ಸುದ್ದಿಮೂಲ ವಾರ್ತೆ
ಬೆಂಗಳೂರು, ಅ. 19 : ಅನ್ನಭಾಗ್ಯ ಯೋಜನೆಯಡಿ ಪಡಿತರ ವಿತರಣೆ ಮಾಡುತ್ತಿರುವವರಿಗೆ ಕಮೀಷನ್ ಸೌಲಭ್ಯ ಕಲ್ಪಿಸುವಂತೆ ಆಗ್ರಿಹಿಸಿ ರಾಜ್ಯದಾದ್ಯಂತ ನ್ಯಾಯ ಬೆಲೆ ಅಂಗಡಿಗಳನ್ನು ಬಂದ್ ಮಾಡಲಾಗಿತ್ತು.
ಬೆಂಗಳೂರು ನಗರ ಸರ್ಕಾರಿ ಪಡಿತರ ವಿತರಕರ ಹಿತರಕ್ಷಣಾ ಸಂಘದ ಪ್ರತಿನಿಧಿಗಳು ನಗರದ ಕನ್ನಿಂಗ್ ಹ್ಯಾಮ್ ರಸ್ತೆಯ ಆಹಾರ ಮತ್ತು ನಾಗರಿಕ ಸರಬರಾಜು ಇಲಾಖೆಯ ಮುಂಭಾಗ ಪಡಿತರ ವಿತರಕರು ಪ್ರತಿಭಟನೆ ನಡೆಸಿದರು.
ಅನ್ನಭಾಗ್ಯ ಯೋಜನೆಯಡಿ ಐದು ಕೆ.ಜಿ. ಅಕ್ಕಿಗೆ ನೇರ ನಗದು ಸೌಲಭ್ಯ ಕಲ್ಪಿಸುವುದನ್ನು ಕೂಡಲೇ ಕೈಬಿಡಬೇಕು. ಇಲ್ಲವಾದಲ್ಲಿ ಡಿಬಿಟಿ ಮೊತ್ತಕ್ಕೆ ನಮಗೆ ಕಮೀಷನ್ ಭಾಗ್ಯ ಕೋಡಿ ಎಂದು ಆಗ್ರಹಿಸಿದರು.
ಅನ್ನಭಾಗ್ಯ ಯೋಜನೆ ಅಡಿಯಲ್ಲಿ ಹೆಚ್ಚುವರಿ ಐದು ಕೆಜಿ ಅಕ್ಕಿ ನೀಡಲು ಸಾಧ್ಯವಾಗಿಲ್ಲ. ಹೀಗಾಗಿ ಫಲಾನುಭವಿಗಳ ಖಾತೆಗೆ ಐದು ಕೆಜಿ ಅಕ್ಕಿಯ ಹಣವನ್ನು ನೇರ ನಗದು ಪಾವತಿ ಮೂಲಕ ಪಾವತಿ ಮಾಡಲಾಗುತ್ತಿದೆ. ಇದರಿಂದ ಪಡಿತರ ವಿತರಕರಿಗೆ ತೊಂದರೆಯಾಗುತ್ತಿದೆ ಎಂದು ಆಕ್ರೋಶಗೊಂಡಿದ್ದಾರೆ.
ಒಂದೆರೆಡು ತಿಂಗಳು ಅಂತ ಹೇಳಿ ಡಿಬಿಟಿಯನ್ನು ಮುಂದುವರೆಸಿಕೊಂಡು ಬರಲಾಗುತ್ತಿದೆ ಇದರಿಂದ ನಮಗೆ ಅನ್ಯಾಯವಾಗಿದೆ ಎಂದು ಟೀಕಿಸಿದ್ದಾರೆ ಒಂದು ಕೆಜಿ ಅಕ್ಕಿಗೆ ಸರ್ಕಾರ 1.24 ರೂಪಾಯಿ ಕಮಿಷನ್ ನೀಡುತ್ತೆ. ಆದರೆ ಇದೀಗ ಫಲಾನುಭವಿಗಳ ಅಕೌಂಟ್ ಗೆ ನೇರವಾಗಿ ಹಣ ಹಾಕುವುದರಿಂದ ಸರಾಸರಿ ಒಬ್ಬ ಪಡಿತರ ವಿತರಕರಿಗೆ ಸರಾಸರಿ 13 ಸಾವಿರ ರೂಪಾಯಿ ಕೈತಪ್ಪಿ ಹೋಗುತ್ತಿದೆ ಎಂದು ಅಳಲು ತೋಡಿಕೊಂಡಿದ್ದಾರೆ.
ಹೀಗಾಗಿ, ರಾಜ್ಯದ 20,350 ಪಡಿತರ ಅಂಗಡಿಗಳಲ್ಲಿ ರೇಷನ್ ವಿತರಣೆಯನ್ನು ಬಂದ್ ಮಾಡಲಾಗಿದೆ. ಪಡಿತರ ವಿತರಣೆಯನ್ನು ನಂಬಿಕೊಂಡವರಿಗೆ ಸರ್ಕಾರದ ನಡೆಯಿಂದ ಆರ್ಥಿಕ ಸಂಕಷ್ಟ ಎದರಾಗಿದೆ. ಸಮಸ್ಯೆಯ ಕುರಿತು ಸಚಿವರ ಹಾಗೂ ಅಧಿಕಾರಿಗಳ ಗಮನಕ್ಕೆ ತರಲಾಗಿದೆ ಆದರೂ ಏನು ಪ್ರಯೋಜನ ಆಗಿಲ್ಲ ಎಂದು ಜೆ ಟಿ ಕುಮಾರ್ ತಿಳಿಸಿದ್ದಾರೆ.
ಬೆಂಗಳೂರು ನಗರ ಸರ್ಕಾರಿ ಪಡಿತರ ವಿತರಕರ ಹಿತರಕ್ಷಣಾ ಸಂಘದ ಅಧ್ಯಕ್ಷ ಜೆ ಬಿ ಕುಮಾರ್, ಪ್ರಧಾನ ಕಾರ್ಯದರ್ಶಿ ಮಾದಪ್ಪ ಬಿ.ಪಿ ಮತ್ತು ಖಜಾಂಜಿ ರಾಮಯ್ಯ ರಾಜ್ಯ ಪಡಿತರ ವಿತರಕರ ಸಂಘದ ರಾಜ್ಯಾಧ್ಯಕ್ಷ ಜಯಕುಮಾರ್ ಸೇರಿದಂತೆ ನೂರಾರು ಅಂಗಡಿಯ ಮಾಲಿಕರು ಪ್ರತಿಭಟನೆಯಲ್ಲಿ ಭಾಗವಹಿಸಿದ್ದರು.