ಸುದ್ದಿಮೂಲ ವಾರ್ತೆ
ಬೆಂಗಳೂರು, ಆ.31: ಮಂತ್ರಾಲಯ ಶ್ರೀ ಗುರು ರಾಘವೇಂದ್ರರ 352ನೇ ಆರಾಧನೆಯನ್ನು ಬೆಂಗಳೂರಿನ ವಿವಿಧ ಭಾಗಗಳಲ್ಲಿರುವ ಶ್ರೀ ರಾಘವೇಂದ್ರ ಸ್ವಾಮಿ ದೇವಸ್ಥಾನಗಳಲ್ಲಿ ಆಚರಿಸಲಾಯಿತು.
ಬುಲ್ ಟೆಂಪಲ್ ರಸ್ತೆಯ ನವ ಮಂತ್ರಾಲಯ ಮಂದಿರ, ಮಲ್ಲೇಶ್ವರದ ಶ್ರೀ ರಾಘವೇಂದ್ರ ಸ್ವಾಮಿಗಳ ದೇವಸ್ಥಾನ, ಮಲ್ಲೇಶ್ವರ ಸ್ವಿಮ್ಮಿಂಗ್ ಪೂಲ್ನ ಶ್ರೀ ರಾಘವೇಂದ್ರ ಸೇವಾ ಸಮಿತಿ, ಶೇಷಾದ್ರಿಪುರಂನ ನಂಜನಗೂಡು ಶ್ರೀ ರಾಘವೇಂದ್ರ ಸ್ವಾಮಿಗಳವರ ಮಠ, ರಾಜಕುಮಾರ್ ರಸ್ತೆಯ ಶ್ರೀ ರಾಘವೇಂದ್ರ ಸ್ವಾಮಿ ದೇವಸ್ಥಾನ ಸೇರಿದಂತೆ ನಗರದ ಹಲವೆಡೆ ಸಂಭ್ರಮದಿಂದ ರಾಯರ ಆರಾಧನೆ ಮಾಡಲಾಯಿತು.
ಮೂರು ದಿನಗಳ ಕಾಲ ಮತ್ತು ಕೆಲವು ದೇವಸ್ಥಾನಗಳಲ್ಲಿ ಐದು ದಿನಗಳ ಕಾಲ ವಿವಿಧ ಕಾರ್ಯಕ್ರಮಗಳನ್ನು ಆಯೋಜಿಸಲಾಗಿದೆ.
ರಾಯರ ಆರಾಧನೆ ನಿಮಿತ್ತ ದೇವಸ್ಥಾನಗಳಲ್ಲಿ ವಿಶೇಷ ಅಲಂಕಾರ, ಬೃಂದಾವನಕ್ಕೆ ವಿಶೇಷ ಪೂಜೆಗಳನ್ನು ಆಯೋಜಿಸಲಾಗಿತ್ತು. ವಿದ್ಯುತ್ ದೀಪಾಲಂಕಾರಗಳಿಂದ ದೇವಸ್ಥಾನಗಳು ಕಂಗೊಳಿಸುತ್ತಿವೆ. ದೇವಸ್ಥಾನಗಳಲ್ಲಿ ವಿಶೇಷ ಪೂಜೆ, ದರ್ಶನ ಬಳಿಕ ಪ್ರಸಾದ ವ್ಯವಸ್ಥೆ ಮಾಡಲಾಗಿತ್ತು.
ವಿವಿಧ ದೇವಸ್ಥಾನಗಳಲ್ಲಿ ಸುದ್ದಿಮೂಲ ವಿಶೇಷ ಪುರವಣಿ ಬಿಡುಗಡೆ
ಮಂತ್ರಾಲಯ ರಾಯರ ಆರಾಧನೆ ನಿಮಿತ್ತ ಸುದ್ದಿಮೂಲ ಪತ್ರಿಕೆ ಹೊರತಂದಿರುವ ವಿಶೇಷ ಪುರವಣಿಯನ್ನು ವಿವಿಧ ದೇವಾಲಯಗಳ ಮುಖ್ಯಸ್ಥರು ಬಿಡುಗಡೆ ಮಾಡಿ, ಪತ್ರಿಕೆಗೆ ಶುಭ ಹಾರೈಸಿದರು.
ಮಲ್ಲೇಶ್ವರದ ಶ್ರೀ ರಾಘವೇಂದ್ರ ಸ್ವಾಮಿಗಳ ದೇವಸ್ಥಾನದಲ್ಲಿ ದೇವಾಲಯದ ಮುಖ್ಯಸ್ಥ ಶ್ರೀಕಾಂತ್ ಆಚಾರ್ ವಿಶೇಷ ಪುರವಣಿ ಬಿಡುಗಡೆ ಮಾಡಿ ಹಾರೈಸಿದರು.
ಮಲ್ಲೇಶ್ವರ ಸ್ವಿಮ್ಮಿಂಗ್ ಪೂಲ್ನ ಶ್ರೀ ರಾಘವೇಂದ್ರ ಸೇವಾ ಸಮಿತಿಯ ಮುಖ್ಯಸ್ಥ ಎಚ್. ನರಹರಿರಾವ್, ಸುದ್ದಿಮೂಲ ಪತ್ರಿಗಳನ್ನು ಬಿಡುಗಡೆ ಮಾಡಿ ಸಮಿತಿ ಸದಸ್ಯರಿಗೆ ವಿತರಿಸಿದರು.
ಶೇಷಾದ್ರಿಪುರಂನ ನಂಜನಗೂಡು ಶ್ರೀ ರಾಘವೇಂದ್ರ ಸ್ವಾಮಿಗಳವರ ಮಠದಲ್ಲಿ ವಿಚಾರಣಾಕರ್ತ ಸುಬ್ಬನರಸಿಂಹ (ಸುಬ್ಬಣ್ಣ) ವಿಶೇಷ ಪುರವಣಿ ಬಿಡುಗಡೆ ಮಾಡಿದರು.