ಸುದ್ದಿಮೂಲ ವಾರ್ತೆ
ಹೊಸಕೋಟೆ. ಅ.15 : ಆಗಸ್ಟ್ ತಿಂಗಳಲ್ಲಿ ಬೆಲೆ ಗಗನಕ್ಕೇರಿ ದೇಶದಾದ್ಯಂತ ಸದ್ದು ಮಾಡಿದ್ದ ಟೊಮೆಟೊ, ಈಗ ಬೆಲೆ ಕುಸಿತದಿಂದ ತತ್ತರಿಸುತ್ತಿದೆ. 15 ಕೆ.ಜಿ ಬಾಕ್ಸ್ 2,500 ವರೆಗೂ ಮಾರಾಟವಾಗಿತ್ತು. ಬೆಲೆ ಏರಿಕೆಯಿಂದ ಗ್ರಾಹಕರು ಕಣ್ಣೀರು ಸುರಿಸಿದ್ದರು. ಈಗ ಟೊಮೆಟೊ ಬೆಲೆ ಪಾತಾಳಕ್ಕೆ ಕುಸಿದಿರುವುದರಿಂದ ಕಣ್ಣೀರು ಸುರಿಸುವ ಸರದಿ ರೈತರದ್ದಾಗಿದೆ.
ಕಳೆದ ಕೆಲವು ತಿಂಗಳಗಳ ಹಿಂದೆ ಶರವೇಗದಲ್ಲಿ ಟೊಮೆಟೊ ಗಗನಕ್ಕೇರಿ 1ಕೆ.ಜಿ 100 ರಿಂದ150ರೂ ಆಗಿತ್ತು. ಟೊಮೆಟೊ ತೋಟಗಳಲ್ಲಿ ಸಿಸಿ ಕ್ಯಾಮೆರಾಗಳನ್ನು ಅಳವಡಿಸಿದ್ದರು. ರಾತ್ರಿ ವೇಳೆ ಕಳ್ಳರು ತೋಟಗಳಿಗೆ ನುಗ್ಗಿ ಟೊಮೆಟೊ ಕಳವು ಮಾಡುತ್ತಿದ್ದರು. ಇಂತಹ ಬಂಪರ್ ಬೆಲೆ ಧಿಡೀರ್ಕುಸಿತವಾಗಿದೆ.
ಈಗ ಕೆಜಿಗೆ 5.ರೂಗಳಿಗೂ ಕೇಳುವವರಿಲ್ಲ. ಬೆಳೆ ಬೆಳೆದ ರೈತ ತಲೆ ಮೇಲೆ ಕೈ ಇಟ್ಟಾಂತಗಿದೆ. ಅಕ್ಷರಶಃ ನಿಜವಾದ ಮಾತು. ಟೊಮೆಟೊಗೆ ಬೆಲೆಯಿಲ್ಲದ ಕಾರಣ ರೈತರು ತೋಟಗಳಲ್ಲೇ ಫಸಲನ್ನು ಬಿಟ್ಟು ನಷ್ಟ ಅನುಭವಿಸುವಂತ ಪರಿಸ್ಥಿತಿ ನಿರ್ಮಾಣ ಎದುರಾಗಿದೆ.
ಇನ್ನೇನು ಕೈ ತುಂಬಾ ಹಣ ಸಿಗುತ್ತದೆ. ಅಲ್ಪ ಸ್ವಲ್ಪ ಸಾಲಬಾಧೆಯಿಂದ ಮುಕ್ತಿ ಆಗಬಹುದು ಎಂದು ಆಸೆ ಪಟ್ಟ ರೈತರಿಗೆ ನಿರಾಸೆಯಾಗಿ ಭಾರಿ ಹೊಡೆತ ಬಿದ್ದಿದೆ. ಕೈಗೆ ಬಂದ ತುತ್ತು ಬಾಯಿಗೆ ಬರದಂತಾಗಿದೆ. ಬೆಲೆ ಏರಿಕೆಯಿಂದಾಗಿ ಅನೇಕ ರೈತರು ಟೊಮೆಟೊವನ್ನೇ ಬೆಳೆಯಲು ಪ್ರಾರಂಭಿಸಿದರು ಆದರೆ ಲಕ್ಷಾಂತರ ರೂಪಾಯಿ ಸಾಲ ಮಾಡಿ ಫಸಲು ಬೆಳೆದರೂ ದಿಢೀರ್ ಕುಸಿತಕ್ಕೆ ರೈತರು ಕಂಗಲಾಗಿದ್ದಾರೆ.
