ಸುದ್ದಿಮೂಲವಾರ್ತೆ
ಕೊಪ್ಪಳ,ಜು.05:ಕಲ್ಯಾಣ ರಾಜ್ಯ ಪ್ರಗತಿ ಪಕ್ಷ ಸ್ಥಾಪಕ. ಗಂಗಾವತಿ ಶಾಸಕ ಗಾಲಿ ಜನಾರ್ಧನರಡ್ಡಿಗೆ ಈಗ ಇನ್ನೊಂದು ಸಂಕಷ್ಟ ಎದುರಾಗಿದೆ. ರಡ್ಡಿ ಚುನಾವಣೆಗೆ ಸ್ಪರ್ಧಿಸುವಾಗ ಸಲ್ಲಿಸಿದ ನಾಮಪತ್ರದಲ್ಲಿ ಅಫಿಡೆವಿಟ್ ದೋಷದಿಂದ ಕೂಡಿದೆ. ಈ ಹಿನ್ನೆಲೆಯಲ್ಲಿ ಈ ಕುರಿತು ಪರಿಶೀಲಿಸಿ ಸೂಕ್ತ ಕ್ರಮ ಕೈಗೊಳ್ಳಿ ಎಂದು ರಾಜ್ಯ ಚುನಾವಣಾಧಿಕಾರಿಗಳು ಕೊಪ್ಪಳ ಜಿಲ್ಲಾಧಿಕಾರಿಗಳಿಗೆ ಪತ್ರ ಬರೆದಿದ್ದಾರೆ.
ಬಳ್ಳಾರಿ ಗಣಿ ಧಣಿ ಮಾಜಿ ಸಚಿವ ಗಾಲಿ ಜನಾರ್ಧನರಡ್ಡಿ ಗಂಗಾವತಿಯಲ್ಲಿ ವಾಸವಾಗಿ. ಗಂಗಾವತಿ ವಿಧಾನಸಭಾ ಕ್ಷೇತ್ರದಿಂದ ಸ್ಪರ್ಧಿಸಿ ಜಯಗಳಿಸಿ ಶಾಸಕರಾಗಿದ್ದಾರೆ. ಬಳ್ಳಾರಿಗೆ ರಡ್ಡಿ ಪ್ರವೇಶಕ್ಕೆ ನಿರ್ಬಂಧ ಹಿನ್ನಲೆಯಲ್ಲಿ ಅವರು ಗಂಗಾವತಿಯಿಂದ ರಾಜಕೀಯ ಎರಡನೆಯ ಇನ್ನಿಂಗ್ಸ್ ಆರಂಭಿಸಿದ್ದಾರೆ.
ಗಾಲಿ ಜನಾರ್ಧನರಡ್ಡಿ ಎಪ್ರಿಲ್ 18 ರಂದು ಗಂಗಾವತಿ ಕ್ಷೇತ್ರಕ್ಕೆ ನಾಮಪತ್ರ ಸಲ್ಲಿಸುವಾಗ ನೋಟರಿ ಮಾಡಿಸಿರುವ ಅಫಡೆವಿಟ್ ಸಲ್ಲಿಸಿದ್ದಾರೆ. ಈ ಅಫಡೆವಿಟ್ ದೋಷದಿಂದ ಕೂಡಿದೆ. ಪೂರ್ಣ ಹಾಗು ತಪ್ಪು ಮಾಹಿತಿ ನೀಡಿದ್ದಾರೆ. ಈ ಹಿನ್ನೆಲೆಯಲ್ಲಿ ಅವರ ಮೇಲೆ ಕ್ರಮ ಕೈಗೊಳ್ಳಿ ಎಂದು ಅನಂತಪುರ ಮೂಲದ ಗಣಿ ಉದ್ಯಮಿ ಟಪಾಲು ಶ್ಯಾಮಪ್ರಸಾದ ಎಂಬುವವರು ಕೊಪ್ಪಳ ಚುನಾವಣಾಧಿಕಾರಿ. ಕ್ರಮಕ್ಕಾಗಿ ಕೊಪ್ಪಳ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿಗೆ ದಾಖಲೆಗಳೊಂದಿಗೆ ದೂರು ಸಲ್ಲಿಸಿದ್ದಾರೆ. ಈ ದೂರನ್ನು ರಾಜ್ಯ ಚುನಾವಣಾ ಆಯೋಗಕ್ಕೂ ಸಲ್ಲಿಸಿದ್ದಾರೆ.
ಈ ಮಧ್ಯೆ ಶ್ಯಾಮ ಪ್ರಸಾದರ ದೂರಿನ್ವಯ ಕೊಪ್ಪಳ ಜಿಲ್ಲಾಧಿಕಾರಿಗಳಿಗೆ ಜೂ 26 ರಂದು ಪತ್ರ ಬರೆದು ದೂರಿನ ಅಂಶಗಳನ್ನು ಪರಿಶೀಲಿಸಿ ಸೂಕ್ತ ಕ್ರಮ ಕೈಗೊಳ್ಳಿ ಎಂದು ಸೂಚಿಸಿದ್ದಾರೆ.
ಈಗ ಜನಾರ್ಧನರಡ್ಡಿ ದೂರಿನ ಬಗ್ಗೆ ಜಿಲ್ಲಾಧಿಕಾರಿ ಕ್ರಮ ಕೈಗೊಳ್ಳಬೇಕಾಗಿದೆ. ಈ ಮಧ್ಯೆ ಹಲವು ಪ್ರಕರಣಗಳನ್ನು ಏದುರಿಸುತ್ತಿರುವ ಜನಾರ್ಧನರಡ್ಡಿ ಗೆ ಈಗ ಶಾಸಕತ್ವದ ಪ್ರಕರಣವನ್ನು ಏದುರಿಸಬೇಕಾಗಿದೆ.