ಸುದ್ದಿಮೂಲ ವಾರ್ತೆ
ಬೆಂಗಳೂರು, ಸೆ.12: ರಾಜ್ಯದಲ್ಲಿ ಆಡಳಿತ ಸುಧಾರಣೆಗಾಗಿ ಅಧಿಕಾರಿಗಳಿಗೆ ಬಿಸಿ ಮುಟ್ಟಿಸಿರುವ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು, ಜಿಲ್ಲಾಧಿಕಾರಿ, ಜಿಪಂ ಸಿಇಓ ಸಹಿತ ಎಲ್ಲಾ ವರ್ಗದ ಅಧಿಕಾರಿಗಳಿಗೆ ಜನಸಾಮಾನ್ಯರಿಗೆ ಹೇಗೆ ಸ್ಪಂದಿಸಬೇಕು ಎಂಬುದುರ ಕುರಿತು ಇಡೀ ದಿನ ಪಾಠ ಮಾಡಿದ್ದಾರೆ.
ದಕ್ಷತೆಯಿಂದ ಪ್ರಾಮಾಣಿಕತೆಯಿಂದ ಕೆಲಸ ಮಾಡಿ ನಾಡಿನ ಜನರ ನಿರೀಕ್ಷೆಗೆ ಸ್ಪಂದಿಸಿ, ಜನಸಂಪರ್ಕ ಸಭೆಗಳನ್ನು ನಡೆಸಿ, ತಮ್ಮ ವ್ಯಾಪ್ತಿಯ ಪ್ರಕರಣಗಳಿಗೆ ಬೇಗ ಇತ್ಯರ್ಥಗೊಳಿಸಿ ಎಂದು ಸೂಚನೆ ನೀಡಿದ್ದಾರೆ. ಅಭಿವೃದ್ಧಿಯ ಆಶೋತ್ತರಗಳನ್ನು ಇಟ್ಟುಕೊಂಡ ಜನರ ನಿರೀಕ್ಷೆಗಳಿಗೆ ತಕ್ಕಂತೆ ಅಧಿಕಾರಿಗಳು ಕೆಲಸ ಮಾಡಬೇಕು ಎಂದಿರುವ ಸಿಎಂ, ಅಧಿಕಾರಿಗಳು ಜನಸಾಮಾನ್ಯರಿಗೆ ಕೈಗೆ ಸಿಗದಂತೆ ನಾಟ್ ರೀಚಬಲ್ ಆಗಬಾರದಿ ಎಂಬ ಎಚ್ಚರಿಕೆಯನ್ನೂ ರವಾನಿಸಿದ್ದಾರೆ.
ವಿಧಾನಸೌಧದ ಸಮ್ಮೇಳನ ಸಭಾಂಗಣದಲ್ಲಿ ಇಂದು ಜಿಲ್ಲಾಧಿಕಾರಿಗಳು ಹಾಗೂ ಜಿಲ್ಲಾ ಪಂಚಾಯತ್ ಮುಖ್ಯ ಕಾರ್ಯನಿರ್ವಹಣಾಧಿಕಾರಿಗಳ ಸಭೆ ನಡೆಯಿತು. ತಾಲ್ಲೂಕು ಮಟ್ಟದಲ್ಲಿ ಸಚಿವರು, ಶಾಸಕರನ್ನು ಆಹ್ವಾನಿಸಿ, ಜನ ಸಂಪರ್ಕ ಸಭೆಗಳನ್ನು ವಾರಕ್ಕೊಮ್ಮೆ ನಡೆಸಿ ಸ್ಥಳೀಯ ಸಮಸ್ಯೆಗಳಿಗೆ ಸ್ಪಂದಿಸಿ ಎಂದು ಸಿದ್ದರಾಮಯ್ಯ ಅವರು ಜಿಲ್ಲಾಧಿಕಾರಿಗಳು ಹಾಗೂ ಜಿಲ್ಲಾ ಪಂಚಾಯತ್ ಮುಖ್ಯ ಕಾರ್ಯನಿರ್ವಹಣಾಧಿಕಾರಿಗಳಿಗೆ ಸ್ಪಷ್ಟ ಸೂಚನೆ ನೀಡಿದರು.