ಇದರ ಜೊತೆಗೆ ಕೀಟ ಭಾದೆ ಬೇರೆ ವಕ್ಕರಿಸಿದೆ. ಕೀಟ ಬಾಧೆಯಿಂದಾಗಿ ಹೂವು ಬಿಡುವ ಹೊತ್ತಿನಲ್ಲೇ ಕೆಲವು ಗಿಡಗಳು ಭತ್ತಿ ಹೋಗುತ್ತಿವೆ. ಇದರೆಲ್ಲದರ ಮಧ್ಯೆಯೂ ಗಿಡದಲ್ಲಿರುವ ಹಣ್ಣು ಬಂಪರ್ ಬೆಳೆಯಾಗಿದೆ. ಹೊಸಕೋಟೆ, ನಂದಗುಡಿ ಹೋಬಳಿಯಚಿಕ್ಕ ಕೊರಟಿ, ದೊಡ್ಡ ಕೊರಟಿ, ಕಾರಹಳ್ಳಿ, ವಡ್ಡಹಳ್ಳಿ, ಗಿಡ್ಡನಹಳ್ಳಿ, ಹಳೆ ಊರು,ಗೋವಿಂದನಪುರ, ಶಿವನಾಪುರ ಇನ್ನಿತರ ಸುಮಾರು ಗ್ರಾಮಗಳಲ್ಲಿ ನೂರಾರು ಹೆಕ್ಟೇರುಗಳಲ್ಲಿ ಟೊಮೆಟೊ ಬೆಳೆದು ರೈತರು ತಿಪ್ಪೆ, ಗೊಬ್ಬರ, ಕೋಳಿ ಗೊಬ್ಬರ ಹಾಕಿ ಸ್ಪರ್ಧಾತ್ಮಕವಾಗಿ ಬೆಳೆ ಬೆಳೆದಿದ್ದಾರೆ.
ತೋಟಗಳಲ್ಲಿ ಹಣ್ಣು ನಳ ನಳಿಸುತ್ತಿದೆ. ಒಂದು ಎಕರೆ ಟೊಮೆಟೊ ಬೆಳೆಯಲು ಸುಮಾರು 2 ಲಕ್ಷ ಖರ್ಚು ಬರುತ್ತದೆ ಎನ್ನುತ್ತಾರೆ ರೈತರು. ಹೆಚ್ಚಿನ ಬೆಳೆ, ಉತ್ತಮ ಇಳುವರಿ ಬರುತ್ತಿದ್ದು ಟೊಮೆಟೊ ಮಾರುಕಟ್ಟೆ ದಿನನಿತ್ಯ ತುಂಬಿ ತುಳುಕುತ್ತಿದೆ.
ಮಹಾರಾಷ್ಟ್ರದ ನಾಸಿಕ್, ಔರಂಗಾಬಾದ್, ಮಧ್ಯಪ್ರದೇಶ ರಾಜ್ಯಗಳಲ್ಲೂ ಟೊಮೆಟೊ ಹೆಚ್ಚು ಬಂದಿದೆ. ಹೀಗಾಗಿ, ಟೊಮೆಟೊ ಬೆಲೆ ಕುಸಿತ ಕಂಡಿದೆ ಎನ್ನುವುದು ವ್ಯಾಪಾರಿಗಳ ಅಭಿಪ್ರಾಯ.
ಈಗಿನ ದರ 15 ಕೆಜಿ ಬಾಕ್ಸ್ 50 ರಿಂದ 60 ರೂ.ಗಳಾಗಿದೆ. 2 ಎಕರೆಯಲ್ಲಿ ಟೊಮೊಟೊ ಬೆಳೆಯಲು ಸುಮಾರು 6 ರಿಂದ 8 ಲಕ್ಷ ಖರ್ಚಾಗುತ್ತದೆ. ಹಣ್ಣು ಕೀಳಲು ಒಬ್ಬರಿಗೆ 300 ರಿಂದ 400ರೂಗಳು ಕೂಲಿ ಕೊಡಬೇಕಾಗುತ್ತದೆ. ಬಾಕ್ಸ್ ಒಂದಕ್ಕೆ 15ರೂಪಾಯಿ ಲಗ್ಗೇಜ್ ಕೊಡಬೇಕಾಗುತ್ತದೆ.
