ಸುದ್ದಿಮೂಲ ವಾರ್ತೆ
ಕೊಪ್ಪಳ,ಮೇ 31: ಇಂದು ತೆರೆ ಕಂಡ ಕೊಪ್ಪಳ ಜಿಲ್ಲಾ ಮಾವು ಮೇಳ-2023ದಲ್ಲಿ ಜಿಲ್ಲೆಯ ವಿವಿಧ ಭಾಗಗಳಿಂದ ಅಂದಾಜು 25 ಸಾವಿರಕ್ಕೂ ಹೆಚ್ಚು ಜನ ಪಾಲ್ಗೊಂಡಿದ್ದು 1.75 ಕೋಟಿ ರೂ.ಗೂ ಹೆಚ್ಚಿನ ವಹಿವಾಟು ನಡೆದಿದ್ದು ಹಿಂದಿನ ಮೇಳಕ್ಕಿಂತಲೂ ಅತ್ಯಂತ ಯಶಸ್ವಿಯಾಗಿದೆ. ಹೆಚ್ಚಿನ ಗ್ರಾಹಕರು ಭಾಗವಹಿಸಿ ಹೆಚ್ಚು ಮಾವುಗಳನ್ನು ಖರೀದಿಸಿ ದಾಖಲೆ ನಿರ್ಮಿಸಿರುತ್ತಾರೆ.
ಮಾವು ಬೆಳೆಯುವ ರೈತರಿಗೆ ನೇರ ಮಾರುಕಟ್ಟೆ ಒದಗಿಸುವ ಉದ್ದೇಶದಿಂದ ಕೊಪ್ಪಳ ಜಿಲ್ಲೆಯ ತೋಟಗಾರಿಕೆ ಇಲಾಖೆಯು ಮೇ 23ರಿಂದ ಮೇ 31ರವರೆಗೆ 09 ದಿನಗಳ ಕಾಲ ತೋಟಗಾರಿಕೆ ಉಪನಿರ್ದೇಶಕರ ಕಚೇರಿ ಆವರಣದಲ್ಲಿ ಆಯೋಜಿಸಿದ್ದ ಮಾವು ಪ್ರದರ್ಶನ ಮತ್ತು ಮಾರಾಟ ಮೇಳವು ಹಿಂದಿನ ಎಲ್ಲಾ ಮೇಳಕ್ಕಿಂತ ಯಶಸ್ವಿಯಾಗಿದ್ದು, ಹೆಚ್ಚಿನ ಹಣ್ಣುಗಳ ಮಾರಾಟವಾಗಿದೆ. 55ಕ್ಕೂ ಹೆಚ್ಚು ರೈತರು ತಮ್ಮ ಹೆಸರನ್ನು ನೋಂದಾಯಿಸಿ ಮೇಳದಲ್ಲಿ ಭಾಗವಹಿಸಿದ್ದರು.
ಮೇಳದಲ್ಲಿ ಮಾವು ಮಾರಾಟ ಮಾಡಲು ರೈತರು ಹಾಗೂ ರೈತ ಉತ್ಪಾದಕ ಸಂಘಗಳು, ಹಾಪ್ಕಾಮ್ಸ್, ಇಲಾಖಾ ತೋಟಗಾರಿಕೆ ಕ್ಷೇತ್ರಗಳಿಗೆ ತಮ್ಮ ಉತ್ಪನವನ್ನು ಮಾರಾಟ ಮಾಡಲು 22 ಮಾರಾಟ ಮಳಿಗೆಗಳನ್ನು ಉಚಿತವಾಗಿ ತೆರೆಯಲಾಗಿತ್ತು. ಮಾವು ಮಾರಾಟ ಮೇಳದಲ್ಲಿ ಜಿಲ್ಲೆಯ ಏಳು ತಾಲೂಕುಗಳ ಮಾವು ಬೆಳೆಗಾರರು ಭಾಗವಹಿಸಿದ್ದು, ರೈತರು ನೈಸರ್ಗಿಕವಾಗಿ ಮತ್ತು ವೈಜ್ಞಾನಿಕವಾಗಿ ಮಾಗಿಸಿದ 15ಕ್ಕೂ ಹೆಚ್ಚಿನ ವಿವಿಧ ಮಾವಿನ ತಳಿಯ ಹಣ್ಣುಗಳನ್ನು ಗ್ರಾಹಕರಿಗೆ ನೇರವಾಗಿ ಮಾರಾಟ ಮಾಡಿದ್ದಾರೆ.
