ಸುದ್ದಿಮೂಲ ವಾರ್ತೆ
ನೆಲಮಂಗಲ,ನ.05 : ತಾಲೂಕಿನಿಂದ ಹಲವಾರು ಕಲಾವಿದರು ಚಲನಚಿತ್ರ, ಧಾರಾವಾಹಿಗಳು ಹಾಗೂ ಹೆಸರಾಂತ ರಂಗಭೂಮಿ ಕಲಾವಿದರಾಗಿ ಕೀರ್ತಿಯನ್ನುಗಳಿಸಿದ್ದು ತಾಲ್ಲೂಕಿನ ಘನತೆಯನ್ನು ಹೆಚ್ಚಿಸಿದ್ದಾರೆ. ಇಂತಹ ಮಹಾನ್ ಸಾಧಕರ ಸೃಷ್ಠಿಗೆ ಕಾರಣರಾದ ತಾಲ್ಲೂಕು ಕೇಂದ್ರಸ್ಥಾನದಲ್ಲಿ ರಂಗಮಂದಿರವನ್ನು ನಿರ್ಮಿಸಿಕೊಡುವಂತೆ ತಾಲ್ಲೂಕು ಕಲಾವಿದರ ಬಳಗದ ಅಧ್ಯಕ್ಷ ಡಾ.ಜಿ.ಗಂಗರಾಜು ಆಗ್ರಹಿಸಿದರು.
ನಗರದ ನೇತಾಜಿ ಉದ್ಯಾನವನದಲ್ಲಿ ಸಮಾವೇಶಗೊಂಡಿದ್ದ ಹಲವಾರು ಕನ್ನಡಪರ ಸಂಘಟನೆಗಳ ಪದಾಧಿಕಾರಿಗಳು, ತಾಲ್ಲೂಕು ಕಲಾಸಂಘ ಸಂಸ್ಥೆಗಳ ನೂರಾರು ಕಲಾವಿದರು, ಕಲಾಸಕ್ತರುಗಳು ಪ್ರಮುಖ ರಸ್ತೆಯಲ್ಲಿ ಮೌನ ಪ್ರತಿಭಟನಾ ಮೆರವಣಿಗೆ ಮೂಲಕ ನಗರಸಭೆಯ ಆವರಣದಲ್ಲಿ ಮಾತನಾಡಿದರು.
ಪುರಸಭಾ ಬಯಲು ರಂಗಮಂದಿರಕ್ಕೆ ಹಲವಾರು ವರ್ಷಗಳ ಇತಿಹಾಸವಿದ್ದು ಅದರ ಜೀರ್ಣೋದ್ಧಾರ ಸಹಿತ ಸುಸಜ್ಜಿತ ರಂಗಮಂದಿರವನ್ನು ನಿರ್ಮಿಸಿಕೊಡಬೇಕು. ಸಹಸ್ರಾರು ಕಲಾವಿದರು ತಮ್ಮ ಪ್ರತಿಭೆಯನ್ನು ಅಭಿವ್ಯಕ್ತಗೊಳಿಸಲು ಅನುವು ಮಾಡಿಕೊಡುವಂತೆ ಮಕ್ಕಳ ಸಾಹಿತ್ಯ ಪರಿಷತ್ತಿನ ಅಧ್ಯಕ್ಷ ಎನ್.ಜಿ.ಗೋಪಾಲ್ ಹಕ್ಕೋತ್ತಾಯಿಸಿದರಲ್ಲದೆ ಇದೇ ಸಂದರ್ಭದಲ್ಲಿ ಪ್ರತಿಭಟನಕಾರರ ಅನುಮತಿ ಪಡೆದು ಮನವಿ ಪತ್ರವನ್ನು ನಗರಸಭೆ ಆಯುಕ್ತರಿಗೆ ನೀಡಿದರು.
ವಿಕಾಸ ಸಂಸ್ಥೆ ಸಂಸ್ಥಾಪಕ ಅಧ್ಯಕ್ಷ ನಾಗರಾಜು ಮಾತನಾಡಿ, ಸಾಂಸ್ಕೃತಿಕ ಚಟುವಟಿಕೆಗಳನ್ನು ನಡೆಸಲು ತುಂಬಾ ತೊಂದರೆಯಾಗಿದ್ದು ಹಾಲಿ ನಿರ್ಮಾಗೊಳ್ಳುತ್ತಿರುವ ನಗರಸಭೆ ಕಚೇರಿಗೆ ಹೊಂದಿಕೊಂಡಂತೆಯೇ ಸುಸಜ್ಜಿತ ರಂಗಮಂದಿರ ನಿರ್ಮಿಸಿಕೊಟ್ಟು ಕಲಾವಿದರು ಮತ್ತು ಎಲ್ಲ ಸ್ತರದ ಜನರಿಗೂ ಅನುಕೂಲ ಕಲ್ಪಿಸಿಕೊಡುವಂತೆ ಒತ್ತಾಯಿಸಿದರು.