ಮನುಷ್ಯತ್ವ ಇಲ್ಲದವರು ಸಾರ್ವಜನಿಕ ಸೇವೆಗೆ ಬರಬಾರದು. ಅಧಿಕಾರಿಗಳು ವರ್ಕ್ ಫ್ರಮ್ ಹೋಮ್ ಮಾಡಬಾರದು. ಜಿಲ್ಲೆ ಮತ್ತು ತಾಲ್ಲೂಕು ಕೇಂದ್ರ ಸ್ಥಾನದಲ್ಲಿಯೇ ವಾಸವಿದ್ದು, ಕಚೇರಿಯಲ್ಲೇ ಕುಳಿತು ಕೆಲಸ ಮಾಡಬೇಕು. ಜನರ ಸೇವೆಗೆ ಲಭ್ಯರಿರಬೇಕು. ಇದರಿಂದ ಜನರಿಗೆ ತೊಂದರೆಯಾಗುವುದನ್ನು ಸರ್ಕಾರ ಸಹಿಸುವುದಿಲ್ಲ.
ಹಾಗೆಯೇ ಅಧಿಕಾರಿಗಳು ದೂರವಾಣಿ ಕರೆಗೆ ಸಿಗುವುದಿಲ್ಲ ಎಂಬ ದೂರುಗಳೂ ಸಾರ್ವಜನಿಕರು, ಶಾಸಕರು ಮತ್ತು ಮಂತ್ರಿಗಳಿಂದ ಇವೆ. ಇದು ಒಳ್ಳೆಯದಲ್ಲ. ಮುಖ್ಯಮಂತ್ರಿ ಕಚೇರಿಯಿಂದ ಇರಲಿ, ಸಚಿವರಿರಲಿ, ಶಾಸಕರಿರಲಿ, ಜನಸಾಮಾನ್ಯರಿರಲಿ, ಅವರ ಕರೆಗಳಿಗೆ ಸ್ಪಂದಿಸಬೇಕು. ಯಾವುದೇ ಪಕ್ಷದ ಶಾಸಕರುಗಳಿರಲಿ ಪ್ರೋಟೋಕಾಲ್ ಚಾಚೂ ತಪ್ಪದೆ ಪಾಲಿಸಬೇಕು ಎನ್ನುವ ಸೂಚನೆ ನೀಡಿದರು.
ಅಧಿಕಾರಿಗಳಿಗೆ ಹೃದಯ ಸರಿಯಾಗಿ ಕೆಲಸ ಮಾಡಬೇಕು. ಮನುಷ್ಯತ್ವ ಇಲ್ಲದವರು ಸಾರ್ವಜನಿಕ ಸೇವೆಗೆ ಬರಬಾರದು. ನಿಮ್ಮ ನಿರ್ಲಕ್ಷ್ಯ ಮತ್ತು ಉಡಾಫೆತನದಿಂದ ಸರ್ಕಾರಕ್ಕೆ ಕೆಟ್ಟ ಹೆಸರು ಬಂದರೆ ನಾವು ಸುಮ್ಮನೆ ಕೈರುವುದಿಲ್ಲ ಎಂದು ಎಚ್ಚರಿಸಿದರು.
ಗ್ರಾಮ ಲೆಕ್ಕಿಗರು ಜನರ ಕೈಗೇ ಸಿಗುತ್ತಿಲ್ಲ. ಅವರು ಎಲ್ಲಿರುತ್ತಾರೆ ಎಂದು ಹುಡುಕಿಕೊಂಡು ಹೋಗುವುದೇ ಜನರಿಗೆ ಒಂದು ತಲೆ ನೋವಾಗಿದೆ. ಆದ್ದರಿಂದ ಗ್ರಾಮ ಲೆಕ್ಕಿಗರು ಗ್ರಾಮ ಪಂಚಾಯ್ತಿಗಳಲ್ಲೇ ಕುಳಿತು ಕೆಲಸ ಮಾಡುವಂತಾಗಬೇಕು. ಗ್ರಾಮ ಲೆಕ್ಕಿಗರನ್ನು ಗ್ರಾಮ ಪಂಚಾಯಿತಿ ಕಚೇರಿಗಳಲ್ಲಿ ಕಾರ್ಯ ನಿರ್ವಹಿಸುವಂತೆ ಮತ್ತು ಅವರಿಗೆ ಗ್ರಾಮ ಪಂಚಾಯ್ತಿಯಲ್ಲೇ ಒಂದು ಕೊಠಡಿ ಇರುವಂತೆ ಕ್ರಮ ಕೈಗೊಳ್ಳಬೇಕು ಎಂದು ಸೂಚಿಸಿದರು.