ದಾಖಲೆ ನಿರ್ಮಿಸಿದ ಮಾವು ಮೇಳ: ಈ ಬಾರಿ ಸುಮಾರು 170 ಟನ್ಗೂ ಹೆಚ್ಚಿನ ವಿವಿಧ ತಳಿ ಮಾವಿನ ಹಣ್ಣುಗಳು ಪ್ರತ್ಯಕ್ಷ ಮತ್ತು ಪರೋಕ್ಷವಾಗಿ ಅಂದರೆ ಬೇರೆ ಬೇರೆ ಜಿಲ್ಲೆಗಳಿಗೆ ಸರಕು ವಾಹನಗಳ ಮೂಲಕ, ಬಸ್ಗಳ ಮೂಲಕ ದೂರದೂರಿನ ಜಿಲ್ಲೆಗಳಿಗೂ ತಲುಪಿಸಿ ಮಾರಾಟವಾಗಿದೆ. ಕೊಪ್ಪಳ ಕೇಸರ ತಳಿಗೆ ಕಲ್ಯಾಣ ಕರ್ನಾಟಕ ಅಷ್ಟೇ ಅಲ್ಲದೇ ರಾಜ್ಯದ ಉದ್ದಗಲಕ್ಕೂ ಬೇಡಿಕೆ ಬಂದಿದ್ದು ನೂರಾರು ಕೆಜಿ ಹಣ್ಣುಗಳನ್ನು ದೆಹಲಿಯಲ್ಲಿರುವ ಗ್ರಾಹಕರಿಗೂ ತಲುಪಿಸಲಾಗಿದೆ.
ಹೊರ ಜಿಲ್ಲೆಯ ರೈತರ ಭೇಟಿ, ಮಾಹಿತಿ: ಈ ಮೇಳದಲ್ಲಿ ಬಳ್ಳಾರಿ ಮತ್ತು ವಿಜಯನಗರ ಹಾಗೂ ವಿವಿಧ ಹೊರ ಜಿಲ್ಲೆಯ ಮಾವು ಬೆಳೆಯುವ ರೈತರು ಸಹ ಭಾಗವಹಿಸಿ ಹಣ್ಣು ಮಾರಾಟ ಮಾಡುವ ಬಗ್ಗೆ ಮಾಹಿತಿ ಪಡೆದುಕೊಂಡದ್ದು ವಿಶೇಷವಾಗಿತ್ತು.
ಕೇಸರ್, ದಶಹರಿ ಮಾವಿಗೆ ಬೇಡಿಕೆ: ಮೇಳದಲ್ಲಿ ಕೇಸರ್ ಮತ್ತು ದಶಹರಿ ತಳಿಯ ಮಾವು ಹಣ್ಣುಗಳಿಗೆ ಹೆಚ್ಚಿನ ಬೇಡಿಕೆ ಬಂದಿದ್ದು 110 ಟನ್ಗೂ ಹೆಚ್ಚು ಮಾರಾಟವಾಗಿದೆ. ಅದೇ ರೀತಿ ಬೆನೆಶಾನ್, ಕೇಸರ್, ದಶಹರಿ, ರಸಪುರಿ, ಸ್ವರ್ಣರೇಖಾ, ಇಮಾಮ ಪಸಂಧ, ಆಪೋಸು, ಮಲ್ಲಿಕಾ, ತೋತಾಪೂರಿ, ಸಕ್ಕರೆ ಗುಟ್ಟಿ, ಖಾದರ್, ಪುನಾಸ್ ಮತ್ತು ಉಪ್ಪಿನಕಾಯಿ ತಳಿ ಸೇರಿದಂತೆ ವಿವಿಧ ತಳಿಯ ಮಾವಿನ ಹಣ್ಣುಗಳು 50 ರಿಂದ 60 ಟನ್ಗೂ ಹೆಚ್ಚು ಮಾರಾಟವಾಗಿದೆ.
