ಸುದ್ದಿಮೂಲ ವಾರ್ತೆ
ಬೆಂಗಳೂರು,ಆ.23:ಇಡೀ ವಿಶ್ವವೇ ತಿರುಗಿ ನೋಡುವಂತೆ ಮಾಡಿದ ಚಂದ್ರಯಾನ 3 ಯಶಸ್ಸಿಗೆ ಈ ದಿನ ಸಾಕ್ಷಿಯಾಗಿದೆ. ಇದಕ್ಕೆ ನಮ್ಮ ರಾಜ್ಯದ ಯುವಕನ ಶ್ರಮವೂ ಇದೆ. ಮಂಡ್ಯ ಸಂಸದೆ ಸುಮಲತಾ ಅಂಬರೀಶ್ ತಮ್ಮ ಕ್ಷೇತ್ರದ ಯುವಕನ ಬಗ್ಗೆ ಮೆಚ್ಚುಗೆ ವ್ಯಕ್ತಪಡಿಸಿ ಅಭಿನಂದಿಸಿದ್ದಾರೆ.
ಈ ಸಂಬಂಧ ಟ್ವೀಟ್ ಮಾಡಿರೋ ಸುಮಲತಾ ಅಂಬರೀಶ್, ಚಂದ್ರಯಾನ 3 ಯಶಸ್ಸು ಭಾರತೀಯರ ಹೆಮ್ಮೆ. ಇದು ಇತಿಹಾಸದ ಪುಟಗಳಲ್ಲಿ ದಾಖಲಾದ ದಿನ. ಇಂಥದ್ದೊಂದು ಸಾಧನೆಯ ಹಿಂದೆ ವಿಜ್ಞಾನಿಗಳ, ತಂತ್ರಜ್ಞರ ದಣಿವರಿಯದ ಶ್ರಮವಿದೆ. ಕೋಟಿ ಕೋಟಿ ಭಾರತೀಯರ ಪ್ರಾರ್ಥನೆಯ ಫಲವಿದೆ ಎಂದರು.
ಅದರಲ್ಲೂ ನನ್ನ ಕ್ಷೇತ್ರದ ಮಂಡ್ಯ ಜಿಲ್ಲೆಯ ನಾಗಮಂಗಲ ತಾಲ್ಲೂಕಿನ ಅಂಚೆ ಚಿಟ್ಟನಹಳ್ಳಿ ಗ್ರಾಮದ ಯುವಕ ರವಿ .ಪಿ ಗೌಡ ಅವರು ಹಿರಿಯ ವಿಜ್ಞಾನಿಯಾಗಿ ಈ ಸಾಧಕರ ತಂಡದಲ್ಲಿ ಸೇವೆ ಸಲ್ಲಿಸಿರುವುದು ಅತ್ಯಂತ ಅಭಿಮಾನ ತಂದಿದೆ. ಇಸ್ರೋ ಚಂದ್ರಯಾನ 3 ತಂಡಕ್ಕೆ ಹಾಗೂ ಸಾಧನೆಯ ಭಾಗವಾಗಿರುವ ರವಿ.ಪಿ ಗೌಡ ಅವರಿಗೆ ವಿಶೇಷ ಅಭಿನಂದನೆಗಳು ಎಂದಿದ್ದಾರೆ.