ಸುದ್ದಿಮೂಲ ವಾರ್ತೆ
ಬೆಂಗಳೂರು, ಅ. 08 : ಅಕ್ಷರ ಮಹಾಕ್ರಾಂತಿಗೆ ತಂತ್ರಜ್ಞಾನ ಕೂಡ ಸಹಕಾರ ನೀಡಿದೆ ಎಂದು ನಟ ರಮೇಶ್ ಅರವಿಂದ್ ಅಭಿಪ್ರಾಯಪಟ್ಟರು.
ಸಾವಣ್ಣ ಪ್ರಕಾಶನ ದಿಂದ ‘ಸಾವಣ್ಣ ಅಕ್ಷರ ಆರಾಧನೆ’ ಪುಸ್ತಕ ಲೋಕಾರ್ಪಣೆ ಬೆಂಗಳೂರಿನ ಇಂಡಿಯನ್ ಇನ್ಸಿಟ್ಯೂಟ್ ಆಫ್ ವರ್ಲ್ಡ್ ಕಲ್ಚರ್ ಸಭಾಂಗಣದಲ್ಲಿ ನಡೆಯಿತು.
ನಟ ರಮೇಶ್ ಅರವಿಂದ್ ಅವರು ಗಂಗಾವತಿ ಪ್ರಾಣೇಶ್ ಅವರ ‘ನುಡಿಪಡಿ’, ವಿರೂಪಾಕ್ಷ ದೇವರಮನೆ ಅವರ ‘ಕಣ್ಣಿಗೆ ಕಾಣುವ ದೇವರು’ ರಂಗಸ್ವಾಮಿ ಮೂಕನಹಳ್ಳಿ ಅವರ ‘ಬದುಕು ಸುಂದರ’, ಲೇಖಕಿ ಶ್ವೇತಾ ಗೌರಿಬಿದನೂರು ಅವರ ‘ಬಿಟ್ಟ ಜಾಗ ತುಂಬಿ’, ಶರಣು ಹುಲ್ಲೂರು ಅವರ ‘ಕನ್ನಡದ 100 ಸಿನಿಮಾಗಳು ನೋಡಲು ಮರೆಯದಿರಿ ಮರೆತು ನಿರಾಶರಾಗದಿರಿ’, ವಸಂತ್ ಗಿಳಿಯಾರ್ ಅವರ ‘ಲೈಫ್ ಇಸ್ ಜಿಂಗಲಾಲ’, ಜಗದೀಶ ಶರ್ಮಾ ಅವರ ‘ಜಸ್ಟ್ ಒಂದು ಗಂಟೆ ಸರಣಿ’ ಭಗವದ್ಗೀತೆ, ಚಾಣಕ್ಯ, ಕಲಿಸದೇ ಕಲಿಸುವ 24 ಗುರುಗಳು, ಆತ್ಮಗುಣ, ಯಕ್ಷಪ್ರಶ್ನೆ, ಧರ್ಮ ಕೃತಿಗಳನ್ನು ಬಿಡುಗಡೆಗೊಳಿಸಿದರು.
ನಟ ರಮೇಶ್ ಅರವಿಂದ್ ಮಾತನಾಡಿ, ‘ತಂತ್ರಜ್ಞಾನ ಬೆಳೆದಿದೆ ಬೆಳೆಯುತ್ತಿದೆ ಆದರೆ ಅಕ್ಷರ ಜ್ಞಾನ ಎಲ್ಲಿಯ ವರೆಗೆ ಬೆಳೆಯುತ್ತದೆಯೋ ಅಲ್ಲಿ ತನಕ ತಂತ್ರಜ್ಞಾನಗಳ ಹೊಸ ಆವಿಷ್ಕಾರಕ್ಕೆ ಯಾವುದೇ ಕೊರತೆ ಬರುವುದಿಲ್ಲ. ಅಕ್ಷರ ಎಂಬುದು ಮಹಾಕ್ರಾಂತಿಯಾಗಿದೆ ಎಂದು ಸಾವಣ್ಣ ಅಕ್ಷರ ಆರಾಧನೆ ಕಾರ್ಯಕ್ರಮಕ್ಕೆ ಶುಭ ಹಾರೈಸಿದರು.
ಕಾರ್ಯಕ್ರಮದಲ್ಲಿ ಲೇಖಕ, ಪತ್ರಕರ್ತ ಜೋಗಿ, ಗಂಗಾವತಿ ಪ್ರಾಣೇಶ್, ವಿರೂಪಾಕ್ಷ ದೇವರಮನೆ, ರಂಗಸ್ವಾಮಿ ಮೂಕನಹಳ್ಳಿ, ಶ್ವೇತಾ, ಬಿ.ಸಿ, ಶರಣು ಹುಲ್ಲೂರು, ವಸಂತ್ ಗಿಳಿಯಾರ್, ಜಗದೀಶ ಶರ್ಮಾ ಸೇರಿದಂತೆ ಹಲವಾರು ಗಣ್ಯರು ಉಪಸ್ಥಿತರಿದ್ದರು.