ಸುದ್ದಿಮೂಲ ವಾರ್ತೆ
ಬೆಂಗಳೂರು, ಅ. 07 : ರಾಜ್ಯ ಸಾರಿಗೆ ಇಲಾಖೆಯಲ್ಲಿ ಶೀಘ್ರವೇ 13 ಸಾವಿರ ನೌಕರರ ನೇಮಕಾತಿ ನಡೆಯಲಿದೆ ಎಂದು ಸಾರಿಗೆ ಸಚಿವ ರಾಮಲಿಂಗಾ ರೆಡ್ಡಿ ಭರವಸೆ ನೀಡಿದ್ದಾರೆ.
ವಿಧಾನಸೌಧದ ಮುಂಭಾಗದಲ್ಲಿ 100 ಸಾರಿಗೆ ಬಸ್ ಹಾಗೂ 40 ಹೊಸ ನಾನ್ ಎಸಿ ಸ್ಲೀಪರ್ ಪಲ್ಲಕ್ಕಿ ಬಸ್ಗಳಿಗೆ ಚಾಲನೆ ನೀಡಿ ಈ ವಿಷಯ ತಿಳಿಸಿದರು.
ವಿಧಾನ ಸೌಧದ ಮೆಟ್ಟಿಲುಗಳ ಮುಂಭಾಗದಲ್ಲಿ ಸಿಎಂ ಸಿದ್ದರಾಮಯ್ಯ, ಡಿಸಿಎಂ ಡಿ.ಕೆ ಶಿವಕುಮಾರ್, ಸಾರಿಗೆ ಸಚಿವ ರಾಮಲಿಂಗಾರೆಡ್ಡಿ ಅವರು 100 ಸಾರಿಗೆ ಬಸ್, 40 ನಾನ್ ಎಸಿ ಸ್ಲೀಪರ್ ಬಸ್ಗಳಿಗೆ ಹಸಿರು ನಿಶಾನೆ ತೋರಿದರು.
2016ರಲ್ಲಿ ಸಾರಿಗೆ ಇಲಾಖೆಯಲ್ಲಿ ಡ್ರೈವರ್, ಕಂಡಕ್ಟರ್ಗಳ ನೇಮಕಾತಿ ಮಾಡಲಾಗಿತ್ತು. ಈಗ ಮತ್ತೆ ನೇಮಕಾತಿ ಆರಂಭ ಮಾಡಲಾಗಿದೆ. 13 ಸಾವಿರ ನೌಕರರ ನೇಮಕಾತಿ ಮಾಡಲಾಗುತ್ತಿದೆ ಎಂದು ವಿವರಿಸಿದರು. ಕೋವಿಡ್ ಸಮಯದಲ್ಲಿ 2800 ಬಸ್ ಸಂಚಾರ ಕ್ಯಾನ್ಸಲ್ ಮಾಡಲಾಗಿತ್ತು. ಈಗ ಮತ್ತೆ ಆ ಶೆಡ್ಯೂಲ್ ಆರಂಭ ಆಗಿದೆ ಎಂದು ರಾಮಲಿಂಗಾ ರೆಡ್ಡಿ ತಿಳಿಸಿದರು.
ಈಗ ಸಾರಿಗೆ ಇಲಾಖೆಯಲ್ಲಿ 24 ಸಾವಿರ ಬಸ್ ಗಳಿವೆ. ಪ್ರತಿವರ್ಷ 10 ಸಾವಿರ ಬಸ್ ಸ್ಕ್ರ್ಯಾಪ್ ಮಾಡಲಾಗುತ್ತದೆ. ಕಳೆದ ನಾಲ್ಕು ವರ್ಷಗಳಿಂದ ಯಾವುದೇ ಬಸ್ ಖರೀದಿ ಮಾಡಿರಲಿಲ್ಲ. ಈಗ 40 ಹೊಸ ಐಷಾರಾಮಿ ಬಸ್ಗಳನ್ನು ಖರೀದಿ ಮಾಡಲಾಗಿದೆ . 500 ಕೋಟಿ ಬಜೆಟ್ನಲ್ಲಿ ಬಸ್ಗಳ ಖರೀದಿ ಮಾಡುತ್ತಿದ್ದೇವೆ ಎಂದು ವಿವರಿಸಿದರು.