ದಳ್ಳಾಳಿಗಳಿಗೆ ಕಮೀಷನ್ ಕೊಡಬೇಕು. ಔಷಧಿಗೆ ಸಾವಿರಾರು ಬಂಡವಾಳ ಹಾಕಬೇಕಾಗುತ್ತದೆ. ಇದೆಲ್ಲಾ ಖರ್ಚು ಹೋಗಿ 10-20ರೂಗಳು ಕೈಗೆ ಸಿಗುತ್ತದೆ. ಹಾಕಿದ ಬಂಡವಾಳವು ಇಲ್ಲ, ಕೂಲಿಯು ಇಲ್ಲದೆ ಹಾಕಿದ ಬಂಡವಾಳಕ್ಕೆ ಬಡ್ಡಿ ಕಟ್ಟದೆ ಸಾಯುವ ಸ್ಥಿತಿ ತಲುಪಿದ್ದೇವೆ ಎಂದು ರೈತರು ತಮ್ಮ ಅಳಲನ್ನು ತೊಡಿಕೊಂಡಿದ್ದಾರೆ.
ಮುಂದಿನ ದಿನಗಳಲ್ಲಿ ಈ ರೀತಿಯಾದರೆ ಟೊಮೊಟೊ ಬೆಳೆ ಬೆಳೆಯುವುದೇ ಬೇಡವೆಂದು ಬೇಸರಮೂಡುತ್ತದೆ.
ಕನಿಷ್ಠ ಮಕ್ಕಳ ವಿದ್ಯಾಭ್ಯಾಸಕ್ಕಾಗಿ ಕುಟುಂಬ ಪೋಷಿಸುವುದಕ್ಕದರೂ ಹಣ ಉಳಿಯದಿದ್ದರೆ ಇಂತಹ ವ್ಯವಸಾಯ ಏಕೆ ಬೇಕೆಂದು ಬೇಸರ ಪಡುವ ಈ ಭಾಗದ ರೈತರದಾಗಿದೆ.
ಸರ್ಕಾರ ರೈತರಿಗೆ ಯಾವುದೆ ಬೆಳೆ ಬೆಳೆಯಲು ಖಾಸಗಿ ಅಥವಾ ಸರ್ಕಾರಿ ನರ್ಸರಿಗಳಲ್ಲಿ ಬೆಳೆಯುವ ಸಸಿಗಳಿಗೆ ಆನ್ಲೈನ್ ಮುಖಾಂತರ ಒಬ್ಬರಿಗೆ ಎಕರೆಗೆ ಇಂತಿಷ್ಟು ಎಂದು ನಿಗಧಿ ಮಾಡಿ ಒಂದು ತೋಟದಲ್ಲಿ ನಾಲ್ಕೈದು ಬೆಳೆ ಬೆಳೆಯಲು ಸರ್ಕಾರ ಆದೇಶಿಸಬೇಕು. ಬೆಳೆ ಬಂದ ನಂತರ ಆನ್ಲೈನ್ ಮುಖಾಂತರ ಬೆಳೆಗಳ ವಿವರಗಳನ್ನ ಪ್ರಸಾರ ಮಾಡಿದರೆ, ಮಾರುಕಟ್ಟೆಯಲ್ಲಿ ವ್ಯಾಪಾರಸ್ಥರು ವ್ಯಾಪಾರ ಕುದರಿಸಬಹುದು. ಬೆಳೆದಂತಹ ಫಸಲನ್ನು ತೆಗೆದುಕೊಳ್ಳಲು ಅನುಕೂಲವಾಗುತ್ತದೆ.
ಒಬ್ಬ ರೈತನೇ ಮೂರು ನಾಲ್ಕು ಒಂದೆ ಬೆಳೆ ಹಾಕಿದರೆ ಬೆಲೆಯಿಲ್ಲದಾಗ ತುಂಬಾ ನಷ್ಟ ಅನುಭವಿಸಬೇಕಾಗುತ್ತದೆ. ಆದ್ದರಿಂದ ನಾನ ರೀತಿಯ ಬೆಳೆ ಹಾಕುವುದರಿಂದ ನಷ್ಟ ಅನುಭವಿಸುವುದು ತಪ್ಪುತ್ತದೆ ಎಂದು ನಂದ ಗುಡಿ ಗ್ರಾಮದರೈತ ಎನ್. ಚೇತನ್ ಕುಮಾರ್ ಹೇಳಿದರು.