ಕೃಷಿ ಇಲಾಖೆಗೆ ಸೂಚನೆಗಳು:
* ಫಸಲ್ ಬೀಮಾ ಯೋಜನೆಯ ಲಾಭವನ್ನು ಖಾಸಗಿ ಕಂಪನಿಗಳು ಲೂಟಿ ಹೊಡೆಯುತ್ತಿವೆ. ಆದ್ದರಿಂದ ಈ ಯೋಜನೆಯಡಿ ಸರ್ಕಾರಿ ವಿಮಾ ಕಂಪನಿಗಳನ್ನು ಸೇರಿಸಬೇಕು, ಇದರಿಂದ ರೈತರಿಗೂ ಲಾಭವಾಗುತ್ತದೆ ಎಂಬ ಅಭಿಪ್ರಾಯ ವ್ಯಕ್ತವಾಯಿತು.
* ಬೆಳೆ ಪರಿಹಾರಕ್ಕೆ ಮಾರ್ಗಸೂಚಿಗಳ ಪರಿಷ್ಕರಣೆ ಮಾಡಲು ಪರಿಣಿತರ ಸಮಿತಿಯನ್ನು ರಚಿಸಿ ವರದಿ ತರಿಸಿಕೊಳ್ಳಬೇಕು. ಒಟ್ಟಾರೆ ಉತ್ತಮ ಬೆಳೆ ಪರಿಹಾರ ನೀಡುವ ಮೂಲಕ ರೈತರನ್ನು ಸಂಕಷ್ಟದಿಂದ ಪಾರು ಮಾಡುವುದು ಯೋಜನೆಯ ಉದ್ದೇಶ.
* ಕಬ್ಬು ಬೆಳೆಗಾರರಿಗೆ ಕಬ್ಬು ತೂಕ ಹಾಗೂ ಅರೆಸುವಿಕೆಗೆ ಅನುಕೂಲವಾಗುವಂತೆ ಕಾರ್ಖಾನೆಗಳಲ್ಲಿ ವೇ ಬ್ರಿಡ್ಜ್ ಸ್ಥಾಪಿಸಲು ಕ್ರಮ ಹಾಗೂ ಅವಧಿಗೂ ಮುನ್ನ ಕಬ್ಬು ಅರಿಸುವಿಕೆಯನ್ನು ತಡೆಗಟ್ಟಲು ಕಟಾವು ಅವಧಿಯನ್ನು ಸರ್ಕಾರ ನಿಗದಿಗೊಳಿಸಬೇಕು.
ಗ್ರಾಮೀಣಾಭಿವೃದ್ಧಿ ಇಲಾಖೆಗೆ ಸೂಚನೆಗಳು:
* ಜಲ ಜೀವನ್ ಮಿಷನ್ ಅಡಿ ಬಾಕಿ ಇರುವ ಕಾಮಗಾರಿಗಳಿಗೆ ಟೆಂಡರ್ ಪ್ರಕ್ರಿಯೆ ತ್ವರಿತವಾಗಿ ಕೈಗೊಳ್ಳಬೇಕು. ಇದಕ್ಕಾಗಿ ಮೀಸಲು ಇರಿಸಿರುವ ಅನುದಾನವನ್ನು ನಿಗದಿತ ಅವಧಿಯೊಳಗೆ ಬಳಸಿಕೊಳ್ಳಬೇಕು.
* ಪರಿಶಿಷ್ಟ ಜಾತಿ ಹಾಗೂ ಪಂಗಡ ಗುತ್ತಿಗೆದಾರರಿಗೆ 1ಕೋಟಿವರೆಗೆ ಟೆಂಡರ್ ಕಾಮಗಾರಿ ಮಂಜೂರು ಮಾಡಲು ಎಲ್ಲಾ ಜಿಲ್ಲಾಧಿಕಾರಿಗಳು ಕ್ರಮ ಕೈಗೊಳ್ಳಬೇಕು
* ಕೆಲವು ಜಿಲ್ಲೆಗಳಲ್ಲಿ ಕುಡಿಯುವ ನೀರಿನ ಯೋಜನೆಗಳು ಸಮರ್ಪಕವಾಗಿ ಕಾರ್ಯನಿರ್ವಹಣೆ ಆಗುತ್ತಿಲ್ಲ. ಯೋಜನೆಗೆ ನೀರಿನ ಮೂಲ ಸರಿಯಿಲ್ಲದ ಕಡೆಗಳಲ್ಲಿ ನೀರಿನ ಮೂಲವನ್ನು ಪುನಶ್ಚೇತನಗೊಳಿಸಲು ಕ್ರಮ ಕೈಗೊಳ್ಳಬೇಕು.
