ಸುದ್ದಿಮೂಲ ವಾರ್ತೆ
ತುಮಕೂರು ಅ.30: ಸರ್ಕಾರಿ ನೌಕರರಾದ ನಾವುಗಳು ಸಾರ್ವಜನಿಕರ ಸೇವೆ ಮಾಡಲು ಸರ್ಕಾರಿ ಕೆಲಸಕ್ಕೆ ಸೇರಿದ್ದು, ಅಧಿಕಾರ ಚಲಾಯಿಸಲು ಅಲ್ಲ ಎಂಬುದನ್ನು ಸರ್ಕಾರಿ ಅಧಿಕಾರಿಗಳು, ನೌಕರರು ಅರಿತು ಕರ್ತವ್ಯ ನಿರ್ವಹಿಸಿದಾಗ ಜನಸಾಮಾನ್ಯರ ಬಹುತೇಕ ಕೆಲಸ ಕಾರ್ಯಗಳು ಸುಗಮವಾಗಿ ಸಾಗುತ್ತದೆ ಎಂದು ನ್ಯಾ. ರಾಮಲಿಂಗೇಗೌಡ ಅಭಿಪ್ರಾಯ ವ್ಯಕ್ತಪಡಿಸಿದರು.
ನಗರದ ಕೇಂದ್ರ ಗ್ರಂಥಾಲಯದಲ್ಲಿ ಇಂದು ಭ್ರಷ್ಟಾಚಾರದ ವಿರುದ್ಧ ಜಾಗೃತಿ ಮೂಡಿಸಲು ಏರ್ಪಡಿಸಲಾಗಿದ್ದ “ಜಾಗೃತಿ ಅರಿವು ಸಪ್ತಾಹ ಕಾರ್ಯಕ್ರಮದಲ್ಲಿ ಭಾಗವಹಿಸಿ ಮಾತನಾಡುತ್ತಾ,
ಭ್ರಷ್ಟಾಚಾರ ಸಮಸ್ಯೆಗೆ ಪರಿಹಾರ ನಮ್ಮಲ್ಲಿಯೇ ಇದೆ. ಸರ್ಕಾರಿ ನೌಕರರುಗಳಾದ ನಾವು ಭ್ರಷ್ಟಾಚಾರ ಮಾಡುವುದಿಲ್ಲ ಎಂಬ ಗಟ್ಟಿ ನಿರ್ಧಾರ ಮಾಡಿದಲ್ಲಿ ಈ ಸಮಸ್ಯೆ ನಿರ್ಮೂಲನೆಯಾಗಲಿದೆ. ಭ್ರಷ್ಟಾಚಾರ ಇಲ್ಲದೆ ಜನರ ಸೇವೆಗಳನ್ನು ಮಾಡಿಕೊಟ್ಟಲ್ಲಿ ಜನರು ಆಶೀರ್ವಾದ ಮಾಡುತ್ತಾರೆ ಎಂದು ತಿಳಿಸಿದರು.
ಲಂಚವೆಂಬ ಹರ್ಷದ ಕೂಳಿಗೆ ಆಸೆಪಟ್ಟಲ್ಲಿ ಸರ್ಕಾರಿ ನೌಕರಿ ಎಂಬ ವರ್ಷದ ಕೂಳು ಕಳೆದುಕೊಳ್ಳಬೇಕಾಗುತ್ತದೆ. ಆದುದರಿಂದ ಸದೃಢ ಸಮಾಜ ನಿರ್ಮಾಣ ಮಾಡಲು ಸರ್ಕಾರಿ ನೌಕರರಾದ ನಾವು ನಮ್ಮ ಹಂತದಲ್ಲಿಯೇ ಭ್ರಷ್ಟಾಚಾರಕ್ಕೆ ಒಳಗಾಗುವುದಿಲ್ಲವೆಂಬ ಗಟ್ಟಿ ನಿರ್ಧಾರ ತೆಗೆದುಕೊಳ್ಳಬೇಕು ಎಂದು ಕರೆ ನೀಡಿದರು.
ಕರ್ನಾಟಕ ಲೋಕಾಯುಕ್ತ ಪೊಲೀಸ್ ಅಧೀಕ್ಷಕರಾದ ವಲೀಬಾಷಾ ಅವರು ಮಾತನಾಡಿ, ಭ್ರಷ್ಟಾಚಾರ ಸಮಾಜಕ್ಕೆ ಹಾನಿಯುಂಟು ಮಾಡುತ್ತದೆ. ಈ ಅನಿಷ್ಟ ಪಿಡುಗಿಗೆ ಕಡಿವಾಣ ಹಾಕುವ ಅವಶ್ಯಕತೆ ಇದೆ.