400 ಕಿಲೋಮೀಟರ್ ದೂರ ಇರುವಲ್ಲಿಗೆ ಸ್ಲೀಪರ್ ಬಸ್ ಗಳ ಕಾರ್ಯಾಚರಣೆ ನಡೆಯಲಿದೆ. ನಾನ್ ಏಸಿ ಬಸ್ ಗಳಿಗೆ ಡಿಮ್ಯಾಂಡ್ ಇದೆ. ಲಾಂಗ್ ರೂಟ್ ಬಸ್ ಗಳಲ್ಲಿ ಸಂಚರಿಸುವಾಗ ಆರಾಮು ಇರಬೇಕು ಎಂದು ಜನರು ಬಯಸುತ್ತಿದ್ದಾರೆ. ಅವರ ಬೇಡಿಕೆಯಂತೆ ಪಲ್ಲಕ್ಕಿ ಬಸ್ ಗೆ ಚಾಲನೆ ನೀಡಲಾಗಿದೆ ಎಂದು ರಾಮಲಿಂಗಾ ರೆಡ್ಡಿ ತಿಳಿಸಿದರು.
ದೇಶದಲ್ಲೇ ಹೆಚ್ಚು ಹಾಗೂ ಅತ್ಯುತ್ತಮ ಬಸ್ ಇರುವುದು ನಮ್ಮ ರಾಜ್ಯದಲ್ಲಿ. ನಮ್ಮ ಸೇವೆಯೂ ಅತ್ಯುತ್ತಮವಾಗಿದೆ. ಕೆಎಸ್ಆರ್ಟಿಸಿ ನಿಗಮಕ್ಕೆ 300ಕ್ಕೂ ಹೆಚ್ಚು ಪ್ರಶಸ್ತಿಗಳು ಬಂದಿವೆ. ನಗರ ಸಾರಿಗೆಯಲ್ಲೂ ಬಿಎಂಟಿಸಿ ನಂಬರ್ ಇನ್ ಸ್ಥಾನದಲ್ಲಿದೆ ಎಂದು ಹೆಮ್ಮೆಯಿಂದ ಹೇಳಿದರು.
ಸಿಬ್ಬಂದಿ ಬೆನ್ನುತಟ್ಟಿದ ಸಚಿವರು
ಮಹಿಳೆಯರಿಗೆ ಸರ್ಕಾರಿ ಬಸ್ನಲ್ಲಿ ಉಚಿತವಾಗಿ ಓಡಾಡುವ ಅವಕಾಶ ನೀಡುವ ಶಕ್ತಿ ಯೋಜನೆ ಸಂದರ್ಭದಲ್ಲಿ ವಿರೋಧ ಪಕ್ಷದವರು ಸಾಕಷ್ಟು ಆರೋಪ ಮಾಡಿದ್ದರು. ಆದ್ರೆ ಈ ಆರೋಪಗಳೆಲ್ಲ ಸುಳ್ಳಾಗಿವೆ. 73 ಕೋಟಿ ಮಹಿಳೆಯರು ಇಲ್ಲಿಯವರೆಗೆ ಉಚಿತವಾಗಿ ಪ್ರಯಾಣ ಮಾಡಿದ್ದಾರೆ. ಶಕ್ತಿ ಯೋಜನೆಯ ಸಕ್ಸಸ್ಗೆ ಸಾರಿಗೆ ಸಿಬ್ಬಂದಿಗಳು ಕಾರಣ. ಅವರು ಒತ್ತಡದಲ್ಲೂ ಕೆಲಸ ಮಾಡಿದ್ದಾರೆ ಎಂದು ಬೆನ್ನು ತಟ್ಟಿದರು.
