ಸುದ್ದಿಮೂಲ ವಾರ್ತೆ
ಹೊಸಕೋಟೆ, ಸೆ. 9 : ಪ್ರತಿಯೊಬ್ಬ ವಿದ್ಯಾರ್ಥಿಯಲ್ಲೂ ಪ್ರತಿಭೆ ಅಡಗಿರುತ್ತದೆ. ಅದನ್ನು ಹೊರತೆಗೆಯುವ ಕೆಲಸ ವಿದ್ಯಾರ್ಥಿಗಳಿಂದಲೇ ಸಾಧ್ಯವಾಗಬೇಕು ಎಂದು ದೇವನಹಳ್ಳಿ ಸರ್ಕಾರಿ ಡಿಗ್ರಿ ಕಾಲೇಜಿನ ಡಾ.ರವಿಕುಮಾರ್ ಹೇಳಿದರು.
ಹೊಸಕೋಟೆ ತಾಲೂಕಿನ ಸೂಲಿಬೆಲೆ ಸರ್ಕಾರಿ ಪ್ರಥಮದರ್ಜೆ ಕಾಲೇಜಿನಲ್ಲಿ ಹಮ್ಮಿಕೊಂಡಿದ್ದ ಕಾಲೇಜು ವಾರ್ಷಿಕೋತ್ಸವ ಹಾಗೂ ಪ್ರತಿಭಾದರ್ಪಣ ಕಾರ್ಯಕ್ರಮದಲ್ಲಿ ಮಾತನಾಡಿದರು.
ಪ್ರತಿಯೊಬ್ಬ ವ್ಯಕ್ತಿಗೂ ಜೀವನದಲ್ಲಿ ಅವಮಾನ ಮತ್ತು ಸನ್ಮಾನ ಇದ್ದೇ ಇರುತ್ತದೆ. ಸ್ಪರ್ಧಾತ್ಮಕಮನೋಭಾವದಿಂದ ಗೆದ್ದಾಗ ಮಾತ್ರ ಸನ್ಮಾನಕ್ಕೆ ಅರ್ಹರಾಗುತ್ತೀರಾ. ವಿದ್ಯಾರ್ಥಿ ದಿಸೆಯಲ್ಲಿ ಸಾಧನೆಯ ಗುರಿ ಮಾತ್ರ ಅವಶ್ಯವಾಗುತ್ತದೆ ಎಂದು ಹೇಳಿದರು.
ಪೋಷಕರು ಮಕ್ಕಳಿಗೆ ಉತ್ತಮ ಗುಣಮಟ್ಟದ ಮೊಬೈಲ್ ಕೊಡಿಸುವ ಮೊದಲು ಉತ್ತಮ ಪುಸ್ತಕಗಳನ್ನು ಕೊಡಿಸಬೇಕು. ಮಕ್ಕಳಿಗೆ ಸಂಸ್ಕಾರ, ಶಿಸ್ತು ಮನೆಯಿಂದಲೇ ಕಲಿಕೆಯಾಗಬೇಕು. ಸಾಮಾಜಿಕ ಕಾಳಜಿ ಚಿಂತನೆಗಳು ಸೇವಾ ಮನೋಭಾವ ಮೂಡಬೇಕು. ಗುರು ಹಿರಿಯರು ತಂದೆ ತಾಯಿಗಳಿಗೆ ಗೌರವಿಸುವ ಗುಣ ಸ್ವಯಂಪ್ರೇರಿತವಾಗಿ ಮೂಡಬೇಕು ಎಂದರು.
ಕಾಲೇಜು ಅಭಿವೃದ್ದಿ ಸಮಿತಿ ಉಪಾಧ್ಯಕ್ಷರಾದ ಬಿ.ಎನ್.ಗೋಪಾಲಗೌಡ ಮಾತನಾಡಿ, ಸರ್ಕಾರಿ ಶಾಲಾ ಕಾಲೇಜುಗಳು ವಿದ್ಯಾರ್ಥಿ ಸ್ನೇಹಿ ಆಲಯಗಳಾಗಬೇಕು. ಸರ್ಕಾರಿ ಶಾಲೆ ಕಾಲೇಜುಗಳ ಬಗ್ಗೆ ಪೋಷಕರು ಮತ್ತು ವಿದ್ಯಾರ್ಥಿಗಳಲ್ಲಿ ಗುಣಮಟ್ಟದ ನಂಬಿಕೆ ವಿಶ್ವಾಸ ಮೂಡಿಸಬೇಕು ಎಂದರು.
ಪ್ರತಿ ರಾಜ್ಯದಲ್ಲಿ ಸ್ಥಳೀಯ ಭಾಷೆ ಇಲ್ಲವೇ ಮಾತೃ ಭಾಷೆ ಕಡ್ಡಾಯ ಭಾಷೆಯಾಗಬೇಕು. ಪ್ರಥಮ ಬಾಷೆಯಾಗಬೇಕು. ಅಧ್ಯಯನದ ಬಾಷೆಯಾಗಬೇಕು. ನಮ್ಮ ಕರ್ನಾಟಕದಲ್ಲಿ ಕನ್ನಡವೇ ಅಗ್ರಗಣ್ಯವಾಗಬೇಕು ಎಂದರು.
ಕ್ರೀಡಾ ಚಟುವಟಿಕೆಗಳು, ಸಾಂಸ್ಕೃತಿಕ ಚಟುವಟಿಕೆಗಳು ಹಾಗೂ ರಾಷ್ಟ್ರೀಯ ಸೇವಾ ಯೋಜನೆಯ ಚಟುವಟಿಕೆಗಳಲ್ಲಿ ಪಾಲ್ಗೊಂಡವರಿಗೆ ಬಹುಮಾನ ಪ್ರಮಾಣಪತ್ರ ವಿತರಣೆ ಮಾಡಲಾಯಿತು.
ಕಾರ್ಯಕ್ರಮದಲ್ಲಿ ಬಿ.ಎನ್.ಗೋಪಾಲಗೌಡರು, ಉಪಾಧ್ಯಕ್ಷರು, ಕಾಲೇಜು ಸಮಿತಿ ಪ್ರಾಂಶುಪಾಲ ಡಾ.ಕೆ.ಮೋಹನ್ಕುಮಾರ್, ಅಭಿವೃದ್ದಿ ಸಮಿತಿ ಸದಸ್ಯರಾಧ ದೇವಿದಾಸ್ ಸುಬ್ರಾಯ್ ಶೇಠ್, ಗ್ರಾ.ಪಂ.ಉಪಾಧ್ಯಕ್ಷೆ ಷಾಜಿಯಾಖಾನಂ ಜಿಯಾವುಲ್ಲಾ,
ರವಿಚಂದ್ರ, ಭಾಗ್ಯಮ್ಮ, ಡಾ.ಸಾಧಿಕ್ಪಾಷ, ಬೆಟ್ಟಹಳ್ಳಿಗೋಪಿನಾಥ್, ಆಧೀಕ್ಷಕ ಮಲ್ಲಯ್ಯ, ಉಪನ್ಯಾಸಕರಾದ ಡಾ.ಅಮೀರ್ಪಾಷ, ಕಲ್ಪನಾ, ಶಶಿಕಲಾ, ಡಾ.ಸಂಗೀತಾ, ಚನ್ನಕೃಷ್ಣ, ವೆಂಕಟರಮಣಪ್ಪ, ಗ್ರಂಥಪಾಲಕ ನರಸಪ್ಪ,ಅರ್ಚನ, ಕೃಷ್ಣಪ್ಪ, ಬಾಲನಾಯ್ಕ್ ಇತರರು ಇದ್ದರು.