ಜನರ ಭಾಗವಹಿಸುವಿಕೆ ಹೆಚ್ಚಿರುವಂತಹ ಇಲಾಖೆಗಳಿಗೆ ಸಂಬಂಧಿಸಿದಂತೆ ಕೆಲಸ ಆಗುವುದಿಲ್ಲವೆಂಬ ಹೆಚ್ಚಿನ ದೂರು ಸಾರ್ವಜನಿಕರಿಂದ ಕೇಳಿ ಬರುತ್ತಿದೆ ಎಂದರು.
ಭ್ರಷ್ಟಾಚಾರದ ವಿರುದ್ಧ ಸಾರ್ವಜನಿಕರಲ್ಲಿ ಮತ್ತು ಅಧಿಕಾರಿಗಳಲ್ಲಿ ಅರಿವು ಮೂಡಿಸುವ ಸಲುವಾಗಿ ನ. 5 ರವರೆಗೆ ಭ್ರಷ್ಟಾಚಾರದ ವಿರುದ್ದದ ಜಾಗೃತಿ ಸಪ್ತಾಹ ಹಮ್ಮಿಕೊಳ್ಳಲಾಗಿದೆ ಎಂದರು.
ಜಿಲ್ಲಾಧಿಕಾರಿ ಕೆ.ಶ್ರೀನಿವಾಸ್ ಮಾತನಾಡಿ, ಕಡಿಮೆ ಸಂಬಳ, ಅತಿ ಬೇಗ ಹಣ ಗಳಿಸುವ ಹಂಬಲ ಇವೆಲ್ಲವೂ ಭ್ರಷ್ಟಾಚಾರಕ್ಕೆ ದಾರಿ ಮಾಡಿಕೊಡುತ್ತವೆ. ಭ್ರಷ್ಟಾಚಾರ ಇಂದಿನ ಪಿಡುಗಲ್ಲ. ಇದು ಬಹಹಿಂದಿನಿಂದಲೂ ಕ್ಯಾನ್ಸರ್ ತರಹ ನಮ್ಮ ಸಮಾಜದಲ್ಲಿ ಬಹಳ ಆಳವಾಗಿ ಬೇರೂರಿ ಆವರಿಸಿದೆ ಎಂದು ತಿಳಿಸಿದರು.
ಕಂದಾಯ ಇಲಾಖೆಯನ್ನು ಡಿಜಿಟಲೀಕರಣ ಮಾಡಲಾಗಿದ್ದು,ಐಪಿಜಿಆರ್ಎಸ್ನಲ್ಲಿ ಸಾರ್ವಜನಿಕರ ಅರ್ಜಿಗಳನ್ನು ಸ್ವೀಕರಿಸಿ ವಿಲೇವಾರಿ ಮಾಡಲಾಗುತ್ತಿದೆ. ಅಂತೆಯೇ ಮುನಿಸಿಪಾಲಿಟಿ ಸಹ ಡಿಜಿಟಲೀಕರಣವಾಗಿದ್ದು, ಎಲ್ಲಾ ದೈನಂದಿಕ ಕಚೇರಿ ಕೆಲಸಗಳು ಪಾರದರ್ಶಕವಾಗಿ ನಡೆಯುತ್ತಿವೆ.
ಜನತಾ ದರ್ಶನ ಕಾರ್ಯಕ್ರಮದಲ್ಲಿ ಸ್ವೀಕರಿಸಿದಂತಹ ಶೇ.80 ಅರ್ಜಿಗಳನ್ನು ವಿಲೇವಾರಿ ಮಾಡಲಾಗಿದೆ ಎಂದರು.
ಪಾಲಿಕೆ ಆಯುಕ್ತೆ ಆಶ್ವಿಜ ಮಾತನಾಡಿ, ದೈನಂದಿನ ಸರ್ಕಾರಿ ಕೆಲಸ ಕಾರ್ಯಗಳ ನಿರ್ವಹಣೆಯಿಂದ ವಿಮುಖರಾಗುವುದನ್ನು ಭ್ರಷ್ಟಾಚಾರ ಎಂದು ಕರೆಯಬಹುದಾಗಿದೆ.
ತಮಗೆ ಬೇಕಾದವರಿಗೆ ಕೆಲಸ ಮಾಡಿಕೊಡುವುದು ಅರ್ಜಿಗಳನ್ನು ವಿಲೇ ಇಡುವುದು, ಸಾರ್ವಜನಿಕರನ್ನು ಅಲೆದಾಡಿಸುವುದೂ ಸಹ ಭ್ರಷ್ಟಾಚಾರದ ವಿವಿಧ ಮುಖಗಳು ಎಂದು ತಿಳಿಸಿದರು.
ಕಾರ್ಯಕ್ರಮದಲ್ಲಿ ಡಿಎಫ್ಒ ಅನುಪಮ, ಹೆಚ್ಚುವರಿ ಪೊಲೀಸ್ ವರಿಷ್ಠಾಧಿಕಾರಿ ಮರಿಯಪ್ಪ,ವಿಶೇಷ ಅಭಿಯೋಜಕರಾದ ಬಸವರಾಜು ಅವರು ಉಪಸ್ಥಿತರಿದ್ದರು.