ಉಪ್ಪಿನಕಾಯಿ ಮಾವಿನ ಕಾಯಿಗೆ ಬೇಡಿಕೆ: ಆಮ್ಲೇಟ್ ಮತ್ತು ಪುನಾಸ್ ಉಪ್ಪಿನಕಾಯಿ ಮಾವಿನ ಕಾಯಿಗೆ ಸಾರ್ವಜನಿಕರಿಂದ ಹೆಚ್ಚಿನ ಬೇಡಿಕೆ ಬಂದು 5 ಟನ್ಗೂ ಹೆಚ್ಚು ಮಾರಾಟವಾಗಿದೆ.
ಎಲ್ಲರಿಂದಲೂ ಮೆಚ್ಚುಗೆ: ಮಾವಿನ ಹಣ್ಣುಗಳನ್ನು ನೈಸರ್ಗಿಕವಾಗಿ ಮತ್ತು ವೈಜ್ಞಾನಿಕವಾಗಿ ಮಾಗಿಸಿ ಗ್ರಾಹಕರಿಗೆ ಕೈಗೆಟುವ ದರದಲ್ಲಿ ರೈತರು ನೇರವಾಗಿ ಮಾರಾಟ ಮಾಡಿದ್ದು, ಇದರಿಂದಾಗಿ ಗ್ರಾಹಕರಿಗೂ ಯೋಗ್ಯ ಬೆಲೆಯಲ್ಲಿ ಉತ್ತಮ ಗುಣಮಟ್ಟದ ಹಣ್ಣುಗಳು ಲಭಿಸಿವೆ. ಗ್ರಾಹಕರು ಈ ಮೇಳದಲ್ಲಿ ಸಕ್ರಿಯವಾಗಿ ಭಾಗವಹಿಸಿ ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ.
ಮೇಳದಲ್ಲಿ ಜಿಲ್ಲೆಯ ಮತ್ತು ಹೊರ ಜಿಲ್ಲೆಯ ಸರಕಾರಿ ಇಲಾಖೆಗಳ ಅಧಿಕಾರಿಗಳು, ಜನಪ್ರತಿನಿಧಿಗಳು ಹಾಗೂ ಸಾರ್ವಜನಿಕರು ಹೆಚ್ಚಿನ ಆಸಕ್ತಿಯಿಂದ ಭಾಗವಹಿಸಿದ್ದು, ಹೆಚ್ಚಿನ ಹಣ್ಣು ಖರೀದಿಸಿದಲ್ಲದೇ ನಾವು ಉತ್ತಮ ಗುಣಮಟ್ಟದ ಹಣ್ಣುಗಳನ್ನು ಖರೀದಿಸಲು ಹುಬ್ಬಳ್ಳಿ, ಹೊಸಪೇಟೆ ನಗರಗಳಿಗೆ ಹೋಗಬೇಕಾಗಿತ್ತು, ಆದರೆ ಈ ಸಾರಿ ವಿವಿಧ ತಳಿಯ ಉತ್ತಮ ಹಣ್ಣುಗಳು ಕೊಪ್ಪಳದಲ್ಲಿಯೇ ಲಭ್ಯವಾಗಿದ್ದು, ಕುಟುಂಬ ಸಮೇತ ಬಂದು ಖರೀದಿಸಲು ಅನುಕೂಲವಾಗಿದೆ ಎಂಬುದು ಸಾರ್ವಜನಿಕರ ಅಭಿಪ್ರಾಯವಾಗಿದೆ.
ಮಾರುಕಟ್ಟೆಯಲ್ಲಿ ಕೃತಕವಾಗಿ ಮಾಗಿಸಿದ ಹಣ್ಣುಗಳಿಗಿಂತ ಇಲ್ಲಿ ದೊರೆಯುವ ಹಣ್ಣುಗಳ ರುಚಿಕರವಾಗಿದೆ ಹಾಗೂ ಆರೋಗ್ಯ ದೃಷ್ಟಿಯಿಂದ ಉತ್ತಮ. ತೋಟಗಾರಿಕೆ ಇಲಾಖೆಯು ಗ್ರಾಹಕ ಹಾಗೂ ಮಾವು ಬೆಳೆಗಾರರನ್ನು ನೇರವಾಗಿ ಸಂರ್ಪಕಕ್ಕೆ ತರುವಲ್ಲಿ ಯಶಸ್ವಿಯಾಗಿದೆ ಎಂದು ಶ್ಲಾಘಿಸಿದ್ದಾರೆ.
