ಸುದ್ದಿಮೂಲ ವಾರ್ತೆ
ಬೆಂಗಳೂರು,ಸೆ.29; ಗುತ್ತಿಗೆ ಅವಧಿ ಮುಗಿದ ನಂತರ ನಿವೇಶಗಳಿಗೆ ಶುದ್ಧ ಕ್ರಯಪತ್ರ ಮಾಡಿಕೊಡುವ ವ್ಯವಸ್ಥೆಯನ್ನು ಬೆಂಗಳೂರು ಅಭಿವೃದ್ದಿ ಪ್ರಾಧಿಕಾರ – ಬಿಡಿಎ ಮತ್ತೆ ಜಾರಿಗೆ ತರಬೇಕು ಎಂದು ಕರ್ನಾಟಕ ಪ್ರದೇಶ ಸಾಮಾನ್ಯ ನಾಗರೀಕರ ಧ್ವನಿ ವೇದಿಕೆ ಒತ್ತಾಯಿಸಿದೆ.
ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ವೇದಿಕೆ ರಾಜ್ಯಾಧ್ಯಕ್ಷ ಎಸ್.ಲಕ್ಷ್ಮೀನಾರಾಯಣ, ಬಿಜೆಪಿ ಸರ್ಕಾರದಲ್ಲಿ ಬಿಡಿಎ ಅಧ್ಯಕ್ಷರಾಗಿದ್ದ ಎಸ್.ಆರ್. ವಿಶ್ವನಾಥ್ ಶುದ್ಧಕ್ರಯಪತ್ರ ನೀಡುವುದನ್ನು ರದ್ದುಪಡಿಸಿ ಜನವಿರೋಧಿ ನೀತಿಯನ್ನು ಜಾರಿಗೆ ತಂದಿದ್ದರು. ಇದರ ಪರಿಣಾಮ ಗುತ್ತಿಗೆ ಅವಧಿಗೆ ನಿವೇಶನ ಪಡೆದಿದ್ದವರಿಗೆ ತೀವ್ರ ಸಂಕಷ್ಟ ಎದುರಾಗಿದೆ. ಹಣ ಸುಲಿಗೆ ಮಾಡುವ ಏಕೈಕ ಉದ್ದೇಶದಿಂದ ಇಂತಹ ತೀರ್ಮಾನವನ್ನು ಹಿಂದಿನ ಸರ್ಕಾರ ಮಾಡಿತ್ತು. ಇದರಿಂದ ಬಿಡಿಎ ಗೆ ಭಾರೀ ನಷ್ಟವಾಗುತ್ತಿದ್ದು, ಜನರಿಗೂ ಸಹ ತೊಂದರೆ ಎದುರಾಗಿದೆ ಎಂದು ಹೇಳಿದರು.
ಬಿಜೆಪಿ ಸರ್ಕಾರ ಬರುವವರೆಗೂ ಗುತ್ತಿಗೆ ಅವಧಿಯಲ್ಲಿ ಮಾರಾಟವಾದ ನಿವೇಶನಗಳಿಗೆ ಗುತ್ತಿಗೆ ಅವಧಿ ಮುಗಿದ ನಂತರ ಖರೀದಿದಾರರಿಗೆ ಶುದ್ಧ ಕ್ರಯಪತ್ರವನ್ನು ನೊಂದಣಿ ಮಾಡಿ ಕೊಡುವ ಪ್ರಕ್ರಿಯೆ ನಡೆದುಕೊಂಡು ಬರುತಿತ್ತು. ವಿಶ್ವನಾಥ್ ಅವರು ಅಧ್ಯಕ್ಷರಾಗಿ ಅಧಿಕಾರ ವಹಿಸಿಕೊಂಡ ನಂತರ ಬಿಡಿಎ ಫಲಾನುಭವಿಗಳಿಗೆ ಸಂಕಷ್ಟ ಪ್ರಾರಂಭವಾಯಿತು. ಪ್ರತಿಯೊಂದು ಪ್ರಕರಣಗಳಿಗೂ ತಡೆಯೊಡ್ಡಲು ಪ್ರಾರಂಭಿಸಿದರು. ಅದರಿಂದ ಸಾರ್ವಜನಿಕರಿಗೆ ಹಾಗೂ ಪ್ರಾಧಿಕಾರಕ್ಕೆ ತೊಂದರೆಯಾಗುತ್ತಿದೆ ಎಂದರು.
ಇಂತಹ ಜನವಿರೋಧಿ ನೀತಿಯಿಂದ ಬಿಡಿಎ ಆಡಳಿತ ಯಂತ್ರ ಕುಂಠಿತಗೊಂಡಿದೆ. ಆದಾಯ ಕಡಿಮೆಯಾಗಿದ್ದು, ವಿಶ್ವನಾಥ್ ಅವರು ಖರೀದಿದಾರರಿಂದ ಸುಲಿಗೆ ಮಾಡಲು ಕೈಗೊಂಡ ತೀರ್ಮಾನವನ್ನು ಬಡವರ ಪರ ಕಾಂಗ್ರೆಸ್ ಸರ್ಕಾರ ರದ್ದುಪಡಿಸಬೇಕು. ಖರೀದಿದಾರಿಗೆ ಇಂದಿನ ಎಸ್ ಅರ್ ವ್ಯಾಲ್ಯೂ ಗೆ 5% ದಂಡ ವಿಧಿಸಿ ನೋಂದಣಿ ಮಾಡಿಕೊಡಲು ಬೆಂಗಳೂರು ಅಭಿವೃದ್ಧಿ ಉಸ್ತುವಾರಿ ನೋಡಿಕೊಳ್ಳುತ್ತಿರುವ ಉಪಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಸೂಕ್ತ ಕ್ರಮ ಕೈಗೊಳ್ಳಬೇಕು ಎಂದು ಒತ್ತಾಯಿಸಿದರು.
ಸುದ್ದಿಗೋಷ್ಠಿಯಲ್ಲಿ ವೇದಿಕೆಯ ಉಪಾಧ್ಯಕ್ಷ ರಾಚಪ್ಪಾಜಿ, ಖಜಾಂಚಿ ಶಂಕರ್, ಕಾರ್ಯದರ್ಶಿ ಶಿವಲಿಂಗ ಮತ್ತಿತರರು ಉಪಸ್ಥಿತರಿದ್ದರು.