ಸುದ್ದಿಮೂಲ ವಾರ್ತೆ
ಬೆಂಗಳೂರು, ಜು.19: ಬಿಬಿಎಂಪಿ ವ್ಯಾಪ್ತಿಯ ಮಹದೇವಪುರ ವಲಯ ವ್ಯಾಪ್ತಿಯ 110 ಹಳ್ಳಿಗಳಿಗೆ ಸಂಬಂಧಿಸಿದಂತೆ ಕುಡಿಯುವ ನೀರಿನ ಸಮಸ್ಯೆಯನ್ನು ಪರಿಶೀಲಿಸಿ ಕೂಡಲೆ ಬೋರ್ ವೆಲ್ ಕೊರೆದು ನೀರಿನ ವ್ಯವಸ್ಥೆ ಕಲ್ಪಿಸಲು ವಲಯ ಜಂಟಿ ಆಯುಕ್ತರಾದ ಡಾ. ದಾಕ್ಷಾಯಿಣಿ ರವರು ಅಧಿಕಾರಿಗಳಿಗೆ ಸೂಚನೆ ನೀಡಿದರು.
ಮಹದೇವಪುರ ವಲಯದ ಹಗದೂರು ವಾರ್ಡ್ ಹಾಗೂ ಹೂಡಿ ಉಪ ವಿಭಾಗ ವ್ಯಾಪ್ತಿಯಲ್ಲಿ 110 ಹಳ್ಳಿಗಳ ಪೈಕಿ ಬರುವ ಹಳ್ಳಿಗಳಿಗೆ ಭೇಟಿ ನೀಡಿ ಸ್ಥಳಿಯ ನಿವಾಸಿಗಳ ಅಹವಾಲುಗಳನ್ನು ಸ್ವೀಕರಿಸಿ ನೀರಿನ ಸಮಸ್ಯೆಯಿರುವ ಕಡೆ ಕೂಡಲೆ ಬೋರ್ ವೆಲ್ ಕೊರೆದು ನೀರಿನ ವ್ಯವಸ್ಥೆ ಮಾಡಲು ಅಧಿಕಾರಿಗಳಿಗೆ ಸೂಚನೆ ನೀಡಿದರು.
ಹಗದೂರು ವಾರ್ಡ್ ವಾರ್ಡ್ ವ್ಯಾಪ್ತಿಯಲ್ಲಿ ಬರುವ ರಾಮಗೊಂಡನಹಳ್ಳಿ, ನಲ್ಲೂರಹಳ್ಳಿ, ಪಟ್ಟಂದೂರು ಅಗ್ರಹಾರ, ಗಾಂಧಿಪುರ ಗ್ರಾಮಗಳಿಗೆ ಭೇಟಿ ನೀಡಿ, ರಾಮಗೊಂಡನಹಳ್ಳಿ ಹಾಗೂ ಗಾಂಧಿ ಪುರದಲ್ಲಿ ತಲಾ 2 ಬೋರ್ ವೆಲ್ ಕೊರೆಸಲು ಅಧಿಕಾರಿಗಳಿಗೆ ಸೂಚಿಸಲಾಯಿತು.
ಪರಿಶೀಲನೆಯಲ್ಲಿ ಪಾಲಿಕೆಯ ಇಂಜಿನಿಯರ್ ಗಳು, ಜಲಮಂಡಳಿಯ ಇಂಜಿನಿಯರ್ ಗಳು ಸೇರಿದಂತೆ ಇನ್ನಿತರೆ ಸಂಬಂಧಪಟ್ಟ ಅಧಿಕಾರಿಗಳು ಉಪಸ್ಥಿತರಿದ್ದರು.