ಮನವಿ ಸ್ವೀಕರಿಸಿದ ನಗರಸಭೆ ಆಯುಕ್ತ ಡಿ.ಲೋಹಿತ್ ಮಾತನಾಡಿ ನಗರಸಭೆ ನೂತನ ಕಟ್ಟಡ ನಿರ್ಮಾಣಕ್ಕೆ ನೀಲಿನಕ್ಷೆ ಸಿದ್ಧವಿದ್ದು ಹಾಲೀ ಇರುವ ಪುರಸಭಾ ಬಯಲು ರಂಗಮಂದಿರದ ಜಾಗವನ್ನು ಹಾಗೆಯೇ ಉಳಿಸಿದೆ. ಇದನ್ನು ಪರಿಶೀಲಿಸಿ ನಗರಸಭೆ ಸರ್ವಸದಸ್ಯರುಗಳ ಸಭೆಯಲ್ಲಿ ಚರ್ಚಿಸಿ ತ್ವರಿತಕ್ರಮ ವಹಿಸುವುದಾಗಿ ಭರವಸೆ ನೀಡಿದರು.
ಬಳಿಕ ಕನ್ನಡಪರ ಸಂಘಟನೆಗಳ ಪದಾಧಿಕಾರಿಗಳು ಜಿಲ್ಲಾಧಿಕಾರಿಗಳನ್ನು ಭೇಟಿಮಾಡಿ ಮನವಿ ಸಲ್ಲಿಸಿದರು. ಮನವಿ ಸ್ವೀಕರಿಸಿದ ಜಿಲ್ಲಾಧಿಕಾರಿಗಳಾದ ಡಾ.ಶಿವಶಂಕರ್ ಮಾತನಾಡಿ ನಗರಸಭೆ ಮತ್ತು ಗ್ರಾಮಾಂತರ ಜಿಲ್ಲಾ ಯೋಜನಾ ನಿರ್ದೇಶಕರಿಗೆ ತುರ್ತಾಗಿ ಸೂಚಿಸಿ ಅಗತ್ಯ ಮಾಹಿತಿಯನ್ನು ತರಿಸಿಕೊಂಡು ಸ್ಥಳ ಪರಿಶೀಲಿಸಿ ಮುಂದಿನ ತ್ವರಿತ ಕ್ರಮವಹಿಸುವುದಾಗಿ ಭರವಸೆ ನೀಡಿದರು.
ಆನಂತರ ನಗರ ಜಿಲ್ಲಾ ಯೋಜನಾಭಿವೃದ್ಧಿ ಕೋಶದ ಯೋಜನಾ ನಿರ್ದೇಶಕರಾದ ಡಾ.ಶಾಲಿನಿ ಅವರಿಗೂ ಮನವಿಪತ್ರವನ್ನು ಸಲ್ಲಿಸಿ ಅವರ ಗಮನವನ್ನೂ ಸೆಳೆಯಲಾಯಿತು.
ಈ ಸಂದರ್ಭದಲ್ಲಿ ಕಸಾಪ ಅಧ್ಯಕ್ಷ ಬಿ.ಆರ್.ಪ್ರದೀಪ್ಕುಮಾರ್, ಪ್ರಧಾನಕಾರ್ಯದರ್ಶಿ
ಪ್ರಕಾಶ್ಮೂರ್ತಿ, ಕಲಾರಂಗದ ಅಧ್ಯಕ್ಷ ಬಿ.ಶಿವರಾಮ, ಪ್ರಧಾನಕಾರ್ಯದರ್ಶಿ ನೆ.ರ.ರಾಜಗೋಪಾಲ, ಮನೋಜ್ಞ ಸಂಸ್ಥಾಪಕ ಬೂದಿಹಾಲ್ ಕಿಟ್ಟಿ, ಜ್ಞಾನಭಾರತಿ ಟ್ರಸ್ಟ್ ಅಧ್ಯಕ್ಷ ರಂಗನಾಥ್, ಅಂಜನಾದ್ರಿ ಟ್ರಸ್ಟ್ ಅಧ್ಯಕ್ಷ ದಿನೇಶ್ ಚಿಕ್ಕಮಾರನಹಳ್ಳಿ, ಗ್ರಾಮೀಣ ಸಂಸ್ಕೃತಿ ಅಧ್ಯಯನ ಪ್ರತಿಷ್ಠಾನ ಅಧ್ಯಕ್ಷ ಡಾ.ಕೆ.ಬಿ.ಸದಾನಂದಾರಾಧ್ಯ, ಕಸಾರ ಅಧ್ಯಕ್ಷ ಡಿ.ಸಿದ್ದರಾಜು, ಸಾಹಿತಿಗಳಾದ ಡಾ.ವೆಂಕಟೇಶ ಆರ್.ಚೌಥಾಯಿ, ಡಾ.ಮುರುಳೀಧರ್, ಆನಂದಮೌರ್ಯ, ಪ್ರತಿಭಾರಂಗದ ಅಧ್ಯಕ್ಷ ಬಿ.ರಾಮಯ್ಯ, ಕಲಾವಿದ ವೆಂಕಟೇಶ್, ಡಾ.ಭೋಗಣ್ಣ, ನಾಗರತ್ನ, ಸಿಂಚನ ಸಿ.ಹೆಚ್.ಸಿದ್ದಯ್ಯ, ಸೇರಿದಂತೆ ಹಲವರಿದ್ದರು.