ಮಿಯಾಜಾಕಿ ಮಾವಿನ ಹಣ್ಣಿನ ಹವಾ: ಈ ಮೇಳದಲ್ಲಿ ಜಗತ್ತಿನ ದುಬಾರಿ ಮಾವು ಮಿಯಾಜಾಕಿ ತಳಿಯು ರಾಜ್ಯಾದ್ಯಾಂತ ಸುದ್ದಿ ಮಾಡಿದೆ. ಮಾವು ಮೇಳ-2023ರ ಪ್ರದರ್ಶನದಲ್ಲಿ 120ಕ್ಕೂ ಹೆಚ್ಚಿನ ವಿವಿಧ ದೇಶಿ ಮತ್ತು ವಿದೇಶಿ ತಳಿ ಹಣ್ಣುಗಳ ಪ್ರದರ್ಶನವನ್ನು ಏರ್ಪಡಿಸಲಾಗಿತ್ತು, ಅವುಗಳಲ್ಲಿ “ಜಗತ್ತಿನ ದುಬಾರಿ ಮಾವು ಮಿಯಾಜಾಕಿ” ಎಂಬ ಜಪಾನಿನ ಮಾವಿನ ತಳಿಯ ಹಣ್ಣನ್ನು ಪ್ರದರ್ಶನಕ್ಕೆ ಇಡಲಾಗಿತ್ತು.
ಈ ಮಿಯಾಜಾಕಿ ಮಾವು ಜಿಲ್ಲೆ, ಹೊರ ಜಿಲ್ಲೆ ಹಾಗೂ ಹೊರ ರಾಜ್ಯಗಳಲ್ಲಿ ಮಾಧ್ಯಮಗಳ ಮುಖಾಂತರ ಸಾಕಷ್ಟು ಪ್ರಚಾರವನ್ನು ಪಡೆದಿದ್ದು ವಿಶೇಷವಾಗಿತ್ತು. ಮಿಯಾಜಾಕಿ ಮಾವನ್ನು ನೋಡಲು ಸಾರ್ವಜನಿಕರು, ರೈತರು ಹಾಗೂ ಹೊರ ಜಿಲ್ಲೆಗಳಿಂದ ಸಾಕಷ್ಟು ಜನರು ತಂಡೋಪ ತಂಡವಾಗಿ ಬಂದು ಕುತೂಹಲದಿಂದ ವೀಕ್ಷಿಸಿ ಚರ್ಚಿಸುತ್ತಿದ್ದಿದ್ದು ಸಹ ಸಾಮಾನ್ಯವಾಗಿತ್ತು. ಸಾಕಷ್ಟು ರೈತರು ತಮ್ಮ ತೋಟದಲ್ಲಿ ಮಿಯಾಜಾಕಿ ಮಾವಿನ ಹಣ್ಣಿನ ತಳಿ ಗಿಡಗಳ ಬೆಳೆಯುವ ಬಗ್ಗೆ ಇಲಾಖೆಯೊಂದಿಗೆ ಚರ್ಚಿಸಿ ಸಸಿಗಳ ಪೂರೈಸುವ ಕುರಿತು ಬೇಡಿಕೆ ಇಡುತ್ತಿದ್ದರು.
