ಸುದ್ದಿಮೂಲ ವಾರ್ತೆ
ಕೊಪ್ಪಳ,ಸೆ.2: ಕಲಿಯುಗದ ಕಾಮಧೇನು, ಕಲ್ಪವೃಕ್ಷ ಎಂದು ಕರೆಯುವ ಮಂತ್ರಾಲಯದ ಶ್ರೀರಾಘವೇಂದ್ರ ಸ್ವಾಮಿಗಳ 352 ನೆಯ ಆರಾಧನೆ ನಡೆಯುತ್ತಿದೆ. ಆರಾಧನೆ ಕೇವಲ ಮಂತ್ರಾಲಯದಲ್ಲಿ ಮಾತ್ರ ನಡೆಯದೆ ಕರ್ನಾಟಕದ ಹಲವು ಕಡೆ ಆರಾಧನೆ ನಡೆಯುತ್ತಿದೆ. ಕೊಪ್ಪಳ ನಗರ ಹಾಗು ಜಿಲ್ಲೆಯ ಅಲ್ಲಲ್ಲಿ ಆರಾಧನೆಯ ಹಿನ್ನಲೆಯಲ್ಲಿ ರಥೋತ್ಸವ ನಡೆಯಿತು.
ಕೊಪ್ಪಳ ನಗರದ ಶ್ರೀರಾಘವೇಂದ್ರ ಸ್ವಾಮಿಗಳ ಮಠದಲ್ಲಿ ಮೂರು ದಿನ ರಾಯರ ಆರಾಧನಾ ಮಹೋತ್ಸವ ನಡೆಯಿತು. ಇಂದು ಉತ್ತರರಾಧನೆ. ಈ ಹಿನ್ನೆಲೆಯಲ್ಲಿ ಅದ್ದೂರಿ ರಥೋತ್ಸವ ಜರುಗಿತು.
ಇಂದು ಮುಂಜಾನೆ ರಾಯರ ರಥವನ್ನು ಹೂವಿನಿಂದ ಅಲಂಕಾರ ಮಾಡಿದ್ದು. ಮದ್ಯಾಹ್ನ ವೇಳೆ ಸಾವಿರಾರು ಜನ ಸಮ್ಮುಖದಲ್ಲಿ ತೇರನ್ನು ಎಳೆಯಲಾಯಿತು. ತೇರಿನಲ್ಲಿ ರಾಯರನ್ನು ಪ್ರತಿಷ್ಠಾಪಿಸಿ, ಭಜನೆ, ಕೀರ್ತನೆಗಳನ್ನು ಹಾಡುತ್ತಾ ಸಂಭ್ರಮ ದಿಂದ ರಾಯರ ತೇರನ್ನೆಳೆದರು.
ಇದೇ ವೇಳೆ ಹುಲಿಗಿಯ ಶ್ರೀ ರಾಘವೇಂದ್ರ ಮಠದಲ್ಲಿಯೂ ರಾಯರ ರಥೋತ್ಸವ ಜರುಗಿತು. ರಾಯರನ್ನು ನೆನೆಯುತ್ತಾ ಜನರು ತೇರನ್ನೆಳೆದರು.