ಪಲ್ಲಕ್ಕಿ ಬಸ್ ವಿಶೇಷತೆ
11.3 ಮೀಟರ್ ಉದ್ದದ ನಾನ್ ಎಸಿ ಬಸ್
ಬಿಎಸ್-6 ತಂತ್ರಜ್ಞಾನದ ಮಾದರಿಯ ಹೆಚ್.ಪಿ ಇಂಜಿನ್
ಹೈಟೆಕ್ ವಿನ್ಯಾಸದ 30 ಸ್ಲೀಪರ್ ಬರ್ತ್ ಸೀಟ್ಗಳು
ಪ್ರತಿ ಸೀಟಿನಲ್ಲಿ ಮೊಬೈಲ್, ಲ್ಯಾಪ್ಟಾಪ್ಗಳ ಚಾರ್ಜಿಂಗ್, ಮೊಬೈಲ್ ಸ್ಟ್ಯಾಂಡ್
ಸೀಟ್ ನಂಬರ್ ಮೇಲೆ ಎಲ್ಇಡಿ ಅಳವಡಿಕೆ
ಓದಲು ಉತ್ತಮ ಬೆಳಕಿನ ಎಲ್.ಇ.ಡಿ ಲೈಟ್ ಅಳವಡಿಕೆ
ಬಸ್ನಲ್ಲಿ ಆಡಿಯೋ ಸ್ವೀಕರ್ಗಳ ಮೂಲಕ ಜನರಿಗೆ ಮಾಹಿತಿ ನೀಡುವ ವ್ಯವಸ್ಥೆ
ಡಿಜಿಟಲ್ ಗಡಿಯಾರ, ಎಲ್.ಇ.ಡಿ. ಫ್ಲೋರ್ ಪ್ರಯಾಣಿಕರಿಗೆ ಚಪ್ಪಲಿ ಇಡಲು ವ್ಯವಸ್ಥೆ ಪ್ರಯಾಣಿಕರಿಗೆ ತಲೆದಿಂಬಿನ ವ್ಯವಸ್ಥೆ
ಚಾಲಕರಿಗೆ ಸಹಾಯವಾಗಲು ಬಸ್ ಹಿಂಭಾಗದಲ್ಲಿ ಹೈಟೆಕ್ ಕ್ಯಾಮೆರಾ ಅಳವಡಿಕೆ 40 ಬಸ್ಗಳ ಪೈಕಿ 30 ಬಸ್ಗಳು ರಾಜ್ಯದೊಳಗೆ ಸಂಚರಿಸಲಿವೆ ಉಳಿದ 10 ಬಸ್ಗಳು ಬೆಂಗಳೂರಿನಿಂದ ಹೊರ ರಾಜ್ಯಗಳಿಗೆ ಸಂಚರಿಸಲಿವೆ ಈ ಬಸ್ ಸೇವೆ ಆರಂಭ ನಾನ್ ಎಸಿ ಬಸ್ಗಳಿಗೆ ಯಾವುದೇ ಹೆಸರಿಟ್ಟು ಬ್ರ್ಯಾಂಡಿಂಗ್ ಮಾಡಿರಲಿಲ್ಲ ಸದ್ಯ ಪಲ್ಲಕ್ಕಿ ಎಂಬ ಬ್ಯಾಂಡ್ ನೇಮ್ ಇಡಲಾಗಿದೆ ಈ ಹೆಸರನ್ನು ಸಚಿವ ರಾಮಲಿಂಗಾರೆಡ್ಡಿ ಸೂಚಿಸಿದ್ದಾರೆ.
ನನ್ನ ಪತ್ನಿಗೂ ಈ ಬಸ್ ವಿಚಾರ ತಿಳಿಸಿ ಮೈಸೂರಿಗೆ ಹೋಗುವಾಗ ಈ ಬಸ್ ನಲ್ಲಿ ಪ್ರಯಾಣ ಮಾಡಿ ನೋಡು ಎಂದು ಹೇಳಿ ಬಂದಿದ್ದೇನೆ.
ಇದನ್ನು ಹೇಳಿದ್ದು ಸ್ವತಃ ಉಪ ಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್
ಹೆಣ್ಣು ಕುಟುಂಬದ ಕಣ್ಣು, ಬೆಲೆ ಏರಿಕೆ ಸಮಸ್ಯೆಗೆ ಪರಿಹಾರ ನೀಡಿ ಮಹಿಳೆಯರಿಗೆ ಆರ್ಥಿಕವಾಗಿ ಶಕ್ತಿ ತುಂಬುವ ಪ್ರಯತ್ನ ನಮ್ಮ ಸರ್ಕಾರ ಮಾಡುತ್ತಿದ್ದೇವೆ. ನಮ್ಮ ಗ್ಯಾರಂಟಿ ಯೋಜನೆಗಳ ಪೈಕಿ ಮೊದಲು ಜಾರಿಗೆ ಬಂದಿದ್ದು ಶಕ್ತಿ ಯೋಜನೆ. ಈ ಯೋಜನೆಯಲ್ಲಿ ಈವರೆಗೂ ಸುಮಾರು 70.73 ಕೋಟಿ ಮಹಿಳೆಯರು ಉಚಿತವಾಗಿ ಬಸ್ ಪ್ರಯಾಣ ಮಾಡಿದ್ದಾರೆ.
