂತೆ. ಬಂಜಾರ ಸಮಾಜವು ಹೆಚ್ಚಾಗಿ ಸೈನ್ಯಕ್ಕೆ ಸೇರುವ ಸಮಾಜವಾಗಿದ್ದು, ದೇಶದ ರಕ್ಷಣೆ ಮಾಡುವ ಅತ್ಯಂತ ಹೆಚ್ಚಿನ ಜವಾಬ್ದಾರಿ ಸಮಾಜಕ್ಕಿದೆ ಎಂದರು.
ಇದೇ ವೇಳೆ ಹನುಮಂತು ಚೌಹಾಣ್ ಉಪನ್ಯಾಸ ನೀಡಿ, ಬಂಜಾರ ಅಥವಾ ತಾಂಡಾ ಸಮುದಾಯವು ತನ್ನದೇ ಆದ ವೇಷ ಭೂಷಣ, ಉಡುಗೆ ತೊಡುಗೆಯಿಂದ ದೇಶದ ಸಂಸ್ಕೃತಿ ಬಿಂಬಿಸುವುದರಲ್ಲಿ ಮುಂಚೂಣಿಯಲ್ಲಿದೆ ಎಂದರು.
ಬುಡಕಟ್ಟು ಜನಾಂಗದವರಾದ ಬಂಜಾರ ಸಮುದಾಯದ ಜನರು ತಮ್ಮ ಧೈರ್ಯ ಸಾಹಸ, ಆತ್ಮಸ್ತೈರ್ಯದಿಂದ ಗುರುತಿಸಲ್ಪಡುತ್ತಾರೆ. ಸಾಂಸ್ಕೃತಿಕ ನೆಲೆಯಲ್ಲಿ ಆಸ್ಮಿತೆ ಗುರುತಿಸಿಕೊಂಡು ದೇಶದ ಸಂಸ್ಕೃತಿ ಕಾಪಾಡುತ್ತಿದ್ದಾರೆ ಎಂದು ತಿಳಿಸಿದರು.
ಈ ಸಂದರ್ಭದಲ್ಲಿ ಕನ್ನಡ ಮತ್ತು ಸಂಸ್ಕೃತಿ ಇಲಾಖೆಯ ಸಹಾಯಕ ನಿರ್ದೇಶಕಿ ಮಂಗಳಾ ನಾಯಕ, ಸಮಾಜದ ಮುಖಂಡರಾದ ದೀಪ್ಲಾ ನಾಯ್ಕ, ಲಚ್ಚಪ್ಪ ನಾಯ್ಕ, ಶಿವಪ್ಪ ನಾಯ್ಕ ಸೇರಿದಂತೆ ಇನ್ನಿತರರು ಉಪಸ್ಥಿತರಿದ್ದರು.
ಸಂತ ಶ್ರೀ ಸೇವಾಲಾಲ್ ಭಾವಚಿತ್ರ ಮೆರವಣಿಗೆ: ಜಿಲ್ಲಾಡಳಿತ, ಜಿಲ್ಲಾ ಪಂಚಾಯತ್, ನಗರಸಭೆ ಹಾಗೂ ಕನ್ನಡ ಮತ್ತು ಸಂಸ್ಕೃತಿ ಇಲಾಖೆಯ ವತಿಯಿಂದ ಹಮ್ಮಿಕೊಂಡಿದ್ದ ಸಂತ ಶ್ರೀ ಸೇವಾಲಾಲ್ ಜಯಂತಿ ಅಂಗವಾಗಿ ನಗರದ ಬಸವೇಶ್ವರ ವೃತ್ತದಲ್ಲಿ ಸಂತ ಶ್ರೀ ಸೇವಾಲಾಲ್ ಭಾವಚಿತ್ರಕ್ಕೆ ಪೂಜೆ ಸಲ್ಲಿಸಿ ನಂತರ ಸಂತ ಶ್ರೀ ಸೇವಾಲಾಲ್ ಭಾವಚಿತ್ರ ನಗರದ ಕನ್ನಡ ಭವನದ ವರೆಗೆ ಮೆರವಣಿಗೆ ಮಾಡಲಾಯಿತು. ಈ ಸಂದರ್ಭದಲ್ಲಿ ಅಪರ ಜಿಲ್ಲಾಧಿಕಾರಿ ರವೀಂದ್ರ ಕರಲಿಂಗಣ್ಣವರ, ಹಂಪಣ್ಣ ಸಜ್ಜನ್, ಕನ್ನಡ ಮತ್ತು ಸಂಸ್ಕೃತಿ ಇಲಾಖೆಯ ಸಹಾಯಕ ನಿರ್ದೇಶಕಿ ಮಂಗಳಾ ನಾಯಕ ಸೇರಿದಂತೆ ಅನೇಕರು ಉಪಸ್ಥಿತರಿದ್ದರು.