ಸುದ್ದಿಮೂಲ ವಾರ್ತೆ
ತಿಪಟೂರು, ಜೂ 12 : ಖಾಸಗಿ ಶಾಲೆಗಳಿಗೆ ಕಡಿಮೆಯಿಲ್ಲದಂತೆ ಗುಣಾತ್ಮಕ ಮತ್ತು ಮೌಲ್ಯಾಧಾರಿತ ಶಿಕ್ಷಣವನ್ನು ಸರ್ಕಾರಿ ಶಾಲೆಗಳು ನೀಡುತ್ತಿದ್ದು, ಸರ್ಕಾರಿ ಶಾಲೆಗಳ ಅಭಿವೃದ್ದಿಗೆ
ಪ್ರತಿಯೊಬ್ಬರು ಶ್ರಮಿಸಬೇಕು ಎಂದು ತಿಪಟೂರು ಅರ್ನಾಥ್ ಜೈನ್ ಮಂಡಲ್ ಮುಖ್ಯಸ್ಥೆ ರೀಟಾ ಸುಮಿತ್ ತಿಳಿಸಿದರು.
ತಾಲೂಕಿನ ಕರಡಾಳು ಸಂತೆ ಮೈದಾನದಲ್ಲಿರುವ ಸರ್ಕಾರಿ ಕಿರಿಯ ಪ್ರಾಥಮಿಕ ಶಾಲೆಯ
ವಿದ್ಯಾರ್ಥಿಗಳಿಗೆ ಅರ್ನಾಥ್ ಜೈನ್ ಮಂಡಲ್ ವತಿಯಿಂದ ಸ್ಕೂಲ್ ಬ್ಯಾಗ್ ವಿತರಿಸಿ ಮಾತನಾಡಿದ ಅವರು, ಸರ್ಕಾರಿ ಶಾಲೆಗಳಲ್ಲಿ ಉತ್ತಮ ಮೂಲಭೂತ ಸೌಕರ್ಯ ಮತ್ತು ಕಲಿಕಾ ವಿಧಾನಗಳು
ಬದಲಾಗಿದ್ದು, ಉತ್ತಮ ಫಲಿತಾಂಶಗಳನ್ನು ಪಡೆದುಕೊಳ್ಳುತ್ತಿವೆ. ಸರ್ಕಾರಿ ಶಾಲೆಯ ಶಿಕ್ಷಕರುಗಳು ಹೆಚ್ಚಿನ ಪಾಂಡಿತ್ಯ ಹೊಂದಿದವರಾಗಿದ್ದು, ಶಾಲೆಗಳು ಭಾಷೆ, ಸಂಸ್ಕೃತಿ,ಆಚಾರ-ವಿಚಾರಗಳು, ಗುರು-ಹಿರಿಯರಿಗೆ ಗೌರವ ನೀಡುವ ಗುಣಗಳನ್ನು ಬೆಳೆಸುತ್ತಾ ಬಂದಿವೆ.
ಮಕ್ಕಳು ದೇಶದ ಉಜ್ವಲ ಪ್ರಜೆಗಳಾಗಿ ರಾಷ್ಟ್ರದ ಸರ್ವಾಂಗೀಣ ಪ್ರಗತಿಗೆ ಶ್ರಮಿಸಬೇಕು. ದಾನಿಗಳು ನೀಡುವ ನೆರವನ್ನು ಸಮರ್ಥವಾಗಿ ಬಳಸಿಕೊಂಡು ಶಾಲೆಗೆ,ತಂದೆ ತಾಯಿಗಳಿಗೆ ಹಾಗೂ ರಾಷ್ಟ್ರಕ್ಕೆ ಕೀರ್ತಿ ತರುವಂತಾಗಬೇಕು ಎಂದರು.
ಸಹ ಶಿಕ್ಷಕ ಹಾಗೂ ರಾಜ್ಯ ಪ್ರಾಥಮಿಕ ಶಾಲಾ ಶಿಕ್ಷಕರ ಸಂಘದ ತಾ. ಪ್ರಧಾನ ಕಾರ್ಯದರ್ಶಿ ಟಿ.ಕೆ. ಪಟ್ಟಾಭಿರಾಮು ಮಾತನಾಡಿ, ಸರ್ಕಾರದ ಯೋಜನೆಗಳೊಂದಿಗೆ ದಾನಿಗಳು ಸಹಕಾರ ನೀಡಿದಾಗ ಸರ್ಕಾರಿ ಶಾಲೆಗಳು ಮತ್ತಷ್ಟು ಅಭಿವೃದ್ದಿ ಹೊಂದಲಿದೆ.
ದಾಖಲಾತಿಯೂ ಸಹ ಹೆಚ್ಚಳವಾಗಲಿದ್ದು ಮಕ್ಕಳು ಗುಣಾತ್ಮಕ ಶಿಕ್ಷಣದೊಂದಿಗೆ ಸೌಲಭ್ಯಗಳ ಪ್ರಯೋಜನ ಪಡೆದುಕೊಂಡು ಉತ್ತಮ ವ್ಯಕ್ತಿಗಳಾಗಿ ರೂಪುಗೊಳ್ಳಬೇಕೆಂದರು.
ಈ ಸಂದರ್ಭದಲ್ಲಿ ಮಂಡಳಿಯ ಸದಸ್ಯರಾದ ಸೋನಂ, ಸೇಜಲ್, ಕೃಪಾ ಅಭಯ್,ರೇಖಾ ರಾಜ್, ಮಂಜುನಾಥ್, ಶಾಲೆಯ ಮುಖ್ಯ ಶಿಕ್ಷಕಿ ಎನ್. ಛಾಯಾ, ಎಸ್ಡಿಎಂಸಿ ಅಧ್ಯಕ್ಷ ಕೆ.ಎಲ್.ಗೋಪಿ, ಎಸ್ಡಿಎಂಸಿ ಉಪಾಧ್ಯಕ್ಷೆ ಭಾಗ್ಯ, ಸದಸ್ಯರಾದ ನರಸಿಂಹಮೂರ್ತಿ, ಸ್ವರೂಪ್, ರಾಣಿ, ಶಶಿಕಾಲ, ಕಲಾವತಿ, ಆಶಾ, ಸರಸ್ವತಿ, ದಾಕ್ಷಾಯಿಣಿ, ಹಿರಿಯ ವಿದ್ಯಾರ್ಥಿ ಸಂಘದ ಅಧ್ಯಕ್ಷ ವಿರೂಪಾಕ್ಷ, ಗ್ರಾಮಸ್ಥರಾದ ಶಿವಣ್ಣ, ಟೈಲರ್ ಶಿವಶಂಕರಣ್ಣ ಮತ್ತಿತರರಿದ್ದರು. ನಂತರ ದಾನಿಗಳನ್ನು ಸನ್ಮಾನಿಸಲಾಯಿತು.
ತಿಪಟೂರು ಅರ್ನಾಥ್ ಜೈನ್ ಮಂಡಲ್ದ ವತಿಯಿಂದ ಕರಡಾಳು ಸಂತೆ ಮೈದಾನದಲ್ಲಿರುವ ಸರ್ಕಾರಿ ಕಿರಿಯ ಪ್ರಾಥಮಿಕ ಶಾಲೆಯ ವಿದ್ಯಾರ್ಥಿಗಳಿಗೆ ಸ್ಕೂಲ್ ಬ್ಯಾಗ್ ವಿತರಿಸಲಾಯಿತು.