ಮಾವು ಬೆಳೆಗಾರರಿಗೆ ನೇರ ಲಾಭ: ಈ ಮೇಳದಲ್ಲಿ ಮಾವು ಬೆಳೆಗಾರರಿಗೆ ನೇರವಾಗಿ ಲಾಭ ದೊರೆತಿದ್ದು, ಮಾವು ಬೆಳೆಗಾರರಾದ ಆನಂದ ರೆಡ್ಡಿ, ಪಂಪಣ್ಣ ಇಂದರಗಿ, ಷಣ್ಮುಖಪ್ಪ ಘಂಟಿ, ಶಿವಣ್ಣ ಹೊಸಮನಿ, ನಾಗಪ್ಪ, ವೀರಭದ್ರಸ್ವಾಮಿ ಬಸವರಾಜ, ಫಕೀರಪ್ಪ ಸ್ವಾಮಿ ಬಸವರಾಜ ಸ್ವಾಮಿ, ಅರಳಿಮರದ ಫಾರಂ, ವಾಮದೇವ ಎಚ್., ಮಾರುತಿ, ಹಂಪಿ ಹೆರಿಟೇಜ್ ರೆಸಾರ್ಟ, ಶ್ರೀಪಾದ ಮುರಡಿ ಸೇರಿದಂತೆ ಇನ್ನಿತರ ರೈತರು ಮಧ್ಯವರ್ತಿಗಳಿಲ್ಲದೇ ಮೇಳದಲ್ಲಿ ನೇರವಾಗಿ ಮಾರಾಟ ಮಾಡಲು ಅವಕಾಶ ಕಲ್ಪಿಸಿದ ಕಾರಣ ಹೆಚ್ಚಿನ ಆದಾಯವಾಗಿರುತ್ತದೆ ಎಂದು ತೋಟಗಾರಿಕಾ ಇಲಾಖೆ ಕಾರ್ಯವನ್ನು ಸ್ಮರಿಸಿದರು.
ಕೇಸರ್ ಮಾವಿನ ಬ್ರ್ಯಾಂಡ್ಬಾ ಕ್ಸಗೆ ಬೇಡಿಕೆ: ಈ ಮೇಳದಲ್ಲಿ ಕೊಪ್ಪಳ ಕೇಸರ್ ತಳಿಯ ಮಾವಿಗೆ ಹೆಚ್ಚಿನ ಬೇಡಿಕೆ ಬಂದು 2.50 ಕೆ.ಜಿ. ತೂಕದ “ಕೊಪ್ಪಳ ಕೇಸರ್” ಎಂಬ ಬ್ರ್ಯಾಂಡ್ ಬಾಕ್ಸ್ಗೆ ಹೆಚ್ಚಿನ ಬೇಡಿಕೆ ಬಂದು 10000 ಕ್ಕೂ ಹೆಚ್ಚಿನ ಬಾಕ್ಸ್ಗಳನ್ನು ಬೆಂಗಳೂರು ಮತ್ತು ದೆಹಲಿ, ಹುಬ್ಬಳ್ಳಿ, ಹೈದರಬಾದ್, ಮಂಗಳೂರು ಹಾಗೂ ವಿವಿಧ ನಗರಗಳಿಗೆ ರೈತರು ಪ್ಯಾಕ್ ಮಾಡಿ 25 ಟನ್ಗೂ ಹೆಚ್ಚಿನ ಕೇಸರ್ ಮಾವಿನ ಹಣ್ಣುಗಳನ್ನು ಬಾಕ್ಸ್ ಮುಖಾಂತರ ಮಾರಾಟ ಮಾಡಿರುತ್ತಾರೆ. ಈ ಬಾಕ್ಸ್ಗಳನ್ನು ತೋಟಗಾರಿಕೆ ಇಲಾಖೆಯಿಂದ ಆರ್.ಕೆ.ವಿ.ವೈ ಯೋಜನೆಯಡಿ ರೈತರಿಗೆ ಸಹಾಯಧನ ಮುಖಾಂತರ ಪೂರೈಸಲಾಗಿತ್ತು.
ಪೇಪರ್ ಬ್ಯಾಗ್ ವ್ಯವಸ್ಥೆ: ಮೇಳವನ್ನು ಪ್ಲಾಸ್ಟಿಕ್ ಮುಕ್ತವಾಗಿಡುವ ಉದ್ದೇಶದಿಂದ ಸಾರ್ವಜನಿಕರಿಗೆ ಹಣ್ಣುಗಳನ್ನು ತೆಗೆದುಕೊಂಡು ಹೋಗಲು ಅನುಕೂಲವಾಗುವಂತೆ ಇಲಾಖೆಯಿಂದ ಕೊಪ್ಪಳ ಕೇಸರ್ ಬ್ರ್ಯಾಂಡಿನ ಪೇಪರ್ ಬ್ಯಾಗ್ಗಳನ್ನು ನೀಡಿದ್ದು ಮೆಚ್ಚುಗೆಗೆ ಪಾತ್ರವಾಗಿದೆ.