* ಜಿಲ್ಲೆಗಳಲ್ಲಿ ಕುಡಿಯುವ ನೀರಿನ ಎಲ್ಲ ಯೋಜನೆಗಳ ಕಾಮಗಾರಿಗಳಿಗೆ ಮುಂದಿನ ಮಾರ್ಚ್ 15ರೊಳಗೆ ಚಾಲನೆ ನೀಡಬೇಕು
* ಉದ್ಯೋಗ ಖಾತ್ರಿ ಯೋಜನೆಯಡಿ ಜಿಲ್ಲೆಗಳಿಗೆ ನೀಡಲಾಗುವ ಮಾನವ ದಿನಗಳ ಗುರಿಯನ್ನು ಸಾಧಿಸಲೇಬೇಕು. ವಿನಾಕಾರಣ ನೆಪಗಳನ್ನು ಅಧಿಕಾರಿಗಳು ಹೇಳಬಾರದು.
ಕಂದಾಯ ಇಲಾಖೆಗೆ ಸೂಚನೆಗಳು:
* ಸರ್ವೇಗೆ ಸಂಬಂಧಿಸಿದ ವ್ಯಾಜ್ಯಗಳು ಶೀಘ್ರ ವಿಲೇವಾರಿಗಾಗಿ ಕ್ರಮ
* ಭೂ ಮಾಪಕರಿಂದ ಸರ್ವೇ ಪ್ರಕರಣಗಳು ಬಾಕಿ ಉಳಿಯಬಾರದು. ರೈತರು ಸರ್ವೇ ವ್ಯಾಜ್ಯಗಳಿಗಾಗಿ ಕಚೇರಿಗೆ ಅಲೆಯುವುದನ್ನು ತಕ್ಷಣದಿಂದ ತಪ್ಪಿಸಿ.
* ಕಂದಾಯ ಇಲಾಖೆಯಲ್ಲಿ ಕಡತಗಳು ಅನ್ಲೈನ್ನಲ್ಲಿ 5-10 ದಿನದೊಳಗೆ ವಿಲೇವಾರಿ ಆಗಬೇಕು.
* ಬೆಂಗಳೂರು ನಗರ ಮತ್ತು ಬೆಂಗಳೂರು ಗ್ರಾಮಂತರ ಜಿಲ್ಲೆಯಲ್ಲಿ ಅನಧಿಕೃತ ಬಡಾವಣೆಗಳ ಹಾವಳಿಗೆ ಅಂತ್ಯ ಹಾಡಬೇಕಿದ್ದು, ಇದರ ತಡೆಗಟ್ಟುವಿಕೆಗೆ ಸಂಬಂಧಿಸಿದಂತೆ ಪ್ರತ್ಯೇಕ ಸಭೆ ನಡೆಸಬೇಕು
* ಕಂದಾಯ ಭೂಮಿಯಲ್ಲಿ ಅನಧಿಕೃತ ಬಡಾವಣೆಗಳ ನಿರ್ಮಾಣಕ್ಕೆ ಅನುಮತಿ ನೀಡಲೆಬಾರದಂದು ಅಧಿಕಾರಿಗಳು ತೀರ್ಮಾನಿಸಬೇಕು.
ನೀವು ಸರಕಾರದ ಮುಖ. ನಿಮ್ಮ ಕಾರ್ಯವೈಖರಿ ಸರಕಾರದ ಹಣೆಬರಹ ನಿರ್ಧರಿಸುತ್ತದೆ. ನೀವು ಸರಿಯಾಗಿ ಕೆಲಸ ಮಾಡದಿದ್ದರೆ ಸರಕಾರಕ್ಕೆ ಕೆಟ್ಟ ಹೆಸರು ಬರುತ್ತದೆ. ಜಿಲ್ಲಾ ಪಂಚಾಯಿತಿ, ತಾಲ್ಲೂಕು ಪಂಚಾಯಿತಿ, ರೆವಿನ್ಯೂ ಇನ್ಸ್ಪೆಕ್ಟರ್ರ್ಗಳು, ಪಿಡಿಓಗಳು ಕಾರ್ಯವೈಖರಿ ಸರಕಾರದ ವರ್ಚಸ್ಸಿನ ಮೇಲೆ ಪರಿಣಾಮ ಬೀರುತ್ತದೆ. ಅವರ ಬಗ್ಗೆ ಗಮನ ಹರಿಸಿ.
– ಡಿ.ಕೆ. ಶಿವಕುಮಾರ್, ಉಪಮುಖ್ಯಮಂತ್ರಿ