ಸಾರಿಗೆ ಸಂಸ್ಥೆಗಳಿಗೆ ಸರ್ಕಾರ ಈ ಮೊತ್ತ ನೀಡಬೇಕಾಗಿದ್ದು. ಸರ್ಕಾರದ ಮೇಲೆ ಹೊರೆ ಇದೆ. ಕಳೆದ ಏಳೆಂಟು ವರ್ಷಗಳಿಂದ ರಾಜ್ಯದ ಬಸ್ ದರದಲ್ಲಿ ಏರಿಕೆ ಮಾಡಿಲ್ಲ. ಸಾರಿಗೆ ಸಂಸ್ಥೆಗಳನ್ನು ವೃತ್ತಿಪರತೆಯಲ್ಲಿ ಮುನ್ನಡೆಸಲು ಬದ್ಧತೆ ಇಲ್ಲದ ಕಾರಣ ಸಂಸ್ಥೆ ಸೋರಗುವಂತಾಗಿದೆ.
ಸರ್ಕಾರಿ ಸಂಸ್ಥೆಯಾಗಿ ಲಾಭ ಮಾಡುವುದರ ಜತೆಗೆ, ಜನರಿಗೂ ಅನುಕೂಲ ಮಾಡಿಕೊಡಬೇಕು. ಈ ಸಂಸ್ಥೆಯ ಕಾರ್ಮಿಕರ ಹಿತವನ್ನು ನಾವು ಕಾಯಬೇಕು. ಹೀಗಾಗಿ ಸಂಸ್ಥೆ ಲಾಭ ಕಾಣುವುದು ಮುಖ್ಯ. ಕಾರ್ಮಿಕರ ಹಿತ ಕಾಯಲು ಅಪಘಾತದಲ್ಲಿ ಮೃತಪಟ್ಟ ಸಾರಿಗೆ ಸಿಬ್ಬಂದಿ ಕುಟುಂಬಕ್ಕೆ 1 ಕೋಟಿ ರೂ.ವರೆಗೂ ವಿಮಾ ಪರಿಹಾರ ನೀಡುವ ವ್ಯವಸ್ಥೆ ಕಲ್ಪಿಸಲಾಗಿದೆ. ಇತರೆ ರಾಜ್ಯದ ಇತರೆ ಸಾರಿಗೆ ಸಂಸ್ಥೆಗಳಿಗೂ ಇದನ್ನು ವಿಸ್ತರಿಸಿ, ಎಲ್ಲ ಸಂಸ್ಥೆಗಳನ್ನು ಸಮಾನವಾಗಿ ನೋಡುವ ಕೆಲಸ ಮಾಡುತ್ತೇವೆ ಎಂದು ಡಿಕೆಶಿ ತಿಳಿಸಿದರು.
ಈ ಹಿಂದೆ ಪಲ್ಲಕ್ಕಿಯನ್ನು ರಾಜ ಮಹಾರಾಜರನ್ನು ಹೊರಲು ಬಳಸಲಾಗುತ್ತಿತ್ತು, ಈಗ ನಮ್ಮ ಮಹಿಳೆಯರು ಹಾಗೂ ಪ್ರಯಾಣಿಕರನ್ನು ಈ ಪಲ್ಲಕ್ಕಿ ಹೊರಲಿದೆ. ಈ ಬಸ್ ಗೆ ಪಲ್ಲಕ್ಕಿ ಎಂದು ಅತ್ಯುತ್ತಮ ಹೆಸರಿಟ್ಟವರಿಗೆ ಪ್ರಮಾಣಪತ್ರ ನೀಡಿ ಗೌರವಿಸಬೇಕು.
ನಾನು ದೆಹಲಿ ಸೇರಿದಂತೆ ಬೇರೆ ರಾಜ್ಯಗಳ ಸಾರಿಗೆ ಸಂಸ್ಥೆಗಳನ್ನು ಭೇಟಿ ಮಾಡಿದಾಗ ಅವರು ಕರ್ನಾಟಕ ಸಾರಿಗೆ ಸಂಸ್ಥೆಗಳ ಬಸ್ ಗಳ ಫೋಟೋಗಳನ್ನೇ ಅವರು ಬಳಸುತ್ತಾರೆ. ನಮ್ಮ ಸಾರಿಗೆ ಸಂಸ್ಥೆಗಳು ದೇಶದಲ್ಲೇ ಅತ್ಯುತ್ತಮ ಸೇವೆ ನೀಡುತ್ತಿರುವ ಸಾರಿಗೆ ಸಂಸ್ಥೆಗಳಾಗಿವೆ. ಹೀಗಾಗಿ ಕೆಎಸ್ ಆರ್ ಟಿಸಿ ಹಾಗೂ ಬಿಎಂಟಿಸಿ ಅಧಿಕಾರಿಗಳು ಹಾಗೂ ಕಾರ್ಮಿಕರಿಗೆ ಅಭಿನಂದನೆಗಳನ್ನು ಸಲ್ಲಿಸಿದರು.