ಇಲಾಖೆ ಅಧಿಕಾರಿಗಳ ಪ್ರತಿಕ್ರಿಯೆ: ಹೆಚ್ಚಿನ ರೈತರು ಮಾವು ಮೇಳದಿಂದ ಉತ್ತೇಜಿತರಾಗಿದ್ದು, ಈ ಮೇಳದಲ್ಲಿ ಮಾವು ಬೆಳೆಯ ಕುರಿತು ತಾಂತ್ರಿಕ ಮಾಹಿತಿ ಪಡೆದು ಮಾವು ಬೆಳೆಯಲು ಆಸಕ್ತಿ ತೋರಿದ್ದಾರೆ. ಮುಂದಿನ ದಿನಗಳಲ್ಲಿ ಕೇಸರ್ ತಳಿಯನ್ನು ಅಧಿಕ ಸಾಂದ್ರತೆ ಬೇಸಾಯ ಪದ್ದತಿಯಲ್ಲಿ 1000ಕ್ಕೂ ಹೆಚ್ಚಿನ ಎಕರೆ ಪ್ರದೇಶಾಭಿವೃದ್ಧಿ ಕೈಗೊಳ್ಳುವ ಗುರಿ ಹೊಂದಲಾಗಿದೆ. ಹೀಗಾಗಿ ಕೇಸರ ತಳಿಗೆ ಅತೀ ಹೆಚ್ಚಿನ ಬೇಡಿಕೆ ಬಂದಿದ್ದು, ಮುಂಬರುವ ವರ್ಷಗಳಲ್ಲಿ ನೂತನ ತಂತ್ರಜ್ಞಾನಗಳಾದ, ಅಧಿಕ ಸಾಂದ್ರ ಪದ್ಧತಿ, ಹನಿ ನೀರಾವರಿ, ರಸಾವರಿ ಇತ್ಯಾದಿಗಳ ಮೂಲಕ ಒಂದು ಸಾವಿರ ಎಕರೆಗೂ ಹೆಚ್ಚಿನ ಪ್ರದೇಶ ವಿಸ್ತರಣೆ ಮಾಡುವ ಗುರಿ ಇಟ್ಟುಕೊಳ್ಳಲಾಗಿದೆ. ರೈತರೂ ಕೂಡ ಕೇಸರ ತಳಿ ಮಾವು ಬೆಳೆಯಲು ಅತ್ಯಂತ ಆಸಕ್ತಿ ವಹಿಸಿದ್ದು, ಇಲಾಖೆ ಗುರಿ ಮುಟ್ಟಲು ಸಹಕಾರ ನೀಡಲು ಮುಂದಾಗಿದ್ದಾರೆ ಎಂದು ಕೊಪ್ಪಳ ತೋಟಗಾರಿಕೆ ಇಲಾಖೆಯ ಉಪನಿರ್ದೇಶಕರಾದ ಕೃಷ್ಣ ಉಕ್ಕುಂದ ಅವರು ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ.
ಈ ಮಾವು ಮೇಳದಿಂದ ರೈತರಿಗೆ ಕೃಷಿಯಲ್ಲಿ ಹೊಸ ಭರವಸೆ ಮೂಡಿದೆ. ಗ್ರಾಹಕರಿಗೆ ಕೇಸರ ತುಂಬ ಇಷ್ಟವಾಗಿದೆ. ಇದರ ಹಿಂದೆ ತೋಟಗಾರಿಕೆ ಇಲಾಖೆ ಪರಿಶ್ರಮ ಎದ್ದು ಕಾಣುತ್ತಿದೆ ಎಂದು ಸಾರ್ವಜನಿಕರು ಪ್ರತಿಕ್ರಿಯಿಸಿದ್ದಾರೆ.