ಸುದ್ದಿಮೂಲ ವಾರ್ತೆ
ಶಿವಮೊಗ್ಗ, ಮಾ.25: ರಾಜ್ಯದಲ್ಲಿ ಭಾರಿ ಸಂಚಲನ ಮೂಡಿಸಿದ್ದ ಬ್ರಾಹ್ಮಣ ಮಠಾಧೀಶರೊಬ್ಬರ ಅತ್ಯಾಚಾರ ಆರೋಪ ಪ್ರಕರಣದಲ್ಲಿ ಸರ್ಕಾರದ ಪರವಾಗಿ ಪ್ರಮುಖ ಸಾಕ್ಷಿಯಾಗಿದ್ದ ಯುವಕ ಅಭಿರಾಮ್ ಹೆಗಡೆ (31) ಇಂದು ಅಕಾಲಿಕ ಮರಣಕ್ಕೀಡಾಗಿದ್ದಾರೆ.
ಅಭಿರಾಮ್ ಶಿವಮೊಗ್ಗ ಜಿಲ್ಲೆ ಸಾಗರ ತಾಲ್ಲೂಕಿನ ಪ್ರತಿಷ್ಠಿತ ಕುಟುಂಬದಲ್ಲಿ ಜನಿಸಿದ್ದರು. ಅವರ ತಂದೆ ಅರಣ್ಯ ಇಲಾಖೆಯಲ್ಲಿ ಹಿರಿಯ ಅಧಿಕಾರಿಯಾಗಿದ್ದರು. ಎರಡು ವರ್ಷಗಳ ಹಿಂದೆ ತಂದೆ ನಿಧನರಾಗಿದ್ದರು. ಇದೀಗ ಅಭಿರಾಮ್ ಮೃತಪಟ್ಟಿದ್ದು, ತಾಯಿ ಮತ್ತು ನಾಲ್ವರು ಅಕ್ಕಂದಿರನ್ನು ಅಗಲಿದ್ದಾರೆ.
ಬಾಲ್ಯಾವಸ್ಥೆಯಲ್ಲಿಯೇ ಅಭಿರಾಮ್ ಮಠವೊಂದರಲ್ಲಿ ಸ್ವಾಮೀಜಿಯ ನಿಕಟವರ್ತಿಯಾಗಿ ಸೇವೆ ಸಲ್ಲಿಸುತ್ತಿದ್ದ. ಇದೇ ಸಮಯದಲ್ಲಿ ಸ್ವಾಮೀಜಿಯ ಲೈಂಗಿಕ ಚಟುವಟಿಕೆಗಳನ್ನು ನೋಡಿದ್ದಾಗಿ ನಂತರ ಸರ್ಕಾರದ ಪರವಾಗಿ ನ್ಯಾಯಾಲಯದಲ್ಲಿ ಸಾಕ್ಷಿ ನುಡಿದಿದ್ದ. ಬಾಲ್ಯದಲ್ಲಿಯೇ ಮಠದ ವಾತಾವರಣಗಳಿಂದ ಬೇಸತ್ತು ಮಾನಸಿಕ ಖಿನ್ನತೆಗೆ ಒಳಗಾಗಿ ಈ ಹಿಂದೆ ಆತ್ಮಹತ್ಯೆಗೂ ಪ್ರಯತ್ನ ನಡೆಸಿದ್ದ ಎಂದು ಕುಟುಂಬದ ಮೂಲಗಳು ತಿಳಿಸಿವೆ.
2009ರಲ್ಲಿ ಬೆಳಕಿಗೆ ಬಂದ ಮಠಾಧೀಶರೊಬ್ಬರ ವಿರುದ್ಧ ಅತ್ಯಾಚಾರ ಆರೋಪ ಪ್ರಕರಣ ದಾಖಲಾಗಿ ತನಿಖೆ ಕೈಗೆತ್ತಿಕೊಕೊಂಡಿದ್ದ ಅಂದಿನ ಸಿಐಡಿ (ಅಂದಿನ ಸಿಓಡಿ) ತನಿಖಾಧಿಖಾರಿಗಳಿಗೆ ಅಭಿರಾಮ್ ಹೆಗಡೆ ಪ್ರಮುಖ ಸಾಕ್ಷಿಯನ್ನಾಗಿ ದೋಷಾರೋಪ ಪಟ್ಟಿಯಲ್ಲಿ ನಮೂದಿಸಿದ್ದರು. ಈತ ನ್ಯಾಯಾಧೀಶರ ಮುಂದೆ ನೀಡಿದ ಹೇಳಿಕೆಗಳು ನಂತರ ಮಾಧ್ಯಮಗಳಲ್ಲೂ ಪ್ರಚಾರ ಪಡೆದುಕೊಂಡಿದ್ದವು.