ಬೆಂಗಳೂರು, ಜು.28: ರಾಜ್ಯದಲ್ಲಿ ಗಾಂಭೀರ್ಯತೆ ಇಲ್ಲದ ಕಾಂಗ್ರೆಸ್ ಸರಕಾರ ಕಾರ್ಯ ನಿರ್ವಹಿಸುತ್ತಿದೆ. ರಾಜ್ಯ ಸರಕಾರದ ಕಾರ್ಯವೈಖರಿ ಖಂಡನೀಯ ಎಂದು ಬಿಜೆಪಿ ರಾಜ್ಯ ಪ್ರಧಾನ ಕಾರ್ಯದರ್ಶಿ ಮತ್ತು ವಿಧಾನಪರಿಷತ್ ಸದಸ್ಯ ಎನ್.ರವಿಕುಮಾರ್ ಅವರು ತಿಳಿಸಿದರು.
ಮಲ್ಲೇಶ್ವರದ ಬಿಜೆಪಿ ರಾಜ್ಯ ಕಾರ್ಯಾಲಯದಲ್ಲಿ ಇಂದು ಮಾಧ್ಯಮ ಪ್ರತಿನಿಧಿಗಳ ಜೊತೆ ಮಾತನಾಡಿದ ಅವರು, ಉಡುಪಿಯ ಅರೆವೈದ್ಯಕೀಯ ಕಾಲೇಜಿನ ಶೌಚಾಲಯದೊಳಗೆ ವಿಡಿಯೋ ಚಿತ್ರೀಕರಣ ವಿಚಾರ ರಾಜ್ಯಾದ್ಯಂತ, ದೇಶಾದ್ಯಂತ ಸದ್ದು ಮಾಡುತ್ತಿದೆ. ಆದರೆ, ವಿಡಿಯೋ ಮಾಡಿದ ವಿದ್ಯಾರ್ಥಿನಿಯರಾದ ಶಬನಾಜ್, ಅಲಿಫಾ, ಆಲಿಯಾರನ್ನು ಇನ್ನೂ ಬಂಧಿಸಿಲ್ಲ ಎಂದು ಟೀಕಿಸಿದರು.
ಇದು ತಮಾಷೆಯ ವಿಚಾರವಲ್ಲ. ರಾಜ್ಯದ ಮಹಿಳೆಯರ ಸುಕರ್ಷತೆಯ ದೃಷ್ಟಿಯಿಂದ ಈ ಘಟನೆಯನ್ನು ಎನ್ಐಎಗೆ ಕೊಡಿ ಎಂದು ಮುಖ್ಯಮಂತ್ರಿಗಳನ್ನು ಆಗ್ರಹಿಸಿದರು.
ಬೆಡ್ರೂಂ, ಶೌಚಾಲಯ, ಬಾತ್ ರೂಂನಲ್ಲಿ ಯಾರೂ ವಿಡಿಯೋ ಮಾಡುವುದಿಲ್ಲ. ಉಡುಪಿ ಘಟನೆಯ ಆರೋಪಿಗಳನ್ನು ಕರ್ನಾಟಕ ಸರಕಾರ ಯಾಕೆ ಬಂಧಿಸಿಲ್ಲ? ಇದರಲ್ಲೂ ತುಷ್ಟೀಕರಣ ನೀತಿ ಅನುಸರಿಸಲಾಗುತ್ತಿದೆಯೇ ಎಂದು ಮುಖ್ಯಮಂತ್ರಿಗಳನ್ನು ಪ್ರಶ್ನಿಸಿದರು.
ತಮಾಷೆಗಾಗಿ ವಿಡಿಯೋ ಮಾಡಿ ಡಿಲೀಟ್ ಮಾಡಿದ್ದಾರೆ. ಇದು ಮಕ್ಕಳಾಟ ಎಂದು ರಾಜ್ಯದ ಗೃಹ ಸಚಿವರು ಹೇಳಿದ್ದಾರೆ. ಇದು ಮಕ್ಕಳಾಟವೇ? ಹೆದರಿಸುವುದು ಮಕ್ಕಳಾಟವೇ? ಸರಕಾರಕ್ಕೆ ಗಾಂಭೀರ್ಯತೆಯೇ ಇಲ್ಲ ಎಂದು ಆಕ್ಷೇಪಿಸಿದರು. ರಾಜ್ಯದ ಅಭಿವೃದ್ಧಿ, ಮಹಿಳಾ ಸುರಕ್ಷತೆ ಬಗ್ಗೆ ರಾಜ್ಯ ಸರಕಾರಕ್ಕೆ ಗಾಂಭೀರ್ಯತೆ ಇಲ್ಲ ಎಂದು ಟೀಕಿಸಿದರು.
ಸರಕಾರ ತಡಮಾಡದೆ ವಿದ್ಯಾರ್ಥಿನಿಯರು, ಜಾಲದಲ್ಲಿರುವ ಯುವಕರನ್ನು ಬಂಧಿಸಬೇಕು ಎಂದು ವಿನಂತಿಸಿದ ಅವರು, ಸರಕಾರ ನಮ್ಮ ಸಾಮಾಜಿಕ ಜಾಲತಾಣದ ಸಕ್ರಿಯ ಕಾರ್ಯಕರ್ತರನ್ನು ಕೇಸು ಹಾಕುವುದಾಗಿ ಹೆದರಿಸುತ್ತಿದೆ. ಬಂಧಿಸುವುದಾಗಿ ತಿಳಿಸುತ್ತಿದೆ. ಇದೇ ಮಾದರಿಯಲ್ಲಿ ಪೋಸ್ಟ್ ಮಾಡುವ ಕಾಂಗ್ರೆಸ್ಸಿನ ಕಾರ್ಯಕರ್ತರನ್ನೂ ಪ್ರಕರಣ ದಾಖಲಿಸಿ ಬಂಧಿಸಿ ಎಂದು ಆಗ್ರಹಿಸಿದರು. ಕಾನೂನು, ಸಂವಿಧಾನ, ಪೊಲೀಸ್ ಠಾಣೆ ಎಲ್ಲರಿಗೂ ಸಮಾನ ತಾನೇ? ಎಂದು ಕೇಳಿದರು.
ಎಸ್ಸಿ ಮೋರ್ಚಾ ರಾಜ್ಯ ಅಧ್ಯಕ್ಷ ಛಲವಾದಿ ನಾರಾಯಣಸ್ವಾಮಿ, ರಾಜ್ಯ ಮುಖ್ಯ ವಕ್ತಾರ ಎಂ.ಜಿ.ಮಹೇಶ್ ಅವರು ಪತ್ರಿಕಾಗೋಷ್ಠಿಯಲ್ಲಿ ಇದ್ದರು.